ಬೆಂಗಳೂರು: ರಾಜ್ಯದಲ್ಲಿ ಸೈಬರ್ ಚೋರರ ಹಾವಳಿ ದಿನೇ ದಿನೇ ಹೆಚ್ಚಾಗುತ್ತಿದೆ. ಒಂದೇ ತಿಂಗಳಲ್ಲಿ ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು ಅವುಗಳ ತನಿಖೆಗೆ ಸಿಬ್ಬಂದಿ ಕೊರತೆ ಎದುರಾಗಿದೆ.
ಉಪ ವಿಭಾಗದ ಮಟ್ಟದಲ್ಲಿ ಸೈಬರ್ ಠಾಣೆಗಳನ್ನು ತೆರೆದು ಹೆಚ್ಚಿನ ಸಿಬ್ಬಂದಿ ನಿಯೋಜಿಸಲು ನಿಧಾನಗತಿಯ ಧೋರಣೆ ತೋರುತ್ತಿರುವುದರಿಂದ ಸರಿಯಾದ ತನಿಖೆ ನಡೆಯದೇ ಹೆಚ್ಚಿನ ಪ್ರಕರಣಗಳು ಅತಂತ್ರವಾಗುತ್ತಿವೆ.
2023ರ ಮೊದಲ ತಿಂಗಳಲ್ಲೇ (ಜನವರಿ) ಬೆಂಗಳೂರಿನ ವಿವಿಧ ಠಾಣೆಗಳಲ್ಲಿ ಒಟ್ಟು 1,228 ಸೈಬರ್ ವಂಚನೆ ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷವೂ ಅತಿ ಹೆಚ್ಚು ಸೈಬರ್ ವಂಚನೆ ಪ್ರಕರಣಗಳು ದಾಖಲಾಗಿದ್ದು ಅವುಗಳ ಸಾಲಿಗೆ ಹೊಸ ಪ್ರಕರಣಗಳು ಸೇರ್ಪಡೆಯಾಗಿವೆ.
ಕೇವಲ ಒಂದು ತಿಂಗಳಿನಲ್ಲಿ ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದರೂ ಇದರ ತನಿಖೆ ನಡೆಸಲು ಸೆನ್ ಪೊಲೀಸ್ ಠಾಣೆಗಳಲ್ಲಿ ಸಿಬ್ಬಂದಿಗಳ ಕೊರತೆ ಎದುರಾಗಿದೆ. ಮಾತ್ರವಲ್ಲದೆ ಉಪ ವಿಭಾಗದ ಮಟ್ಟದಲ್ಲಿ ಸೆನ್ ಠಾಣೆಗಳನ್ನ ಸರ್ಕಾರ ತೆರಯಲು ಇನ್ನೂ ಮುಂದಾಗಿಲ್ಲ. ಇದರಿಂದಾಗಿ ಸಮರ್ಪಕ ತನಿಖೆಯಾಗದೆ ಸೈಬರ್ ಕ್ರೈಂ ಪ್ರಕರಣಗಳು ಆತಂತ್ರವಾಗುತ್ತಿವೆ.
ಸದ್ಯ ವಿಭಾಗೀಯ ಮಟ್ಟದಲ್ಲಿ ಮಾತ್ರ ಸೆನ್ ಪೊಲೀಸ್ ಠಾಣೆಗಳಿವೆ. ಇದನ್ನ ಉಪ ವಿಭಾಗದ ಮಟ್ಟದಲ್ಲಿ ತೆರೆಯುವ ಮೂಲಕ ಶೀಘ್ರ ತನಿಖೆಗೆ ಮುಂದಾಗಬೇಕಿದೆ. ಆದರೂ ರಾಜ್ಯ ಸರ್ಕಾರ ಮಾತ್ರ ಕಣ್ಮುಚ್ಚಿ ಕುಳಿತಿದೆ.
ನಗರದ ಆಗ್ನೇಯ ವಿಭಾಗದ ಸೆನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹೆಚ್ಚು ಸೈಬರ್ ಪ್ರಕರಣಗಳು ದಾಖಲಾಗಿದ್ದು, ಒಂದು ತಿಂಗಳಲ್ಲಿ 223 ಪ್ರಕರಣಗಳು ದಾಖಲಾಗಿವೆ. ಉತ್ತರ ವಿಭಾಗ ಸೆನ್ ಠಾಣೆಯಲ್ಲಿ 215, ವೈಟ್ ಫೀಲ್ಡ್ ವಿಭಾಗದ ಸೆನ್ ಠಾಣೆಯಲ್ಲಿ 160, ಈಶಾನ್ಯ ವಿಭಾಗ ಸೆನ್ ಠಾಣೆಯಲ್ಲಿ 155, ದಕ್ಷಿಣ ವಿಭಾಗದ ಸೆನ್ ಠಾಣೆಯಲ್ಲಿ 145 , ಪೂರ್ವ ವಿಭಾಗ ಸೆನ್ ಠಾಣೆಯಲ್ಲಿ 122, ಪಶ್ಚಿಮ ವಿಭಾಗ ಸೆನ್ ಠಾಣೆಯಲ್ಲಿ 118 ಹಾಗೂ ಕೇಂದ್ರ ವಿಭಾಗದ ಸೆನ್ ಠಾಣೆಯಲ್ಲಿ 90 ಪ್ರಕರಣಗಳು ದಾಖಲಾಗಿವೆ.



