ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸಂವಿಧಾನ ಶಿಲ್ಪಿ ಅಂಬೇಡ್ಕರ್‌ರವರ ಪುತ್ಥಳಿಗೆ ಮಾಲಾರ್ಪಣೆ ಮಾಡುವುದನ್ನು ವಿರೋಧಿಸಿ ಸಂವಿಧಾನ ಸಂರಕ್ಷಣಾ ಮಹಾ ಒಕ್ಕೂಟದಿಂದ ಕಪ್ಪು ಬಾವುಟ ಪ್ರತಿಭಟನಾ ಪ್ರದರ್ಶನವನ್ನು 14.04.2022ರಂದು ವಿಧಾನಸೌಧ ಮುಂಭಾಗ ಮತ್ತು ರಾಜ್ಯದ ಎಲ್ಲಾ ಜಿಲ್ಲಾ ಹಾಗೂ ತಾಲ್ಲೂಕುಕೇಂದ್ರಗಳಲ್ಲಿ ನಡೆಸಲು ಸಂವಿಧಾನ ಸಂರಕ್ಷಣಾ ಮಹಾ ಒಕ್ಕೂಟ ಕರೆ ನೀಡಿದೆ.
ವಿಶ್ವಜ್ಞಾನಿ ಎಂದು ವಿಶ್ವ ಸಂಸ್ಥೆಯಿಂದ ಮನ್ನಣೆ ಪಡೆದಿರುವ ಡಾ.ಅಂಬೇಡ್ಕರ್ ಅವರನ್ನು ಭಾರತೀಯ ಜಾತಿವಾದಿಗಳು ಇಂದಿಗೂ ಸಹ ಅಪಮಾನ ಮಾಡುತ್ತಿರುವುದು ಖಂಡನೀಯ. ಇಂತಹ ಮಹಾ ಮಾನವತಾವಾದಿ ಅಂಬೇಡ್ಕರ್ ಅವರು ನಿತ್ಯಅಪಮಾನಕ್ಕೆ ಒಳಗಾಗಿರುವುದು ಅತ್ಯಂತ ವಿಷಾದಕರ ಸಂಗತಿ ಎಂದು ಒಕ್ಕೂಟ ಹೇಳಿದೆ.
ಕಳೆದ ಜನವರಿ 26, 2022ರಂದು ದೇಶವು ಗಣರಾಜ್ಯ ದಿನವನ್ನು ಅತ್ಯಂತ ಸಂಭ್ರಮದಿಂದ ಆಚರಿಸಿತ್ತು. ವಿಶ್ವ ಮೆಚ್ಚುವಂತ ಸಂವಿಧಾನವನ್ನು ದೇಶಕ್ಕೆ ಸಮರ್ಪಿಸಿದ ಅಂಬೇಡ್ಕರ್ ಅವರನ್ನು ಜಾಗತಿಕ ನಾಯಕರು ಪ್ರಶಂಸುತ್ತಿರುವುದು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ವಿಚಾರ. ಆದರೆ ಅದೇ ದಿನದಂದು ನಮ್ಮ ರಾಜ್ಯದ ರಾಯಚೂರಿನ ಜಿಲ್ಲಾ ನ್ಯಾಯಾಧೀಶರಾದ ಮಲ್ಲಿಕಾರ್ಜುನಗೌಡರವರು ನ್ಯಾಯಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಗಣರಾಜ್ಯ ದಿನಾಚರಣೆ ಸಮಾರಂಭದಲ್ಲಿ ಗಾಂಧೀಜಿ ಭಾವಚಿತ್ರದೊಂದಿಗೆ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಭಾವಚಿತ್ರವನ್ನು ಇರಿಸಲಾಗಿರುವುದನ್ನು ಕಂಡು ಅಂಬೇಡ್ಕರ್ ಅವರ ಭಾವಚಿತ್ರ ಇಡಲು ಹೈಕೋರ್ಟ್ ಆದೇಶ ಇರುವುದಿಲ್ಲ ಎಂದು ಹೇಳಿ ಬಾಬಾ ಸಾಹೇಬ ಅಂಬೇಡ್ಕರ್‌ಅವರ ಪೋಟೋವನ್ನು ತೆಗೆಯುವ ಮೂಲಕ ಸಂವಿಧಾನ ಶಿಲ್ಪಿಗೆ ಅಪಮಾನ ಎಸಗಿರುವುದನ್ನು ಖಂಡಿಸಿ, ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಅಮಾನತ್ತಿಗೆ ಒತ್ತಾಯಿಸಿ ರಾಜ್ಯಾದಂತ ಪ್ರತಿಭಟನೆಗಳ ಮಹಾಪೂರವೇ ನಡೆದು ಆಳುವ ಸರ್ಕಾರವನ್ನೇ ನಡುಗಿಸಿತು ಎಂದಿದೆ.
ಈ ಪ್ರಕರಣವನ್ನು ಖಂಡಿಸಿ ದಿನಾಂಕ: 19.02.2022 ರಂದು ರಾಜ್ಯದ ಎಲ್ಲಾ ಸಂಘಟನೆಗಳ ಮಹಾ ಒಕ್ಕೂಟವಾದ “ಸಂವಿಧಾನ ಸಂರಕ್ಷಣಾ ಮಹಾಒಕ್ಕೂಟ” ನೀಡಿದ ಕರೆಯ ಮೇರೆಗೆ ರಾಜ್ಯದ ನಾನಾ ಭಾಗಗಳಿಂದ ಸ್ವಯಂ ಸ್ಪೂರ್ತಿಯಿಂದ ಸಾಗರೋಪಾದಿಯಲ್ಲಿ ಶೋಷಿತ ಸಮುದಾಯಗಳ ದಂಡು ಬೆಂಗಳೂರು ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿತ್ತು. ದಲಿತ ನಾಯಕರ ಕರೆಗೆ ಸ್ಪಂದಿಸಿ, ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಮುಖ್ಯಮಂತ್ರಿ ಬೊಮ್ಮಾಯಿ ಅವರು ಕೇವಲ 3 ದಿನಗಳಲ್ಲಿ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದರು ಹಾಗೂ ಹೈಕೋರ್ಟ್ ಮುಖ್ಯ ನ್ಯಾಯಾಮೂರ್ತಿಗಳ ಸಮ್ಮುಖದಲ್ಲಿ ಸಭೆ ಏರ್ಪಾಡು ಮಾಡುವುದಾಗಿ ತಿಳಿಸಿ ತಿಂಗಳುಗಳೇ ಕಳೆದರೂ ಆ ಬಗ್ಗೆ ಚಕಾರ ಎತ್ತದೆ ಅತ್ಯಂತ ಬೇಜವಾಬ್ದಾರಿಯಾಗಿ ವರ್ತಿಸುತ್ತಿರುವುದು ಖಂಡನೀಯ. ಮುಖ್ಯಮಂತ್ರಿಗಳ ನಿಷ್ಕಾಳಜಿಯನ್ನು ಖಂಡಿಸಿ ನಮ್ಮಒಕ್ಕೂಟದ ವತಿಯಿಂದ ದಿ. 14.04.2022 ರಂದು ವಿಧಾನಸೌಧದ ಮುಂಭಾಗದಲ್ಲಿರುವ ಸಂವಿಧಾನ ಶಿಲ್ಪಿ ಅಂಬೇಡ್ಕರ್‌ರವರ ಪುತ್ಥಳಿಗೆ ಮಾಲಾರ್ಪಣೆ ಮಾಡಲಿರುವ ಮುಖ್ಯಮಂತ್ರಿ ಮತ್ತು ಸರ್ಕಾರದ ಇತರೆ ಪ್ರತಿನಿಧಿಗಳು ತಮ್ಮ ನೈತಿಕತೆ ಕಳೆದುಕೊಂಡಿರುವುದನ್ನು ವಿರೋಧಿಸಿ ಹಾಗೂ ವಚನಭ್ರಷ್ಟರಾಗಿರುವ ಮುಖ್ಯಮಂತ್ರಿ ಮತ್ತು ರಾಜ್ಯ ಸರ್ಕಾರದ ವಿರುದ್ದ ಎಲ್ಲಾ ಜಿಲ್ಲಾ ಹಾಗೂ ತಾಲ್ಲೂಕ ಕೇಂದ್ರಗಳಲ್ಲಿ “ಕಪ್ಪು ಬಾವುಟ” ಪ್ರದರ್ಶನದ ಮೂಲಕ ಪ್ರತಿಭಟನೆ ಹಮ್ಮಿಕೊಂಡಿದೆ ಎಂದು ಒಕ್ಕೂಟದ ಸದಸ್ಯರು ಸುದ್ದಿಗೋಷ್ಠಿ ಮೂಲಕ ಎಚ್ಚರಿಕೆ ನೀಡಿದ್ದಾರೆ.
ಹಕ್ಕೊತ್ತಾಯಗಳು
- ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಭಾವಚಿತ್ರ ತೆಗೆದು ಅಪಮಾನ ಎಸಗಿರುವ ರಾಯಚೂರು ಜಿಲ್ಲಾ ನ್ಯಾಯಧೀಶರಾಗಿದ್ದ ಮಲ್ಲಿಕಾರ್ಜುನ್ ಗೌಡ ಅವರನ್ನು ಕೂಡಲೇ ಅಮಾನತ್ತುಗೊಳಿಸಬೇಕು. ದುಷ್ಕೃತ್ಯವೆಸಗಿರುವ ನ್ಯಾಯಾಧೀಶರನ್ನು ನೆಪಮಾತ್ರಕ್ಕೆ ವರ್ಗಾವಣೆ ಮಾಡಿರುವುದು ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನವೇ ಆಗಿದೆ.
- ಹೊನ್ನಾಳಿ ಶಾಸಕ ರೇಣುಕಾಚಾರ್ಯ ತನ್ನ ಮಗಳ ಹೆಸರಿನಲ್ಲಿ ಪಡೆದುಕೊಂಡಿರುವ ಪರಿಶಿಷ್ಟ ಜಾತಿ ಸುಳ್ಳು ಸರ್ಟಿಫಿಕೇಕೆಟ್ ವಿರುದ್ಧಆತನ ಶಾಸಕತ್ವ ರದ್ದುಗೊಳಿಸಬೇಕು. ಪರಿಶಿಷ್ಟ ಜಾತಿ/ ವರ್ಗದವರ ಹೆಸರಿನಲ್ಲಿ ಸುಳ್ಳು ಸರ್ಟಿಫಿಕೆಟ್ ಪಡೆದುಕೊಂಡು ಸರ್ಕಾರಿ ಸವಲತ್ತು ಕಬಳಿಸಿರುವ ವಂಚಕರ ವಿರುದ್ದ ಕಠಿಣ ಕ್ರಮ ಜರುಗಿಸಬೇಕು.
- ಪರಿಶಿಷ್ಟ ಜಾತಿ/ ವರ್ಗ ಭೂಪರಭಾರೆ ನಿಷೇಧಕಾಯ್ದೆ (ಪಿಟಿಸಿಎಲ್) ವಿರುದ್ದ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ವಿರುದ್ದ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಬೇಕು.
- ಪರಿಶಿಷ್ಟ ಜಾತಿ / ವರ್ಗ ಅಭಿವೃದ್ಧಿಗಾಗಿ ಮೀಸಲಿಟ್ಟಿರುವ ವಿಶೇಷ ಘಟಕ ಯೋಜನೆ ಕಾಯ್ದೆ (ಎಸ್.ಸಿ.ಎಸ್.ಪಿ/ಟಿ.ಎಸ್.ಪಿ) ಹಣದ ದುರುಪಯೋಗಕ್ಕೆ ಕಾರಣವಾಗಿರುವ ಸೆಕ್ಷನ್ (7ಡಿ) ಯನ್ನು ರದ್ದುಗೊಳಿಸಬೇಕು.
- ರಾಜ್ಯ ಸರ್ಕಾರದ ಆದೇಶದಂತೆ ಸರ್ಕಾರಿ ಕಛೇರಿಗಳಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಭಾವಚಿತ್ರ ಹಾಕುವಂತೆ ಹೈಕೋರ್ಟ್ ಸಹ ತನ್ನ ಅಧೀನ ನ್ಯಾಯಾಲಯಗಳಲ್ಲಿ (ಕೋರ್ಟ್ ಹಾಲ್) ಗಳಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರ ಕಡ್ಡಾಯವಾಗಿ ಹಾಕಲು ಆದೇಶಿಸಬೇಕು.




