ಕಾಂಗ್ರೆಸ್ ಗೆ ಕೈಕೊಟ್ಟು ಆಪ್ ಪೊರಕೆ ಹಿಡಿದ ಬ್ರಿಜೇಶ್‌ ಕಾಳಪ್ಪ

4 years ago

ಕಾಂಗ್ರೆಸ್ ಗೆ ಕೈಕೊಟ್ಟು ಆಪ್ ಪೊರಕೆ ಹಿಡಿದ ಬ್ರಿಜೇಶ್‌ ಕಾಳಪ್ಪ

ಬೆಂಗಳೂರು: ಕಾಂಗ್ರೆಸ್‌ ನಾಯಕ ಹಾಗೂ ಸುಪ್ರೀಂಕೋರ್ಟ್‌ ವಕೀಲ ಬ್ರಿಜೇಶ್‌ ಕಾಳಪ್ಪ ಕಾಂಗ್ರೆಸ್ ತೊರೆದು ಆಪ್ ಸೇರಿದರು. ಬೆಂಗಳೂರಿನ ಹೊಟೇಲ್‌ ಪರಾಗ್‌ನಲ್ಲಿ ನಡೆದ ಸಮಾರಂಭದಲ್ಲಿ ಆಪ್ ಕರ್ನಾಟಕ ಉಸ್ತುವಾರಿ ದಿಲೀಪ್‌ ಪಾಂಡೆ ಬ್ರಿಜೇಶ್‌ ಕಾಳಪ್ಪ ಅವರನ್ನು ಪಕ್ಷಕ್ಕೆ ಸ್ವಾಗತಿಸಿದರು.

ಇದೇ ವೇಳೆ ಮಾತನಾಡಿದ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ, ದೇಶದಲ್ಲಿ ಉತ್ತಮ ಬದಲಾವಣೆ ತರಬೇಕೆಂಬ ಹಂಬಲವಿರುವ ನಾಯಕರಲ್ಲಿ ಬ್ರಿಜೇಶ್‌ ಕಾಳಪ್ಪ ಒಬ್ಬರು. ರಾಜಕೀಯ ಹಾಗೂ ಆಡಳಿತದಲ್ಲಿ ಆಮ್‌ ಆದ್ಮಿ ಪಾರ್ಟಿ ಬದಲಾವಣೆ ತಂದಿರುವುದನ್ನು ಮನಗಂಡು ಅವರು ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಜನಪರ ಕಾಳಜಿಯಿರುವವರಿಗೆ ಹಾಗೂ ದೇಶದ ಭವಿಷ್ಯಕ್ಕಾಗಿ ದುಡಿಯುವ ಹಂಬಲ ಇರುವವರಿಗೆ ಆಪ್ ಉತ್ತಮ ವೇದಿಕೆಯಾಗಿದ್ದು, ಇದನ್ನು ಇನ್ನಷ್ಟು ನಾಯಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಸಜ್ಜನ ನಾಯಕರನ್ನು ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ನಂತಹ ಪಕ್ಷಗಳು ಮೂಲೆಗುಂಪು ಮಾಡುತ್ತಿವೆ. ಅವುಗಳಿಗೆ ಕಮಿಷನ್‌ ರೂಪದಲ್ಲಿ ಜನರ ತೆರಿಗೆ ಹಣವನ್ನು ಕೊಳ್ಳೆಹೊಡೆಯುವ ನಾಯಕರು ಬೇಕೇ ವಿನಹ ಪ್ರಾಮಾಣಿಕರು ಬೇಡ. ಹಣಬಲ ಹಾಗೂ ತೋಳುಬಲವಿಲ್ಲದ ಒಳ್ಳೆಯ ಜನರನ್ನು ಅಧಿಕಾರದಿಂದ ದೂರವಿಡಲು ಆ ಪಕ್ಷಗಳ ನಾಯಕರು ಸದಾ ಯೋಜನೆ ರೂಪಿಸುತ್ತಿರುತ್ತಾರೆ. ಇದರಿಂದಾಗಿ ಅನೇಕ ಸಜ್ಜನ ರಾಜಕಾರಣಿಗಳು ಆಪ್ ನತ್ತ ಮುಖ ಮಾಡುತ್ತಿದ್ದಾರೆ. ಆಪ್ ಸತ್ಯ-ನಿಷ್ಠೆಯ ರಾಜಕಾರಣ ಹಾಗೂ ಕೊಟ್ಟ ಮಾತಿಗೆ ತಪ್ಪದಿರುವ ಗುಣ ಒಳ್ಳೆಯ ಮನಸ್ಸುಗಳನ್ನು ಆಕರ್ಷಿಸುತ್ತಿದೆ ಎಂದರು.

ವಿದ್ಯಾರ್ಥಿಯಾಗಿದ್ದಾಗಲೇ ಸಾರ್ವಜನಿಕ ಜೀವನ ಪ್ರವೇಶಿಸಿದ ಬ್ರಿಜೇಶ್‌ ಕಾಳಪ್ಪ ಕಾಂಗ್ರೆಸ್‌ ನಾಯಕರಾಗಿ, ಅದರ ರಾಷ್ಟ್ರೀಯ ವಕ್ತಾರರಾಗಿ, ಸುಪ್ರೀಂಕೋರ್ಟ್‌ ವಕೀಲರಾಗಿ, ಪತ್ರಕರ್ತರಾಗಿ, ಕರ್ನಾಟಕ ಸರ್ಕಾರದ ಕಾನೂನು ಸಲಹೆಗಾರರಾಗಿ, ಹರಿಯಾಣ ಸರ್ಕಾರದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಆಗಿ ಕಾರ್ಯನಿರ್ವಹಿಸಿದ ಸುದೀರ್ಘ ಅನುಭವ ಹೊಂದಿದ್ದಾರೆ ಎಂದರು.

ಕಾವೇರಿ, ಕೃಷ್ಣ, ಮಹದಾಯಿ ನದಿಗಳ ನೀರು ಹಂಚಿಕೆ ವಿವಾದಗಳಿಗೆ ಸಂಬಂಧಿಸಿ ಕರ್ನಾಟಕದ ಪರ ನ್ಯಾಯಾಲಯಗಳಲ್ಲಿ ವಕಾಲತ್ತು ವಹಿಸಿದ್ದಾರೆ. ಯಾವುದೇ ವಿಚಾರವನ್ನು ತಕ್ಷಣ ಗ್ರಹಿಸಿ, ಸೂಕ್ಷ್ಮ ವಿವೇಚನೆಯೊಂದಿಗೆ ಸತ್ಯಾಂಶ ಹೊರತೆಗೆಯುವ ವಿಶೇಷ ಗುಣವನ್ನು ಬ್ರಿಜೇಶ್‌ ಕಾಳಪ್ಪ ಹೊಂದಿದ್ದಾರೆ ಎಂದರು.

ಇದೇ ವೇಳೆ ಮಾತನಾಡಿದ ಬ್ರಿಜೇಶ್‌ ಕಾಳಪ್ಪ, ದೆಹಲಿಯಲ್ಲಿ ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ಆಪ್ ಸರ್ಕಾರ ಹೊಸಹೊಸ ಜನಪರ ಯೋಜನೆಗಳನ್ನು ನಿರಂತರವಾಗಿ ಜಾರಿಗೆ ತರುತ್ತಿದೆ. ಗುಣಮಟ್ಟ ಆಡಳಿತ ಹೇಗಿರುತ್ತದೆ ಎಂಬುದನ್ನು ದೇಶಕ್ಕೆ ತೋರಿಸಿಕೊಡುತ್ತಿದೆ. ಜನಸಾಮಾನ್ಯರ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲದೇ ದುರಾಡಳಿತ ನೀಡುತ್ತಿರುವ ಬಿಜೆಪಿಗೆ ಸಡ್ಡು ಹೊಡೆಯುವ ಸಾಮರ್ಥ್ಯವು ಆಪ್ ಗೆ ಇದೆ. ಮುಂಬರುವ ವಿವಿಧ ಚುನಾವಣೆಗಳಲ್ಲಿ ಆಪ್ ಜಯಗಳಿಸಿ ಅಧಿಕಾರ ಹಿಡಿದರೆ ಮಾತ್ರ ದೇಶದ ಭವಿಷ್ಯ ಬಲಗೊಳ್ಳಲಿದೆ ಎಂದರು.

ಆಪ್ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್, ಪಕ್ಷದ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು, ಮಾಜಿ ಹಿರಿಯ  ಕೆಎಎಸ್ ಅಧಿಕಾರಿ ಹಾಗೂ ಪಕ್ಷದ ಮಾಧ್ಯಮ ವಕ್ತಾರ ಕೆ. ಮಥಾಯಿ, ಪಕ್ಷದ ಮುಖಂಡರಾದ ಮೋಹನ್‌ ದಾಸರಿ, ಸಂಚಿತ್ ಸಹವಾನಿ, ಜಗದೀಶ್‌ ವಿ ಸದಂ, ಕುಶಲಸ್ವಾಮಿ,ಚನ್ನಪ್ಪಗೌಡ ನಲ್ಲೂರು , ಸುರೇಶ್ ರಾಥೋಡ್ , ದರ್ಶನ್ ಜೈನ್ ಮತ್ತಿತರ ನಾಯಕರು, ಕಾರ್ಯಕರ್ತರು ಹಾಗೂ ಬ್ರಿಜೇಶ್‌ ಕಾಳಪ್ಪರವರ ಅನೇಕ ಬೆಂಬಲಿಗರು ಕಾರ್ಯಕ್ರಮದಲ್ಲಿ ಹಾಜರಿದ್ದರು.

Leave a Reply