ಹೆಕ್ಟೇರ್ ಗೆ 50 ಸಾವಿರ ರೂ. ಪರಿಹಾರ ಕೊಡಲು ಒತ್ತಾಯ
ಬೀದರ್: ಭಾಲ್ಕಿ ತಾಲೂಕಿನ ವಿವಿಧೆಡೆ ಅತಿವೃಷ್ಟಿ ಹಾಗೂ ನೆರೆಯಿಂದಾಗಿ ಹಾನಿಗೀಡಾದ ಪ್ರದೇಶಗಳಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಭೇಟಿ ನೀಡಿದರು. ಈ ವೇಳೆ ಹೆಕ್ಟೇರ್ ಗೆ 50 ಸಾವಿರ ರೂ ಪರಿಹಾರ ನೀಡಲು ಒತ್ತಾಯಿಸಿದರು.
ಭಾಲ್ಕಿ ತಾಲೂಕಿನ ಭಾತಂಬ್ರಾ, ಇಂಚೂರು ಹಾಗೂ ಗಡಿಭಾಗದ ಸಾಯಿಗಾಂವ, ನಾರದ ಸಂಗಮ ಸೇರಿ ಮುಂತಾದ ಕಡೆಗಳಲ್ಲಿ ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ ಬೆಳೆ ಹಾನಿ, ಸೇತುವೆ ಹಾನಿಗೀಡಾಗಿರುವುದನ್ನು ವೀಕ್ಷಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ತಾಲೂಕು ಸೇರಿದಂತೆ ಜಿಲ್ಲೆಯಾದ್ಯಂತ ವ್ಯಾಪಕ ಮಳೆ ಆಗಿದೆ. ಜತೆಗೆ ಮಹಾರಾಷ್ಟ್ರದ ಧನೇಗಾಂವ ಜಲಾಶಯದಿಂದ ಹೆಚ್ಚುವರಿ ನೀರು ಹರಿಬಿಟ್ಟಿರುವ ಪರಿಣಾಮ ತಾಲೂಕಿನಲ್ಲಿ ಶೇ.80 ರಷ್ಟು ಬೆಳೆಹಾನಿ ಸಂಭವಿಸಿದೆ ಎಂದರು.
60ಕ್ಕೂ ಅಧಿಕ ಹಳ್ಳಿಗಳು ರಸ್ತೆ ಸಂಪರ್ಕ ಕಡೆದು ಕೊಂಡಿವೆ. ಸಾಕಷ್ಟು ಕಡೆಗಳಲ್ಲಿ ರಸ್ತೆ ಮತ್ತು ಸೇತುವೆಗಳು ಕೊಚ್ಚಿ ಹೋಗಿವೆ. ರೈತರು ಬೆಳೆದ ಉದ್ದು, ಸೋಯಾ ಅವರೆ, ತೊಗರಿ ಸೇರಿ ತೋಟಗಾರಿಕೆ ಬೆಳೆಗಳು ಹಾನಿಗೀಡಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮನೆಗಳು ಕುಸಿತ ಕಂಡು ಬಡ ಜನರು ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ವಿವರಿಸಿದರು.
ಗಡಿ ಭಾಗದ ಸಾಯಿಗಾಂವ ವ್ಯಾಪ್ತಿಯಲ್ಲಿ ಮಹಾರಾಷ್ಟ್ರದಿಂದ ಹೆಚ್ಚುವರಿ ನದಿ ಬಿಡುತ್ತಿರುವ ಪರಿಣಾಮ ಸಾಯಿಗಾಂವ ಹೊಸ ಸೇತುವೆ ಎತ್ತರಕ್ಕೆ ನೀರು ಹರಿಯುತ್ತಿದೆ. ಹಾಗಾಗಿ ನದಿ ದಡದಲ್ಲಿ ರೈತರು ಬೆಳೆದ ಬೆಳೆಗಳು ಸಂಪೂರ್ಣವಾಗಿ ಜಲಾವೃತಗೊಂಡಿವೆ. ಜತೆಗೆ ಹೊಲಗಳಲ್ಲಿನ ಫಲವತ್ತಾದ ಮಣ್ಣು ಕೊಚ್ಚಿಹೋಗಿದ್ದು ಆ ಭಾಗದ ರೈತರಿಗೆ ದಿಕ್ಕುತೋಚದಂತಾಗಿದೆ. ಇಂಚೂರು ಸೇತುವೆ ಕೆಳಮಟ್ಟದಲ್ಲಿದ್ದು ಎತ್ತರ ಹೆಚ್ಚಿಸಲು ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.
ಜಿಲ್ಲೆಯಲ್ಲಿ ಸುಮಾರು 1 ಲಕ್ಷ ಹೆಕ್ಟೇರ್ ಬೆಳೆ ಹಾನಿ ಆಗಿದೆ. ಸರಕಾರ ಈಗ ಕೊಡುವ ಪರಿಹಾರ ಯಾವುದಕ್ಕೂ ಸಾಲುವುದಿಲ್ಲ. ಕೂಡಲೇ ಸಿಎಂ ಅವರು ಜಿಲ್ಲೆಗೆ ಭೇಟಿ ನೀಡಿ ಹಾನಿಗೀಡಾದ ಪ್ರದೇಶಗಳನ್ನು ವೀಕ್ಷಿಸಬೇಕು. ಜತೆಗೆ ರೈತರ ಪ್ರತಿ ಹೆಕ್ಟೇರ್ ಗೆ ಕನಿಷ್ಠ 50 ಸಾವಿರ ರೂ ಪರಿಹಾರ ಘೋಷಣೆ ಮಾಡಬೇಕೆಂದು ಒತ್ತಾಯಿಸಿದರು.



