ನಾಳೆಯಿಂದ ರಾಜ್ಯ ವಿಧಾನಮಂಡಲದ ಬಜೆಟ್ ಅಧಿವೇಶನ

2 years ago

ಬೆಂಗಳೂರು: ರಾಜ್ಯ ವಿಧಾನಮಂಡಲದ ಬಜೆಟ್ ಅಧಿವೇಶನ ನಾಳೆಯಿಂದ ಹತ್ತು ದಿನಗಳ ಕಾಲ ನಡೆಯಲಿದೆ. ಈ ವರ್ಷದ ಮೊದಲ ಅಧಿವೇಶನ ಇದಾಗಿದ್ದು, ನಾಳೆ ರಾಜ್ಯಪಾಲ ತಾವರ್‍ ಚಂದ್ ಗೆಹ್ಲೋಟ್ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಇದಾದ ನಂತರ ‌ಮೂರು ದಿನಗಳ ಕಾಲ ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ‌ ಮೇಲೆ ಚರ್ಚೆ ನಡೆಯಲಿದೆ.

ಈ ವೇಳೆ ಬರ ಪರಿಹಾರ, ಜಾನುವಾರುಗಳ ಮೇವು, ಕುಡಿಯುವ ನೀರು, ವಿದ್ಯುತ್ ಅಭಾವ, ಗುಳೇ ಹೋಗದಂತೆ ಜನರಿಗೆ ಉದ್ಯೋಗ, ಕೇಂದ್ರ ಸರ್ಕಾರದಿಂದ ಅನುದಾನ ಹಂಚಿಕೆ ತಾರತಮ್ಯ ಆರೋಪ, ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮ ಪ್ರತಿಷ್ಠಾಪನೆ ಸೇರಿದಂತೆ ಹತ್ತು ಹಲವು ವಿಚಾರಗಳು ಉಭಯ ಸದನಗಳಲ್ಲಿ ಪ್ರಸ್ತಾಪಗೊಂಡು ವಾಗ್ವಾದಕ್ಕೆ ಎಡೆ ಮಾಡಿಕೊಡುವ ಸಾಧ್ಯತೆಗಳಿವೆ.

ಸಿಎಂ ಸಿದ್ದರಾಮಯ್ಯ ಅವರು ಫೆ.16ರಂದು 2024-25ನೇ ಸಾಲಿನ ಆಯವ್ಯಯವನ್ನು ಮಂಡಿಸಲಿದ್ದಾರೆ. 10 ದಿನಗಳ ಕಾಲ ನಡೆಯಲಿರುವ ಅಧಿವೇಶನದಲ್ಲಿ ಗುತ್ತಿಗೆದಾರರ ಸಂಘದ ಪರ್ಸಂಟೇಜ್ ಆರೋಪ, ಸರ್ಕಾರಿ ನೌಕರರ ವರ್ಗಾವಣೆ ಸೇರಿದಂತೆ ಹತ್ತು ಹಲವು ವಿಚಾರಗಳು ಪ್ರತಿಧ್ವನಿಸುವ ಸಾಧ್ಯತೆ ಇದೆ.

Leave a Reply