ಬೆಂಗಳೂರು: ಇದೇ ಅಕ್ಟೋಬರ್ 30ರಂದು ನಡೆಯಲಿರುವ ಹಾನಗಲ್ ಮತ್ತು ಸಿಂದಗಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ KRS ಪಕ್ಷವು ಸ್ಪರ್ಧೆ ಮಾಡಲಿದೆ ಎಂದು ಕೆ.ಆರ್.ಎಸ್. ಪಕ್ಷದ ಅಧ್ಯಕ್ಷ ರವಿಕೃಷ್ಣಾರೆಡ್ಡಿ ಹೇಳಿದ್ದಾರೆ.
ಹಾವೇರಿ ಜಿಲ್ಲೆಯ ಹಾನಗಲ್ ವಿಧಾನಸಭಾ ಕ್ಷೇತ್ರದಿಂದ KRS ಪಕ್ಷದ ಹಾವೇರಿ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಜಾಲಿಯವರು ಅಭ್ಯರ್ಥಿ. ಯುವ ಉದ್ಯಮಿಯಾಗಿ ಸ್ವಚ್ಛ, ಪ್ರಾಮಾಣಿಕ, ಪ್ರಾದೇಶಿಕ ರಾಜಕಾರಣದಲ್ಲಿ ವಿಶ್ವಾಸ ಹಿಂದಿರುವ ಜಾಲಿಯವರು ಜಿಲ್ಲೆಯಲ್ಲಿ ಈಗಾಗಲೇ ಉತ್ತಮ ಸಂಘಟನಾ ಸಾಮರ್ಥ್ಯ ತೋರಿಸಿದ್ದಾರೆ ಎಂದಿದ್ದಾರೆ.
ವಿಜಯಪುರ ಜಿಲ್ಲೆಯ ಸಿಂದಗಿ ವಿಧಾನಸಭಾ ಕ್ಷೇತ್ರಕ್ಕೆ ಡಾ.ಸುನೀಲ್ಕುಮಾರ್ ಹೆಬ್ಬಿ ಪಕ್ಷದ ಅಭ್ಯರ್ಥಿ. “ಪಬ್ಲಿಕ್ ಡಾಕ್ಟರ್” ಎಂದು ರಾಜ್ಯದಾದ್ಯಂತ ಹೆಸರು ಪಡೆದಿರುವ ಡಾ.ಹೆಬ್ಬಿ, ಈಗಾಗಲೇ ವಿಜಯಪುರ ಜಿಲ್ಲೆಯಲ್ಲಿಯೂ ತಮ್ಮ ಜನಪರ ಕೆಲಸ ಮತ್ತು ಕಾಳಜಿಗಳಿಂದ ಚಿರಪರಿಚಿತರಾಗಿದ್ದಾರೆ ಎಂದು ಹೇಳಿದ್ದಾರೆ.
ಆರು ತಿಂಗಳ ಹಿಂದೆ ನಡೆದ ಉಪಚುನಾವಣೆಗಳಲ್ಲಿ ಬೆಳಗಾವಿ ಲೋಕಸಭಾ ಮತ್ತು ಮಸ್ಕಿ ವಿಧಾನಸಭಾ ಕ್ಷೇತ್ರಗಳ ಫಲಿತಾಂಶದ ಮೇಲೆ KRS ಪಕ್ಷ ಗಂಭೀರ ಪ್ರಭಾವ ಬೀರಿತ್ತು. ಈಗಾಗಲೇ ರಾಜ್ಯದ ಜನತೆ J.C.B ಪಕ್ಷಗಳ ದಿವಾಳಿಕೋರ ಮತ್ತು ಭ್ರಷ್ಟ ರಾಜಕಾರಣದ ಬಗ್ಗೆ ಬೇಸತ್ತಿದ್ದಾರೆ ಮತ್ತು ಲಕ್ಷಾಂತರ ಜನತೆ KRS ಪಕ್ಷದ ಕೆಲಸಗಳನ್ನು ಮೆಚ್ಚಿಕೊಂಡಿದ್ದಾರೆ ಹಾಗೂ ಪಕ್ಷವನ್ನು ಬೆಂಬಲಿಸುತ್ತಿದ್ದಾರೆ. ಭ್ರಷ್ಟ ಮತ್ತು ಅನೀತಿಯುತ ರಾಜಕಾರಣಕ್ಕೆ ಪರ್ಯಾಯವಾಗಿ KRS ಪಕ್ಷ ಮೂಡುತ್ತಿದೆ. ಅದು ಈ ಉಪಚುನಾವಣೆಯಲ್ಲಿ ಪ್ರತಿಫಲಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.




