ಬೆಂಗಳೂರು: ರಾಜ್ಯದಲ್ಲಿ ತೀವ್ರ ಸ್ವರೂಪದ ಬರ ಕಾಣಿಸಿಕೊಂಡಿದ್ದರೂ ಪರಿಹಾರಕ್ಕೆ ಚಿಕ್ಕಾಸು ಬಿಡುಗಡೆ ಮಾಡದೆ ಪ್ರಧಾನಿ ಮೋದಿ ರಾಜ್ಯದಿಂದ ಬಿಜೆಪಿಗೆ 25 ಸಂಸದರನ್ನು ಆಯ್ಕೆ ಮಾಡಿದ ಮತದಾರರನ್ನು ಅಪಮಾನಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೆರೆ, ಬರದಂತಹ ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಪ್ರಧಾನಿಯವರಾಗಲೀ, ಕೇಂದ್ರ ಗೃಹಸಚಿವರಾಗಲೀ ರಾಜ್ಯದಲ್ಲಿ ಪ್ರವಾಸ ಕೈಗೊಂಡು ಪರಿಸ್ಥಿತಿ ಪರಿಶೀಲನೆ ನಡೆಸದೆ ಅನ್ಯಾಯ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಚುನಾವಣೆ ಸಂದರ್ಭದಲ್ಲಿ ಪದೇಪದೇ ರಾಜ್ಯ ಪ್ರವಾಸ ಮಾಡುತ್ತಿದ್ದ ಪ್ರಧಾನಿಯವರು ಅನಂತರ ಇತ್ತ ತಲೆ ಹಾಕಿಲ್ಲ. ನೆರೆಯ ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ ರಾಜ್ಯಗಳಿಗೆ ಬಂದು ಹೋಗಿದ್ದಾರೆ. ನೆರೆ ಸಂದರ್ಭದಲ್ಲಿ ವೈಮಾನಿಕ ಸಮೀಕ್ಷೆ ನಡೆಸಿಲ್ಲ. ಬರ ಪರಿಸ್ಥಿತಿಯನ್ನೂ ವಿಮರ್ಶೆ ಮಾಡಲಿಲ್ಲ. ರಾಜ್ಯಕ್ಕೆ ಅಗತ್ಯವಾದ ಆರ್ಥಿಕ ನೆರವು ನೀಡುವುದಂತೂ ದೂರದ ಮಾತೇ ಆಗಿದೆ. 25 ಸಂಸದರನ್ನು ಗೆಲ್ಲಿಸಿದ್ದಕ್ಕೆ ಬಿಜೆಪಿ ತಕ್ಕ ಪ್ರತಿಫಲ ನೀಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ರಾಜಕೀಯವಾಗಿ ನಾನು ಕಾಲಕಾಲಕ್ಕೆ ನೀಡಬೇಕಾದ ಹೇಳಿಕೆಗಳನ್ನು ಹೇಳುತ್ತಲೇ ಬಂದಿದ್ದೇನೆ. ಮೌನಕ್ಕೆ ಶರಣಾಗಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಸಂಸತ್‍ನಲ್ಲಿನ ಭದ್ರತಾ ಲೋಪದ ಬಗ್ಗೆ ಕೇಂದ್ರ ಗೃಹ ಸಚಿವರ ಮೌನ ಪ್ರಶ್ನಾರ್ಹವಾಗಿದೆ. ಎಲ್ಲದಕ್ಕೂ ಪ್ರತಿಕ್ರಿಯಿಸುವ ಪ್ರಧಾನಿಗಳು, ಕೇಂದ್ರ ಗೃಹಸಚಿವರು ಭದ್ರತಾ ಲೋಪ ವಿಷಯದಲ್ಲಿ ಜಾರಿಕೊಳ್ಳುತ್ತಿದ್ದಾರೆ ಎಂದರು.
ಭದ್ರತಾ ಲೋಪವನ್ನು ಪ್ರಶ್ನಿಸಿದ ಸಂಸದರ ಪೈಕಿ 141 ಮಂದಿಯನ್ನು ಅಮಾನತುಪಡಿಸಲಾಗಿದೆ. ದೇಶದಲ್ಲಷ್ಟೇ ಅಲ್ಲ, ವಿಶ್ವದ ಯಾವುದೇ ಜನಪ್ರತಿನಿಧಿ ಸಂಸ್ಥೆಗಳಲ್ಲಿ ಚುನಾಯಿತ ಸದಸ್ಯರನ್ನು ಇಷ್ಟು ದೊಡ್ಡ ಪ್ರಮಾಣದಲ್ಲಿ ಅನರ್ಹಗೊಳಿಸಿದ ಉದಾಹರಣೆಗಳಿಲ್ಲ. ಪ್ರಧಾನಿಯವರು ಸಂಸತ್ ನಡೆಯುವಾಗ ಭದ್ರತಾ ಲೋಪದ ಬಗ್ಗೆ ಸಂಸತ್‍ನಲ್ಲೇ ಉತ್ತರ ನೀಡಬೇಕು. ಅದು ಬಿಟ್ಟು ದಕ್ಷಿಣ ಕೊರಿಯಾದ ಚಾನೆಲ್‍ಗೆ ಪ್ರಧಾನಿಯವರು ಹೇಳಿಕೆ ನೀಡುತ್ತಾರೆ. ಅದು ದಾಖಲೆಯಾಗಿ ಉಳಿಯುವುದಿಲ್ಲ. ಸಂಸತ್‍ನಲ್ಲಿ ಮಾತನಾಡಿದರೆ ಅದು ಅಧಿಕೃತವಾದ ದಾಖಲೆ ಎಂದು ಅಭಿಪ್ರಾಯಪಟ್ಟರು.
ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆಯವರ ಹೆಸರು ಪ್ರಸ್ತಾಪವಾಗುತ್ತಿದ್ದಂತೆ ಬಿಜೆಪಿ ನಾಯಕರು, ರಾಹುಲ್‍ಗಾಂಧಿಯವರ ಅಸ್ತಿತ್ವವನ್ನು ಪ್ರಶ್ನಿಸುತ್ತಿದ್ದಾರೆ. ಮೊದಲು ಕರ್ನಾಟಕ ವಿಧಾನಪರಿಷತ್‍ಗೆ ವಿರೋಧಪಕ್ಷದ ನಾಯಕನನ್ನು ನೇಮಿಸಿಕೊಳ್ಳಲಿ. ಅವರ ಪಕ್ಷದಲ್ಲಿರುವ ಹುಳುಕುಗಳನ್ನು ಸರಿಪಡಿಸಿಕೊಳ್ಳಲಿ ಎಂದರು.



