ಕೊರೋನ ವಾರಿಯರ್ಸ್ ವೈದ್ಯರುಗಳಿಗೆ ಸನ್ಮಾನ ಮತ್ತು ಉಚಿತ ನೇತ್ರ ತಪಾಸಣೆ ಶಿಬಿರ
ಬೆಂಗಳೂರು: ಮಹಾಲಕ್ಷ್ಮೀಲೇಔಟ್ ವಿಧಾನಸಭಾ ಕ್ಷೇತ್ರದ ಕಮಲನಗರದಲ್ಲಿ ಶ್ರೀ ಮಹದೇವಪ್ಪ ಪ್ರತಿಷ್ಠಾನ ಮತ್ತು ಸ್ಪಂದನ ಕ್ರೀಡಾ ಮತ್ತು ಸಾಂಸ್ಕೃತಿಕ ವೇದಿಕೆ ವತಿಯಿಂದ ಉಚಿತ ಕಣ್ಣಿನ ತಪಾಸಣೆ ಮತ್ತು ಕಣ್ಣಿನ ಶಸ್ತ್ರ ಚಿಕಿತ್ಷಾ ಶಿಬಿರ, ಹಿರಿಯ ನಾಗರಿಕರಿಗೆ ವಾಕಿಂಗ್ ಸ್ಟೀಕ್ ವಿತರಣಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಪ್ರೊ.ಕೆ.ಇ.ರಾಧಾಕೃಷ್ಣ, ಎಮ್.ಶಿವರಾಜು, ಮಾಜಿ ಮಹಾನಗರ ಪಾಲಿಕೆ ಸದಸ್ಯ ಎಸ್.ಕೇಶವಮೂರ್ತಿ ಉದ್ಘಾಟನೆ ಮಾಡಿದರು.
ಪ್ರೊ.ಕೆ.ಇ.ರಾಧಾಕೃಷ್ಣ ಮಾತನಾಡಿ, ಬೆಂಕಿ ಹಚ್ಚುವುದು ಸುಲಭ, ದೀಪ ಹಚ್ಚುವ ಕೆಲಸ ಮಾಡುವುದು ಕಷ್ಟ.
ದೇಶದಲ್ಲಿ ಎಲ್ಲ ಧರ್ಮ ಮತ್ತು ಜಾತಿಯವರು ಒಟ್ಟಾಗಿ ಬಾಳಿ ಬದುಕಬೇಕು. ಇಡೀ ದೇಶದಲ್ಲಿ ಪಂಡಿತ್ ಜವಾಹರಲಾಲ್ ನೆಹರೂ , ಇಂದಿರಾಗಾಂಧಿ, ನರೇಂದ್ರಮೋದಿ ರವರು ಜಾತಿ ಮೀರಿ ಬೆಳದು ಪ್ರಧಾನಿ ಸ್ಥಾನ ಅಲಂಕರಿಸಿದರು. ಜಾತಿ, ಧರ್ಮ ಎಂಬ ವಿಷ ಬೀಜ ಬಿತ್ತುವ ಕೆಲಸವಾಗಬಾರದು, ಇಲ್ಲಿ ಹುಟ್ಟಿ, ಬೆಳೆದವರು ಎಲ್ಲ ಭಾರತೀಯರೆ. ನಾವೆಲ್ಲರು ಒಂದೇ ಎಂಬ ಭಾವನೆಯಿಂದ ಮುನ್ನಡೆದು ಸಮಾಜದ ಕಣ್ಣು ತೆರಸಬೇಕು. ನಿಮ್ಮ ಮತವನ್ನು 500 ರೂಪಾಯಿಗೆ ಮಾರಾಟ ಮಾಡಿಕೊಳ್ಳಬೇಡಿ, ಪ್ರಾಮಾಣಿಕ ವ್ಯಕ್ತಿಗಳಿಗೆ ಮತ ನೀಡಿ ಗೆಲ್ಲಿಸಿ ಎಂದು ಹೇಳಿದರು.
ಎಮ್.ಶಿವರಾಜು ಮಾತನಾಡಿ, ನಮ್ಮ ಕ್ಷೇತ್ರದಲ್ಲಿ ಶ್ರಮಿಕ ವರ್ಗದವರ ಹೆಚ್ಚಿನ ಸಂಖ್ಯೆ ವಾಸವಿದ್ದಾರೆ, ಹೈಟೆಕ್ ಆಸ್ಪತ್ರೆಗಳಿಗೆ ವೈದ್ಯಕೀಯ ವೆಚ್ಚ ಭರಿಸಲು ಶಕ್ತರಾಗಿರುವುದಿಲ್ಲ. ಈ ನಿಟ್ಟಿನಲ್ಲಿ ಇಂದಿರಾ ಹೆಲ್ತ್ ಕೇರ್ ಸಹಯೋಗದಲ್ಲಿ ಪ್ರತಿ ದಿನ ಸಕ್ಕರೆ ಖಾಯಿಲೆ, ಬಿಪಿ ಮತ್ತು ಇ.ಸಿ.ಜಿ. ಜನರಲ್ ಚೆಕ್ ಅಪ್ ಸಾರ್ವಜನಿಕರಿಗೆ ಉಚಿತ ತಪಾಸಣೆಯನ್ನು ಮಾಡಿಸಲಾಗುತ್ತಿದೆ. ಉಚಿತ ನೇತ್ರ ತಪಾಸಣೆ ಕಾರ್ಯಕ್ರಮ ಹಮ್ಮಿಕೊಂಡು ಬರಲಾಗುತ್ತಿದೆ .ಇದೀಗ 300ಕ್ಕೂ ಜನರಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿಸಲಾಗಿದೆ ಎಂದರು.
ಎಸ್.ಕೇಶವಮೂರ್ತಿ ಮಾತನಾಡಿ, ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿ ತಿಂಗಳು ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಿಕೊಂಡು ಬರಲಾಗುತ್ತಿದೆ. ಪ್ರತಿಯೊಬ್ಬರು ಆರೋಗ್ಯದ ಕಡೆ ಗಮನಹರಿಸಬೇಕು, ಕಾಲಕಾಲಕ್ಕೆ ವೈದ್ಯರಲ್ಲಿ ತಪಾಸಣೆ ಮಾಡಿಸಿಕೊಳ್ಳಿ. ಮನುಷ್ಯ ಎಷ್ಟು ಶ್ರೀಮಂತ ಎನ್ನುವುದು ಮುಖ್ಯ ಅಲ್ಲ, ಎಷ್ಟು ಆರೋಗ್ಯವಂತ ಎನ್ನುವುದು ಮುಖ್ಯ ಎಂದು ಹೇಳಿದರು.
ಕೊರೋನ ವಾರಿಯರ್ಸ್ ಗಳಾದ ಡಾ.ರಾಜೇಶ್ ರೆಡ್ಡಿ, ಡಾ.ಮಂಜುನಾಥ್ ಗುಜ್ಜಾರ್, ಡಾ.ವನಜಾ ಶಿವಕುಮಾರ್, ಡಾ.ನಿರಂಜನ್, ಡಾ.ರಾಮಕೃಷ್ಣರವರಿಗೆ ಸನ್ಮಾನಿಸಲಾಯಿತು.
ವಿಜಯ ನೇತ್ರಾಲಯ ಮತ್ತು ಇಂದಿರಾ ಹೆಲ್ತ್ ಕೇರ್ ಸಹಯೋಗದಲ್ಲಿ ನಡೆದ ಉಚಿತ ನೇತ್ರ ತಪಾಸಣೆ ಶಿಬಿರದಲ್ಲಿ 800ಕ್ಕೂ ಹೆಚ್ಚು ಸಾರ್ವಜನಿಕರು ತಪಾಸಣೆಗೆ ಒಳಗಾದರು.




