ಮಂಗಳೂರು: ಸಮಾಜ ಸುಧಾರಕರಾಗಿ, ಸಮಾನತೆಯ ಹರಿಕಾರರಾಗಿ, ದೀನ ದಲಿತರ ಏಳಿಗೆಗಾಗಿ ಅವಿಶ್ರಾಂತವಾಗಿ ಶ್ರಮಿಸಿದ ಜ್ಯೋತಿಬಾ ಫುಲೆಯವರು, ಡಾಂಭಿಕ ಆಚರಣೆ, ಗೊಡ್ಡು ಸಂಪ್ರದಾಯ ಹಾಗೂ ಸಂಕುಚಿತ ಭಾವನೆಗಳಿಗೆ ಮರುಳಾಗದೆ ಮಾನವ ಧರ್ಮವನ್ನು ಅಂಗೀಕರಿಸಬೇಕೆಂದು ಜನತೆಗೆ ಕರೆಕೊಟ್ಟವರು ಎಂದು CITU ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಹೇಳಿದರು.
ಸಮಸಮಾಜದ ಹರಿಕಾರ, ಮಹಿಳಾ ಶಿಕ್ಷಣದ ರೂವಾರಿ ಮಹಾತ್ಮ ಜ್ಯೋತಿ ಬಾ ಫುಲೆಯವರ 195ನೇ ಜನ್ಮದಿನಾಚರಣೆಯ ಅಂಗವಾಗಿ ನಗರದ ವಿಕಾಸ ಕಚೇರಿಯಲ್ಲಿ ಜರುಗಿದ ಶೋಷಿತರ ಪಾಲಿನ ದಿವ್ಯಜ್ಯೋತಿ ಎಂಬ ಸಂವಾದ ಕಾರ್ಯಕ್ರಮದಲ್ಲಿ ಮಾತನಾಇ್ ಅವರು, ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ರವರ ಸಾಮಾಜಿಕ ಹೋರಾಟದ ಗುರುವೆಂದೇ ಗುರುತಿಸಲ್ಪಡುವ ಮಹಾತ್ಮ ಜ್ಯೋತಿ ಬಾ ಫುಲೆಯವರು ಮಹಿಳೆಯರ ಧ್ವನಿಯಾಗಿ, ದಲಿತರ ಉದ್ಧಾರಕ್ಕಾಗಿ ತನ್ನ ಜೀವನವನ್ನು ಮುಡಿಪಾಗಿಟ್ಟು, ಮಹಿಳಾ ಶಿಕ್ಷಣಕ್ಕಾಗಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಆ ಮೂಲಕ ಶಿಕ್ಷಣ ಕ್ರಾಂತಿಗೆ ಮುನ್ನುಡಿ ಬರೆದರು ಎಂದರು.
ಪ್ರಗತಿಪರ ಚಿಂತಕ ಡಾ.ಕೃಷ್ಣಪ್ಪ ಕೊಂಚಾಡಿ ಮಾತನಾಡಿ, ಸಾವಿರಾರು ವರ್ಷಗಳ ಕಾಲ ಭಾರತದ ಸಮಾಜವನ್ನು ಆಳಿದ ಪುರೋಹಿತಶಾಹಿ ವರ್ಗ ಇಲ್ಲಿನ ಮೂಲ ನಿವಾಸಿಗಳನ್ನು ಮೂಲೋತ್ಪಾಟನೆ ಮಾಡಲು ನಡೆಸಿದ ಕುತಂತ್ರ ಮಾರ್ಗವನ್ನು ಜ್ಯೋತಿ ಬಾ ಫುಲೆಯವರು ಆಳವಾಗಿ ಅಧ್ಯಯನ ನಡೆಸಿರುವುದು ಮಾತ್ರವಲ್ಲದೆ ಪುರಾಣಗಳ ಸೃಷ್ಟಿ ಹಾಗೂ ಸುಳ್ಳುಗಳ ಸರಮಾಲೆಯನ್ನು ಪೋಣಿಸಿ ಕೆಳವರ್ಗದ ಜನತೆಯನ್ನು ತನ್ನ ಅಡಿಯಾಳನ್ನಾಗಿಸಿದ ದುಷ್ಕ್ರತ್ಯವನ್ನು ಎಳೆಎಳೆಯಾಗಿ ವಿವರಿಸಿದ್ದಾರೆ ಎಂದರು.
ಜಾತಿ ವ್ಯವಸ್ಥೆ ಆಳವಾಗಿ ಬೇರೂರಿದ್ದ ಆ ಕಾಲಘಟ್ಟದಲ್ಲಿ ಪುರೋಗಾಮಿ ಚಿಂತನೆಗಳನ್ನು ಬಿತ್ತುವ ಮೂಲಕ ಸಮಾಜ ಸುಧಾರಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದ ಜ್ಯೋತಿ ಬಾ ಫುಲೆಯವರು ಶೋಷಿತ ಸಮುದಾಯದ ಧ್ವನಿಯಾಗಿದ್ದಾರೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ DYFI ಮಂಗಳೂರು ನಗರಾಧ್ಯಕ್ಷ ನವೀನ್ ಕೊಂಚಾಡಿ ಮಾತನಾಡಿ, ಜಾತಿ ಧರ್ಮದ ಹೆಸರಿನಲ್ಲಿ ನಿತ್ಯವೂ ಸಂಘರ್ಷಗಳು ನಡೆಯುವ ಪ್ರಸಕ್ತ ಕಾಲಘಟ್ಟದಲ್ಲಿ ಮಹಾತ್ಮ ಜ್ಯೋತಿ ಬಾ ಫುಲೆಯವರ ಆದರ್ಶಗಳನ್ನು ಮೈಗೂಡಿಸುವ ಮೂಲಕ ಅವರು ಹಾಕಿ ಕೊಟ್ಟ ದಾರಿಯಲ್ಲಿ ಮುನ್ನಡೆಯಬೇಕಾಗಿದೆ ಎಂದು ಹೇಳಿದರು.
ರಾಧಾಕೃಷ್ಣ ಬೊಂಡಂತಿಲರವರು ಸ್ವಾಗತಿಸಿದರು, ಕೃಷ್ಣ ತಣ್ಣೀರುಬಾವಿ ವಂದಿಸಿದರು.



