ಜಾತಿಗಣತಿ ವರದಿ ಅನುಷ್ಠಾನಕ್ಕೆ ತೀರಾ ಹಿಂದುಳಿದ ಸಮುದಾಯಗಳು ಪಟ್ಟು 

1 year ago

ಬೆಂಗಳೂರು: ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಜಾತಿಗಣತಿ ವರದಿಯ ವಿರುದ್ಧ ಪ್ರಬಲ ಸಮುದಾಯಗಳು ಸಮರ ಸಾರಿರುವ ಬೆನ್ನಲ್ಲೇ ವರದಿಯ ಅನುಷ್ಠಾನಕ್ಕೆ ರಾಜ್ಯದ ತೀರಾ ಹಿಂದುಳಿದ ಸಮುದಾಯಗಳು ಪಟ್ಟು ಹಿಡಿದಿವೆ.

ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಹೆಚ್.ಎಂ. ರೇವಣ್ಣ, ವಿಧಾನ ಪರಿಷತ್‌ ಸದಸ್ಯರಾದ ಎಂ.ಆರ್. ಸೀತಾರಾಂ, ಉಮಾಶ್ರೀ, ಮಾಜಿ ಸಭಾಪತಿ ವಿ.ಆರ್. ಸುದರ್ಶನ್ ಮತ್ತಿತರ ನಾಯಕರು ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಪ್ರಬಲ ಸಮುದಾಯಗಳ ಒತ್ತಡಕ್ಕೆ ಮಣಿಯದೆ ವರದಿಯನ್ನು ಯಥಾವತ್ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.

ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಅತ್ಯಂತ ವೈಜ್ಞಾನಿಕ ವಿಧಾನಗಳ ಮೂಲಕ ಸಮೀಕ್ಷೆಯನ್ನು ಪೂರ್ಣಗೊಳಿಸಿದೆ. ಇದರಲ್ಲಿ ಸಣ್ಣಪುಟ್ಟ ಲೋಪ ದೋಷಗಳಿದ್ದರೆ ಅದನ್ನು ಸರಿಪಡಿಸಿಕೊಳ್ಳಬಹುದು. ಇದು ಬಿಟ್ಟು ಇಡೀ ವರದಿಯನ್ನೇ ತಿರಸ್ಕರಿಸಿ ಎಂದು ಆಗ್ರಹಿಸುತ್ತಿರುವುದು ಸಮಾಜಘಾತುಕಥನವಾಗಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ಕಾಂತರಾಜು ಆಯೋಗ 2015ರಲ್ಲಿ ರಾಜ್ಯಾದ್ಯಂತ ಎಲ್ಲಾ ಸಮುದಾಯಗಳನ್ನೊಳಗೊಂಡಂತೆ ಅವಶ್ಯ ಅಂಶಗಳನ್ನು ಪಡೆಯಲು ಒಟ್ಟು 55 ಪ್ರಶ್ನಾವಳಿಗಳನ್ನು ಆಧರಿಸಿ ಸಮೀಕ್ಷೆ ನಡೆಸಲಾಗಿದೆ. ಸಮೀಕ್ಷೆಗೆ ನುರಿತ ಉಪಾಧ್ಯಾಯರುಗಳನ್ನೇ ಗಣತಿದಾರರನ್ನಾಗಿ ನೇಮಕ ಮಾಡಿ ಮಾಹಿತಿ ಪಡೆಯಲಾಗಿದೆ. ಮಾಹಿತಿ ನೀಡಿದವರ ಸಹಿಯನ್ನು ಪಡೆಯಲಾಗಿದೆ. ದೇಶದಲ್ಲೇ ಪ್ರಪ್ರಥಮ ಪ್ರಯೋಗವಿದು ಎಂದರು.

1931ರ ನಂತರ ಸಮೀಕ್ಷೆ ವೇಳೆಯಲ್ಲಿ ಸಮೀಕ್ಷೆಗೆ ಯಾವುದೇ ಕಾರಣಕ್ಕಾದರೂ ಒಳಪಡದವರಿಗೆ, ಆಯೋಗದ ಗಮನಕ್ಕೆ ನಿಗದಿತ ಅವಧಿಯ ಒಳಗೆ ಮಾಹಿತಿ ನೀಡುವ ಅವಕಾಶವನ್ನೂ ಮಾಧ್ಯಮಗಳ ಮೂಲಕ ನೀಡಲಾಗಿತ್ತು. ಈ ದಿಸೆಯಲ್ಲಿ ಆಯೋಗ ಸಾಧ್ಯವಾದ ಎಲ್ಲಾ ಪ್ರಯತ್ನಗಳನ್ನು ಮಾಡಿ ಮಾಹಿತಿ ಪಡೆದಿದೆ ಎಂದರು.

ಕಾಂತರಾಜು ಆಯೋಗ ಸಮೀಕ್ಷೆ ಮಾಡಿ ತಯಾರಿಸಿದ್ದ ವರದಿಯ ಅಂಶಗಳನ್ನು ಪಡೆದುಕೊಂಡ ಜಯಪ್ರಕಾಶ್ ಹೆಗಡೆ ನೇತೃತ್ವದ ಆಯೋಗ ವರದಿಯನ್ನು ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿದೆ ಇದರಲ್ಲಿ ಯಾವುದೇ ರೀತಿಯ ಅಕ್ರಮ ಅಥವಾ ಗೊಂದಲಗಳು ಇಲ್ಲ ಎಂದರು.

ರಾಜಕೀಯ ಕಾರಣಗಳಿಗಾಗಿ ಕೆಲವು ವ್ಯಕ್ತಿಗಳು ಇದನ್ನು ವಿರೋಧಿಸುತ್ತಿದ್ದಾರೆ ಆದರೆ ಒಟ್ಟಾರೆ ಸಮಾಜದ ಹಿತದೃಷ್ಟಿಯಿಂದ ಈ ವರದಿಯನ್ನು ನೋಡಬೇಕು ಸರ್ಕಾರ ತುಳಿತಕ್ಕೊಳಗಾದವರಿಗೆ ಈ ವರದಿಯನ್ನು ಬಳಸಿಕೊಳ್ಳಬೇಕು ಎಂದು ಒತ್ತಾಯಿಸಿದರು.

Leave a Reply