ಬಿಜೆಪಿಗೆ ಓಟು ಕೊಟ್ಟರೆ ಅದಾನಿ, ಅಂಬಾನಿಗಳ ಲೂಟಿಗೆ ಅವಕಾಶ: ಸಿದ್ದರಾಮಯ್ಯ

3 years ago

ಬೆಂಗಳೂರು: ರಾಜ್ಯದಲ್ಲಿ ಮತ್ತೆ ಅಧಿಕಾರ ಚುಕ್ಕಾಣಿ ಹಿಡಿಯುವ ಕನಸಿನೊಂದಿಗೆ ಬಿಜೆಪಿ ನಡೆಸುತ್ತಿರುವ ವಿಜಯ ಸಂಕಲ್ಪ ಯಾತ್ರೆಯನ್ನು ಭ್ರಷ್ಟಾಚಾರ ಸಂಕಲ್ಪ ಯಾತ್ರೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವ್ಯಾಖ್ಯಾನಿಸಿದ್ದಾರೆ.

ಈ ಸಂಬಂಧ ಬಹಿರಂಗ ಪತ್ರ ಬರೆದಿರುವ ಅವರು, ಬಿಜೆಪಿ ರಾಜ್ಯದಲ್ಲಿ ವಿಜಯ ಸಂಕಲ್ಪ ಯಾತ್ರೆಯನ್ನು ನಡೆಸುತ್ತಿದೆ. ಯಾತ್ರೆ ನಡೆಸುವುದಕ್ಕೆ ನಮ್ಮ ಅಭ್ಯಂತರವೇನೂ ಇಲ್ಲ. ಆದರೆ ಯಾವ ಮುಖವನ್ನು ಹೊತ್ತುಕೊಂಡು ವಿಜಯ ಸಂಕಲ್ಪ ಯಾತ್ರೆ ಹೊರಟಿದೆ ಎಂದು ರಾಜ್ಯದ ಜನರಿಗೆ ತಿಳಿಸಬೇಕಾಗಿದೆ ಎಂದಿದ್ದಾರೆ.

ಬಿಜೆಪಿ ಮಾಡುತ್ತಿರುವುದು ವಿಜಯ ಸಂಕಲ್ಪ ಯಾತ್ರೆಯಲ್ಲ. ಭ್ರಷ್ಟಾಚಾರದ ಸಂಕಲ್ಪದ ಯಾತ್ರೆ ಮತ್ತು ಗುಜರಾತಿನ ಅಂಬಾನಿ, ಅದಾನಿಗಳಿಗೆ ರಾಜ್ಯವನ್ನು ಅಡವಿಡಲು ನಡೆಸುತ್ತಿರುವ ಸಂಚಿನ ಯಾತ್ರೆ ಎಂದು ವ್ಯಾಖ್ಯಾನ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಜೆ.ಪಿ ನಡ್ಡಾ ಹಾಗೂ ರಾಜ್ಯದ ಬಿಜೆಪಿಗರೆಲ್ಲ ಸೇರಿಕೊಂಡು ಮಾಡುತ್ತಿರುವ ಯಾತ್ರೆಗೆ 40 ಪರ್ಸೆಂಟ್ ಸಂಕಲ್ಪ ಯಾತ್ರೆ ಎಂದು ಹೆಸರಿಟ್ಟರೆ ಸಾರ್ಥಕವಾಗುತ್ತದೆ ಎಂದು ಲೇವಡಿ ಮಾಡಿದ್ದಾರೆ.

ಬಿಜೆಪಿ ಸರ್ಕಾರ ಒಂದೆ ಒಂದು ಜನಪರವಾದ ಯೋಜನೆ ಜಾರಿಗೆ ತಂದಿದೆಯೆ? ಹೋಗಲಿ ತಮ್ಮ ಪ್ರಣಾಳಿಕೆಯಲ್ಲಿ ಹೇಳಿರುವ ಆಶ್ವಾಸನೆಗಳಲ್ಲಿ ಶೇ.10 ರಷ್ಟನ್ನಾದರೂ ಈಡೇರಿಸಿದೆಯೆ? ತಮ್ಮ ಬಜೆಟ್ ಭಾಷಣಗಳಲ್ಲಿ ಸದನದಲ್ಲಿ ಹೇಳಿರುವ ಎಲ್ಲ ಕಾರ್ಯಕ್ರಮಗಳನ್ನಾದರೂ ಈಡೇರಿಸಿದೆಯೆ? ಯಾವುದೂ ಇಲ್ಲ. ಆದರೂ ಯಾತ್ರೆ ಮಾಡಿಕೊಂಡು ಸುಳ್ಳು ಹೇಳುತ್ತಿದೆ ಎಂದು ಆರೋಪಿಸಿದ್ದಾರೆ

ಸುಳ್ಳು ಉತ್ಪಾದಿಸಿ ಹಂಚುವ ಯಾತ್ರೆ, ಜನರ ಶೋಷಣೆಗೆ, ಹಿಂಸೆಗೆ, ದ್ವೇಷಕ್ಕೆ, ಬೆಲೆ ಏರಿಕೆಗೆ ಮತ್ತು ಕರ್ನಾಟಕದ ಚೈತನ್ಯವನ್ನೆ ನಾಶ ಮಾಡುವುದಕ್ಕಾಗಿ ಮಾಡುತ್ತಿರುವ ಯಾತ್ರೆ ಎಂದು ಹೆಸರಿಟ್ಟುಕೊಂಡಿದ್ದರೆ ಮಾತ್ರ ಅದಕ್ಕೊಂದು ಅರ್ಥವಿರುತ್ತಿತ್ತು. ಬಿಜೆಪಿಯು ಅಧಿಕಾರಕ್ಕೆ ಬಂದಾಗಿನಿಂದಲೂ ಜನ ದ್ರೋಹವನ್ನು ಬಿಟ್ಟು ಬೇರೇನು ಮಾಡಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ಕೇಂದ್ರ, ರಾಜ್ಯ ಸರ್ಕಾರ ರೈತರಿಗೆ ಟೋಪಿ ಹಾಕುತ್ತಿವೆ. ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸುತ್ತಿದ್ದಾರೆ. ತಿಂಗಳಿಗೆ ಒಂದು ಲೀಟರ್ ಅಡುಗೆ ಎಣ್ಣೆ, ಒಂದು ಕೆಜಿ ತೊಗರಿಬೇಳೆಗೆ 2014ರಲ್ಲಿ ₹ 150 ಲೆಕ್ಕದಲ್ಲಿ ವರ್ಷಕ್ಕೆ ₹ 1,800 ಖರ್ಚಾಗುತ್ತಿತ್ತು. ಈಗಿದು ₹ 3,750 ಆಗಿದೆ. ಹಾಲು, ಮೊಸರು, ಮಜ್ಜಿಗೆ, ಎಳನೀರು, ಅಕ್ಕಿ, ಗೋಧಿ, ಪೆನ್ನು, ಪೇಪರು ಸೇರಿದಂತೆ ಎಲ್ಲದರ ಮೇಲೆ ತೆರಿಗೆ ವಿಧಿಸಿ ಲೂಟಿ ಮಾಡುತ್ತಿರುವ ಬಿಜೆಪಿ ಸರ್ಕಾರ ಜನರಿಗೆ ಏನು ಕೊಟ್ಟಿದೆ? ಬಡ ಜನರ ಬದುಕನ್ನು ಅಡ್ಡಡ್ಡ ಸೀಳಿ ಬರ್ಬಾದು ಮಾಡಿದ್ದು ಬಿಟ್ಟರೆ ಬೇರೇನು ಸಾಧನೆಯಾಗಿದೆ ಎಂದೂ ಪ್ರಶ್ನಿಸಿದ್ದಾರೆ.

ನೆಮ್ಮದಿ ಮತ್ತು ಸಮೃದ್ಧಿ ಬಯಸುವ ಕರ್ನಾಟಕವು ಗುಜರಾತಿನ ಅಂಬಾನಿ ಮತ್ತು ಅದಾನಿಗಳ ಲೂಟಿಗೆ ಅವಕಾಶ ಮಾಡಿಕೊಡಲು ಅವರಿಬ್ಬರ ರಾಯಭಾರಿಗಳಂತೆ ಓಡಾಡುತ್ತಿರುವ ಬಿಜೆಪಿ ನಾಯಕರ ಹುನ್ನಾರವನ್ನು ಜನ ಅರ್ಥ ಮಾಡಿಕೊಂಡಿದ್ದಾರೆ. ಕನ್ನಡಿಗರು ಗುಜರಾತ್ ಮೂಲದ ದೇಶದ್ರೋಹಿ ವ್ಯಾಪಾರಿಗಳ ಲೂಟಿಗೆ ಎಂದೆಂದಿಗೂ ಅವಕಾಶ ಕೊಡಲಾರರು ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಿಜೆಪಿಗೆ ಓಟು ಕೊಡುವುದೆಂದರೆ ಅದಾನಿ, ಅಂಬಾನಿಗಳ ಲೂಟಿಗೆ ಅವಕಾಶ ಕೊಡುವುದು ಎಂದರ್ಥ. ಈಗಾಗಲೆ ನಮ್ಮ ವಿದ್ಯುತ್ ಸೇರಿದಂತೆ ಎಲ್ಲವನ್ನೂ ಕಿತ್ತುಕೊಂಡು ರೈತರ ಕೊಳವೆ ಬಾವಿಗಳಿಗೂ ಮೀಟರ್ ಹಾಕಲು, ಸಣ್ಣ ಕೈಗಾರಿಕೋದ್ಯಮಿಗಳ ಉತ್ಪಾದನೆ ನಾಶ ಮಾಡಿ ಚೀನಾದ ವಸ್ತುಗಳನ್ನು ಅದಾನಿ ಮುಂತಾದವರಿಂದ ಕೊಳ್ಳುವಂತೆ ಮಾಡಿ ನಮ್ಮ ರಾಜ್ಯದ ಆರ್ಥಿಕ ಚೈತನ್ಯವನ್ನು ನಾಶ ಮಾಡಲು ಸಂಚು ಹೂಡಿದ್ದಾರೆ. ಈ ದುಷ್ಟ ಸಂಚನ್ನು ಅರಿತುಕೊಂಡು ಭ್ರಷ್ಟ ಬಿಜೆಪಿಯನ್ನು ರಾಜ್ಯದಿಂದ ನಿರ್ಮೂಲನೆ ಮಾಡಬೇಕಾಗಿದೆ ಎಂದು ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

Leave a Reply