ರವಿಕೃಷ್ಣಾರೆಡ್ಡಿ ಅವರಿಗೆ ಶುಭಹಾರೈಕೆಗಳು

2 years ago

ಇಂದು 50ರ ಹರೆಯ ತಲುಪುತ್ತಿರುವ ಹೋರಾಟಗಾರ ರವಿಕೃಷ್ಣಾರೆಡ್ಡಿ (Ravi Krishna Reddy) ಅವರಿಗೆ ಹೃದಯಪೂರ್ವಕ ಶುಭಹಾರೈಕೆಗಳು. ತಮ್ಮ ತಂಡದವರು ಕೋರಿದ್ದಂತೆ ಬೆಂಗಳೂರಿಗೆ ಬರಲು, ಮುಖತಃ ಶುಭಹಾರೈಸಲು ಅನುಕೂಲವಾಗಲಿಲ್ಲ; ದಯವಿಟ್ಟು ಕ್ಷಮಿಸಿ.

2010ರ ಆಸುಪಾಸಿನಲ್ಲಿ ಭ್ರಷ್ಟಾಚಾರದ ವಿರುದ್ಧ ಅಣ್ಣಾಹಜಾರೆ ಅವರ ನೇತೃತ್ವದ ಆಂದೋಲನದ ವೇಳೆ ಹಲವಾರು ಮಂದಿ ಯುವಕರು ಸಾಮಾಜಿಕ ಹೋರಾಟಕ್ಕೆಂದು ಧುಮುಕಿದ್ದರು. ಅವರಲ್ಲಿ ರವಿಕೃಷ್ಣಾರೆಡ್ಡಿ ಕೂಡ ಒಬ್ಬರು. ಆರಂಭದಲ್ಲಿ ಕೇಜ್ರಿವಾಲ್ ಅವರ APP ಜೊತೆ ಗುರುತಿಸಿಕೊಂಡಿದ್ದ ರವಿ, ಅಲ್ಲಿಂದ ದೂರ ಸರಿದು, ಕರ್ನಾಟಕದಲ್ಲಿ “ಕರ್ನಾಟಕ ರಾಷ್ಟ್ರಸಮಿತಿ ಪಕ್ಷ” ಎಂದು ಗುರುತಿಸಿಕೊಂಡು ರಾಜಕೀಯ-ಸಾಮಾಜಿಕ ಹೋರಾಟ ನಡೆಸುತ್ತಿದ್ದಾರೆ.

ಇಂದು ಅಣ್ಣಾ ಹಜಾರೆಯವರ ಅಂದಿನ “ಸುಪಾರಿ” ಹೋರಾಟವನ್ನು ಹಿಂದಿರುಗಿ ನೋಡಿದಾಗ, ಅದು ದೇಶದ ಬಗ್ಗೆ ಒಂದಿಡೀ ತಲೆಮಾರಿಗೆ ಇದ್ದ ಸದಾಶಯಗಳನ್ನೆಲ್ಲ ರಾಜಕೀಯವಾಗಿ ಹಾದಿ ತಪ್ಪುವಂತೆ ಮಾಡಿದ್ದು, ಅದರಿಂದಾಗಿ ದೇಶದ ಒಂದಿಡೀ ತಲೆಮಾರಿನ “ಒಳ್ಳೆಯ ಸಮಾಜಕ್ಕಾಗಿ ಹೋರಾಟದ ಕಾವು” ಸಿನಿಕಗೊಂಡು, ಶಾಶ್ವತವಾಗಿ ತಣಿದುಹೋದದ್ದು ಕಾಣಿಸುತ್ತಿದೆ. ಸಕಾಲದಲ್ಲಿ ಇಂತಹ ಹುನ್ನಾರಗಳಿಂದ ಎಚ್ಚೆತ್ತು, ತನ್ನ ಹಾದಿಯನ್ನು ದೇಶದ ಹಿತಾಸಕ್ತಿಗಳಿಗೆ ಪೂರಕವಾಗಿ ಬದಲಿಸಿಕೊಂಡ, ದೇಶದ ಕೆಲವೇ ಕೆಲವು ಮಂದಿ ನನ್ನ ತಲೆಮಾರಿನ ಎಳೆಯರಲ್ಲಿ ರವಿ ಒಬ್ಬರು ಎಂದು ಅವರನ್ನು ನಾನು ಗುರುತಿಸಬಯಸುತ್ತೇನೆ.

ರಾಜ್ಯದ JCB ಪಕ್ಷಗಳ ಭ್ರಷ್ಟಾಚಾರದ, ದುರಾಡಳಿತದ ವಿರುದ್ಧ ರವಿ ಮತ್ತವರ ತಂಡ ನಿರಂತರವಾಗಿ ಧ್ವನಿ ಎತ್ತುತ್ತಾ ಬರುತ್ತಿದೆ. ಆದರೆ ಈ ಧ್ವನಿಗೆ ಇನ್ನಷ್ಟು ಧ್ವನಿಗಳು ಸೇರಬೇಕಾಗಿದ್ದಷ್ಟು ಪ್ರಮಾಣದಲ್ಲಿ ಸಾಮೂಹಿಕವಾಗಿ ಸೇರುತ್ತಿಲ್ಲ ಎಂಬುದನ್ನು ಗಮನಿಸಿದ್ದೇನೆ. ಇದಕ್ಕೆ ಕಾರಣ ಏನಿರಬಹುದು ಎಂಬ ಕುತೂಹಲ ನನಗಿದೆ. ಇದಕ್ಕೆ ರವಿಕೃಷ್ಣಾ ರೆಡ್ಡಿಯವರ ರಾಜಕೀಯದ ಮಾದರಿ  ಸಾಮಾಜಿಕವಾಗಿ ಮೇಲುಪದರದ್ದು ಎಂದು ನಾನು ಹಿಂದೊಮ್ಮೆ ಇಲ್ಲೇ ಹೇಳಿದ್ದಿದೆ. ಆದರೆ, ಈಗೀಗ ಅದಕ್ಕಿಂತ ಹೆಚ್ಚಿನದೇನೋ ಇಲ್ಲಿ ಕೆಲಸ ಮಾಡುತ್ತಿದೆ ಎಂದು ಬಲವಾಗಿ ಅನ್ನಿಸತೊಡಗಿದೆ. ಕರಾವಳಿಯಲ್ಲಿ ರೈತ ಹೋರಾಟಗಳನ್ನು ಹತ್ತಿರದಿಂದ/ಒಳಗಿನಿಂದ ಗಮನಿಸಿದಾಗ ನನಗೆ ಅನ್ನಿಸತೊಡಗಿದ ಸಂಗತಿ ಇದು. ಹಾಗಾಗಿ, ಇದೇ ಸಂದರ್ಭದಲ್ಲಿ ನನ್ನ ಅನ್ನಿಸಿಕೆಗಳನ್ನು ಹಂಚಿಕೊಳ್ಳಬಯಸುತ್ತೇನೆ.

ಭಾರತ 90ರ ದಶಕದಲ್ಲಿ ಉದಾರೀಕರಣದ ಹಾದಿ ಹಿಡಿದ ಬಳಿಕ, ನಾಡಿನಲ್ಲಿ ಸಾಮಾಜಿಕ ಹೋರಾಟಗಳು ತಮ್ಮನ್ನು ಅಪ್‌ಡೇಟ್ ಮಾಡಿಕೊಳ್ಳದಿರುವುದು, ಈ ಹೋರಾಟಗಳ ಶ್ರಮಕ್ಕೆ ತಕ್ಕ ಪ್ರತಿಫಲ ದೊರಕದಿರುವುದಕ್ಕೆ ಮೂಲ ಕಾರಣ ಇರಬಹುದೆಂಬ ಶಂಕೆ ನನಗಿದೆ. 80ರ ದಶಕದಲ್ಲಿ ನಡೆದಿದ್ದ ಕರ್ನಾಟಕದ ರೈತ ಹೋರಾಟ, ಉದಾರೀಕರಣದ ಪೂರ್ವದಲ್ಲಿ ಪರಿಣಾಮಕಾರಿ ಸಾಮಾಜಿಕ ಹೋರಾಟಕ್ಕೆ ಒಂದು ಮಾದರಿಯಾಗಿತ್ತು. ಜನ ಹೋರಾಟಗಳಲ್ಲಿ ನಂಬಿಕೆ ಇಟ್ಟು ಜೊತೆ ಆಗುತ್ತಿದ್ದರು, ಸರ್ಕಾರಗಳ ಕಿವಿಗೆ ಈ ಧ್ವನಿ ಕೇಳಿಸುತ್ತಿತ್ತು. ಆದರೆ ಈಗ, ಉದಾರೀಕರಣದ  ಮೂರು ದಶಕಗಳ ಬಳಿಕ, ಸಾಮಾಜಿಕ ಹೋರಾಟಗಳಲ್ಲಿ ವಿಲಕ್ಷಣವಾದ ಬದಲಾವಣೆಗಳು ಕಾಣಿಸಿಕೊಳ್ಳತೊಡಗಿವೆ.

ಸರ್ಕಾರ ತನ್ನ ಹೊಣೆಗಳನ್ನು ಒಂದೊಂದಾಗಿ ಖಾಸಗೀಕರಿಸುತ್ತಾ ಬಂದಂತೆ, ಅದರ ಲಾಭ ಪಡೆದಿರುವ ದೇಶದ 5% ಜನ (ಶ್ರೀಮಂತ ಉದ್ಯಮಿಗಳು, ಪ್ರಭಾವಿಗಳು), ಇಲ್ಲಿನ ರಾಜಕೀಯ-ಸಾಮಾಜಿಕ ಬದುಕುಗಳನ್ನೆಲ್ಲ ಆವರಿಸಿಕೊಳ್ಳುತ್ತಾ, ಜನರ ಪ್ರತಿರೋಧದ ಉರಿಯನ್ನು ಅಲ್ಲಲ್ಲಿ ತೇಪೆ ಹೊಡೆದು ತಗ್ಗಿಸುತ್ತಾ ಬರುತ್ತಿದ್ದಾರೆ. ಸರ್ಕಾರದ ಭಾಗವೂ ಆಗಿರುವ ಅವರೇ ಇಂದು ರಾಜಕಾರಣಿಗಳು, ಜನಪ್ರತಿನಿಧಿಗಳು, ಉದ್ಯೋಗದಾತರು… ಎಲ್ಲವೂ. ಕಡೆಗೆ… ಹೋರಾಟಗಳ ಸುಪಾರಿ ನೀಡುವವರೂ ಅವರೇ!  ಹಾಗಾಗಿ ಜನ ಇಂದು ವ್ಯವಸ್ಥೆಯ ಎದುರು ಸಿಟ್ಟು ತೋರಿಸಲು ತಯಾರಿಲ್ಲ. 

ಇಲ್ಲಿ ಕರಾವಳಿಯಲ್ಲೇ, ನನ್ನ ಅನುಭವದ ಮಿತಿಯಲ್ಲಿ ಹೇಳಬೇಕೆಂದರೆ, ಮೈ ಮೇಲೆ ಬೂದಿ ಉದುರಿದ್ದೆಂದು ಗೊತ್ತಾದರೂ, ಅದನ್ನು ಉದುರಿಸಿದವರ ವಿರುದ್ಧ ಜನ ಧ್ವನಿ ಎತ್ತುವುದಿಲ್ಲ. ಇಂತಹ ಹತ್ತಾರು ಉದಾಹರಣೆಗಳನ್ನು ಪ್ರತೀ ಊರಿನಲ್ಲಿ ನೀಡಬಹುದು.

ಭ್ರಷ್ಟಾಚಾರ, ದುರಾಡಳಿತ, ಜನಸಾಮಾನ್ಯರಿಗೆ ಕಿರುಕುಳ, ಲೂಟಿ… ಇಂತಹ ಸಂಗತಿಗಳು ಇಂದು ದಿನಬಳಕೆಯವಾಗಿದ್ದರೂ, ಯಾರಿಗೂ ಏನೂ ಅನ್ನಿಸುವುದಿಲ್ಲ. ದುಡ್ಡು/ಧರ್ಮ/ಜಾತಿಯ ಅಮಲು ರಾಜಕೀಯದ ಜೊತೆ ಪ್ರತಿದಿನ ಉಚಿತವಾಗಿ ಸಿಗುತ್ತಿದೆ. ಹಾಗಾಗಿ ತಾವು ಯಾರನ್ನು ತಮ್ಮ ಜನಪ್ರತಿನಿಧಿಗಳನ್ನಾಗಿ ಆರಿಸುತ್ತಿದ್ದೇವೆ ಎಂಬುದೂ ಅರ್ಥವಾಗದಷ್ಟು ಅಮಲು ಸಮಾಜದ ತಲೆಗೆ ಏರಿಬಿಟ್ಟಂತಹ ಸ್ಥಿತಿ ಇದೆ.[ಈ ಸನ್ನಿವೇಶವನ್ನು ವಿವರವಾಗಿ ಅಧ್ಯಯನ ಮಾಡಬೇಕಿದೆ.]

“ನಮ್ಮನ್ನುಕಾಯಲು ನಾವು ಆರಿಸಿರುವ ತೋಳಗಳೇ ನಮ್ಮನ್ನು ಹಿಡಿದು ತಿನ್ನುತ್ತಿವೆ” ಎಂಬುದನ್ನು ಅರ್ಥ ಮಾಡಿಸುವಂತಹ ರಾಜಕೀಯ ಬರುವ ತನಕ ಪರಿಸ್ಥಿತಿ ಹೀಗೇ ಮುಂದುವರಿಯಲಿದೆ. 

ಇಂತಹದೊಂದು “ಹೊಸ ರಾಜಕೀಯವನ್ನು” ಹುಟ್ಟುಹಾಕುವುದು ಸಾಧ್ಯವಾದರೆ, ರವಿಕೃಷ್ಣಾರೆಡ್ಡಿಯವರ ಪ್ರಯತ್ನಗಳು ಫಲ ನೀಡತೊಡಗಬಹುದು. ಅವರಿಗೆ ಮತ್ತವರ ತಂಡಕ್ಕೆ ಆ ಶಕ್ತಿ ಬರಲೆಂದು ಹಾರೈಕೆಗಳು.

– ರಾಜಾರಾಮ್ ತಲ್ಲೂರ್, ಹಿರಿಯ ಪತ್ರಕರ್ತರು

Leave a Reply