ಮುಂಗಾರು ಹಂಗಾಮು ಪ್ರಾರಂಭ: ರೈತರು ಮಾಗಿ ಉಳುಮೆ ಅನುಸರಿಸಲು ಸಲಹೆ
ಬಳ್ಳಾರಿ: ಪ್ರಸ್ತಕ ಸಾಲಿನ ಮುಂಗಾರು ಹಂಗಾಮು ಪ್ರಾರಂಭವಾಗುತ್ತಿರುವುದರಿಂದ ರೈತರು ತಮ್ಮ ಜಮೀನಿನಲ್ಲಿ ಮಾಗಿ ಉಳುಮೆ ಮಾಡಿಕೊಂಡು, ಸಾಕಷ್ಟು ಪ್ರಮಾಣದಲ್ಲಿ ಕೊಟ್ಟಿಗೆ ಗೊಬ್ಬರ, ಎರೆಹುಳ ಗೊಬ್ಬರ ಮತ್ತು ಸಾವಯವ ಗೊಬ್ಬರಗಳನ್ನು ತಮ್ಮ ಜಮೀನುಗಳಿಗೆ ಸೇರಿಸಬೇಕು ಎಂದು ಜಂಟಿ ಕೃಷಿ ನಿರ್ದೇಶಕ ಸೋಮಸುಂದರ್ ಅವರು ತಿಳಿಸಿದ್ದಾರೆ.
- ಸರಳ, ವೇಗ, ಪಾರದರ್ಶಕ, ಜನಸ್ನೇಹಿ ಆಸ್ತಿ ದಾಖಲೆ ವ್ಯವಸ್ಥೆ ಇ-ಆಸ್ತಿ 2.0: ಕೃಷ್ಣ ಬೈರೇಗೌಡ
- ರೈತರಿಗೆ ನಿರಂತರ 6 ತಾಸು ಸಮರ್ಪಕ ವಿದ್ಯುತ್ ಕುಡಿಯುವ ನೀರು ಪೂರೈಕೆಗೆ ಆದ್ಯತೆ
- ಕೆಟಿವಿಎ ಗೃಹ ಪತ್ರಿಕೆ ಟಿವಿ – ಠೀವಿ ಪುನರಾರಂಭ
- ಸಿಎನ್ಎನ್, ಎಂಎಸ್ಎನ್ಬಿಸಿ, ಪಾಲಿಟಿಕೋಗೆ ಶ್ವೇತಭವನ ಪ್ರವೇಶ ನಿಷೇಧಿಸಿದ ಟ್ರಂಪ್
- ಕೆರೆಗಳ ಪುನಶ್ಚೇತನಕ್ಕೆ ₹150 ಕೋಟಿ ವೆಚ್ಚದ ವಿಶ್ವಬ್ಯಾಂಕ್ ಯೋಜನೆ: ಈಶ್ವರ್ ಖಂಡ್ರೆ
ಮಾಗಿ ಉಳುಮೆ ಎಂದರೆ ಎಂ.ಬಿ.ನೇಗಿಲು, ಡಿಸ್ಕ್ ಪ್ಲೋ ಅಂತಹ ಯಂತ್ರೋಪಕರಣಗಳನ್ನು ಬಳಸಿ, ಇಳಿಜಾರಿನ ಅಡ್ಡಕ್ಕೆ ಹೊಲವನ್ನು ಆಳವಾದ ಉಳುಮೆ, ಮಣ್ಣಿನ ಹೊರಪದರವನ್ನು ತೆರೆದು ಸೂರ್ಯನ ಕಿರಣಗಳಿಂದ ಸೋಂಕುರಹಿತಗೊಳಿಸಲು ಕೆಳಗಿನ ಮಣ್ಣನ್ನು ತಿರುಗಿಸುವುದಾಗಿದೆ ಎಂದು ಅವರು ತಿಳಿಸಿದ್ದಾರೆ.
ಮಾಗಿ ಉಳುಮೆಯಿಂದಾಗುವ ಪ್ರಯೋಜನಗಳು: ಮಾಗಿ ಉಳುಮೆಯಿಂದ ಮಣ್ಣಿನ ಗಟ್ಟಿಯಾದ ಹೊರಪದರವನ್ನು ಒಡೆದು ಆಳವಾದ ಉಳುಮೆ ಮಾಡುವುದರಿಂದ ನೀರಿನ ಇಂಗುವ ಸಾಮರ್ಥ್ಯ ಹೆಚ್ಚಾಗುತ್ತದೆ. ಮಣ್ಣು ಹೆಚ್ಚಿನ ನೀರನ್ನು ಹಿಡಿದುಕೊಂಡು ಸುಲಭವಾಗಿ ಗಿಡಗಳಿಗೆ ದೊರೆಯುವಂತೆ ಮಾಡುತ್ತದೆ.
ಮಾಗಿ ಉಳುಮೆಯಲ್ಲಿ ಪರ್ಯಾಯ ಬಿಸಿಲಿನಿಂದ ಒಣಗಿಸುವಿಕೆ ಹಾಗೂ ಗಾಳಿಯಿಂದ ತಂಪಾಗಿಸುವಿಕೆಯಿಂದಾಗಿ ಮಣ್ಣಿನ ರಚನೆಯು ಸುಧಾರಿಸುತ್ತದೆ. ಮಣ್ಣಿನ ಗಾಳಿಯನ್ನು ಸುಧಾರಿಸುವುದರಿಂದ ಸೂಕ್ಷ್ಮಜೀವಿಗಳ ಉತ್ಪತ್ತಿಯು ಹೆಚ್ಚಾಗಿ ಸಾವಯವ ಗೊಬ್ಬರಗಳು ಕರಗಿ ಪೋಷಕಾಂಶಗಳ ಲಭ್ಯತೆಯು ಹೆಚ್ಚುತ್ತದೆ.
ಮಳೆಯನ್ನು ಹೀರಿಕೊಳ್ಳುವ ಮಣ್ಣಿನ ಸಾಮರ್ಥ್ಯವು ಬೆಳೆದಂತೆ ವಾತಾವರಣದಲ್ಲಿ ಲಭ್ಯವಿರುವ ಸಾರಜನಕ ನೀರಿನಲ್ಲಿ ಕರಗಿ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತದೆ. ಮಣ್ಣಿನಡಿಯಲ್ಲಿ ಅಡಗಿರುವ ಅನೇಕ ಕೀಟಗಳ ಮೊಟ್ಟೆ, ಮರಿಹುಳು ಮತ್ತು ಕೋಶಗಳು ಸೂರ್ಯನ ಅತಿಯಾದ ಬಿಸಿಲಿನ ಶಾಖದಿಂದ ಸತ್ತುಹೊಗಿ ಮುಂದಿನ ಬೆಳೆಗಳ ಮೇಲೆ ಕೀಟಗಳ ಅಪಾಯದ ಪ್ರಮಾಣವನ್ನು ಕಡಿಮೆ ಮಾಡಬಹುದಾಗಿದೆ.
ಬಿಸಿಲಿನ ಶಾಖಕ್ಕೆ ಅನೇಕ ಬ್ಯಾಕ್ಟೀರಿಯಾ ಬೀಜಕಗಳು, ಶಿಲೀಂಧ್ರಗಳು ಮತ್ತು ಸೂಕ್ಷ್ಮಜೀವಿಗಳು ಸಾಯುತ್ತವೆ. ಇದರಿಂದ ಮುಂದಿನ ಬೆಳೆಗಳಿಗೆ ಉಂಟಾಗುವ ರೋಗಗಳನ್ನು ತಪ್ಪಿಸಿ ಕೀಟ ಮತ್ತು ರೋಗನಾಶಕಗಳಿಗೆ ತಗಲುವ ವೆಚ್ಚವನ್ನು ಉಳಿಸುತ್ತದೆ. ಮಾಗಿ ಉಳಿಮೆಯಿಂದ ನೆಮಟೋಡ್ ಬಾಧೆಯನ್ನು ತಪ್ಪಿಸಬಹುದು. ಮಾಗಿ ಉಳುಮೆಯು ಕಳೆಗಳು ಮೊಳಕೆಯೊಡೆಯುವುದನ್ನು ತಡೆಯುತ್ತದೆ ಇದರಿಂದ ಕಳೆಗಳ ನಿಯಂತ್ರಣವನ್ನು ಮಾಡಬಹುದು.
ಮಾಗಿ ಉಳುಮೆಯಿಂದ ಹೆಚ್ಚಿನ ಮಳೆ ನೀರು ಸಂಗ್ರಹಣೆ, ಪೋಷಕಾಂಶಗಳ ಸಮತೋಲನ ಮತ್ತು ಮಣ್ಣಿನ ಗುಣಧರ್ಮಗಳ ಸುಧಾರಣೆಯಿಂದ ಹೆಚ್ಚಿನ ಬೆಳೆ ಇಳುವರಿ ಪಡೆಯಲು ಸಾಧ್ಯವಾಗುತ್ತದೆ.
ಹಾಗಾಗಿ ರೈತ ಬಾಂಧವರು ಮಾಗಿ ಉಳುಮೆಯ ಈ ಎಲ್ಲಾ ಪ್ರಯೋಜನೆಗಳಿಂದ ಕಡಿಮೆ ಖರ್ಚು ಮಾಡಿ ಹೆಚ್ಚಿನ ಇಳುವರಿ ಪಡೆದುಕೊಂಡು ತಮ್ಮ ಆರ್ಥಿಕ ಮಟ್ಟವನ್ನು ಹೆಚ್ಚಿಸಿಕೊಳ್ಳಬಹುದು.




