ಬಿಜೆಪಿ ಮತ್ತು ಆರ್‌.ಎಸ್‌.ಎಸ್‌.ಗೆ ಸಾಮಾಜಿಕ ನ್ಯಾಯದಲ್ಲಿ ನಂಬಿಕೆಯಿಲ್ಲ: ಸಿದ್ದರಾಮಯ್ಯ

12 months ago

ಬೆಂಗಳೂರು: ನನಗೂ ಬೆದರಿಕೆ ಕರೆಗಳು ಬಂದಿವೆ. ಈ ಬಗ್ಗೆ ಪೊಲೀಸ್‌ ಅಧಿಕಾರಿಗಳಿಗೆ ತಿಳಿಸಿ, ಆರೋಪಿಗಳನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭೆಯ ಅಧ್ಯಕ್ಷ ಯುಟಿ ಖಾದರ್ ಅವರಿಗೆ ಬರುತ್ತಿರುವ ಬೆದರಿಕೆ ಕರೆಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಈಗಾಗಲೇ ಪೊಲೀಸರಿಗೆ ಸೂಚಿಸಲಾಗಿದೆ ಎಂದರು.

1925ರಲ್ಲಿ ಆರಂಭವಾದ ಆರ್‌ಎಸ್‌ಎಸ್‌ ನೂರು ವರ್ಷಗಳಿಂದ ಶೂದ್ರರು ಮತ್ತು ದಲಿತರ ಮೀಸಲಾತಿಯನ್ನು ನಿರಂತರವಾಗಿ ವಿರೋಧಿಸುತ್ತಾ ಬಂದಿದೆ. ಬಿಜೆಪಿ ಮತ್ತು ಆರ್‌.ಎಸ್‌.ಎಸ್‌.ಗೆ ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಲ್ಲ. ಈ ಬಗ್ಗೆ ಅವರಿಗೆ ಬದ್ಧತೆಯೂ ಇಲ್ಲ ಎಂದರು.

ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ನಡೆಸುವಂತೆ ರಾಹುಲ್‌ ಗಾಂಧಿ ಎರಡು ವರ್ಷಗಳಿಂದ ಒತ್ತಾಯಿಸುತ್ತಿದ್ದರು. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಇದನ್ನು ಸೇರಿಸಲು ಅವರೇ ಕಾರಣಕರ್ತರು. ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ಮೋದಿಯವರಿಗೆ ಪತ್ರವನ್ನೂ ಬರೆದಿದ್ದರು. ಈ ಎಲ್ಲರ ಹೋರಾಟ ಮತ್ತು ಒತ್ತಡದ ನಂತರ ‘ಜಾತಿಗಣತಿ’ ಮಾಡುತ್ತೇವೆ ಎಂದು ಕೇಂದ್ರ ಸರ್ಕಾರ ಹೇಳಿದೆ ಎಂದರು.

ಕೇಂದ್ರ ಸರ್ಕಾರ ಯಾವಾಗ ಎಂದು ಸಮಯ ನಿಗದಿ ಮಾಡಿಲ್ಲ. ಜನಗಣತಿಯಲ್ಲಿಯೇ ಜಾತಿ ಗಣತಿಯನ್ನು ಮಾಡುವುದಾಗಿ ಹೇಳಿದ್ದಾರೆ. ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ಆಗಬೇಕು. ಸಂವಿಧಾನಕ್ಕೆ ತಿದ್ದುಪಡಿ ತಂದು ಮೀಸಲಾತಿಯ ಗರಿಷ್ಠ ಪರಿಮಿತಿಯನ್ನು ಹೆಚ್ಚು ಮಾಡಬೇಕು ಎಂದು ಒತ್ತಾಯಿಸಿದರು.

ಮೀಸಲಾತಿಯಲ್ಲಿ ಶೇ 50ರಷ್ಟು ಗರಿಷ್ಠ ಪರಿಮಿತಿಯನ್ನು ತೆಗೆಯಬೇಕು, ಖಾಸಗಿ ಕ್ಷೇತ್ರದಲ್ಲಿಯೂ ಮೀಸಲಾತಿಯನ್ನು ತರಬೇಕೆಂದು ಪ್ರಧಾನಿಗಳನ್ನು ಒತ್ತಾಯಿಸುವುದಾಗಿ ತಿಳಿಸಿದರು.

ನ್ಯಾಯಮೂರ್ತಿ ರೋಹಿಣಿ ಸಮಿತಿಯ ಶಿಫಾರಸುಗಳನ್ನೂ ಜಾರಿಗೊಳಿಸುವ ಜೊತೆಗೆ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯನ್ನೂ ಕೈಗೊಳ್ಳಬೇಕು ಎಂದರು.

Leave a Reply