ಕಮರಿದ ಗ್ರಾಮ ಸ್ವರಾಜ್ಯದ ಕನಸು!

4 years ago

ಅಮಾಯಕ ಅಧ್ಯಕ್ಷರು! ಅನಕ್ಷರಸ್ಥ ಸದಸ್ಯರು! ಭ್ರಷ್ಟ ಪಿಡಿಒಗಳು! ಇವರ ರಕ್ಷಣೆಗೆ ಟೊಂಕ ಕಟ್ಟಿ ನಿಂತ ಪುಡಿ ರಾಜಕೀಯ ನಾಯಕರ ಮಧ್ಯೆ ಪಂಚಾಯಿತಿಗಳು ನಲುಗುತ್ತಿವೆ! ಜನಸಾಮಾನ್ಯರ ಪರಿಸ್ಥಿತಿ ಆ ದೇವರಿಗೆ ಪ್ರೀತಿ! ಜನರಿಗೆ ಭರವಸೆ ನೀಡಿ ಆಯ್ಕೆಯಾದ ಜನಪ್ರತಿನಿಧಿಗಳ ಮಾತು ಬರೀ ರೀಲು! ಇಷ್ಟೆಲ್ಲ ಪೀಠಿಕೆ ಏಕೆ‌ ಹಾಕಿದೆ ಎಂದು ಆಶ್ಚರ್ಯವಾಗಿರಬಹುದು. ಆಗಿರಲೇಬೇಕು.

ಇತ್ತೀಚಿನ ದಿನಗಳಲ್ಲಿ ಪಂಚಾಯತಿಗಳು ಭ್ರಷ್ಟಾಚಾರದ ಕೂಪಗಳಾಗಿವೆ! ಪಂಚಾಯಿತಿ ಪಿಡಿಓ, ಜೆಇ, ಇತರೆ ಸಿಬ್ಬಂದಿ ಹಣವಂತರ ಏಜೆಂಟರಂತೆ ವರ್ತಿಸುತ್ತಿದ್ದಾರೆ! ಜನರಿಗೆ ಸೇರಬೇಕಾದ ಯೋಜನೆಗಳು ಭ್ರಷ್ಟರ ಪಾಲಾಗುತ್ತಿವೆ! ನಕಲಿ ಬಿಲ್‌ ಗೋಲ್‌ಮಾಲ್‌ ರಾಜಾರೋಷವಾಗಿ ನಡೆಯುತ್ತಿವೆ! ಅದಕ್ಕಿಂತಲೂ ಮಿಗಿಲಾಗಿ ಕೂಲಿ ಕಾರ್ಮಿಕರಿಗೆ ವರವಾಗಿರುವ ಉದ್ಯೋಗ ಖಾತ್ರಿ ಯೋಜನೆ ಖಾತ್ರಿ ಇಲ್ಲದ ಕೆಲಸವಾಗಿದೆ!

ಯೋಜನೆಯು ಗ್ರಾಮೀಣ ಪ್ರದೇಶದ ಬಡಜನರ ಹೊಟ್ಟೆ ತುಂಬಿಸುತ್ತಿವೆಯೋ ಇಲ್ಲ ಗೊತ್ತಿಲ್ಲ. ಆದರೆ, ಕೆಲ ಭ್ರಷ್ಟ ಅಧಿಕಾರಿಗಳ ಮತ್ತು ನೌಕರ ಹಾಗೂ ಸ್ಥಳೀಯ ಚುನಾಯಿತರ ಪಾಲಿಗೆ ಅಕ್ಷಯ ಪಾತ್ರೆ ಆಗಿ ಬಿಟ್ಟಿರುವುದಂತು ದಿಟ.

ಏಕೆಂದರೆ, ಈ ಕರ್ಮಕಾಂಡ, ಬ್ರಹ್ಮಾಂಡ ಭ್ರಷ್ಟಾಚಾರದ ಮಜಲುಗಳು ಒಂದೆರಡು ಗ್ರಾ.ಪಂಗಳದ್ದಲ್ಲ. ಸ್ಥಳೀಯ ಚುನಾಯಿತ ಸದಸ್ಯರಿಂದ ಹಿಡಿದು ಪಿಡಿಒ, ಇಒ ಮತ್ತು ಸಿಇಓಗಳಿಂದ ಜಿ.ಪಂ ಸದಸ್ಯರ ತನಕವೂ ಕೈಯಾಡಿಸಿರುತ್ತಾರೆ.

ಯೆಸ್ ಈ ಅಕ್ರಮದ ಬಗ್ಗೆ ಮಾಹಿತಿ ಕೇಳಿದ್ರೆ ಮಾಹಿತಿ ಕೊಡಲ್ಲ. ಭ್ರಷ್ಟರ ವಿರುದ್ಧ ಮೇಲಧಿಕಾರಿಗಳು ಕ್ರಮ ಕೈಗೊಳ್ಳೋದಿಲ್ಲ. ಬದಲಾಗಿ ದೂರು ಕೊಟ್ಟವರಿಗೆ ಜೀವ ಬೆದರಿಕೆ ನೀಡುವುದಂತು ತಪ್ಪಿದ್ದಲ್ಲ.  ಅಷ್ಟು ಮಾತ್ರವಲ್ಲ; ಯಾರೆಲ್ಲ ಪಂಚಾಯತ್‌ ಅಧಿಕಾರಿಗಳ ವಿರುದ್ಧ ಹೋರಾಟಕ್ಕೆ ಇಳಿಯುತ್ತಾರೊ ಅವರು ಈ  ಪುಡಿ ರಾಜಕೀಯ ನಾಯಕರ  ದೃಷ್ಟಿಯಲ್ಲಿ ಹುಚ್ಚರು…!

ಎಷ್ಟೋ ಕೂಲಿ ಕಾರ್ಮಿಕರು ಜೀವನ ನಡೆಸಲು ಸಾಧ್ಯವಾಗದೆ ಕೂಲಿ ಅರಸಿ ಗುಳೆ ಹೋಗುವುದು ಸಾಮಾನ್ಯವಾಗಿದೆ. ಸರ್ಕಾರದ ಸವಲತ್ತುಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಿ ಇಡೀ ಗ್ರಾಮವನ್ನೇ ಅಭಿವೃದ್ಧಿಯ ಪಥದ ಕಡೆ ತರುವ ಹೊಣೆಗಾರಿಕೆ ಆಯಾ ಗ್ರಾ.ಪಂ. ಸದಸ್ಯರ ಮತ್ತು ಅಭಿವೃದ್ಧಿ ಅಧಿಕಾರಿಗಳ ಮೇಲಿದೆ. ಆದರೆ ಇವರೇ ಅಡ್ಡದಾರಿಯಲ್ಲಿ ದುಡ್ಡು ಮಾಡುವ ಯಂತ್ರಗಳಾದರೆ? ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ನಡೆಯುತ್ತಿರುವುದು ಇದೇ. ಮಹಾತ್ಮಾ ಗಾಂಧಿಯವರ ಗ್ರಾಮೀಣ ಸ್ವರಾಜ್ಯದ ಕಲ್ಪನೆ ಎಂದೊ ಕಮರಿ ಹೋಗಿದೆ. ಹಾಗಾದರೆ ಗ್ರಾಮಸ್ವರಾಜ್ಯ ಸಾಕಾರಗೊಳ್ಳುವುದು ಯಾವಾಗ?

ಗ್ರಾಮಗಳ ಅಭಿವೃದ್ಧಿಯೇ ದೇಶದ ಅಭಿವೃದ್ಧಿ, ನಿಜವಾದ ಭಾರತ ಹಳ್ಳಿಗಳಲ್ಲಿದೆ… ಹಳ್ಳಿಯೇ ವಿಕಾಸದ ಮೂಲ ಘಟಕವಾಗಬೇಕು ಅನ್ನುವುದು ಮಹಾತ್ಮ ಗಾಂಧೀಜಿಯವರ ಕನಸಾಗಿತ್ತು.

ಸ್ವಾತಂತ್ರ್ಯ ಪಡೆದು ಎಪ್ಪತ್ತೇಳು ವರ್ಷ ಸವೆಸಿದ್ದೇವೆ. ಈ ವಿಕಾಸ ಪಥದ ಪರಾಮರ್ಶೆ ಮಾಡಿದಾಗ ನಿರಾಸೆಯಾಗುತ್ತದೆ… ಸಮೃದ್ಧಿಯಿಂದ ನಳನಳಿಸಬೇಕಾಗಿದ್ದ ಹಳ್ಳಿಗಳು ಸ್ಮಶಾನದಂತೆ ಗೋಚರಿಸುತ್ತಿವೆ. ಈ ಎಲ್ಲ ಸಮಸ್ಯೆಗಳ ತಾಯಿಬೇರು ವಿಕಾಸವಂಚಿತ ಗ್ರಾಮಗಳು ಎಂದರೆ ತಪ್ಪಾಗಲಾರದು.

ಆರ್.ಎಸ್. ಮಾಲಗತ್ತಿ, ಗ್ರಾ.ಪಂ. ಸದಸ್ಯರು, ತಾ. ಸುರಪುರ ಜಿ. ಯಾದಗಿರಿ

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗ್ರಾಮೀಣಭಿವೃದ್ಧಿಗಾಗಿಯೇ ಕೋಟ್ಯಂತರ ರೂಪಾಯಿ ಖರ್ಚು‌ ಮಾಡುತ್ತಿವೆ.  ಖರ್ಚೂ ಆಗುತ್ತದೆ. ಆದರೆ ಫಲ ಮಾತ್ರ ಸೊನ್ನೆ… ಕಾರಣ ಬಹಳ ಸರಳ ಅನುದಾನವೆಲ್ಲ ಭ್ರಷ್ಟಾಚಾರಿಗಳ, ಜನಪ್ರತಿನಿಧಿಗಳ, ಕಮೀಶನ್ ದಲ್ಲಾಳಿಗಳ ಖಜಾನೆ ಸೇರುವುದು. ಇದಕ್ಕೆ ಪೂರಕವಾಗಿ ಲಂಚಬಾಕ ಅಧಿಕಾರಶಾಹಿಯೂ ಇದೆ…

ಗ್ರಾಮಾಭಿವೃದ್ಧಿಗಾಗಿಯೇ ಸ್ಥಾಪನೆಗೊಂಡಿರುವ ಗ್ರಾಮ ಪಂಚಾಯತಿಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದರೆ ದೇಶದ ಬಹುತೇಕ ಸಮಸ್ಯೆಗಳೇ ಪರಿಹಾರವಾಗುತ್ತವೆ.. ಆದರೆ ಜನಪರ ಚಿಂತನೆಯುಳ್ಳ ಯುವಶಕ್ತಿ ಪಂಚಾಯತಿ ಮಟ್ಟದಲ್ಲಿ ಸಕ್ರಿಯವಾಗಿ ರಾಜಕಾರಣಕ್ಕಿಳಿಯಬೇಕು.

ಅಭಿವೃದ್ಧಿಯೆಂದರೆ ಕೇವಲ ಉತ್ತಮ ರಸ್ತೆ, ಚರಂಡಿ ವ್ಯವಸ್ಥೆ ಬಹುಮಹಡಿ ಕಟ್ಟಡಗಳ ನಿರ್ಮಾಣ ಮಾತ್ರ ಅಲ್ಲ. ಸ್ಥಳೀಯಾಡಳಿತ ದಲಿತರ ದಮನಿತರ ಹಿಂದುಳಿದವರ ಸಂರಕ್ಷಣೆಯ ಜತೆಗೆ ಸಾಮಾಜಿಕ ಸಮಾನತೆ ಸಾಧಿಸಿದರೆ ಮಾತ್ರ ಮಾದರಿ ಗ್ರಾಮ ರಚನೆ ಮಾಡಲು ಸಾಧ್ಯವಿದೆ.

ಗ್ರಾಮಾಭಿವೃದ್ಧಿಯ ಕೀಲಿ ಕೈ ಗ್ರಾಮೀಣ ಜನರ ಕೈಯಲ್ಲೇ ಇರಬೇಕೆ ಹೊರತು ಸಂತೆ ಮಾಡಿಕೊಂಡು ಹೋಗಲು ಬಂದ ಅಭಿವೃದ್ಧಿ ಅಧಿಕಾರಿಗಳ ಕೈಯಲ್ಲಿ ಅಲ್ಲ.

  • ಆರ್.ಎಸ್. ಮಾಲಗತ್ತಿ, ಗ್ರಾ.ಪಂ. ಸದಸ್ಯರು, ತಾ. ಸುರಪುರ ಜಿ. ಯಾದಗಿರಿ

Leave a Reply