ಬಿಜೆಪಿಗರೇ ಜನವಿರೋಧಿ ಹೊಟ್ಟೆಕಿಚ್ಚಿನ ಮಾತುಗಳು ಬೇಡ

3 years ago

#BJP #people #donttalk #antipeople #jealousy #ksnagaraj

ಕರ್ನಾಟಕ ರಾಜ್ಯದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ರವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರ ವಹಿಸಿಕೊಂಡ ಕ್ಷಣದಿಂದಲೇ ಚುನಾವಣಾ ಪೂರ್ವದಲ್ಲಿ ಜನರಿಗೆ ನೀಡಿದ್ದ 5 ಗ್ಯಾರಂಟಿಗಳನ್ನು ಈಡೇರಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾದಂತಹ ಪ್ರಯತ್ನವನ್ನು ನಡೆಸುತ್ತಾ ದೇಶದಲ್ಲಿಯೇ ಪ್ರಪ್ರಥಮ ಬಾರಿಗೆ ಅಧಿಕಾರಕ್ಕೆ ಬಂದ ಕೆಲವೇ ಕೆಲವು ದಿನಗಳಲ್ಲಿ ಕೊಟ್ಟ ಮಾತನ್ನು ಉಳಿಸಿಕೊಂಡು ನುಡಿದಂತೆ ನಡೆದ ಸರ್ಕಾರ ಎಂಬ ಪ್ರಶಂಸೆಗೆ ಪಾತ್ರವಾಗುತ್ತಿವೆ.

ಈಗಾಗಲೇ 5 ಗ್ಯಾರಂಟಿಗಳಲ್ಲಿ ಮೊದಲನೆ ಗ್ಯಾರಂಟಿಯಾದ ಮಹಿಳೆಯರಿಗೆ ಉಚಿತ ಬಸ್‌ ಸೌಕರ್ಯದ ಶಕ್ತಿ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಅನ್ನಭಾಗ್ಯ ಯೋಜನೆಯ 10 ಕೆ.ಜಿ. ಅಕ್ಕಿ ನೀಡುವ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರದ ಕುತಂತ್ರದ ನೀತಿಯಿಂದಾಗಿ ತಡವಾಗುತ್ತಿರುವ ಹಿನ್ನಲೆಯಲ್ಲಿ ಕೊಟ್ಟ ಮಾತು ಉಳಿಸಿಕೊಳ್ಳಲು ಪ್ರತಿಯೊಬ್ಬ ಬಿ.ಪಿ.ಎಲ್ ಕಾರ್ಡ್‌ ಸದಸ್ಯರಿಗೆ 5 ಕೆ.ಜಿ. ಅಕ್ಕಿಗೆ ಬದಲಾಗಿ ಹಣವನ್ನು ಅವರ ಖಾತೆಗೆ ನೀಡುವಂತಹ ನಿರ್ಧಾರವನ್ನು ಮಾಡಿ ವಿರೋಧಿಗಳ ಬಾಯಿಗೆ ಬೀಗ ಹಾಕಿದ್ದಾರೆ.

ಮತ್ತೊಂದು ಮಹತ್ವದ ಭಾಗ್ಯಜ್ಯೋತಿ ಯೋಜನೆಯ ನೊಂದಣಿ ಪ್ರಕ್ರಿಯೆ ಆರಂಭವಾಗಿದ್ದು ಜುಲೈ 1 ರಿಂದ 200 ಯೂನಿಟ್ ಒಳಗೆ ಬಳಸುವ ಎಲ್ಲರಿಗೂ ವಿದ್ಯುತ್‌ ಉಚಿತವಾಗಿ ನೀಡುವ ಯೋಜನೆಯು ಅನುಷ್ಟಾನವಾಗುತ್ತಿದೆ.

ಮಹಿಳೆಯರ ಖಾತೆಗೆ ಪ್ರತಿ ತಿಂಗಳು ರೂ. 2000/- ಹಾಕುವ ಗೃಹಲಕ್ಷ್ಮಿ ಯೋಜನೆಗೆ ಅರ್ಜಿಗಳನ್ನು ಜುಲೈ 14 ರಿಂದ ವಿತರಿಸಲು ನಿರ್ಧರಿಸಿದ್ದು, ಆಗಸ್ಟ್ ಮೂರನೇ ವಾರದಲ್ಲಿ ಈ ಯೋಜನೆಯು ಸಹ ಅನುಷ್ಠಾನವಾಗುತ್ತಿದೆ. ಇನ್ನು ನಿರುದ್ಯೋಗಿ ಯುವಕರಿಗೆ ಮಾಸಿಕ ರೂ. 3000/- ಮತ್ತು ಡಿಪ್ಲೊಮೊ ಪದವಿದಾರರಿಗೆ ರೂ. 1500/- ನೀಡುವ ಯೋಜನೆ ಅನುಷ್ಠಾನವಾಗಬೇಕಾಗಿದೆ. ಇನ್ನೂ ಸಹ ಪದವಿ ಮತ್ತು ಡಿಪ್ಲೊಮ್ಮೆ ತರಗತಿಗಳ ಅಂತಿಮವಾದ ಫಲಿತಾಂಶ ಬಂದಿರುವುದಿಲ್ಲ. 2023ನೇ ಇಸವಿಯಲ್ಲಿ ಉತ್ತೀರ್ಣರಾದಂತಹ ಆರು ತಿಂಗಳು ಉದ್ಯೋಗ ದೊರೆಯದೆ ಇರುವಂತಹ ಜನರಿಗೆ ನೀಡುವಂತಹ ಈ ಸೌಲಭ್ಯ ಅನುಷ್ಟಾನವಾಗಬೇಕಾಗಿರುವುದು ಅಕ್ಟೋಬರ್, ನವೆಂಬರ್ ಮಾಹೆಯಲ್ಲಿ. ಹೀಗಿದ್ದ ಮೇಲೆ ಬಿ.ಜೆ.ಪಿ.ಯ ನಾಯಕರು ಹೊಟ್ಟೆಕಿಚ್ಚಿನಿಂದ ಮಾತನಾಡುತ್ತಿರುವುದು ಅವರ ಸೋಲಿನ ಆತಾಶೆಯನ್ನು ತೋರಿಸುತ್ತಿದೆ.

ಮುರಿದ ಮನೆಯಾಗಿರುವ ಬಿ.ಜೆ.ಪಿ. ತನ್ನ ನಾಯಕರುಗಳನ್ನು ಹಿಡಿತದಲ್ಲಿ ಇಟ್ಟುಕೊಳ್ಳಲಾಗದೆ ಅವರ ಅಸಮಾಧಾನ, ಸಿಟ್ಟು, ಒಡಕಿನ ಧ್ವನಿ ಇವುಗಳಿಂದ ಜನರ ಗಮನವನ್ನು ಬೇರೆ ಕಡೆ ಸೆಳೆಯಲು ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಯಾವುದೇ ರೀತಿಯ ಅರ್ಥವಿಲ್ಲದೆ ಬಾಯಿ ಚಪಲದ ಮಾತುಗಳನ್ನಾಡುತ್ತಿದ್ದಾರೆ.

2019ರಲ್ಲಿ ಅಧಿಕಾರವನ್ನು ವಾಮ ಮಾರ್ಗದಿಂದ ಪಡೆದುಕೊಂಡ ಬಿ.ಜೆ.ಪಿ. ನಾಯಕರು ಯಾವುದೇ ಭರವಸೆಯನ್ನು ಈಡೇರಿಸದೆ ಕಬಳಿಸುವುದರಲ್ಲಿ ಕಾಲ ಕಳೆದ ಪರಿಣಾಮವಾಗಿ ಜನ ಅವರನ್ನು ಮನೆಗೆ ಕಳುಹಿಸಿದ್ದಾರೆ. ಕೆಲಸವಿಲ್ಲದ ಇವರು ನಿರುದ್ಯೋಗಿಗಳಾಗಿ ಸಮಯ ಕಳೆಯುವ ಸಲುವಾಗಿ ಧರಣಿಯನ್ನು ನಡೆಸಲು ಯೋಚಿಸಿದ್ದಾರೆ.

ಮನೆಯಲ್ಲಿ ಕುಳಿತು ಏನುತಾನೆ ಮಾಡಬೇಕು. ಸರ್ಕಾರವಿದ್ದಾಗ ಮಾಡಿದ ಪಾಪಗಳ ಪ್ರಾಯಶ್ಚಿತಕ್ಕೆ ರಸ್ತೆಗಳ ಮೇಲೆ ಕುಳಿತು ಒಂದಷ್ಟು ಬೆವರು ಹನಿಯನ್ನು ಚೆಲ್ಲಿ ಪ್ರಾಯಶ್ಚಿತ ಮಾಡಿಕೊಳ್ಳಿ, ಬಿ.ಜೆ.ಪಿ. ನಾಯಕರ ಲಂಗು-ಲಗಾಮ್ ಇಲ್ಲದ ಮಾತುಗಳಿಗೆ ರಾಜ್ಯದ ಜನರು ಯಾರು ಕಿವಿ ಕೊಡುವುದಿಲ್ಲ. ಅವರುಗಳು ಈಗಾಗಲೇ ಸರ್ಕಾರದ ಯೋಜನೆಗಳ ಫಲಾನುಭವಿಗಳಾಗಿ ಸಂತೋಷದಿಂದ ಸರ್ಕಾರವನ್ನು ಪ್ರತಿದಿನವು ಪ್ರಶಂಸಿಸುತ್ತಾ ತಮ್ಮ ಕೃತಜ್ಞತೆಯನ್ನು ಸರ್ಕಾರಕ್ಕೆ ಸಲ್ಲಿಸುತ್ತಿದ್ದಾರೆ.

ಕೆಲವು ದೃಶ್ಯಮಾಧ್ಯಮದವರಿಗೆ ಯಾವುದೇ ಒಂದು ಯೋಜನೆಯ ಅನುಷ್ಠಾನಕ್ಕೆ ಬೇಕಾದಂತಹ ಪೂರ್ವಸಿದ್ಧತೆ, ತಯಾರಿ ಅವುಗಳ ಅನುಷ್ಟಾನಕ್ಕೆ ತೆಗೆದುಕೊಳ್ಳಬೇಕಾದಂತಹ ಕ್ರಮ ಇವುಗಳ ಬಗ್ಗೆ ಕವಡೆಕಾಸಿನ ಜ್ಞಾನವು ಇಲ್ಲದೆ ತಮ್ಮ ಮನಸ್ಸಿಗೆ ಬಂದಂತಹ ಪೂರ್ವಗ್ರಹ ಪೀಡಿತವಾಗಿ ವಿಮರ್ಶೆಗಳನ್ನು ಮಾಡುತ್ತಾ ಸಕರಾತ್ಮಕವಾದಂತಹ ಸಂಗತಿಗಳನ್ನು ತೋರಿಸುವುದಕ್ಕಿಂತ ನಕರಾತ್ಮಕವಾದ ಸಣ್ಣಪುಟ್ಟ ವಿಚಾರಗಳನ್ನು ತೋರಿಸುತ್ತಾ ತಮ್ಮ ಮಾಧ್ಯಮಗಳ ಬದ್ಧತೆ ಯಾರಿಗಿದೆ ಎಂಬುದನ್ನು ಬಹಿರಂಗಪಡಿಸಿಕೊಳ್ಳುತ್ತಿದ್ದಾರೆ.

ಚುನಾವಣಾ ಪೂರ್ವದಲ್ಲಿ ಇಂತಹ ಎಷ್ಟೋ ಮಾಧ್ಯಮಗಳು ಕಾಂಗ್ರೆಸ್ ಪರವಾಗಿಯೂ ಇರಲಿಲ್ಲ. ಈಗಲೂ ಇಂತಹ ಮಾಧ್ಯಮಗಳು ಸರ್ಕಾರದ ಯೋಜನೆಗಳ ವಿಚಾರದಲ್ಲಿ ಗೊಂದಲಕಾರಿಯಾದ ಮಾತುಗಳನ್ನಾಡದೆ ನ್ಯಾಯಸಮ್ಮತವಾದಿ ಪತ್ರಿಕಾಧರ್ಮವನ್ನು ಅನುಸರಿಸುತ್ತಾರೆಂದು ಬಯಸುವುದು ಸಾಧ್ಯವೇ ಇಲ್ಲ.

– ಕೆ.ಎಸ್.ನಾಗರಾಜ್, ಬೆಂಗಳೂರು

Leave a Reply