ಬಿಜೆಪಿಯಿಂದ ರಾಜ್ಯಸಭೆಗೆ ಹೋಗಲಿದ್ದಾರೆ ಅಶೋಕ್ ಚೌಹಾಣ್
ಮುಂಬೈ: ಮಹಾರಾಷ್ಟ್ರ ಮಾಜಿ ಸಿಎಂ ಮತ್ತು ಕಾಂಗ್ರೆಸ್ ನಾಯಕ, ಭೋಕರ್ ವಿಧಾನಸಭೆ ಶಾಸಕ ಅಶೋಕ್ ಚೌಹಾಣ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ಶೀಘ್ರದಲ್ಲೇ ಬಿಜೆಪಿ ಸೇರಲಿದ್ದು, ಅವರಿಗೆ ಬಿಜೆಪಿ ರಾಜ್ಯಸಭೆ ಟಿಕೆಟ್ ನೀಡಿ ಗೆಲ್ಲಿಸುವ ಸಾಧ್ಯತೆ ಇದೆ.
ಇಂದು ವಿಧಾನಸಭೆ ಸ್ಪೀಕರ್ ರಾಹುಲ್ ನಾರ್ವೇಕರ್ ಅವರನ್ನು ಭೇಟಿಯಾದ ಅಶೋಕ್ ಚೌಹಾಣ್ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಈ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ತುಸು ಹಿನ್ನಡೆಯಾದಂತಾಗಿದೆ. ಮಿಲಿಂದ್ ದಿಯೋರಾ ಮತ್ತು ಬಾಬಾ ಸಿದ್ದಿಖ್ ಅವರ ನಂತರ ಇದೀಗ ಮೂರನೇ ವ್ಯಕ್ತಿ ಕೈತೊರೆದು ಬಿಜೆಪಿ ಸೇರುವ ಸಾಧ್ಯತೆ ದಟ್ಟವಾಗಿವೆ.
ಅಶೋಕ್ ಚೌಹಾಣ್ ಬಿಜೆಪಿ ಸೇರುವ ಕುರಿತು ಪ್ರತಿಕ್ರಿಯೆ ನೀಡಿರುವ ಮಹಾರಾಷ್ಟ್ರದ ಮಾಜಿ ಸಿಎಂ ಮತ್ತು ಹಾಲಿ ಡಿಸಿಎಂ ದೇವೇಂದ್ರ ಫಡ್ನವೀಸ್, ಅಶೋಕ್ ಚೌಹಾಣ್ ಅವರ ಕುರಿತು ಮಾಧ್ಯಮದ ವರದಿಗಳನ್ನು ನೋಡಿದ್ದೇನೆ. ಕಾಂಗ್ರೆಸ್ ಅನೇಕ ಒಳ್ಳೆಯ ನಾಯಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ ಎಂದು ಮಾತ್ರ ನಾನು ಹೇಳಬಲ್ಲೆ. ಕಾಂಗ್ರೆಸ್ ನಲ್ಲಿರುವ ಜನಪ್ರಿಯ ನಾಯಕರು ಉಸಿರುಗಟ್ಟಿದ ವಾತಾವರಣದಲ್ಲಿದ್ದಾರೆ. ಕೆಲವು ದೊಡ್ಡ ನಾಯಕರು ಬಿಜೆಪಿ ಸೇರುವ ವಿಶ್ವಾಸವಿದೆ ಎಂದರು.
ಕಾಂಗ್ರೆಸ್ ಮೂಲಗಳ ಪ್ರಕಾರ, ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆಯವರೊಡನಿರುವ ಭಿನ್ನಾಭಿಪ್ರಾಯವೇ ಈ ಬೆಳವಣಿಗೆಗೆ ಕಾರಣ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಯಾರಿಗೆ ಟಿಕೆಟ್ ನೀಡಬೇಕು ಎಂಬ ವಿಷಯದಲ್ಲಿ ಹಿರಿಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ನಿರ್ಧರಿಸಲು ಮುಂದಾಗಿರುವ ಹಿನ್ನೆಲೆಯಲ್ಲಿ ಅಶೋಕ್ ಚೌಹಾಣ್ ಪಕ್ಷ ತೊರೆದಿದ್ದಾರೆ.
ಮಹಾರಾಷ್ಟ್ರದ ಮಾಜಿ ಸಿಎಂ ಶಂಕರ್ ರಾವ್ (12/03/1986 – 26/06/1988 ಮೊದಲ ಅವಧಿ), (25/06/1991 -06/03/1993 ಎರಡನೇ ಬಾರಿ) ಅವರ ಮಗ ಅಶೋಕ್ ಚೌಹಾಣ್ (08/12/2008 – 11/11/2010 ಸಿಎಂ ಆಗಿದ್ದ ಅವಧಿ) ಕಾಂಗ್ರೆಸ್ ನಿಂದ ಸಿಎಂ ಸ್ಥಾನವನ್ನು ಅಲಂಕರಿಸಿದ್ದರು. ನಾಂದೇಡ್ ಪ್ರಾಂತ್ಯದಲ್ಲಿ ಪ್ರಭಾವಿಯಾಗಿರುವ ಅಶೋಕ್ ಚೌಹಾಣ್ ಅವರನ್ನು ಪಕ್ಷಕ್ಕೆ ಸೆಳೆದರೆ ಮತಗಳಿಕೆಯ ಪ್ರಮಾಣದಲ್ಲಿ ಏರಿಕೆಯಾಗಿ, ಗೆಲ್ಲುವ ಕ್ಷೇತ್ರಗಳಲ್ಲಿ ಏರಿಕೆಯಾಗಲಿದೆ ಎಂಬುದು ಬಿಜೆಪಿ ಲೆಕ್ಕಾಚಾರ.
ಉದ್ಧವ್ ಠಾಕ್ರೆ ಬಣದ ಶಿವಸೇನೆ, ಶರದ್ ಯಾದವ್ ಬಣದ ಎನ್.ಸಿ.ಪಿ ಮತ್ತು ಕಾಂಗ್ರೆಸ್ ಪಕ್ಷಗಳ ಮಹಾ ವಿಕಾಸ್ ಅಘಾಡಿಗೆ ಈ ಮೂಲಕ ಹಿನ್ನಡೆಯಾದಂತಾಗಿದೆ.




