ಹಾವೇರಿ: ಸಿಎಂ ಬಸವರಾಜ ಬೊಮ್ಮಾಯಿ ತವರು ಜಿಲ್ಲೆ ಹಾವೇರಿಯ ಬ್ಯಾಡಗಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರು ಅತಿಥಿ ಉಪನ್ಯಾಸಕರಿಗಾಗಿ ಸಿದ್ಧಪಡಿಸಿದ್ದಾರೆ ಎನ್ನಲಾಗಿರುವ ಮುಚ್ಚಳಿಕೆ ಪತ್ರ ವಿವಾದಕ್ಕೆ ಕಾರಣವಾಗಿದೆ.
“ಒಪ್ಪಿಗೆ ಮತ್ತು ಮುಚ್ಚಳಿಕೆ ಪತ್ರ”ಒಕ್ಕಣೆಯಿರುವ ಒಪ್ಪಂದ ಪತ್ರದಲ್ಲಿ ಕೆಲವು ನಿಬಂಧನೆಗಳನ್ನು ವಿಧಿಸಲಾಗಿದೆ. ಇದು ಅತಿಥಿ ಉಪನ್ಯಾಸಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಒಂದು ವೇಳೆ ಬ್ಯಾಡಗಿ ಪ್ರಿನ್ಸಿಪಾಲರು ರೂಪಿಸಿರುವ ಮಾನದಂಡಗಳನ್ನು ರಾಜ್ಯದ ಸುಮಾರು 400ಕ್ಕೂ ಹೆಚ್ಚು ಪದವಿ ಕಾಲೇಜುಗಳ ಪ್ರಾಂಶುಪಾಲರು ರೂಪಿಸಿದರೆ ಅತಿಥಿ ಉಪನ್ಯಾಸಕರು ಕೆಲಸ ಮಾಡುವುದೇ ದುಸ್ತರವಾಗುವ ಆತಂಕ ಎದುರಾಗಿದೆ.
ಒಪ್ಪಿಗೆ ಮತ್ತು ಮುಚ್ಚಳಿಕೆ ಪತ್ರದಲ್ಲಿರುವ ನಿಬಂಧನೆಗಳೇನು?
- ವಾರದಲ್ಲಿ ನಾಲ್ಕು ದಿನ ಕೆಲಸಕ್ಕೆ ಬರುತ್ತೇನೆ
- ಕಾಲೇಜಿನ ಕೆಲಸದ ಅವಧಿ ಮುಂಜಾನೆ 9:00 ಘಂಟೆಯಿಂದ 4:00 ಘಂಟೆಯವರೆಗೆ ಇದ್ದು ನಾನು ಮಧ್ಯಾಹ್ನ 4:00ರವರೆಗೆ ಕಾಲೇಜಿನಲ್ಲಿ ಇರುತ್ತೇನೆ
- ಮಹಾವಿದ್ಯಾಲಯದಲ್ಲಿ ಜರಗುವ ಪರೀಕ್ಷಾ ಕಾರ್ಯವನ್ನು ಯಾವುದೇ ಉದಾಹರಣೆ ಹೇಳದೆ ನಿರ್ವಹಿಸುತ್ತೇನೆ. ತಪ್ಪಿದ್ದಲ್ಲಿ ಮುನ್ಸೂಚನೆ ನೀಡದೇ ಕೆಲಸದಿಂದ ತೆಗೆಯಲು ನನ್ನ ಅಭ್ಯಂತರ ಇರುವುದಿಲ್ಲ.
- ನಾನು ಪಾಠ ಬೋಧನೆ ಜೊತೆಗೆ ಮಹಾವಿದ್ಯಾಲಯದ ನ್ಯಾಕ್ ಗೆ ಸಂಬಂಧಿಸಿದ ಕೆಲಸ ಮಾಡುತ್ತೇನೆ.
- ನಾನು ಯಾವುದೇ ಸರಕಾರಿ / ಅರೆಸರಕಾರಿ / ಅನುದಾನಿತ ಖಾಸಗಿ ಉದ್ಯೋಗ ಮಾಡುತ್ತಿರುವುದಿಲ್ಲ. ಒಂದು ವೇಳೆ ನಾನು ಕೆಲಸ ಮಾಡುವುದು ಕಂಡುಬಂದರೆ ನನ್ನನ್ನು ಮುನ್ಸೂಚನೆ ನಿಡದೇ ಕೆಲಸದಿಂದ ತೆಗೆಯಲು ನನ್ನ ಅಭ್ಯಂತರ ಇರುವುದಿಲ್ಲ.
- ಪ್ರಾಂಶುಪಾಲರು ಕರೆದ ಸಭೆಗೆ ತಪ್ಪದೇ ಹಾಜರಾಗುತ್ತೇನೆ
- ಮಹಾವಿದ್ಯಾಲಯದಲ್ಲಿ ಜರಗುವ ಸಮಾರಂಭಗಳಿಗೆ ತಪ್ಪದೇ ಹಾಜರಾಗುತ್ತೇನೆ. ತಪ್ಪಿದ್ದಲ್ಲಿ ಒಂದು ವಾರದ ವೇತನ ಕಠಾವಣೆ ಮಾಡಲು ನನ್ನ ಅಭ್ಯಂತರ ಇರುವುದಿಲ್ಲ
- ವಿಭಾಗದ ಮುಖ್ಯಸ್ಥರು ವಹಿಸಿದ ಕಾರ್ಯನಿರ್ವಹಿಸುತ್ತೇನೆ. ನನಗೆ ಯಾವುದೇ ರಜೆಗಳು ಇರುವುದಿಲ್ಲ ಎಂಬ ಅರಿವು ನನಗಿದೆ.
- ಅನಿವಾರ್ಯ ಸಂದರ್ಭಗಳಲ್ಲಿ ಅನುಮತಿ ಪಡೆಯದೆ ಕರ್ತವ್ಯಕ್ಕೆ ಗೈರಾದರೆ ತಪ್ಪಿದ್ದಲ್ಲಿ ನನ್ನನ್ನು ಕೆಲಸದಿಂದ ತೆಗೆದುಹಾಕಬಹುದು
- ತುರ್ತಾಗಿ ರಜೆ ಪಡೆಯುವ ಸಂದರ್ಭ ಬಂದರೆ ಮಾರನೇ ದಿನ ನಾನು ಬಂದು ನನ್ನ ಅವಧಿಗಳನ್ನು ತೆಗೆದುಕೊಳ್ಳುತ್ತೇನೆ
“ಮೇಲ್ಕಂಡ ಷರತ್ತು ಮತ್ತು ನಿಬಂಧನೆಗಳಿಗೆ ಒಳಪಟ್ಟು ಕರ್ತವ್ಯ ನಿರ್ವಹಿಸುತ್ತೇನೆ. ಅಲ್ಲದೇ ಮೇಲಿನ ಯಾವುದೇ ಒಂದು ಷರತ್ತು ಉಲ್ಲಂಘನೆಯಾದರು ನನ್ನನ್ನು ಮುನ್ಸೂಚನೆ ನಿಡದೆ ಕೆಲಸದಿಂದ ತೆಗೆದು ಹಾಕಲು ನನ್ನ ಅಭ್ಯಂತರ ಇರುವುದಿಲ್ಲ” ಎಂದು ಅತಿಥಿ ಉಪನ್ಯಾಸಕರು ಮುಚ್ಚಳಿಕೆ ಪತ್ರವನ್ನು ಬರೆದುಕೊಟ್ಟು ಡ್ಯೂಟಿಗೆ ಜಾಯಿನ್ ಆಗಬೇಕಿದೆ.
ಮೇಲಿನ ನಿಬಂಧನೆಗಳಲ್ಲಿ ಕೆಲವನ್ನು ರಾಜ್ಯ ಸರ್ಕಾರ ನಿಗದಿಪಡಿಸಿದ್ದರೆ, ಇನ್ನು ಕೆಲವನ್ನು ಪ್ರಿನ್ಸಿಪಾಲರೇ ಹೊಸದಾಗಿ ಸೇರಿಸಿರುವುದು ಕೆಲವರ ಕೆಂಗಣ್ಣಿಗೆ ಗುರಿಯಾಗಿದೆ. ವಿಶೇಷವಾಗಿ ಅತಿಥಿ ಉಪನ್ಯಾಸಕರ ಗೋಳು ಈಗಲೇ ಹೇಳತೀರದಷ್ಟಿದೆ. ಇನ್ನು ಇಂತಹ ಹೊಸ ನಿಬಂಧನೆಗಳ ಅಡಿಯಲ್ಲಿ ಕೆಲಸ ನಿರ್ವಹಿಸುವುದು ಹೇಗೆ? ಎಂಬ ಆತಂಕ ವ್ಯಕ್ತವಾಗಿದೆ.
ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪರ ಮತ್ತು ವಿರುದ್ಧ ಚರ್ಚೆಗಳು ನಡೆದಿದ್ದು, ಸರ್ಕಾರದ ಭಾಗವಾಗಿರುವ ಕೆಲವರು ಸಮರ್ಥಿಸಿದರೆ, ಅತಿಥಿ ಉಪನ್ಯಾಸಕ ಉದ್ಯೋಗ ಆಕಾಂಕ್ಷಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಪ್ರಾಂಶುಪಾಲರ ನಿರ್ಣಯವನ್ನು ಖಂಡಿಸಿದ್ದಾರೆ.
ಅರರೇ…. ಇಲ್ಲಿ ನೋಡಿ ಇಲ್ಲಿ ನೋಡಿ. ಯುಜಿಸಿ ಸ್ಕೇಲ್ ಪಿನ್ಸಿಪಾಲ್ ನ ದರ್ಬಾರು ಎಂದು ಕರಿಯ ನಿಷಾದ ಪಾವಗಡ ಅವರು ಮುಚ್ಚಳಿಕೆ ಪತ್ರವಿರುವ ಪೋಸ್ಟ್ ಒಂದನ್ನು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ. ಇಲ್ಲಿ ವ್ಯಕ್ತವಾಗಿರುವ ಕೆಲವು ಅಭಿಪ್ರಾಯಗಳು ಇಲ್ಲಿವೆ.
ಒಂದೆರಡು ಅಂಶಗಳನ್ನು ಹೊರತು ಪಡಿಸಿ ಉಳಿದ ಷರತ್ತುಗಳು ಸರಿಯಾಗಿಯೇ ಇದಾವಲ್ಲ. ನಾನು ಅನುಭವದಿಂದ ಹೇಳುವೆ: ಇಲ್ಲಿ ಯಾವ ದರ್ಬಾರೂ ಇಲ್ಲ. ಇದು ಸಹಜವಾದ ಆಡಳಿತಾತ್ಮಕ ಪ್ರಕ್ರಿಯೆ. ನೀವು ಯು.ಜಿ.ಸಿ. ಸಂಬಳ ಪಡೆಯಲು ಯತ್ನಿಸಿ, ಉದ್ಯೋಗಾವಕಾಶಗಳಿಗಾಗಿ ಸರಕಾರಗಳನ್ನು ಒತ್ತಾಯಿಸಿ. ನಿಮ್ಮ ಜೊತೆಗೇ ನಾನೂ ಇರ್ತೇನೆ. ಈ ಪ್ರಾಂಶುಪಾಲರನ್ನು ಯು.ಜಿ.ಸಿ. ಸ್ಕೇಲ್ ಪಡೆಯುವರೆಂದು ಹಂಗಿಸುವೇ ಅಗತ್ಯವೇನಿದೆ? ಪ್ರತಿಯೊಂದು ಹುದ್ದೆಗೂ ಅದರದೇ ಆದ ಸಂಕಷ್ಟ ಸವಾಲುಗಳು ಇರುತ್ತವೆ ಎಂಬುದನ್ನು ಮರೆಯದಿರೋಣ ಎಂದು ಡಾ.ಜಯಶಂಕರ್ ಹಲಗೂರು ಪ್ರಿನ್ಸಿಪಾಲರ ನಿರ್ಣಯವನ್ನು ಸಮರ್ಥಿಸಿದ್ದಾರೆ.
- ಅರೆಕಾಲಿಕ ಉಪನ್ಯಾಸಕ ಇತರೆ ಉದ್ಯೋಗ ಮಾಡುವಂತಿಲ್ಲ ಏಕೆ. ಇವರು ಆರು ತಿಂಗಳಿಗೋ.. ವರ್ಷಕ್ಕೋ ಕೊಡುವ ಗೌರವ ಧನ ಎಂಬ ಹಣದಲ್ಲಿ ಬದುಕು ನಡೆಸಲು ಸಾಧ್ಯವೇ..?
- ಬೆಳಗ್ಗೆ 9 ರಿಂದ 4 ಗಂಟೆಯವರೆಗೂ.. ಇರಬೇಕು. ನಾಲ್ಕು ದಿನ ಕೆಲಸಕ್ಕೆ ಬರಬೇಕು.. ಇದು ಸರಿಯೇ.. ಅವರ ತರಗತಿಯ ಅವಧಿ ಮುಗಿಸಿಕೊಂಡು ಅವರು ಹೊರಡಬಹುದಲ್ಲವೇ..? ಅವರಿಗೆ ಈ ತರಗತಿಗಳ ಅವಧಿಗೆ ಮಾತ್ರವೇ ಹಣ ಸಂದಾಯವಾಗುವುದು ಅಲ್ಲವೇ.?
- ಕಾಲೇಜಿನ ಸಭೆ ಸಮಾರಂಭಗಳಿಗೆ ಕಡ್ಡಾಯವಾಗಿ ಹಾಜರಾಗಬೇಕು.. ಇಲ್ಲವೇ.. ಒಂದು ವಾರದ ವೇತನ ಕಡಿತ – ಇದು ತೊಘಲಕ್ ದರ್ಬಾರಲ್ಲದೇ ಮತ್ತೇನು.?
- ಪರೀಕ್ಷಾ ಕಾರ್ಯ, ಮೌಲ್ಯಮಾಪನ ಕಾರ್ಯ, ನ್ಯಾಕ್ ಇನ್ನಿತರೆ ಕಾಲೇಜಿನ ಕೆಲಸ ಕಾರ್ಯಗಳನ್ನು ಅರೆಕಾಲಿಕ ಉಪನ್ಯಾಸಕರು ನಿರ್ವಹಿಸಲೇಬೇಕು ಎನ್ನುವಂತಿಲ್ಲ ಅಲ್ಲವೇ.? ಅದು ಅವರ ಇಚ್ಚೆಗೆ ಸಂಬಂಧಿಸಿದ್ದು. ಈ ಉಪನ್ಯಾಸಕರಿಗೆ ವೇತನ ಕೊಡುತ್ತಿರುವುದು ವಾರಕ್ಕೆ ಎಂಟು ಗಂಟೆಗಳ ಅವಧಿಗೆ ಮಾತ್ರ. ಅದನ್ನೂ ಮಾಸಿಕವಾಗಿ ಸರಿಯಾಗಿ ಕೊಡುತ್ತಿಲ್ಲ. ಹಾಗಾಗಿ ಈ ಷರತ್ತುಗಳನ್ನು ಹಾಕಿ ಬೆದರಿಸುವುದು, ದರ್ಪ ತೋರಿಸುವುದು ಸಮಂಜಸವಲ್ಲ. ಇವು ಸರ್ವಾಧಿಕಾರದ ಲಕ್ಷಣಗಳೇ ಆಗಿರುತ್ತವೆ ಎಂದು ಡಾ.ರಮೇಶ್ ಕೋಲಾರ ಅವರು ತಕರಾರು ತೆಗೆದಿದ್ದಾರೆ.
ಇದೇ ಷರತ್ತುಗಳನ್ನು ಯುಜಿಸಿಯ ಎಲ್ಲಾ ಖಾಯಂ ಉಪನ್ಯಾಸಕರಿಗೂ ಕಡ್ಡಾಯವಾಗಿ ಜಾರಿಗೆ ತನ್ನಿ.. ಆದೇಶದಲ್ಲಿ ಕೆಲಸದಿಂದ ವಜಾ ಮಾಡಲಾಗುವುದು ಎಂಬ ಸಾಲುಗಳನ್ನೂ ಇದರಂತೆ ಆದೇಶದ ಪ್ರತಿ ಸಾಲಿನಲ್ಲಿ ತಪ್ಪದೇ ಸೇರಿಸಿ… ಹಾಗಾದರೆ ಈಗ ಯುಜಿಸಿಯೇ ಹೇಳಿರುವಂತೆ ರಾಜ್ಯದಲ್ಲಿ ಪಾತಾಳಕ್ಕೆ ಕುಸಿದಿರುವ ಸಂಶೋಧನೆ, ಬೋಧನೆಯಾದರೂ ಸುಧಾರಿಸೀತು… ಈ ಆದೇಶ ಪ್ರತಿಯನ್ನು ಯುಜಿಸಿ ಅಧ್ಯಕ್ಷರು, ಕೇಂದ್ರ ಶಿಕ್ಷಣ ಸಚಿವರು ಮತ್ತು ಉನ್ನತ ಶಿಕ್ಷಣ ಸಚಿವರಿಗೆ ಕಳುಹಿಸುವುದು ಒಳ್ಳೆಯದು ಎಂದು ಚಂದ್ರಶೇಖರ್ ಮಂಡೆಕೋಲು ಸಲಹೆ ನೀಡಿದ್ದಾರೆ.
ಈ ಪ್ರಿನ್ಸಿಪಾಲ್ ‘ತಾನು ಕಳ್ಳ ಪರರ ನಂಬ’ ತರದ ಪಾರ್ಟಿ ಇರಬಹುದು… ಇದಿಷ್ಟೂ ಇವನ ದುರ್ಗುಣಗಳಿರಲು ಸಾದ್ಯ.. ಅದಕ್ಕೇ ಆಂಟಿಸಿಪೇಟರಿ ಬೇಲ್ ತರದ ಈ ನಿರ್ಬಂದ ಪತ್ರ ರೆಡಿ ಮಾಡಿದ್ದಾನೆ. ಯಾಕೆಂದರೆ ಈ ಪ್ರಿನ್ಸಿಪಾಲ್ ಹೇಳಿರುವ ಕೆಲಸಗಳು.. ಸಹಜವಾಗೇ ಸಂಬಳ ತಿನ್ನುವ ಲೆಕ್ಚರರ್ ಗಳು ಮಾಡಬೇಕಾದ್ದು.. ಮಾಡೇ ಮಾಡುತ್ತಾರೆ.. ಆದರೆ.. ಸರ್ವಾಧಿಕಾರಿಯ ತರ ಇವನೇ ಈ ಷರತ್ತುಗಳನ್ನು ರೆಡಿ ಮಾಡಿದ್ದು ತಪ್ಪು.. ಅತಿಥಿ ಉಪನ್ಯಾಸಕರಿಗಾಗಿ ಪ್ರತ್ಯೇಕ ಉದ್ಯೋಗ / ಶರತ್ತುಗಳ ಆದೇಶ ಹೊರಡಿಸಬೇಕಾದದ್ದು ವಿಶ್ವ ವಿದ್ಯಾಲಯದ ಕರ್ತವ್ಯ. ವಿವಿ ಸಹ ಯುಜಿಸಿಯ ಮಾರ್ಗದರ್ಶಿ ಸೂತ್ರಗಳನುಸಾರ ಅತಿತಿ ಉಪನ್ಯಾಸಕ ರ ಕರ್ತವ್ಯಗಳನ್ನು ನಿಗದಿಮಾಡಬೇಕಾಗುತ್ತದೆ ಮತ್ತು ಆ ಷರತ್ತುಗಳು ಅವರಿಗೆ ಕೊಡುವ ಸಂಬಳಕ್ಕೆ ಅನುಗುಣವಾಗಿರಬೇಕು… ಇವರ ಮೇಲೆ ಯುಜಿಸಿ ಸ್ಕೇಲಿನ ಅದ್ಯಾಪಕನಷ್ಟೆ ಹೊರೆ ಹೊರಿಸಿದರೆ ಅದು ಅನ್ಯಾಯ … ಎಂದು ನಟರಾಜ ಕೆ.ಪಿ. ಹೇಳಿದ್ದಾರೆ.
ಬಿಜೆಪಿ ಅಧಿಕಾರದಲ್ಲಿದ್ದ ಅವಧಿಯಲ್ಲಿ ನಾನು ಒಮ್ಮೆ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕ ಹುದ್ದೆಗೆ ಅರ್ಜಿ ಸಲ್ಲಿಸಿದ್ದೆ. ಮೊದಲ ಆಯ್ಕೆ ತೀರ್ಥಹಳ್ಳಿ (ಕುಪ್ಪಳಿಗೆ ಸಮೀಪವಾಗಿರುವುದರಿಂದ ಯಾವಾಗ ಬೇಕಾದರೂ ಹೋಗಿ ಬರಬಹುದು ಎಂಬ ಕಾರಣ), 2ನೇ ಆಯ್ಕೆ ನನ್ನ ಊರು ಬಸವಾಪಟ್ಟಣ ಮತ್ತು ಕಡೆಯ ಆಯ್ಕೆ ಬೆಂಗಳೂರಿನ ಕೆಂಗೇರಿ ಕಾಲೇಜುಗಳನ್ನು(ನಾನು ಬೆಂಗಳೂರಿನಲ್ಲಿ ಇದ್ದುದರಿಂದ) ಆಯ್ಕೆ ಮಾಡಿದ್ದೆ.
ಮೆರಿಟ್ ಲಿಸ್ಟ್ ಆಧಾರದಲ್ಲಿ ತೀರ್ಥಹಳ್ಳಿ ಕಾಲೇಜಿನಿಂದ ಕರೆಬಂತು. ಆಗ ತೀರ್ಥಹಳ್ಳಿ ನಕ್ಸಲರ ಕಾರಣಕ್ಕೆ ದೊಡ್ಡ ಸುದ್ದಿಯಾಗಿತ್ತು. ನಾನು ಗುರುಗಳಾದ ರಾಜಪ್ಪ ದಳವಾಯಿಯವರಿಗೆ ತೀರ್ಥಹಳ್ಳಿಗೆ ಹೋಗುತ್ತೇನೆ ಸರ್ ಎಂದೆ. ಯಾಕಯ್ಯ ಎಂದರು. ವಿಷಯ ತಿಳಿಸಿದೆ. ನಾನಾಗ ಖಾದಿ ಜುಬ್ಬಾ ಧರಿಸಿ, ಕಣ್ಣಿಗೆ ತಂಪು ಕನ್ನಡಕ ಹಾಕಿಕೊಂಡು, ಗಡ್ಡಬಿಟ್ಟುಕೊಂಡು ತಿರುಗಾಡುತ್ತಿದ್ದೆ. ನನ್ನ ವೇಷವನ್ನು ಉಲ್ಲೇಖಿಸಿದ ಗುರುಗಳು, ಅಲ್ಲಯ್ಯಾ ಮೊದಲೇ ಅವರು ಅಧಿಕಾರದಲ್ಲಿದ್ದಾರೆ, ನಿನ್ನ ವೇಷ, ನಿನ್ನ ನಡೆನುಡಿ, ಮಾತುಕತೆ ಎಲ್ಲ ನೋಡಿದರೆ ನಿನ್ನನ್ನು ನಕ್ಸಲ್ ಪಟ್ಟಿಗೆ ಹಾಕ್ತಾರೆ ಕಣಯ್ಯಾ. ಅಲ್ಲಿಗೆ ಹೋಗಬೇಡ ಎಂದು ಸಲಹೆ ನೀಡಿದರು. ನಾನೇನು ಈ ಸಲಹೆಯ ಆಧಾರದಲ್ಲಿಯೇ ನಿರ್ಧಾರದಿಂದ ಹಿಂದೆ ಸರಿದೆ ಎಂದು ನನಗೆ ಈಗ ಅನಿಸುತ್ತಿಲ್ಲ. ಕಡೆಗೆ ತೀರ್ಥಹಳ್ಳಿ ಪದವಿ ಕಾಲೇಜಿಗೆ ಕರೆ ಮಾಡಿ ನಾನು ಬರುವುದಿಲ್ಲ ಎಂಬ ನಿರ್ಧಾರವನ್ನು ತಿಳಿಸಿದೆ.
ಕೆಲವು ದಿನಗಳ ನಂತರ, ನನ್ನೂರಿನ ಬಸವಾಪಟ್ಟಣದ ಪದವಿ ಕಾಲೇಜಿನಿಂದ ಕರೆಬಂತು. “ಕಡೆಗೂ ಇಷ್ಟು ದಿನಗಳ ನಂತರ ನಾನು ಕಲಿತ ವಿದ್ಯೆ ನನ್ನೂರಿನ ವಿದ್ಯಾರ್ಥಿಗಳಿಗೆ ಸಿಗುವ ಕಾಲ ಬಂತಲ್ಲ” ಎಂದು ಖುಷಿಯಾಗಿ ಊರಿಗೆ ಹೋದೆ. ಅಲ್ಲಿ ನನ್ನ ಪರಿಚಿತರೊಬ್ಬರು ಕನ್ನಡ ವಿಷಯದ ಖಾಯಂ ಅಧ್ಯಾಪಕರಾಗಿದ್ದರು. ನನ್ನನ್ನು ಕಂಡವರೇ “ಓಹೋ ಪ್ರದೀಪ್ ಅವರೇ ಏನು ನೀವಿಲ್ಲಿ?” ಎಂದು ಆಶ್ಚರ್ಯಭರಿತ ಪ್ರಶ್ನೆಯನ್ನು ಕೇಳಿದರು. ನಾನು “ಇದೇ ನನ್ನ ಊರು. ಅತಿಥಿ ಉಪನ್ಯಾಸಕ ಹುದ್ದೆಗೆ ಅರ್ಜಿ ಸಲ್ಲಿಸಿದ್ದೇನೆ. ನಿಮ್ಮ ಕಚೇರಿಯಿಂದ ಕರೆ ಬಂದಿತ್ತು. ಅದಕ್ಕಾಗಿ ಬಂದಿದ್ದೇನೆ” ಎಂದೆ.
ಅದಕ್ಕವರು ತುಂಬಾ ಸಂತೋಷಪಟ್ಟು, “ಬನ್ನಿ ಪ್ರಿನ್ಸಿಪಾಲರನ್ನು ಭೇಟಿ ಮಾಡಿಸುತ್ತೇನೆ” ಎಂದು ಕೈಹಿಡಿದು ಕರೆದೊಯ್ದರು. ಒಳಗೆ ಹೋಗಿ ಹೊರಬಂದು “ಪ್ರಿನ್ಸಿಪಾಲ್ ಸರ್ ಸ್ವಲ್ಪ ಬಿಜಿ ಇದ್ದಾರೆ. ಬನ್ನಿ ಟೀ ಕುಡಿದು ಬರೋಣ” ಎಂದು ಕರೆದೊಯ್ದರು.
ಅದು ಮಹಿಮಾ ಪಟೇಲ್ ಅವರು ಚನ್ನಗಿರಿ ಶಾಸಕರಾಗಿದ್ದ ಸಮಯದಲ್ಲಿ ಬಸವಾಪಟ್ಟಣಕ್ಕೆ ಸಿಎಂ ಆಗಿದ್ದ ಎಚ್.ಡಿ.ಕುಮಾರಸ್ವಾಮಿಯವರು ಮಂಜೂರು ಮಾಡಿದ್ದ ಕಾಲೇಜು. ನಾನು ಓದಿದ ಪ್ರಾಥಮಿಕ ಶಾಲೆಯೇ ಇದೀಗ ಪದವಿ ಕಾಲೇಜಾಗಿ ಪರಿವರ್ತನೆಯಾಗಿತ್ತು. ಆ ಸ್ಥಳದಲ್ಲಿ ನಾನು ಸಿಹಿ ಉಪ್ಪಿಟ್ಟು ತಿನ್ನುತ್ತಿದ್ದ ಅಂಗನವಾಡಿಯಲ್ಲಿ, ನಮ್ಮ ದೇಖರೇಖಿ ನೋಡಿಕೊಳ್ಳುತ್ತಿದ್ದ ರತ್ನಮ್ಮ, ನಮ್ಮಂತವರಿಗೆ ಕೈಹಿಡಿದು ಕನ್ನಡ ಅಕ್ಷರಗಳನ್ನು ಕಲಿಸಿದ್ದ ಪಾರ್ವತಮ್ಮ, ಗಣಿತ ಕಲಿಸಿದ ಜಯಮ್ಮ, ಕಮಲಮ್ಮ, ವಿಜ್ಞಾನ ವಿಷಯ ಕಲಿಸಿದ ಸುಧಾ, ಗಣಿತ ಬೋಧಿಸಿದ ತಿಪ್ಪಣ್ಣ ಮೊದಲಾದ ಟೀಚರ್ ಗಳು ಮತ್ತು ಮೇಷ್ಟ್ರುಗಳನ್ನು ಮೆಲುಕುಹಾಕುತ್ತಾ ಶಾಲಾಂಗಣ ಪ್ರವೇಶಿಸಿದ್ದೆ. ಮುಂದೆ ನಾವು ಇದೇ ಆವರಣದಲ್ಲಿ ಕಬಡ್ಡಿ, ಖೋಖೋ, ಕ್ರಿಕೆಟ್, ಚಿನ್ನಿದಾಂಡು, ಬುಗುರಿ ಆಡಿದ ನೆನಪುಗಳು ಹಾಯ್ದುಹೋದವು. ಪಕ್ಕದಲ್ಲಿ ಇದ್ದ ನಾವು ಕಲ್ಲೆಸೆದು ತಿನ್ನುತ್ತಿದ್ದ ದ್ವಾರಹುಣಸೆ ಮರ ಮಾಯವಾಗಿತ್ತು.
ಪ್ರಾಯಶಃ ಬಸವಾಪಟ್ಟಣದ ಸರ್ಕಾರಿ ಪದವಿ ಕಾಲೇಜಿನಲ್ಲಿ ಬಿ.ಎ., ಬಿ.ಎಸ್ಸಿ., ಬಿ.ಬಿಎಂ., ತರಗತಿಗಳು ನಡೆಯುತ್ತಿದ್ದವು. ನನ್ನ ಸ್ನೇಹಿತರ ಸೋದರಿಯೊಬ್ಬರು ಮತ್ತು ನನ್ನ ಸ್ನೇಹಿತರೊಬ್ಬರು ಅಲ್ಲೇ ಅತಿಥಿ ಉಪನ್ಯಾಸಕರಾಗಿ ಕೆಲಸ ನಿರ್ವಹಿಸುತ್ತಿದ್ದ ಸಂಗತಿ ನನಗೆ ತಿಳಿಯಿತು. ಆ ಕಾಲಕ್ಕೆ ನಾನು ಎಂ.ಫಿಲ್., ನೆಟ್, ಜೆ.ಆರ್.ಎಫ್. ಮುಗಿಸಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ., ಪದವಿ ಅಧ್ಯಯನ ನಡೆಸುತ್ತಿದ್ದೆ.
ಚಹಾ ಕುಡಿದು ಮರಳಿ ಬಂದ ನಂತರ, ಪ್ರಿನ್ಸಿಪಾಲರ ಭೇಟಿಯಾಯಿತು. ನಾನು ಅವರಿಗೆ ನಮಸ್ಕರಿಸಿ, ನಾನು ಇದೇ ಊರಿನವನು ಎಂಬ ವಿಷಯ ತಿಳಿಸಿ, ಕಡೆಗೆ ನನಗೆ ಇಲ್ಲಿಂದ ಕರೆ ಬಂದದ್ದು ತುಂಬಾ ಸಂತಸದ ವಿಷಯ. ನನ್ನ ಓದಿನ ಉಪಯೋಗ ನನ್ನ ಸುತ್ತಮುತ್ತಲ ಊರಿನವರಿಗೆ ಸಿಕ್ಕರೆ ಇನ್ನೂ ಸಂತೋಷವಾಗುತ್ತದೆ ಎಂದೆ. ಅದಕ್ಕೆ ಪ್ರಿನ್ಸಿಪಾಲರಿಗಾಗಲಿ ಅವರ ಸಹೋದ್ಯೋಗಿಗಳಿಗಾಗಲಿ ಖುಷಿಯಾದಂತೆ ನನಗೆ ಅನಿಸಲಿಲ್ಲ.
ಪ್ರಿನ್ಸಿಪಾಲರು ಅಲ್ಲಿನ ನಿಯಮಗಳನ್ನು ಮೌಖಿಕವಾಗಿ ಹೇಳಿದರು. “ನೋಡಿ ನಿಮಗೂ ಗೊತ್ತಿರಬಹುದು. ತರಗತಿಗಳನ್ನು ನಡೆಸಲು ಇಲ್ಲಿ ಬಿಲ್ಡಿಂಗ್ ಇಲ್ಲ. ಮೇಲೆ ಹಾಸ್ಟೆಲ್ ಪಕ್ಕದಲ್ಲಿ ಬಿಲ್ಡಿಂಗ್ ಕನ್ಸ್ಟ್ರಕ್ಷನ್ ನಡೆಯುತ್ತಿದೆ. ಅದು ಮುಗಿಯುವವರೆಗೆ ಇಲ್ಲೇ ಎಲ್ಲ ಅಡ್ಜೆಸ್ಟ್ ಮಾಡಿಕೊಳ್ಳಬೇಕು. ಬೆಳಿಗ್ಗೆ 8 ಗಂಟೆಯಿಂದ ಕಾಲೇಜು ಶುರುವಾಗುತ್ತವೆ. ಸಂಜೆ 4 ಗಂಟೆಯವರೆಗೆ ಶಾಲೆಯಲ್ಲೇ ಇರಬೇಕು. ಪೂರ್ಣಾವಧಿ ಅಧ್ಯಾಪಕರ ಸಮಯ ಹೊಂದಿಸಿ ನಿಮಗೆ ಅವಕಾಶ ಕೊಡುತ್ತೇವೆ. ಪ್ರತಿದಿನ ಕಾಲೇಜಿಗೆ ಬರಬೇಕು. ನೀವು ತರಗತಿಗಳನ್ನು ತೆಗೆದುಕೊಳ್ಳಬೇಕು” ಎಂದರು.
ಅವರ ಮಾತಿಗೆ ನಾನು “ಅದು ಹೇಗೆ ಸಾಧ್ಯ ಸರ್. ನನಗೆ ವಾರಕ್ಕೆ 8 ಗಂಟೆಯ ಟೈಮ್ ಟೇಬಲ್ ಅನ್ನು ನೀವು ಕೊಡಬೇಕು. ನಾನು ಅದರ ಪ್ರಕಾರ ತರಗತಿಗಳನ್ನು ತೆಗೆದುಕೊಳ್ಳುತ್ತೇನೆ” ಎಂದೆ. ಅದಕ್ಕವರು “ಓಕೆ ನೀವು ಈಗ ಹೋಗಿ, ತರಗತಿಗಳು ಶುರುವಾದಾಗ ಕರೆಮಾಡುತ್ತೇನೆ” ಎಂದರು.
ಅದಾಗಿ ನಾನು ಈ ವಿಷಯವನ್ನೇ ಮರೆತುಬಿಟ್ಟಿದ್ದೆ. ಆ ಹೊತ್ತಿಗಾಗಲೇ ಗುರುಗಳಾದ ರಾಜಪ್ಪ ದಳವಾಯಿಯವರು ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದರು. ಅಲ್ಲಿನ ಕನ್ನಡ ಪದವಿ ಪಠ್ಯ ಪುಸ್ತಕಗಳನ್ನು ಅವರು ಪರಿಷ್ಕರಿಸುತ್ತಿದ್ದರು. ಅದರ ಕರಡು ತಿದ್ದಲು ನಾನು ಮತ್ತು ಗೆಳೆಯ ಲಕ್ಷ್ಮೀಕಾಂತ್ ಎಸ್.ಬಿ. ಅಲ್ಲೇ ಠಿಕಾಣಿ ಹೂಡಿದ್ದೆವು. ಬಸವಾಟ್ಟಣದ ಪದವಿ ಕಾಲೇಜಿನಿಂದ ಕರೆ ಬಂತು. “ನಾಳೆಯಿಂದ ತರಗತಿಗಳು ಶುರುವಾಗುತ್ತಿವೆ. ನೀವು ಬಂದು ಡ್ಯೂಟಿ ರಿಪೋರ್ಟ್ ಮಾಡಿಕೊಳ್ಳಿ” ಎಂದು ಪ್ರಿನ್ಸಿಪಾಲ್ ಆದೇಶ ನೀಡಿದರು.
ನಾನು “ಸರ್ ನಾನು ಈಗಾಗಲೇ ನಿಮಗೆ ಹೇಳಿದ್ದೇನೆ. ನೀವು ನನಗೆ ವಾರಕ್ಕೆ 8 ಗಂಟೆಗಳ ಟೈಮ್ ಟೇಬಲ್ ಕೊಟ್ಟರೆ ಬರುತ್ತೇನೆ. ನೀವು ಹೇಳಿದಂತೆ ಬೆಳಿಗ್ಗೆ 8 ಗಂಟೆಗೆ ಬಂದು ನಿಂತುಕೊಂಡು ನೀವು ಸಮಯ ಕೊಟ್ಟಾಗ ತರಗತಿಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ” ಎಂದು ಖಡಾಖಂಡಿತವಾದ ದನಿಯಲ್ಲಿ ಹೇಳಿದೆ.
ನನ್ನ ಮಾತುಗಳನ್ನು ಕೇಳಿದ ಪ್ರಿನ್ಸಿಪಾಲರು ರೊಚ್ಚಿಗೆದ್ದರು. “ರೀ ನಮಗೆಲ್ಲ ಗೊತ್ತುರಿ. ನೀವು ಬೇರೆಲ್ಲೋ ಕೆಲಸ ಮಾಡುತ್ತಿದ್ದೀರಿ. ಅದಕ್ಕೆ ಇಲ್ಲದ ಸಬೂಬು ಹೇಳುತ್ತೀರಿ. ಒಂದು ಕೆಲಸ ಮಾಡಿ. ನನಗೆ ಕೆಲಸಕ್ಕೆ ಬರಲು ಸಾಧ್ಯವಿಲ್ಲ ಎಂದು ಮೇಯ್ಲ್ ಮಾಡಿ” ಎಂದು ನನ್ನ ಪ್ರತಿಕ್ರಿಯೆಗೂ ಕಾಯದೆ ಕರೆ ಕಟ್ ಮಾಡಿದರು.
ಬೆಳಗಾವಿಯ ಸೈಬರ್ ಸೆಂಟರ್ ಒಂದಕ್ಕೆ ತೆರಳಿ, “ಸರ್ ನಮಸ್ಕಾರ, ನೀವು ಮೌಖಿಕವಾಗಿ ಆದೇಶ ನೀಡಿದಂತೆ ಬೆಳಿಗ್ಗೆ 8 ಗಂಟೆಗೆ ಬಂದು ಕಾಲೇಜಿನಲ್ಲಿ ನಿಲ್ಲಲು ಮತ್ತು ನೀವು ಹೇಳಿದಾಗ ತರಗತಿಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಟೈಮ್ ಟೇಬಲ್ ಕೊಟ್ಟರೆ ಕೆಲಸಕ್ಕೆ ಹಾಜರಾಗುತ್ತೇನೆ” ಎಂದು ಮೇಯ್ಲ್ ಮಾಡಿದೆ. ಮರುದಿನ ಪ್ರಿನ್ಸಿಪಾಲರು ಕರೆ ಮಾಡಿದರು. “ನೋಡಿ ನೀವು ಹಾಗೆ ಮೇಯ್ಲ್ ಮಾಡಿದರೆ ಬೇರೆಯವರನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ನನಗೆ ಬರಲು ಸಾಧ್ಯವಿಲ್ಲ ಎಂದು ಮೇಯ್ಲ್ ಮಾಡಿ” ಎಂದು ಮನವಿಯ ಧಾಟಿಯಲ್ಲಿ ಹೇಳಿದರು. ನನಗೆ ಈ ವಿಷಯವನ್ನು ಇನ್ನಷ್ಟು ಬೆಳೆಸಲು ಮತ್ತು ನನ್ನ ಕಾರಣದಿಂದ ನನ್ನ ಊರಿನ ವಿದ್ಯಾರ್ಥಿಗಳಿಗೆ ತರಗತಿಗಳು ನಡೆಯದಂತಾಗುವುದು ಇಷ್ಟವಿಲ್ಲದೆ, ವೈಯಕ್ತಿಕ ಕಾರಣಕ್ಕೆ ತರಗತಿಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ನೀವು ಬೇರೆಯ ಆಯ್ಕೆಯನ್ನು ಪರಿಗಣಿಸಬಹುದು ಎಂದು ರಿಪ್ಲೈ ಮಾಡಿದೆ.
ವಾಸ್ತವದಲ್ಲಿ ಆ ಅವಧಿಯಲ್ಲಿ ನನಗೆ ಬೇರಾವ ಕೆಲಸವೂ ಇರಲಿಲ್ಲ. ಬೆಂಗಳೂರಿನ ಬಹುತೇಕ ಕಾಲೇಜುಗಳಿಗೆ ಅಲೆದು, ಪರಿಚಿತರನ್ನು ಭೇಟಿಯಾಗಿ, ಕೆಲಸ ಕೇಳುವುದೇ ಕೆಲಸವಾಗಿತ್ತು. ಬಯೋಡೇಟಾ ಮುದ್ರಿಸಲು ಹಣ ವ್ಯಯಿಸಿ ವ್ಯಯಿಸಿ ಸುಸ್ತಾಗಿ, ಕಡೆಗೆ ಯೋಗೀಶನ ನೆರವಿನಿಂದ ಒಂದು ಪ್ರಿಂಟರ್ ತಂದಿಟ್ಟುಕೊಂಡು ಬಯೋಡೇಟಾ ಮುದ್ರಿಸಿ ಕಾಲೇಜುಗಳಿಗೆ ಅಲೆಯುವುದು, ಪೋಸ್ಟ್ ಮಾಡುವುದು, ಆನ್ ಲೈನ್ ನಲ್ಲಿ ಮೇಯ್ಲ್ ಮಾಡುವುದೇ ಉದ್ಯೋಗವಾಗಿತ್ತು. ಈ ಸಮಯದಲ್ಲಿ ಡಾ.ವಾಸುದೇವಮೂರ್ತಿ ಟಿ.ಎನ್., ಡಾ.ರೇಣುಕಾರಾಧ್ಯ ಎಚ್.ಎಸ್., ಡಾ.ರವಿಕುಮಾರ್ ಬಾಗಿ, ಡಾ.ರಂಗನಾಥ್ ಕಂಟನಕುಂಟೆ, ಡಾ.ವೆಂಕಟೇಶಮೂರ್ತಿ ಮೊದಲಾದವರು ತಮ್ಮ ಶಕ್ತ್ಯಾನುಸಾರ ನನಗೆ ಕೆಲಸ ಕೊಡಿಸಲು ಯತ್ನಿಸಿ ಸೋತಿದ್ದರು. ಸ್ವತಃ ನಾನು ಕೂಡ ಕಾಲೇಜುಗಳಿಗೆ ಅಲೆದಲೆದು ಸೋತಿದ್ದೆ.
ಕಡೆಗೆ ಕೆಂಗೇರಿ ಕಾಲೇಜಿನಿಂದ ಕರೆಬಂತು. ಕಾಲೇಜಿಗೆ ಹೋದೆ. ಅಲ್ಲಿದ್ದವರೂ ಪರಿಚಿತರು. ಅವರು, ನನ್ನನ್ನು ಕಂಡದ್ದೇ ಆದರ, ವಿಶ್ವಾಸ, ಪ್ರೀತಿ, ಗೌರವಗಳಿಂದ ಬರಮಾಡಿಕೊಂಡರು. ಕುಳಿತುಕೊಳ್ಳಲು ಹೇಳಿದರು. ಕನ್ನಡ ಅಧ್ಯಯನ ಕೇಂದ್ರದ ವಿಷಯ ಮಾತಾಡಿದರು. ಕಡೆಗೆ “ನೋಡಿ ಇಲ್ಲಿ 8 ಗಂಟೆ ವರ್ಕ್ ಲೋಡ್ ಇಲ್ಲ. ಈಗ ಕೇಲವ 4 ಗಂಟೆ ಮಾತ್ರ ಇದೆ. ಮುಂದಿನ ಸೆಮಿಸ್ಟರ್ ಗೆ 6 ಗಂಟೆ ಆಗಬಹುದು. ಅದರ ನಂತರ 8 ಗಂಟೆ ಸಿಗಬಹುದು. ಜೊತೆಗೆ, ಬೆಂಗಳೂರು ಆಗಿರುವುದರಿಂದ ಯಾವುದೇ ಸಮಯದಲ್ಲಿ ಯಾರಾದರೂ ಇಲ್ಲಿಗೆ ಡೆಪ್ಟೇಷನ್ ಅಥವಾ ಇನ್ಫ್ಲುಯೆನ್ಸ್ ಮಾಡಿಸಿ ಬರಹುದು. ಏನು ಮಾಡುತ್ತೀರಿ? ನಿಮ್ಮಂತಹ ಪ್ರತಿಭಾವಂತರು ನಮ್ಮ ಜೊತೆಗೆ ಕೆಲಸ ಮಾಡಿದರೆ ನಮಗೆ ಸಂತೋಷ. ಆದರೆ, ನಿಮಗೆ ಕೇವಲ 4 ಗಂಟೆ ಕೊಡಲು ನಮಗೆ ಮುಜುಗರವಾಗುತ್ತದೆ” ಎಂದು ಕೈಕೈ ಹಿಚುಕಿಕೊಂಡರು. ನಾನು ಓಕೆ ಸರ್ ನೋಡೋಣ ಮುಂದಿನ ಬಾರಿ ಮತ್ತೊಮ್ಮೆ ಅರ್ಜಿ ಹಾಕುವೆ ಮತ್ತೆ ಸಿಗುತ್ತೇನೆ ಎಂದು ಹೊರಟೆ. ಮುಂದಿನ ಕತೆಗಳು ಬಹಳ ಕುತೂಹಲಕಾರಿಯಾಗಿವೆ. ಸದ್ಯಕ್ಕೆ ಇಲ್ಲಿಗೆ ನಿಲ್ಲಿಸೋಣವೆನಿಸುತ್ತಿದೆ.
ಪದವಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿರುವವರ ಸಮಸ್ಯೆ ಒಂದಾದರೆ, ಒಳಗೆ ಸೇರಿಕೊಳ್ಳಲು ಕೂಡ ಅನೇಕ ಸಮಸ್ಯೆಗಳಿವೆ. ಇದೀಗ ಬ್ಯಾಡಗಿ ಕಾಲೇಜಿನ ಪ್ರಾಂಶುಪಾಲರು ಹೊಸ ನಿಯಮಾವಳಿಗಳನ್ನು ರೂಪಿಸಿದ್ದಲ್ಲಿ ಇನ್ನಷ್ಟು ಸಂಕಷ್ಟಗಳು ಎದುರಾಗುವುದು ಸುಳ್ಳಲ್ಲ.
- ಡಾ.ಪ್ರದೀಪ್ ಮಾಲ್ಗುಡಿ, ಸಂಶೋಧಕ



