ಬೆಳಗಾವಿ: ಸಾಮಾಜಿಕ ಸಮಾನತೆಗೆ ಹೋರಾಡಿದ ಬಸವಣ್ಣನವರ ಹೆಸರು ಜಗತ್ತಿನ ಎಲ್ಲೆಡೆ ತಲುಪಿದೆ. ನಿಜಶರಣ ಅಂಬಿಗರ ಚೌಡಯ್ಯನವರಂತಹ ಅನೇಕ ಶರಣರು ಬಸವಣ್ಣನವರಿಗೆ ಬೆಂಬಲವಾಗಿ ನಿಂತ ಪರಿಣಾಮ ಇದು ಸಾಧ್ಯವಾಗಿದೆ. ಆದ್ದರಿಂದ ಸಮಾಜದಲ್ಲಿ ಸಮಾನತೆ ತರಲು ಶರಣರ ಚಿಂತನೆಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಕರೆ ನೀಡಿದರು.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಕುಮಾರ ಗಂಧರ್ವ ಕಲಾ ರಂಗ ಮಂದಿರದಲ್ಲಿ ಜರುಗಿದ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ 905 ನೇ ಜಯಂತಿ ಉತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
12ನೇ ಶತಮಾನದಲ್ಲಿ ನಾವು ಯಾರೂ ಇರಲಿಲ್ಲ. ಆಗ ಆದ ಶರಣರ ಕ್ರಾಂತಿಕಾರಿ ಹೋರಾಟಗಳನ್ನು ತಿಳಿದುಕೊಳ್ಳಲು ಇಂತಹ ಶರಣರ ಜಯಂತಿಗಳನ್ನು ಆಚರಿಸಲಾಗುತ್ತದೆ. ಶರಣರು ಹೋರಾಟ ಮಾಡದೆ ಹೋಗಿದ್ದರೆ ಸಾಮಾಜಿಕವಾಗಿ ನಾವು ಇನ್ನೂ ಹಿಂದೆ ಉಳಿದಿರುತ್ತಿದ್ದೆವು ಎಂದರು.
ಶರಣರು ಮಾಡಿದ ಕಾರ್ಯಗಳನ್ನು ನಾವೆಲ್ಲರು ಮುಂದುವರಿಸಬೇಕು. ಅವರು ಮಾಡಿದ ಕ್ರಾಂತಿಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅಂದಾಗ ಮಾತ್ರ ಜಯಂತಿ ಮಾಡಿದ್ದು ಸಾರ್ಥಕವಾಗುತ್ತದೆ ಎಂದರು.
ಕೋಳಿ-ಬೆಸ್ತ ಸಮುದಾಯವು ಸರಕಾರದ ವಿವಿಧ ಯೋಜನೆಗಳ ಪ್ರಯೋಜನ ಪಡೆದುಕೊಂಡು ಶಿಕ್ಷ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದಬೇಕು. ನಾನು ಮತ್ತು ನಮ್ಮ ಸರಕಾರ ಯಾವಾಗಲು ಸಮುದಾಯದ ಜೊತೆ ಇರುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೋಳಿ-ಬೆಸ್ತ ಸಮಾಜದ ಜಿಲ್ಲಾಧ್ಯಕ್ಷ ದಿಲೀಪಕುಮಾರ ಕುರುಂದವಾಡೆ, ಕೋಳಿ-ಬೆಸ್ತ ಸಮುದಾಯವನ್ನು ಎಸ್.ಟಿ ಪಟ್ಟಿಗೆ ಸೇರಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸವನ್ನು ನೀಡಿದ ಆರೋಗ್ಯ ಇಲಾಖೆಯ ನಿವೃತ್ತ ಸಹಾಯಕ ಆಡಳಿತಾಧಿಕಾರಿ ಎಸ್.ಕೆ. ಹೊಳೆಪ್ಪನವರ, 12 ನೇ ಶತಮಾನದಲ್ಲಿ ಮೌಢ್ಯಾಚಾರ, ಲಿಂಗ ತಾರತಮ್ಯ, ಜಾತಿ ತಾರತಮ್ಯ, ಕಂದಾಚಾರ, ಪುರೋಹಿತಶಾಹಿಗಳ ದೌರ್ಜನ್ಯ ಹೀಗೆ ಮುಂತಾದ ದೌರ್ಜನ್ಯಗಳು ನಡೆಯುತ್ತಿದ್ದವು. ಅಂತಹ ದೌರ್ಜನ್ಯಗಳನ್ನು ನಿಲ್ಲಿಸಲು ಶುರುವಾದ ಶರಣ ಕ್ರಾಂತಿಯಲ್ಲಿ ಶರಣ ಅಂಬಿಗರ ಚೌಡಯ್ಯನವರು ಒಬ್ಬ ಕ್ರಾಂತಿಕಾರಿಗಳು. ಇವರು ಬಸವಣ್ಣನವರ ದೊಡ್ಡ ಅಭಿಮಾನಿಯಾಗಿದ್ದರು ಎಂದರು.
ಅಂಬಿಗರ ಚೌಯ್ಯನವರು ಮೂಢನಂಬಿಕೆ ಕಂದಾಚಾರಗಳನ್ನು ಧಿಕ್ಕರಿಸಿದ್ದರು, ಸಮಾನತೆಯನ್ನು ತಮ್ಮ ವಚನಗಳ ಮುಖಾಂತರ ಸಾರುತಿದ್ದರು ಮತ್ತು ತಾವು ಹೇಳಿದ ವಚನಗಳಂತೆ ಬದುಕುತಿದ್ದರು. ಅವರು ತುಂಬಾ ನೇರ ನಿಷ್ಠುರರಾಗಿದ್ದರು, ಮತಿಹೀನರನ್ನು ನೇರವಾಗಿ ವಿರೋಧಿಸುತ್ತಿದ್ದರು. ಅಂಬಿಗರ ಚೌಡಯ್ಯನವರು ತಮ್ಮ ವಚನಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ಉಗ್ರವಾಗಿ ಖಂಡಿಸುತ್ತಿದ್ದರು. ಬಸವಣ್ಣನವರು ವಚನಗಳಿಗೆ ತಾಯಿಯಾಗಿದ್ದರೆ ಅಂಬಿಗರ ಚೌಡಯ್ಯನವರ ವಚನಗಳು ತಂದೆಯಾಗಿದ್ದವು ಎಂದರು.
ಶರಣ ಅಂಬಿಗರ ಚೌಡಯ್ಯನವರ ಬಗ್ಗೆ ಕೆಲವರು ಕಟ್ಟು ಕತೆಗಳನ್ನು ಹೇಳುತ್ತಾ ಹೊರಟಿದ್ದಾರೆ. ಸಂಶೋಧಕರು ಅಂತಹ ಕಟ್ಟುಕತೆಗಳನ್ನು ನಂಬುವುದಿಲ್ಲ. ವಚನ ಸಾಹಿತ್ಯ ವಿಶಾಲವಾದದ್ದು, ಅವುಗಳ ಅಧ್ಯಯನ ಮಾಡಬೇಕು ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ವಿಜಯಕುಮಾರ್ ಹೊನಕೇರಿ, ಮಹಾನಗರ ಪಾಲಿಕೆ ಆಯುಕ್ತರಾದ ಶುಭ ಬಿ., ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಸಿದ್ದು ಸುಣಗಾರ, ಗಂಗಾಧರ ತಳವಾರ, ಅಪ್ಪಾಸಾಹೇಬ್ ಪೂಜಾರಿ, ಮಧುಶ್ರೀ ಪೂಜಾರಿ ಹಾಗೂ ಸಮಾಜದ ಮುಖಂಡರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಅಂಬಿಗರ ಚೌಡಯ್ಯನವರ ಭಾವಚಿತ್ರದ ಭವ್ಯ ಮೆರವಣಿಗೆ: ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ 905 ನೇ ಜಯಂತಿ ಉತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ನಿಜಶರಣ ಅಂಬಿಗರ ಚೌಡಯ್ಯನವರ ಭಾವಚಿತ್ರದ ಭವ್ಯ ಮೆರವಣಿಗೆಯನ್ನು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಉದ್ಘಾಟಿಸಿದರು.
ನಗರದ ಅಶೋಕ ವೃತ್ತದಿಂದ ಆರಂಭಗೊಂಡ ಮೆರವಣಿಗೆಯು ಆರ್.ಟಿ.ಓ. ವೃತ್ತದ ಮೂಲಕ ಕುಮಾರ ರಂಗಮಂದಿರದವರೆಗೆ ನಡೆಯಿತು. ಮೆರವಣಿಗೆಯಲ್ಲಿ ಭಾಗವಹಿಸಿದ್ದ ವಿವಿಧ ಕಲಾತಂಡಗಳು ಜನರನ್ನು ಆಕರ್ಷಿಸಿದವು.
ಜಿಪಂ ಮಾಜಿ ಸದಸ್ಯ ಸುಣಗಾರ, ಸಿದ್ದು ಸುಣಗಾರ, ಗಂಗಾಧರ ತಳವಾರ, ಅಪ್ಪಾಸಾಹೇಬ್ ಪೂಜಾರಿ, ಮಧುಶ್ರೀ ಪೂಜಾರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಹಾಗೂ ಸಮಾಜದ ಮುಖಂಡರು ಮೆರವಣಿಗೆಯಲ್ಲಿ ಪಾಲ್ಗೊಂಡರು.




