ಇಂದಿನಿಂದ ವಿಧಾನಮಂಡಲದ ಬಜೆಟ್ ಅಧಿವೇಶನ

1 year ago

ಬೆಂಗಳೂರು: ರಾಜ್ಯ ವಿಧಾನಮಂಡಲದ ಬಜೆಟ್ ಅಧಿವೇಶನ ಮಾರ್ಚ್ ಮೂರರಿಂದ ಆರಂಭವಾಗಲಿದೆ. ಮೊದಲ ದಿನ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಭಾಷಣ ಮಾಡಲಿದ್ದಾರೆ.

ಅಧಿವೇಶನ ಆಡಳಿತ ಮತ್ತು ವಿಪಕ್ಷಗಳ ನಡುವೆ ವಾಕ್ಸಮರ ನಡೆಯಲು ವೇದಿಕೆಯಾಗಿದ್ದು, ಮೊದಲ ದಿನವೇ ಪ್ರತಿಪಕ್ಷ ಬಿಜೆಪಿ ರಾಜ್ಯ ಸರ್ಕಾರಕ್ಕೆ ಪ್ರತಿಭಟನೆಯ ಬಿಸಿ ಮುಟ್ಟಿಸಲು ಸಜ್ಜುಗೊಂಡಿದೆ. 

ಮೊದಲ ದಿನ ಜಂಟಿ ಅಧಿವೇಶನ ಉದ್ದೇಶಸಿ ರಾಜ್ಯಪಾಲರು ಭಾಷಣ ಮುಗಿಸಿದ ನಂತರ ರಾಜ್ಯಪಾಲರನ್ನು ಬೀಳ್ಕೊಟ್ಟ ನಂತರ ಉಭಯ ಸದನಗಳು ಪ್ರತ್ಯೇಕವಾಗಿ ಸಮಾವೇಶಗೊಳ್ಳಲಿವೆ. ಇತ್ತೀಚೆಗೆ ಆಗಲಿದ ಗಣ್ಯರಿಗೆ ಸಂತಾಪ ಸೂಚನೆ ಸಲ್ಲಿಸಲಾಗುತ್ತದೆ. ಮಂಗಳವಾರದಿಂದ ಗುರುವಾರದವರೆಗೆ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆ ನಡೆಯಲಿದೆ.

ಹಣಕಾಸು ಖಾತೆ ಹೊಂದಿರುವ ಸಿಎಂ ಸಿದ್ದರಾಮಯ್ಯ ಮಾ.7 ರಂದು 2025-26 ನೇ ಸಾಲಿನ ಮುಂಗಡ ಪತ್ರವನ್ನು ಮಂಡಿಸಲಿದ್ದಾರೆ. ಮುಂದಿನ ವಾರದಿಂದ ಮುಂಗಡ ಪತ್ರದ ಮೇಲೆ ಉಭಯಸದನಗಳಲ್ಲಿ ಸುದೀರ್ಘ ಚರ್ಚೆ ನಡೆಯಲಿದೆ. ಇಲಾಖೆವಾರು ಹಾಗೂ ಬೇಡಿಕೆಗಳ ಮೇಲೆ ಚರ್ಚೆ ನಡೆಯಲಿದ್ದು, ಆಡಳಿತ ಮತ್ತು ಪ್ರತಿಪಕ್ಷಗಳ ಶಾಸಕರು ಚರ್ಚೆಯಲ್ಲಿ ಭಾಗವಹಿಸಲಿದ್ದಾರೆ.

ವಿಶ್ವವಿದ್ಯಾಲಯಗಳ ಕಾಯ್ದೆ ತಿದ್ದುಪಡಿ ಸೇರಿದಂತೆ ಹಲವು ವಿಷಯಗಳಲ್ಲಿ ಸರ್ಕಾರ ರಾಜ್ಯಪಾಲರನ್ನು ಅಪಮಾನ ಮಾಡುತ್ತಿದೆ ಎಂದು ಆರೋಪಿಸಿರುವ ಬಿಜೆಪಿ ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಮುಂದೆ ಧರಣಿ ನಡೆಸಲಿದೆ. 

ಸುದ್ದಿಗಾರರಿಗೆ ಈ ವಿಷಯ ತಿಳಿಸಿರುವ ವಿಧಾನಸಭೆಯ ವಿಪಕ್ಷ ನಾಯಕ ಆರ್ ಅಶೋಕ್, ಸರ್ಕಾರ ರಾಜ್ಯಪಾಲರಿಗೆ ನಿರಂತರವಾಗಿ ಅಪಮಾನ ಮಾಡುತ್ತಿದೆ. ಒಂದು ಕಡೆ ಅಪಮಾನ ಮಾಡಿದರೆ, ಮತ್ತೊಂದು ಕಡೆ ಅವರಿಂದಲೇ ಸರ್ಕಾರಕ್ಕೆ ಮೆಚ್ಚುಗೆ ಹೇಳುವ ಮಾತನ್ನು ಆಡಿಸಲಾಗುತ್ತಿದೆ. ಇದನ್ನು ವಿರೋಧಿಸಿ ಬಿಜೆಪಿಯಿಂದ ಮಾರ್ಚ್ 3 ರಂದು ಪ್ರತಿಭಟಿಸಲಾಗುವುದು‌ ಎಂದರು.

ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಕಾಂಗ್ರೆಸ್ ಶಾಸಕರೇ ಈ ಮಾತನ್ನು ಹೇಳುತ್ತಿದ್ದಾರೆ. ಇದರ ಜೊತೆಗೆ ಹಣ ಇಲ್ಲದೆ ಒಂದು ಲಕ್ಷ ಕೋಟಿ ರೂ.ಸಾಲ ಮಾಡಲಾಗುತ್ತಿದೆ. ಜನರ ಮೇಲೆ ತೆರಿಗೆ ಹೊರೆ ಹೇರಲಾಗುತ್ತಿದೆ. ಇದನ್ನು ಖಂಡಿಸಿ ಮಾರ್ಚ್ 7 ರಂದು ಶಾಸಕರ ಭವನದಿಂದ ವಿಧಾನಸೌಧಕ್ಕೆ ಪಾದಯಾತ್ರೆ ಹಾಗೂ ಪ್ರತಿಭಟನೆ ಮಾಡಲಾಗುವುದು ಎಂದರು.

ಸರ್ಕಾರ ದಲಿತರ ಹಣವನ್ನು ಗ್ಯಾರಂಟಿಗೆ ಬಳಸಿದೆ. ದಲಿತರ ಹಣವನ್ನು ದಲಿತರಿಗೆ ಸಂಬಂಧಿಸಿದ ಯೋಜನೆಗಳಿಗೆ ಮಾತ್ರ ಬಳಸಬೇಕು. ಚುನಾವಣೆ ಸಮಯದಲ್ಲಿ ಎಲ್ಲರಿಗೂ ಫ್ರೀ ಎಂದು ಹೇಳಿ, ಈಗ ದಲಿತರ ಹಣ ಬಳಸಲಾಗುತ್ತಿದೆ. ಬಿಜೆಪಿಯ 40% ಕಮಿಶನ್ ಹಣ ಉಳಿಸಿ ಗ್ಯಾರಂಟಿಗೆ ಬಳಸಲಾಗುವುದು ಎನ್ನಲಾಗಿತ್ತು. ಈಗ ಗುತ್ತಿಗೆದಾರರೇ ಕಾಂಗ್ರೆಸ್ ಸರ್ಕಾರದ ಕಮಿಶನ್ ಬಗ್ಗೆ ಹೇಳಿದ್ದಾರೆ ಎಂದರು.

Leave a Reply