ಜಾತಿಗಣತಿ ವರದಿ ಸ್ವೀಕಾರ: ಒಕ್ಕಲಿಗ, ವೀರಶೈವ – ಲಿಂಗಾಯತ ವಲಯದಿಂದ ವಿರೋಧ

2 years ago

ಬೆಂಗಳೂರು: ಹಿಂದುಳಿದ ವರ್ಗಗಳ ಆಯೋಗದ ಶೈಕ್ಷಣಿಕ ಹಾಗೂ ಆರ್ಥಿಕ ಗಣತಿ ವರದಿ ರಾಜ್ಯ ರಾಜಕಾರಣದಲ್ಲಿ ಕೋಲಾಹಲವನ್ನೇ ಸೃಷ್ಟಿಸಿದೆ. ಅಖಿಲ ಭಾರತ ವೀರಶೈವ ಮಹಾಸಭಾ, ಒಕ್ಕಲಿಗರ ಸಂಘ ಸೇರಿದಂತೆ ಹಲವು ಸಮುದಾಯಗಳು ವರದಿಯನ್ನು ತಿರಸ್ಕರಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಿವೆ. ಈ ಸಮುದಾಯಕ್ಕೆ ಸೇರಿದ ಮಂತ್ರಿಗಳು ಹಾಗೂ ಶಾಸಕರು ಇವರ ಬೆಂಬಲಕ್ಕೆ ಧಾವಿಸಿದ್ದಾರೆ. ಮತ್ತೊಂದೆಡೆ, ತೀರಾ ಹಿಂದುಳಿದ ಸಮುದಾಯಗಳು ವರದಿಯನ್ನು ಜಾರಿಗೊಳಿಸಲು ಒತ್ತಾಯಿಸಿವೆ.

ಇವೆಲ್ಲ ಬೆಳವಣಿಗೆಗಳ ಕುರಿತು ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರು ಸರ್ಕಾರಕ್ಕೆ ಸಲ್ಲಿಸಿರುವ ವರದಿಯ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದಾರೆ.

ವರದಿಯನ್ನು ರಾಜ್ಯ ಒಕ್ಕಲಿಗರ ಹೋರಾಟ ಸಮಿತಿ ವಿರೋಧಿಸಿದೆ. ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷ ಗಾ.ನಂ.ಶ್ರೀಕಂಠಯ್ಯ, ನಮ್ಮ ಸಮಾಜದ ಮಠಾಧೀಶರು, ಸಚಿವರು, ಶಾಸಕರು, ಸಂಸದರು, ಸಮಾಜದ ಹಿರಿಯರು ಸಭೆ ಸೇರಿ ಚರ್ಚಿಸಿ ಮುಂದಿನ ಹೋರಾಟದ ರೂಪು ರೇಷೆಗಳನ್ನ ನಿರ್ಧರಿಸಲಾಗುವುದು ಎಂದರು.

ಕಾಂತರಾಜು ಅವರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಮನೆ ಮನೆ ಸರ್ವೆ ಮಾಡಿ ಮಾಹಿತಿ ಪಡೆದಿಲ್ಲ ಎಂಬ ಆರೋಪವಿದ್ದು, ಆ ವರದಿ ಸ್ವೀಕರಿಸಿದಂತೆ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಇದಕ್ಕಾಗಿ ಮನವಿ ಪತ್ರವನ್ನು ಸಿದ್ಧಪಡಿಸಿ ಸರ್ಕಾರಕ್ಕೆ ನೀಡಲಾಗಿತ್ತು. ಆ ಪತ್ರಕ್ಕೆ ನಮ್ಮ ಸಮಾಜದ ಮಠಾಧೀಶರು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿಗಳು, ಮಾಜಿ ಉಪ ಮುಖ್ಯಮಂತ್ರಿಗಳು, ಸಂಸದರು, ಸಚಿವರು, ಶಾಸಕರು ಹಾಗೂ ಸಮಾಜದ ಹಿರಿಯರು ಸಹಿ ಮಾಡಿದ್ದರು ಎಂದರು.

ಈ ರೀತಿಯಾಗಿ ಒಕ್ಕೊರಲಿನಿಂದ ಮನವಿ ಮಾಡಿದ್ದರೂ ಸರ್ಕಾರ ಅದನ್ನು ಲೆಕ್ಕಿಸದೆ ವರದಿ ಪಡೆದಿದೆ ಆದರೆ ಯಾವುದೇ ಕಾರಣಕ್ಕೂ ಅದನ್ನು ಒಪ್ಪಬಾರದು ಎಂದು ಒತ್ತಾಯಿಸಿದರು.

ಕಳೆದ 2014-15ನೇ ಸಾಲಿನಲ್ಲಿ ಸಂಗ್ರಹಿಸಲಾದ ದತ್ತಾಂಶದ ಮಾಹಿತಿ ವರದಿಯಲ್ಲಿದೆ ಎಂದು ತಿಳಿಸಲಾಗಿದೆ. ಹಿಂದುಳಿದ ವರ್ಗಗಳ ಆಯೋಗದ ಕಾಯ್ದೆ ಪ್ರಕಾರ ಪ್ರತಿ 10 ವರ್ಷಕ್ಕೊಮ್ಮೆ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯನ್ನು ನಡೆಸಬೇಕಾಗಿದೆ. ಈ ವರದಿಗೆ ದತ್ತಾಂಶ ಸಂಗ್ರಹಿಸಿ ಸುಮಾರು 10 ವರ್ಷವಾಗಿರುವುದರಿಂದ ವರದಿಯನ್ನು ತಿರಸ್ಕರಿಸುವಂತೆ ಮನವಿ ಮಾಡಲಾಗಿತ್ತು ಎಂದರು.

ವೀರಶೈವ ಮಹಾಸಭಾ ಎಚ್ಚರಿಕೆ: ಒಂಬತ್ತು ವರ್ಷಗಳಷ್ಟು ಹಳೆಯದಾದ ಹಿಂದುಳಿದ ವರ್ಗಗಳ ಆಯೋಗದ ವರದಿಯನ್ನು ತಿರಸ್ಕರಿಸಬೇಕು ಎಂಬುದು ಎಲ್ಲರ ಅಭಿಪ್ರಾಯವಾಗಿದೆ. ಒಂದು ವೇಳೆ ಸರ್ಕಾರ ಅದನ್ನು ಅಂಗೀಕರಿಸಲು ಮುಂದಾದರೆ ನಾವು ಸುಮ್ಮನೇ ಕೂರುವುದಿಲ್ಲ. ಏನು ಮಾಡಬೇಕು ಎಂಬ ನಿರ್ಧಾರ ಮಾಡುತ್ತೇವೆ ಎಂದು ವೀರಶೈವ ಮಹಾಸಭಾ ಎಚ್ಚರಿಕೆ ನೀಡಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಹಾಗೂ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ಜಯಪ್ರಕಾಶ್ ಹೆಗ್ಡೆ ನಿನ್ನೆ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಅದರಲ್ಲಿ ಲಿಂಗಾಯತ-ವೀರಶೈವ, ಒಕ್ಕಲಿಗರು, ಬ್ರಾಹ್ಮಣರು ಸೇರಿ 1.82 ಲಕ್ಷ ಜನಸಂಖ್ಯೆ ಹೊಂದಿದ್ದಾರೆ ಎಂದು ತಿಳಿಸಲಾಗಿದೆ. ಉಳಿದವರು 3 ಕೋಟಿ ಇದ್ದಾರೆ ಎಂಬ ಮಾಹಿತಿ ಇದೆ. ಆದರೆ ಲಿಂಗಾಯತ-ವೀರಶೈವ ಸಮುದಾಯದ ಉಪಜಾತಿಗಳನ್ನು ಒಳಗೊಂಡು ಒಟ್ಟು ಜನಸಂಖ್ಯೆ 2 ಕೋಟಿಗೂ ಹೆಚ್ಚಿದೆ ಎಂದರು.

ಒಂಬತ್ತು ವರ್ಷಗಳಷ್ಟು ಹಳೆಯದಾದ ವರದಿಯನ್ನು ಈಗ ತಂದಿದ್ದಾರೆ. ಸಮೀಕ್ಷೆ ಮಾಡಿದ್ದು ಕಾಂತರಾಜು, ಸರ್ಕಾರಕ್ಕೆ ವರದಿ ನೀಡಿರುವುದು ಹೆಗ್ಡೆಯವರು. ಇದು ಯಾರ ವರದಿ? ಎಂದು ಬಿಜೆಪಿಯ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವ್ಯಕ್ತಪಡಿಸಿರುವ ಅಭಿಪ್ರಾಯ ಸರಿಯಾಗಿದೆ ಎಂದರು.

ನಮ್ಮ ಸಮುದಾಯದ ಜನಸಂಖ್ಯೆ ಬಗ್ಗೆ ನಮಗೆ ಸ್ಪಷ್ಟತೆ ಇದೆ. ಹೀಗಾಗಿ ಹಿಂದುಳಿದ ವರ್ಗಗಳ ಆಯೋಗದ ವರದಿ ಅವೈಜ್ಞಾನಿಕ ಎಂದು ನಾವು ಸ್ಪಷ್ಟವಾಗಿ ಹೇಳುತ್ತಿದ್ದೇವೆ. ಒಂದು ವೇಳೆ ಸರ್ಕಾರ ನಮ್ಮ ಮಾತನ್ನು ಪರಿಗಣಿಸದೇ ಇದ್ದರೆ ನಾವು ಸುಮ್ಮನೇ ಕೂರುವುದಿಲ್ಲ. ಅಗತ್ಯ ಕ್ರಮ ಕೈಗೊಂಡು ವರದಿ ಅವೈಜ್ಞಾನಿಕ ಎಂಬುದನ್ನು ಸಾಬೀತುಪಡಿಸುತ್ತೇವೆ ಎಂದು ಸವಾಲು ಹಾಕಿದರು.

ಸಮುದಾಯದಿಂದ ಖಾಸಗಿಯಾಗಿ ಸಮೀಕ್ಷೆ ನಡೆಸಬೇಕೆಂಬ ಚಿಂತನೆ ಇದೆ. ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡುತ್ತೇವೆ. ವೈಜ್ಞಾನಿಕವಾಗಿ ಮತ್ತೊಮ್ಮೆ ಸಮೀಕ್ಷೆ ನಡೆಸುವುದಾದರೆ ಒಪ್ಪಿಕೊಳ್ಳುತ್ತೇವೆ ಎಂದರು.

ವರದಿಯನ್ನು ಸ್ವೀಕರಿಸಿರುವುದು ತಪ್ಪು ಎಂದು ನಾನು ಹೇಳುವುದಿಲ್ಲ. ಅದನ್ನು ಸಂಪುಟದಲ್ಲೂ ಚರ್ಚಿಸಬೇಕಾಗುತ್ತದೆ. ಆದರೆ ಅನುಷ್ಠಾನಕ್ಕೆ ಮುಂದಾದರೆ ವಿರೋಧ ವ್ಯಕ್ತಪಡಿಸುತ್ತೇನೆ. ದಲಿತರ ಸಂಖ್ಯೆ ಹೆಚ್ಚಿದೆ ಎಂದು ವರದಿಯಲ್ಲಿ ನಮೂದಿಸಿರುವುದಕ್ಕೆ ನಾನು ಪ್ರತಿಕ್ರಿಯಿಸುವುದಿಲ್ಲ. ಆದರೆ ನಮ್ಮ ಸಮುದಾಯ ಕಡಿಮೆ ಇದೆ ಎಂದು ಹೇಳುತ್ತಿರುವುದನ್ನು ಒಪ್ಪುವುದಿಲ್ಲ. ಅವರು ಹೇಳುತ್ತಿರುವುದಕ್ಕಿಂತಲೂ ನಮ್ಮ ಸಂಖ್ಯೆ ದ್ವಿಗುಣವಾಗಿದೆ. ಸಮೀಕ್ಷೆಯ ಪುನರ್ ಪರಿಶೀಲನಾ ಸಮಿತಿ ರಚಿಸುವಂತೆಯೂ ಸರ್ಕಾರವನ್ನು ಆಗ್ರಹಿಸುತ್ತೇವೆ ಎಂದರು.

ಆಯೋಗದ ವರದಿಯನ್ನು ಬಹಿರಂಗಗೊಳಿಸುವ ಮೂಲಕ ಜಾತಿ ಸಂಘರ್ಷಕ್ಕೆ ಕಾರಣವಾಗುವ ಸಾಧ್ಯತೆಗಳಿವೆ. ಜಾತಿಜಾತಿಗಳನ್ನು ಛೂ ಬಿಡುತ್ತಾರೆ ಎಂದು ಶ್ಯಾಮನೂರು ಶಿವಶಂಕರಪ್ಪ ತಮ್ಮದೇ ಪಕ್ಷದ ನಾಯಕರ ವಿರುದ್ಧ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು. ಉದ್ದೇಶಪೂರ್ವಕವಾಗಿಯೇ ಜಾತಿ ಜನಗಣತಿಯ ವರದಿಯನ್ನು ಕೆಣಕಲಾಗಿದೆ ಎಂದರು.

Leave a Reply