ಬೆಂಗಳೂರು: ತಮ್ಮ ಬಳಿ 100 ಕೋಟಿ ಮಿಗಿಲಾದ ಕಪ್ಪು ಹಣವಿದೆ. ನೀವು ಬ್ಯಾಂಕ್ ಮೂಲಕ ವರ್ಗಾವಣೆ ಮಾಡಿದ ಹಣಕ್ಕೆ ದುಪ್ಪಟ್ಟು ಕಪ್ಪುಹಣ ನೀಡಲಾಗುವುದು ಎಂದು ನಂಬಿಸಿ, ಹಣ ವರ್ಗಾವಣೆಯಾದ ನಂತರ ಅವರಿಗೆ ನಕಲಿ ನೋಟುಗಳನ್ನು ನೀಡಿ ವಂಚಿಸುತ್ತಿದ್ದ ಐದು ಖದೀಮರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಬಂಧಿತರನ್ನು ಬೆಂಗಳೂರಿನ ಬಸವನಗುಡಿಯ ಸುಧೀರ್ (49), ದಾಸರಹಳ್ಳಿಯ ಕಿಶೋರ್ (44), ಆಂಧ್ರಪ್ರದೇಶ ಮೂಲದ ಚಂದ್ರಶೇಖರ್ (48), ತೀರ್ಥ ರಿಷಿ ಅಲಿಯಾಸ್ ಗಿರೀಶ (28) ಮತ್ತು ವಿಜಯನಗರದ ವಿನಯ್ (42) ಎಂದು ಗುರುತಿಸಲಾಗಿದ್ದು,ಇವರಿಂದ 30.91 ಕೋಟಿ ರೂಪಾಯಿ ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.
ವಂಚಕರು ಖಾಸಗಿ ಟ್ರಸ್ಟ್ ಗಳಿಗೆ ಸಿಎಸ್ಆರ್ ಫಂಡ್ ನೀಡುವುದಾಗಿ ವಂಚಿಸುತ್ತಿದ್ದರಲ್ಲದೇ, ಈ ಹಿಂದೆ ಗ್ಯಾಂಬ್ಲಿಂಗ್, ಹವಾಲಾ, ರೈಸ್ ಪುಲ್ಲಿಂಗ್ ಪ್ರಕರಣಗಳಲ್ಲಿ ಭಾಗಿಯಾಗಿರುವುದು ವಿಚಾರಣೆ ವೇಳೆ ತಿಳಿದುಬಂದಿದೆ.
ಈ ಗ್ಯಾಂಗ್ ವಿಡಿಯೋ ಕಾಲ್ ಮಾಡಿ ಖೋಟಾ ನೋಟಿನ ಹಣದ ರಾಶಿಯನ್ನು ತೋರಿಸಿ, ಕಪ್ಪು ಹಣವಿದೆ ಎಂದು ನಂಬಿಸಿ ಟ್ರಸ್ಟ್ ಗಳಿಗೆ ಲಾಭಾಂಶವಿಲ್ಲದೆ ಹಣ ವರ್ಗಾಯಿಸುವುದಾಗಿ ಆಮಿಷವೊಡ್ಡುತ್ತಿತ್ತು ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಮಾಹಿತಿ ನೀಡಿದರು.
ಬಂಧಿತ ಐವರ ಪೈಕಿ ಒಬ್ಬಾತ ವ್ಯಕ್ತಿಯೊಬ್ಬರನ್ನು ಪರಿಚಯ ಮಾಡಿಕೊಂಡು ಅವರ ವಿಶ್ವಾಸ ಬೆಳಸಿಕೊಳ್ಳುತ್ತಾನೆ. ನಂತರ ಅವರನ್ನು ಭೇಟಿ ಮಾಡಿ, ನಮಗೆ ಪರಿಚಯವಿರುವ ಕಂಪನಿಯವರ ಬಳಿ ಕಾನೂನು ಬದ್ಧ ಹಣವಿದ್ದು, ಆ ಕಂಪನಿಯವರು ಅಧಿಕೃತವಾಗಿ ಟ್ರಸ್ಟ್, ಇನ್ನಿತರ ಸಂಸ್ಥೆಗಳಿಗೆ ಯಾವುದೇ ಲಾಭಾಂಶವಿಲ್ಲದೆ ಹಣವನ್ನು ವರ್ಗಾಯಿಸುವುದಾಗಿ ಹೇಳುತ್ತಾನೆ.
ಅದಕ್ಕೆ ಪ್ರತಿಯಾಗಿ ಆ ಟ್ರಸ್ಟ್ ಅಥವಾ ಸಂಸ್ಥೆಗಳು ಕಂಪನಿಯವರಿಗೆ ಶೇ.40 ರಷ್ಟು ಹಣವನ್ನು ನಗದು ಮುಖಾಂತರ ಮಾತ್ರ ಸಲ್ಲಿಸಿದರೆ ಸಾಕು. ಆ ಎರಡು ಪಾರ್ಟಿಗಳನ್ನು ವ್ಯವಸ್ಥೆ ಮಾಡುವುದಕ್ಕೆ ನೀವು ನಮಗೆ ಶೇ.10ರಷ್ಟು ಕಮಿಷನ್ ಹಣವನ್ನು ನೀಡಬೇಕಾಗುತ್ತದೆ ಎಂದು ಅವರಿಗೆ ತಿಳಿಸುತ್ತಾನೆ. ಒಂದು ಪಾರ್ಟಿಯ ಬಳಿ ಲಭ್ಯವಿರುವ ಕಪ್ಪು ಹಣವನ್ನು ವಿಡಿಯೋ ಕಾಲ್ ಮುಖಾಂತರ ತೋರಿಸಲು ನೀವು ನಮಗೆ 25 ಲಕ್ಷ ಹಣವನ್ನು ಮುಂಗಡವಾಗಿ ಕೊಡಬೇಕೆಂದು ಬೇಡಿಕೆ ಇಡುತ್ತಾನೆ.
ಈ ಹಣವನ್ನು ನೀಡಿದರೆ ನಾವು ನಿಮಗೆ ವಿಡಿಯೋ ಕಾಲ್ ಮಾಡಿ ನಮ್ಮ ಬಳಿ ಇರುವ ಹಣದ ಬಂಡಲ್ ಗಳನ್ನು ತೋರಿಸುತ್ತೇವೆ ಎಂದು ನಂಬಿಸುತ್ತಾನೆ. ಅದರಂತೆ ಆ ವ್ಯಕ್ತಿಯನ್ನು ಒಂದು ಸ್ಥಳಕ್ಕೆ ಕರೆಸಿಕೊಂಡು ವಿಡಿಯೋ ಕಾಲ್ ಮುಖಾಂತರ ತಮ್ಮ ಬಳಿ ಇರುವ ಹಣದ ಬಂಡಲ್ ಗಳನ್ನು ತೋರಿಸಿದ್ದಾನೆ. ವಿಡಿಯೋ ಕಾಲ್ ಮಾಡಿದ ವ್ಯಕ್ತಿಯ ಬಗ್ಗೆ ಸಂದೇಹ ಪಟ್ಟು ಇವರ ವಿರುದ್ಧ ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಈ ಜಾಲದ ಹಿಂದೆ ಐವರು ಇರುವುದನ್ನು ಖಚಿತ ಪಡಿಸಿಕೊಂಡು ಕಾರ್ಯಾಚರಣೆ ಮುಂದುವರೆಸಿ ಬಲೆಗೆ ಬೀಳಿಸಿಕೊಳ್ಳವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ಸುದೀರ್ಘವಾಗಿ ವಿಚಾರಣೆ ಮಾಡಿ ಅವರ ವಶದಲ್ಲಿದ್ದ ಒಟ್ಟು 30,91,60,000 ರೂ.ಗಳ ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.




