ಬೆಂಗಳೂರು: ಅಸಹಜ ಸಾವುಗಳ ಆರೋಪ ಪ್ರಕರಣದಿಂದ ಸುದ್ದಿಯಾಗಿರುವ ಧರ್ಮಸ್ಥಳಕ್ಕೆ ರಾಜಕೀಯ ನಾಯಕರು ಕೈಗೊಳ್ಳುತ್ತಿರುವ ಧರ್ಮ ಯಾತ್ರೆಗೆ ಪೈಪೋಟಿ ಬಂದಿದೆ. ರಾಜ್ಯ ಸರ್ಕಾರ ಪಿತೂರಿಗೆ ಬಲಿಯಾಗಿ ತನಿಖೆಗೆ ಆದೇಶಿಸುವ ಮೂಲಕ ಧರ್ಮಸ್ಥಳದ ಪಾವಿತ್ರ್ಯಕ್ಕೆ ಧಕ್ಕೆ ತರುತ್ತಿದೆ ಎಂದು ಆರೋಪಿಸಿ ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಕಾರ್ಯಕರ್ತರು ಧರ್ಮಸ್ಥಳ ಯಾತ್ರೆ ಕೈಗೊಂಡ ಬೆನ್ನಲ್ಲೇ ಇದೀಗ ಕಾಂಗ್ರೆಸ್ ಶಾಸಕ ರಂಗನಾಥ್ ಧರ್ಮಸ್ಥಳಕ್ಕೆ ಕಾರು ಯಾತ್ರೆ ಕೈಗೊಳ್ಳುತ್ತಿದ್ದಾರೆ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಕುಣಿಗಲ್ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಾ.ರಂಗನಾಥ್ ನೇತೃತ್ವದಲ್ಲಿ ಧರ್ಮಸ್ಥಳಕ್ಕೆ ಈ ಯಾತ್ರೆ ನಡೆಯಲಿದೆ. ಇದರಲ್ಲಿ ಸುಮಾರು 200 ಕಾರುಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಕ್ಷೇತ್ರದ ಜನರು ಧರ್ಮಸ್ಥಳಕ್ಕೆ ತೆರಳಲಿದ್ದಾರೆ.
ಈ ಯಾತ್ರೆ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ರಂಗನಾಥ್, ಧರ್ಮಸ್ಥಳದ ವಿಚಾರವಾಗಿ ಬಿಜೆಪಿಯವರದ್ದು ದ್ವಂದ್ವ ನೀತಿ. ಕೌರವರಿಗೂ ಭಾವ, ಪಾಂಡವರಿಗೂ ಭಾವ ರೀತಿ ಅವರು ವರ್ತಿಸುತ್ತಿದ್ದಾರೆ. ಮಗುವನ್ನೂ ಚಿವುಟುತ್ತಾರೆ ತೊಟ್ಟಿಲೂ ತೂಗುತ್ತಾರೆ ಎಂದು ಕಿಡಿಕಾರಿದರು.
ಧರ್ಮಸ್ಥಳ ವಿಚಾರದಲ್ಲಿ ಕಾಂಗ್ರೆಸ್ ಶಾಸಕರೆಲ್ಲರೂ ಭಕ್ತರೇ. ಮಂಜುನಾಥ ಸ್ವಾಮಿ ಪ್ರತಿಯೊಬ್ಬ ಕಾಂಗ್ರೆಸ್ ಶಾಸಕರು ಕಾರ್ಯಕರ್ತರ ಮನೆಯಲ್ಲಿದ್ದಾನೆ. ಈ ದೇವರು ಬಿಜೆಪಿಯವರ ಆಸ್ತಿ ಅಲ್ಲ ಎಂದರು.
ಧರ್ಮಸ್ಥಳದ ಬಗ್ಗೆ ಕೇಳಿ ಬಂದಿರುವ ಗೊಂದಲ ನಿವಾರಣೆಯಾಗಬೇಕು. ಅದಕ್ಕೆ ತನಿಖೆ ಮಾಡಿ ಎಂದಿದ್ದಾರೆ. ಇದರಲ್ಲಿ ಯಾವುದೇ ದುರುದ್ದೇಶ ಇಲ್ಲ. ತನಿಖೆಯ ನಂತರ ಸತ್ಯ ಸಂಗತಿ ಹೊರಬೀಳಲಿದೆ ಎಂದರು.
ಡಿಸಿಎಂ ಹೇಳಿದಂತೆ ಈ ವಿಚಾರ ದಲ್ಲಿ ಷಡ್ಯಂತ್ರ ನಡೆದಿರೋದು ನಿಜ. ಸಂಸ್ಕೃತಿಯನ್ನು ಕೆಣಕುವ ಕೆಲಸ ಮಾಡ್ತಿದ್ದಾರೆ. ಅದನ್ನು ಬಿಜೆಪಿಯವರೇ ಮಾಡುತ್ತಿದ್ದಾರೆ. ಇದಕ್ಕಾಗಿ ನಾವು ಕಾರು ಯಾತ್ರೆ ಕೈಗೊಳ್ಳುವ ಮೂಲಕ ಶ್ರೀ ಕ್ಷೇತ್ರದ ಜೊತೆ ನಾವಿದ್ದೇವೆ ಎಂಬ ಸಂದೇಶ ರವಾನಿಸುತಿದ್ದೇವೆ ಎಂದರು.
ಬಿಜೆಪಿಯಿಂದ ಚಾಮುಂಡಿ ಚಲೋ ವಿಚಾರವಾಗಿ ಇದೇ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನಾನು ಮೈಸೂರಿನಲ್ಲೇ ಓದಿದವನು. ಚಾಮುಂಡಿ ಮೇಲೆ ಎಲ್ಲರು ಭಕ್ತಿ ಇಟ್ಟಿದ್ದೇವೆ. ಎಲ್ಲ ಧರ್ಮದವರು ವಿಜಯದಶಮಿ ಮಾಡ್ತಾರೆ. ಇವರು ಹಗೆಯನ್ನ ಮೂಡಿಸ್ತಿದ್ದಾರೆ. ಮುಂದೆ ಚಾಮುಂಡಿ ಶಾಪ ಅವರಿಗೆ ತಟ್ಟುತ್ತೆ. ಬಿಜೆಪಿಯವರಿಗೆ ಶಾಪ ತಟ್ಟುತ್ತೆ ಎಂದರು.
ಮಸೀದಿಯನ್ನ ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಿಲ್ಲವೇ? ಬಿಜೆಪಿಗರು ಜನರ ಭಾವನೆಗಳನ್ನು ಕೆಣಕುತ್ತಿದ್ದಾರೆ. ಅವರಿಗೆ ದೇವಿಯ ಶಾಪ ತಟ್ಟಲಿದೆ ಎಂದರು.




