ಬೆಂಗಳೂರು: ಬಳ್ಳಾರಿ ಸಂಸದ ದೇವೇಂದ್ರಪ್ಪ ಪುತ್ರ, ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಉಪನ್ಯಾಸಕ ಪ್ರೊ. ರಂಗನಾಥ್ ವಿರುದ್ಧ ಯುವತಿಯನ್ನು ವಿವಾಹವಾಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ ನಡೆಸಿ ವಂಚನೆ ಮಾಡಿದ ಆರೋಪದ ಪ್ರಕರಣ ದಾಖಲಾಗಿದೆ. ಇದರ ನಡುವೆ ಪ್ರೊ. ರಂಗನಾಥ್ ಯುವತಿಯ ವಿರುದ್ಧ ಹನಿಟ್ರ್ಯಾಪ್ ಆರೋಪದ ದೂರು ದಾಖಲಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಯುವತಿ, ಸ್ವತಃ ಸಂಸದ ದೇವೇಂದ್ರಪ್ಪ ಅವರಿಗೂ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದ್ದಾರೆ.
ಪ್ರೊ. ರಂಗನಾಥ್‌ಗೆ 42 ವರ್ಷ ಆಗಿದ್ದರೆ ವಂಚನೆಗೆ ಒಳಗಾಗಿದ್ದೇನೆ ಎಂದು ಹೇಳುತ್ತಿರುವ ಯುವತಿಗೆ 24 ವರ್ಷವಾಗಿವೆ. ರಂಗನಾಥ್ ಮೈಸೂರಿನಲ್ಲಿ ಪ್ರಾಧ್ಯಾಪಕರಾಗಿದ್ದರೆ ಯುವತಿ ಬೆಂಗಳೂರಿನಲ್ಲಿ ವಾಸವಾಗಿರುವುದು ಕುತೂಹಲ ಮೂಡಿಸಿದೆ.
ಕಳೆದ ಒಂದೂವರೆ ವರ್ಷದ ಹಿಂದೆ ಸ್ನೇಹಿತರ ಮೂಲಕ ಪರಿಚಯವಾದ ಯುವತಿ ಬಳಿಕ ರಂಗನಾಥ್ ಅವರಿಗೆ ಕ್ಲೋಸ್ ಆಗಿದ್ದಳು ಎನ್ನಲಾಗಿದೆ. ರಂಗನಾಥ್ ಅವರಿಗೆ ಮದುವೆಯಾಗಿ ಮಕ್ಕಳಿದ್ದರೂ ಯುವತಿ ಜತೆ ಸಲುಗೆ ಮಾತ್ರವಲ್ಲ, ಆಕೆಯನ್ನು ಮೈಸೂರಿನ ಖಾಸಗಿ ಹೋಟೆಲ್‌ಗೆ ಕರೆಸಿಕೊಂಡು ದೈಹಿಕ ಸಂಪರ್ಕ ಬೆಳೆಸಿದ್ದರೆ ಎಂದು ದೂರಲಾಗಿದೆ.
ಯುವತಿ ನೀಡಿರುವ ದೂರಿನಲ್ಲಿ ಏನಿದೆ?: 2022ರಲ್ಲಿ ಪಾರ್ಟಿಯೊಂದರಲ್ಲಿ ಪ್ರೊ.ರಂಗನಾಥ್ ಪರಿಚಯವಾಗಿದ್ದರು. ಅನಂತರ ಆಗಾಗ ಕರೆ ಮಾಡುತ್ತಿದ್ದರು. ತಾನು ಮೈಸೂರಿನ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದು ಮದುವೆಯಾದರೆ ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಹೇಳುತ್ತಿದ್ದರು. 2023ರ ಜನವರಿ 13ರಂದು ಕೆಲಸದ ನಿಮಿತ್ತ ಬೆಂಗಳೂರಿಗೆ ಬಂದಿದ್ದ ಅವರು ಬೆಂಗಳೂರಿನ ಒಂದು ಹೋಟೆಲ್‌ಗೆ ಕರೆಸಿಕೊಂಡು ಬಳಿಕ ಮೈಸೂರಿಗೆ ಕರೆದುಕೊಂಡು ಹೋದರು. ಅಲ್ಲಿ ರಾತ್ರಿ ತನ್ನ ಜತೆಗೇ ಇದ್ದು ದೈಹಿಕ ಸಂಪರ್ಕ ಬೆಳೆಸಿದರು ಎಂದು ಆರೋಪಿಸಲಾಗಿದೆ.
ತನ್ನನ್ನು ಮದುವೆಯಾಗುತ್ತೇನೆ ಎಂದು ನಂಬಿಸಿದ್ದ ಅವರು ಬಳಿಕ ನನ್ನ ಜತೆ ಸರಿಯಾಗಿ ಮಾತನಾಡುತ್ತಿಲ್ಲ. ಮದುವೆ ಮಾಡಿಕೊಳ್ಳದೆ ಮೋಸ ಮಾಡಿದ್ದಾರೆ. ಮದುವೆಯಾಗು ಎಂದರೆ ಕೊಲೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಬೆಂಗಳೂರಿನ ವಿಜಯನಗರ ನಿವಾಸಿ ಯುವತಿ ದೂರಿದ್ದಾರೆ.
ರಂಗನಾಥ್ ವಿರುದ್ಧ ಬೆಂಗಳೂರಿನ ಬಸವನಗುಡಿ ಮಹಿಳಾ ಠಾಣೆಯಲ್ಲಿ ಐಪಿಸಿ ಸೆಕ್ಷನ್ 420, 417, 506 ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಈ ಘಟನೆ ಸಂಬಂಧ ಯುವತಿ ಸಂಸದ ದೇವೇಂದ್ರಪ್ಪ ಅವರಿಗೂ ಕರೆ ಮಾಡಿರುವ ಯುವತಿ ತನಗೆ ಅನ್ಯಾಯವಾಗಿದೆ, ನ್ಯಾಯ ಕೊಡಿಸಿ ಎಂದು ಮನವಿ ಮಾಡಿದ್ದಾಳೆ. ಆಗ ದೇವೇಂದ್ರ ಅವರು ನಿನಗೆ ವಯಸ್ಸೆಷ್ಟು ಎಂದು ಕೇಳಿದ್ದಾರೆ. ಆಕೆ ಹೇಳಿಲ್ಲ. ನೀವು ನಿಮ್ಮ ಪಾಡಿಗೆ ಎಲ್ಲವನ್ನೂ ಮಾಡಿಕೊಂಡಿದ್ದೀರಿ, ಇನ್ನು ನನ್ನನ್ನು ಕೇಳುವುದೇನಿದೆ ಎಂದು ದೇವೇಂದ್ರ ಹೇಳಿದ್ದಾರೆ. ರಂಗನಾಥ್‌ಗೆ ಮದುವೆಯಾಗಿರುವ ವಿಷಯ ತನಗೆ ಗೊತ್ತೇ ಇಲ್ಲ ಎಂದು ಯುವತಿ ಹೇಳಿದ್ದಾಳೆ.
ಆಗ ದೇವೇಂದ್ರಪ್ಪ ಅವರು ಕಾನೂನು ಪ್ರಕಾರ ನೀನು ಏನು ಮಾಡುವುದಿದ್ದರೂ ಮಾಡಬಹುದು ಎಂದು ಹೇಳಿದ್ದಾರೆ. ನಿಮ್ಮ ಘನತೆ ಗೌರವಗಳಿಗೆ ತೊಂದರೆಯಾಗುತ್ತದೆ ಎಂದು ಯುವತಿ ಹೇಳಿದರೂ ದೇವೇಂದ್ರಪ್ಪ ಅವರು ಅದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ ಎಂದು ವರದಿಯಾಗಿದೆ.
ಆರೋಪಿಯಿಂದ ಹನಿಟ್ರಾಪ್ ಆರೋಪ: ತಮ್ಮ ವಿರುದ್ಧ ದೂರು ದಾಖಲಿಸಿರುವ ಯುವತಿ ವಿರುದ್ಧ ಪ್ರೊ. ರಂಗನಾಥ್, ಮೂರು ದಿನಗಳ ಹಿಂದೆ ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಯುವತಿಯೊಬ್ಬಳು ಹಣಕ್ಕಾಗಿ ಪೀಡಿಸುತ್ತಿದ್ದಾಳೆ, ಹನಿ ಟ್ರ್ಯಾಪ್‌ಗೆ ಪ್ರಯತ್ನಿಸುತ್ತಿದ್ದಾಳೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಒಂದೂವರೆ ವರ್ಷದ ಹಿಂದೆ ಸ್ನೇಹಿತರ ಮೂಲಕ ಯುವತಿಯ ಪರಿಚಯವಾಗಿತ್ತು. ಬಳಿಕ ಆಕೆ ನನ್ನನ್ನು ಪ್ರೀತಿಸುತ್ತಿರುವುದಾಗಿ ಹೇಳಿದಾಗ ವಿರೋಧಿಸಿದ್ದೆ. ಕಳೆದ ಅಕ್ಟೋಬರ್ ತಿಂಗಳ ಆರಂಭದಲ್ಲಿ ಯುವತಿ ಬೆಂಗಳೂರಿನ ಸ್ಯಾಟಲೈಟ್ ಬಸ್ ನಿಲ್ದಾಣದ ಬಳಿ ನನ್ನನ್ನು ಭೇಟಿಯಾಗಿ ಅವಾಚ್ಯ ಶಬ್ದಗಳಿಂದ ಬೈದಿದ್ದಾಳೆ. ಮೇಲ್ಜಾತಿಯವಳಾದ ನಾನು ಪರಿಶಿಷ್ಟ ಜಾತಿಯ ವ್ಯಕ್ತಿಯಾಗಿರುವ ನಿನ್ನನ್ನು ಮದುವೆ ಮಾಡಿಕೊಳ್ಳುವಂತೆ ಕೇಳಿದರೂ ಆಗುವುದಿಲ್ಲವೇ ಎಂದು ಜಾತಿನಿಂದನೆಯನ್ನೂ ಮಾಡಿದ್ದಾಳೆ ಎಂದು ದೂರಿದ್ದಾರೆ.
ನಾನು ಮತ್ತು ಆಕೆ ಜೊತೆಗಿರುವ ಚಿತ್ರಗಳನ್ನು, ಸಂಭಾಷಣೆಯ ಆಡಿಯೋಗಳನ್ನು ನನ್ನ ಪತ್ನಿಗೆ ಕಳುಹಿಸುವುದಾಗಿ ಬೆದರಿಕೆ ಒಡ್ಡುವ ಜೊತೆಗೆ ಪದೇಪದೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಡಲಾಗುತ್ತಿದೆ. ಈ ಬೆದರಿಕೆಗಳಿಗೆ ಹೆದರಿ ನನ್ನ ಖಾತೆಯಿಂದಲೇ 32,500 ರೂ. ವರ್ಗಾವಣೆ ಮಾಡಿದ್ದೇನೆ ಎಂದು ಹೇಳಿದ್ದಾರೆ.
ಈ ನಡುವೆ, ಕಳೆದ ಅಕ್ಟೋಬರ್ 28ರಂದು ಯುವತಿಯು ಶ್ರೀನಿವಾಸ್ ಎಂಬ ವ್ಯಕ್ತಿಯನ್ನು ಮೈಸೂರಿಗೆ ಕಳುಹಿಸಿದ್ದು ಹೋಟೆಲ್ ಒಂದರಲ್ಲಿ ಮಾತುಕತೆ ನಡೆಸಲಾಯಿತು. ಆಗ ಆ ವ್ಯಕ್ತಿ 15 ಲಕ್ಷ ರೂ.ಗಳಿಗೆ ಬೇಡಿಕೆ ಇಟ್ಟಿದ್ದ. ಬಳಿಕ ಈ ಮೊತ್ತವನ್ನು 10 ಲಕ್ಷಕ್ಕೆ ಇಳಿಸಲಾಗಿತ್ತು. ಹೀಗೆ ಹಣಕ್ಕಾಗಿ ಬೇಡಿಕೆ, ಜಾತಿ ನಿಂದನೆ, ಮಾನಸಿಕ ಹಿಂಸೆಯನ್ನು ನೀಡಲಾಗುತ್ತಿದೆ ಎಂದು ರಂಗನಾಥ್ ಆರೋಪಿಸಿದ್ದಾರೆ.
ಆರೋಪಿ ರಂಗನಾಥ್ ನಾಪತ್ತೆ: ಈ ಎಲ್ಲ ಬೆಳವಣಿಗೆಗಳ ನಡುವೆ ರಂಗನಾಥ್ ತಲೆಮರೆಸಿಕೊಂಡಿದ್ದಾರೆ. ಮನೆಗೂ ಬಾರದೆ ಅವರು ಎಲ್ಲಿ ಹೋಗಿದ್ದಾರೆ ಎನ್ನುವುದು ತಿಳಿದಿಲ್ಲ. ತಮ್ಮ ಬಂಧನವಾಗಬಹುದು ಎಂಬ ಭಯದಿಂದ ಅವರು ತಲೆಮರೆಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿರುವ ಸಂಸದ ಆರ್ ದೇವೇಂದ್ರಪ್ಪ, ಯುವತಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾಳೆ. ನನ್ನ ಮಗ ಸಾಕಷ್ಟು ಹಣ ಕಳೆದುಕೊಂಡಿದ್ದಾನೆ ಎಂದಿದ್ದಾರೆ.
ಹರಪನಹಳ್ಳಿ ತಾಲೂಕಿನ ಅರಸಿಕೆರೆಯ ತಮ್ಮ ನಿವಾಸದಲ್ಲಿ ಹೇಳಿಕೆ ನೀಡಿದ ಅವರು, ಸಾಮಾಜಿಕ ನ್ಯಾಯ ಸಮಿತಿ ಸಭೆಗಾಗಿ ಕಾರಿನಲ್ಲಿ ಹೋಗುವಾಗ ಯುವತಿಯ ಕರೆ ಬಂದಿತ್ತು. ನಿಮ್ಮ ಮಗ ಮದುವೆ ಆಗುತ್ತೇನೆ ಎಂದು ಹೇಳಿ ಒಂದೂವರೆ ವರ್ಷದಿಂದ ವಂಚನೆ ಮಾಡಿದ್ದಾನೆ. ನೀವು ದೊಡ್ಡವರು ಅಂತ ಕರೆ ಮಾಡಿದ್ದೇನೆ ಎಂದಳು. ನಾನು ಕಾನೂನು ಪ್ರಕಾರ ಹೋಗು ಅಂತ ಹೇಳಿದ್ದೇನೆ ಎಂದರು.
ಚಿತ್ರದುರ್ಗ ಜಿಲ್ಲೆ, ಭರಮಸಾಗರ ಸಮೀಪದ ಕೊಳಹಾಳ್ ಗ್ರಾಮದ ಕಲ್ಲೇಶ್ ಎಂಬಾತನ ಮೂಲಕ ಈ ಯುವತಿ ರಂಗನಾಥ್‌ಗೆ ಪರಿಚಯವಾಗಿದ್ದಾಳೆ. ಇದೊಂದು ಬ್ಲ್ಯಾಕ್‌ಮೇಲಿಂಗ್ ಟೀಮ್ ಅನಿಸುತ್ತದೆ. ಕಲ್ಲೇಶ್ ಅಂಡ್ ಟೀಂ ಮಾಡಿರಬಹುದು ಅಂತ ಅನುಮಾನ ಇದೆ ಎಂದು ಅವರು ಶಂಕೆ ವ್ಯಕ್ತಪಡಿಸಿದ್ದಾರೆ.




