ರಾಜ್ಯ ಕಾಂಗ್ರೆಸ್ ನಲ್ಲಿ ಜಾತಿ ಗಣತಿ ವರದಿ ಸಂಚಲನ

2 years ago

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಕರ್ಮಕಾಂಡ ದೊಡ್ಡ ರೀತಿಯಲ್ಲಿ ಸೋತು ಮಾಡಿರುವ ಬೆನ್ನಲ್ಲೇ ಇದೀಗ ರಾಜ್ಯ ಕಾಂಗ್ರೆಸ್ ನಲ್ಲಿ ಜಾತಿ ಗಣತಿ ವರದಿ ಸಂಚಲನ ಮೂಡಿಸಿದೆ.

ಈಗಾಗಲೇ ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯಾಗಿರುವ ಕಾಂತರಾಜು ಆಯೋಗದ ವರದಿಯನ್ನು ಬಹಿರಂಗಪಡಿಸಿ ಅನುಷ್ಠಾನಕ್ಕೆ ತರಬೇಕು ಎಂದು ಹಲವು ನಾಯಕರು ಒತ್ತಾಯಿಸಿದರೆ, ಮತ್ತೆ ಕೆಲವರು ಇದರ ಅನುಷ್ಠಾನಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ಇಬ್ಬರ ವಿರೋಧದ ಚರ್ಚೆಯ ನಡುವೆ ಸರ್ಕಾರ ಪತನ ಹೊಂದಿದರೂ ಸರಿ ಕಾಂತರಾಜು ಆಯೋಗದ ವರದಿಯನ್ನು ಅನುಷ್ಠಾನಕ್ಕೆ ತರಬೇಕು ಎಂದು ಹಿರಿಯ ಮುಖಂಡ ಬಿ.ಕೆ. ಹರಿಪ್ರಸಾದ್ ಸಲಹೆ ಮಾಡಿದ್ದಾರೆ.

ಮತ್ತೊಂದೆಡೆ ನೂರಾರು ಕೋಟಿ ವೆಚ್ಚ ಮಾಡಿ ಸಿದ್ಧಪಡಿಸುವ ವರದಿಯನ್ನು ಸರ್ಕಾರ ಅನುಷ್ಠಾನಕ್ಕೆ ತರಬೇಕಾಗುತ್ತದೆ ಎಂದು ಗೃಹ ಸಚಿವ ಪರಮೇಶ್ವರ್, ಅಭಿಪ್ರಾಯಪಟ್ಟಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಹರಿಪ್ರಸಾದ್, ಜಾತಿಗಣತಿ ಕಾಂಗ್ರೆಸ್ ಪ್ರಣಾಳಿಕೆಯಲ್ಲೇ ಇದೆ. ಆದರೆ ಸರ್ಕಾರ ಯಾಕೆ ಯೋಚನೆ ಮಾಡುತ್ತೀದೆ ಅರ್ಥ ಆಗ್ತಿಲ್ಲ. ಮೀನಾ ಮೇಷ ಎಣಿಸದೆ ಮೊದಲು ಜಾತಿಗಣತಿ ಜಾರಿಗೆ ಮಾಡಲಿ. ಜಾತಿಗಣತಿ ಜಾರಿಯಿಂದ ಎಲ್ಲಾ ಸಮುದಾಯಕ್ಕೆ ಅನುಕೂಲ ಆಗಲಿದೆ. ಜಾತಿಗಣತಿ ಜಾರಿಯಿಂದಲೇ ಸರ್ಕಾರ ಹೋಗುತ್ತದೆ ಅಂದರೆ ಹೋಗಲಿ ಎಂದರು.

ಜಾತಿ ಗಣತಿ ಎನ್ನುವುದು ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಪ್ರಮುಖ ಅಂಶವಾಗಿದೆ. ಜಾತಿಗಣತಿ ಜಾರಿಗೆ AICC ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರೇ ಹೇಳಿದ್ದಾರೆ. ಪ್ರಪಂಚವೇ ತಲೆ ಕೆಳಗಾಗಲಿ ಜಾತಿಗಣತಿ ಅನುಷ್ಠಾನ ಆಗಲೇಬೇಕು. ಸರ್ಕಾರ ಯಾಕೆ ಯೋಚನೆ ಮಾಡುತ್ತಿದೆ ಗೊತ್ತಿಲ್ಲ ಎಂದರು.

ಗೃಹ ಸಚಿವ ಪರಮೇಶ್ವರ ಮಾತನಾಡಿ, ಜಾತಿ ಗಣತಿ ವರದಿಗೆ ಸರ್ಕಾರ 160 ಕೋಟಿ ರೂ.ಗೂ ಹೆಚ್ಚು ಖರ್ಚು ಮಾಡಿದೆ.ವರದಿಯನ್ನು ಬಿಡುಗಡೆ ಮಾಡಲೇಬೇಕು. ಇಲ್ಲದಿದ್ದರೆ ಸಿಐಜಿ ಅವರು ಎಷ್ಟು ಹಣ ಖರ್ಚು ಮಾಡಿ ವರದಿ ಬಿಡುಗಡೆ ಮಾಡದಿದ್ದರೆ ಆಕ್ಷೇಪ ಎತ್ತುತ್ತಾರೆ. ಲೆಕ್ಕ ಕೊಡಲೇಬೇಕು. ಜಾತಿ ಗಣತಿ ವರದಿ ಬಿಡುಗಡೆ ಮಾಡುವ ತೀರ್ಮಾನ ತಪ್ಪಲ್ಲ ಎಂದರು.

ಜಾತಿ ಗಣತಿ ವರದಿ ಬಗ್ಗೆ ಸಚಿವ ಸಂಪುಟದಲ್ಲಿ ಮೊದಲು ಚರ್ಚೆ ಮಾಡುತ್ತೇವೆ. ವಿಧಾನಸಭೆಯಲ್ಲಿ ಮಂಡಿಸಬೇಕೇ ಅಥವಾ ಸಂಪುಟದಲ್ಲೇ ವರದಿಯನ್ನು ಬಿಡುಗಡೆ ಮಾಡಬೇಕೇ ಎಂಬ ಬಗ್ಗೆ ಸಂಪುಟದಲ್ಲಿ ತೀರ್ಮಾನ ಮಾಡುತ್ತೇವೆ ಎಂದ ಅವರು, ವಿಧಾನಸಭೆಯಲ್ಲಿ ಮಂಡಿಸದೆ ಸಚಿವ ಸಂಪುಟವೇ ವರದಿ ಬಿಡುಗಡೆ ಮಾಡುವ ತೀರ್ಮಾನ ಕೈಗೊಳ್ಳುವ ಅವಕಾಶವಿದೆ ಎಂದರು.

Leave a Reply