ರೈತರನ್ನು ಉಗ್ರಗಾಮಿಗಳಂತೆ ಬಿಂಬಿಸುತ್ತಿರುವ ಕೇಂದ್ರ: ಮುಖ್ಯಮಂತ್ರಿ ಚಂದ್ರು

2 years ago

ಬೆಂಗಳೂರು: ಕೇಂದ್ರ ಸರ್ಕಾರದ ರೈತ ವಿರೋಧಿ – ಜನವಿರೋಧಿ ನೀತಿಗಳ ವಿರುದ್ಧ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಫೆಬ್ರವರಿ 13ರಂದು ಸಂಯುಕ್ತ ಕಿಸಾನ್ ಮೋರ್ಚಾ ಹಾಗೂ ದೇಶದ ಎಲ್ಲಾ ರೈತ ಸಂಘಗಳು ಜಂಟಿಯಾಗಿ ಹಮ್ಮಿಕೊಂಡಿರುವ ಮಹಾಧರಣಿಗೆ ತಡೆಯೊಡ್ಡಲು ಕೇಂದ್ರ ಸರಕಾರ ಸಾಧ್ಯವಿರುವ ಎಲ್ಲಾ ರೀತಿಯಲ್ಲಿಯೂ ಪ್ರಯತ್ನ ಮಾಡುತ್ತಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ.ಮುಖ್ಯಮಂತ್ರಿ ಚಂದ್ರು ಆರೋಪಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಅನ್ನ ಕೊಡುವ ರೈತರು ದೆಹಲಿಗೆ ಬರದಂತೆ ತಡೆಯೊಡ್ಡುವುದಕ್ಕೆ ಇಂಡಿಯಾ – ಪಾಕಿಸ್ತಾನ ಗಡಿಯಲ್ಲಿ ಹಾಕುವ ರೀತಿಯಲ್ಲಿ ಕಬ್ಬಿಣದ ಮುಳ್ಳಿನ ಬೇಲಿಗಳನ್ನು ಹಾಕಲಾಗಿದೆ. ರಸ್ತೆಗಳಲ್ಲಿ ದಪ್ಪ ದಪ್ಪ ಸ್ಟೀಲ್ ಮೊಳೆಗಳನ್ನು ನೆಡಲಾಗಿದೆ. ಹೈವೇಗಳನ್ನು ಬಂದ್ ಮಾಡಿ ದೊಡ್ಡ ದೊಡ್ಡ ಸಿಮೆಂಟ್ ಸ್ಲ್ಯಾಬ್ ಗಳನ್ನು ಹಾಕಲಾಗಿದೆ. ಎಲ್ಲಿ ಸಾಧ್ಯವೋ ಅಲ್ಲಿ ರೈತರನ್ನು ಬಂಧಿಸಲಾಗುತ್ತಿದೆ ಎಂದಿದ್ದಾರೆ.

ಬಿಜೆಪಿ ಆಡಳಿತ ಇರುವ ಹರಿಯಾಣ, ಮಧ್ಯಪ್ರದೇಶ ಮತ್ತು ರಾಜಸ್ತಾನ ರಾಜ್ಯಗಳಲ್ಲಿ ಪೊಲೀಸ್ ಬಲದಿಂದ ರೈತರನ್ನು ಬಂಧಿಸಿ ಹಿಂಸೆ ಪಡಿಸಲಾಗುತ್ತಿದೆ. ಈ ರಾಜ್ಯಗಳ ಪೊಲೀಸರಿಂದ ಗುಂಡಿನ ದಾಳಿಯ ತಾಲೀಮು ನಡೆಸಲಾಗುತ್ತಿದೆ. ದೆಹಲಿಯ ಗಡಿಗಳಲ್ಲಿ ಅತೀ ಹೆಚ್ಚು ಸೇನೆ ನಿಯೋಜನೆಗೊಂಡಿದೆ. ಕರ್ನಾಟಕದಿಂದ ಫೆಬ್ರವರಿ 13ರ ಧರಣಿಗೆ ಹೊರಟಿದ್ದ 300ಕ್ಕೂ ಹೆಚ್ಚು ರೈತರನ್ನು ಮಾರ್ಗ ಮಧ್ಯೆದಲ್ಲಿಯೇ ಭೋಪಾಲ್ ನಗರದಲ್ಲಿ, ರೈಲಿನಿಂದ ಇಳಿಸಿ, ಅಕ್ರಮವಾಗಿ ಬಂಧಿಸಿ, ಕಲ್ಯಾಣ ಮಂಟಪಗಳಲ್ಲಿ ಕೂಡಿ ಹಾಕಲಾಗಿದೆ. ಈ ವೇಳೆಯಲ್ಲಿ ಪೊಲೀಸರ ತಳ್ಳಾಟದಿಂದ, ರಾಜ್ಯದ ಪ್ರಮುಖ ರೈತ ನಾಯಕ ಕುರಬೂರು ಶಾಂತಕುಮಾರ್ ಅವರ ಧರ್ಮಪತ್ನಿ ಪದ್ಮಾ ಶಾಂತಕುಮಾರ್ ಅವರಿಗೂ ಸೇರಿದಂತೆ ಹಲವು ರೈತರಿಗೆ ಗಾಯಗಳಾಗಿವೆ ಎಂದಿದ್ದಾರೆ.

ಅನ್ನ ಕೊಡುವ ರೈತರನ್ನು ಉಗ್ರಗಾಮಿಗಳ ರೀತಿಯಲ್ಲಿ ಬಿಂಬಿಸಿಕೊಂಡು ಅವರಿಗೆ ತಡೆಯೊಡ್ಡುತ್ತಿರುವ ಈ ಸರ್ವಾಧಿಕಾರಿ ಮನಸ್ಥಿತಿಯ ಕೇಂದ್ರ ಸರ್ಕಾರದ ನಡೆಯನ್ನು ಆಮ್ ಆದ್ಮಿ ಪಕ್ಷ ಖಂಡಿಸುತ್ತದೆ ಎಂದಿದ್ದಾರೆ.

ರೈತರ ಪ್ರಮುಖ ಬೇಡಿಕೆಗಳಾದ ರೈತರ ಸಾಲಮನ್ನಾ ಮಾಡಬೇಕು, ಸ್ವಾಮಿನಾಥನ್ ವರದಿ ಜಾರಿಯಾಗಬೇಕು, ರೈತರು ಬೆಳೆದ ಬೆಳೆಗೆ ಸರಿಯಾದ ಎಂಎಸ್ಪಿ ನಿಗದಿಯಾಗಬೇಕು, 60 ವರ್ಷ ತುಂಬಿದ ರೈತರಿಗೆ ಪಿಂಚಣಿ ಕೊಡಬೇಕು, ಈ ಬೇಡಿಕೆಗಳೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಆಮ್ ಆದ್ಮಿ ಪಕ್ಷ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತದೆ ಹಾಗೂ ರೈತರನ್ನು ಉಗ್ರಗಾಮಿಗಳಂತೆ ನೋಡುವ ಮನಸ್ಥಿತಿಯನ್ನು ಕೇಂದ್ರ ಸರಕಾರ ಬಿಡಬೇಕು ಎಂದು ಒತ್ತಾಯಿಸಿದ್ದಾರೆ.

ಈಗ ವಿವಿಧ ರಾಜ್ಯಗಳಲ್ಲಿ ಬಂಧಿಸಿರುವ ರಾಜ್ಯದ ರೈತರನ್ನೂ ಸೇರಿದಂತೆ ಎಲ್ಲಾ ರೈತರನ್ನು ಬಿಡುಗಡೆ ಮಾಡಿ, ಅವರು ಪ್ರತಿಭಟನೆಗೆ ತೆರಳಲು ಅನುವು ಮಾಡಿಕೊಡಬೇಕು. ರೈತರ ಬಗ್ಗೆ ಪುಂಖಾನುಪುಂಖವಾಗಿ ಭಾಷಣ ಮಾಡುವ ಪ್ರಧಾನ ಮಂತ್ರಿಗಳು ಮತ್ತು ಕೇಂದ್ರ ಸಚಿವರು ರೈತರ ಸಾಂವಿಧಾನಿಕ ಹಕ್ಕನ್ನು ಕಿತ್ತುಕೊಳ್ಳುವ ಕೆಲಸ ಮಾಡಬಾರದು ಎಂದಿದ್ದಾರೆ.

ಈಗ ನಿಯೋಜಿಸಿರುವ ಸೇನೆ ಹಾಗೂ ಪೊಲೀಸ್ ಹಿಂತೆಗೆದುಕೊಳ್ಳಬೇಕು ಮತ್ತು ರೈತರಿಗೆ ಶಾಂತಿಯುತ ಪ್ರತಿಭಟನೆ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.

ಕೇಂದ್ರ ಸರ್ಕಾರದ ಇದೇ ರೀತಿಯ ಸರ್ವಾಧಿಕಾರಿ ಧೋರಣೆ ಮುಂದುವರೆದರೆ, ರಾಷ್ಟ್ರದಾದ್ಯಂತ ರೈತರ ಪರವಾಗಿ ಜನಾಂದೋಲನ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಆಮ್ ಆದ್ಮಿ ಪಕ್ಷ ಎಚ್ಚರಿಸಿದೆ ಎಂದಿದ್ದಾರೆ.

Leave a Reply