ಶಂಕಿತ ಉಗ್ರರ ಬಂಧನ ಪ್ರಕರಣ ತನಿಖೆ ಸಿಸಿಬಿಗೆ: ಜಿ.ಪರಮೇಶ್ವರ್

3 years ago

#ccb #investigate #suspected ₹terrorists #case #gparameshwar

ಬೆಂಗಳೂರು: ರಾಜಧಾನಿ ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿರುವ, ಶಂಕಿತ ಉಗ್ರರು ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದ ಮಾಹಿತಿ ಬೆಳಕಿಗೆ ಬಂದಿದೆ. ಇದರ ಬಗ್ಗೆ ಮತ್ತಷ್ಟು ಪ್ರಗತಿ ಸಾಧಿಸುವ ದೃಷ್ಟಿಯಿಂದ ಪ್ರಕರಣವನ್ನು ಸಿಸಿಬಿ ತನಿಖೆಗೆ ವಹಿಸುವುದಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ವಿಧಾನಸಭೆಯಲ್ಲಿ ಪ್ರತಿಪಕ್ಷ ಸದಸ್ಯರ ಧರಣಿ ನಡುವೆಯೂ ಸ್ವಯಂಪ್ರೇರಿತವಾಗಿ ಮಹತ್ವದ ಹೇಳಿಕೆ ನೀಡಿದ ಗೃಹ ಸಚಿವರು ಸಿಸಿಬಿ ಪೊಲೀಸರ ಕಾರ್ಯಾಚರಣೆಯನ್ನು ಶ್ಲಾಘಿಸಿದರು.

ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದ ಪೊಲೀಸರು ಐವರು ಶಂಕಿತರನ್ನು ಬಂಧಿಸಿದ್ದಾರೆ. ಸದರಿ ಆರೋಪಿಗಳು ಹಲವು ದಿನಗಳಿಂದಲೂ ಶಸ್ತ್ರಾಸ್ತ್ರ, ಮದ್ದುಗುಂಡು, ಸಲಕರಣೆ ಸೇರಿದಂತೆ ಹಲವಾರು ವಸ್ತುಗಳನ್ನು ಸಂಗ್ರಹಿಸಿ ದೇಶದ ಐಕ್ಯತೆ, ಸಾರ್ವಭೌಮತ್ವಕ್ಕೆ ಧಕ್ಕೆ ತರುವ ವಿಧ್ವಂಸಕ ಕೃತ್ಯವಾದ ಭಯೋತ್ಪಾದನಾ ಚಟುವಟಿಕೆಯಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ ಎಂದು ಹೇಳಿದರು.

ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಇವರುಗಳಿಂದ 7 ನಾಡ ಪಿಸ್ತೂಲುಗಳು, 45 ಜೀವಂತ ಗುಂಡು, ವಾಕಿಟಾಕಿ, 12 ಮೊಬೈಲ್ ಸೇರಿದಂತೆ ಹಲವಾರು ಆಕ್ಷೇಪಾರ್ಹ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವಿವರಿಸಿದರು.

ಈ ಆರೋಪಿಗಳು ಜೈಲಿನಲ್ಲಿರುವ ಖೈದಿಗಳ ಜೊತೆ ಸಂಪರ್ಕದಲ್ಲಿರುವುದು ಪತ್ತೆಯಾಗಿದೆ. ಶಾಂತಿ ಸುವ್ಯವಸ್ಥೆಗೆ ಭಂಗ ತರುವಂತ ವಿಧ್ವಂಸಕ ಕೃತ್ಯ ನಡೆಸುವ ಸಂಚಿನಲ್ಲಿ ಭಾಗಿಯಾಗಿದ್ದರು. ಈ ಹಿಂದೆ ಹಲವಾರು ಕೊಲೆ, ಸುಲಿಗೆ ಪ್ರಕರಣಗಳಲ್ಲೂ ತೊಡಗಿಸಿಕೊಂಡಿದ್ದರು. ದೇಶದ್ರೋಹಿ ಭಯೋತ್ಪಾದನಾ ಚಟುವಟಿಕೆಯಲ್ಲಿ ತೊಡಗಿದ್ದ ಈ ಆರೋಪಿಗಳನ್ನು ಹೆಬ್ಬಾಳ ಪೊಲೀಸ್ ಠಾಣಾ ಪೊಲೀಸರು ಬಂಧಿಸುವ ಮೂಲಕ ಸಂಭವನೀಯ ದಾಳಿಯನ್ನು ತಡೆದಿದ್ದಾರೆ ಎಂದರು.

ಸದರಿ ಆರೋಪಿಗಳು ನಿಷೇಧಿತ ಭಯೋತ್ಪಾದಕ ಸಂಘಟನೆಗಳ ಜೊತೆ ಸಂಪರ್ಕದಲ್ಲಿರುವುದು, ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಲು ಅನುಸರಿಸಿದ ಮಾರ್ಗಗಳು ಹಾಗೂ ಯಾವ ರೀತಿಯ ವಿಧ್ವಂಸಕ ಕೃತ್ಯವನ್ನು ನಡೆಸಲು ಸಂಚು ರೂಪಿಸಿದ್ದರು ಎಂಬ ವಿಚಾರಗಳ ತನಿಖೆಗೆ ಪ್ರಕರಣವನ್ನು ಸಿಸಿಬಿ ತನಿಖೆಗೆ ಒಪ್ಪಿಸಿರುವುದಾಗಿ ತಿಳಿಸಿದರು.

Leave a Reply