ಅಂಬಿಗರ ಚೌಡಯ್ಯನವರ ಕೊಡುಗೆ ಸದಾಕಾಲಕ್ಕೂ ಸ್ಮರಣೀಯ

4 years ago

ಬೆಂಗಳೂರು: ಸಮಾಜದಲ್ಲಿದ್ದ ತಾರತಮ್ಯ ನೀತಿಗಳ ವಿರುದ್ಧ ವಚನಗಳ ಮೂಲಕ ಕ್ರಾಂತಿ ಸಾರುತ್ತ ಸೈದ್ಧಾಂತಿಕ ನೆಲೆಗಟ್ಟನ್ನು ಭದ್ರಗೊಳಿಸವಲ್ಲಿ ನಿಜ ಶರಣ ಅಂಬಿಗರ ಚೌಡಯ್ಯನವರ ಕೊಡುಗೆ ಅಪಾರ ಸದಾಕಾಲಕ್ಕೂ ಸ್ಮರಣೀಯ ಎಂದು ಕರ್ನಾಟಕ ರಾಜ್ಯ ಗಂಗಾಮತಸ್ಥರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಮುರಳೀಧರ್ ಹೇಳಿದರು.

ಬೆಂಗಳೂರಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕನ್ನಡಭವನದಲ್ಲಿ ಆಯೋಜಿಸಿದ್ದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿಯಲ್ಲಿ ಮಾತನಾಡಿದ ಅವರು, 12ನೇ ಶತಮಾನದ ಬಸವಣ್ಣನವರ ಕಾಲದ ವಚನಕಾರ, ವೃತ್ತಿಯಿಂದ ಅಂಬಿಗ, ಪ್ರವೃತ್ತಿಯಲ್ಲಿ ಅನುಭಾವಿ. ಬಸವಣ್ಣನವರ ಅನುಭವ ಮಂಟಪದಲ್ಲಿ ಸಮಾನಭೂಮಿಕೆಯ ಸಮ್ಮೇಳನದಲ್ಲಿ ಸೇರಿಕೊಂಡು, ತನ್ನ ಕಾಯಕ ವ್ಯಕ್ತಿನಾಮ ಅಂಬಿಗರ ಚೌಡಯ್ಯ ಎಂಬ ನಾಮಾಂಕಿತನಾದ ಮೂಲಕ ವಚನಗಳನ್ನು ರಚಿಸಿ, ಸಮಾಜ ಸುಧಾರಣೆ ಮಾಡುತ್ತಿದ್ದರು ಎಂದರು.

ಹೊಸ ಸೈದ್ಧಾಂತಿಕ ನೆಲೆಗಟ್ಟನ್ನು ಭದ್ರಗೊಳಿಸಿ ಆಧ್ಯಾತ್ಮಿಕ ತಳಹದಿಯನ್ನು ಒದಗಿಸಿಕೊಟ್ಟರು. ತಮ್ಮ ನೇರ, ನಿಷ್ಠುರ ನುಡಿಯ ವಚನಗಳ ಮೂಲಕ ಸಮಾಜದ ಮೌಢ್ಯ, ಕಂದಾಚಾರಗಳನ್ನು ವಿರೋಧಿಸುತ್ತಾ, ಶೋಷಣೆ ರಹಿತ ಸಮ ಸಮಾಜದ ಕನಸು ಕಂಡು, ಸಮಾನತೆಯ ಸಂದೇಶಗಳನ್ನು ಬಿತ್ತಿದರು. ಶರಣ ಸಂಕುಲದ ವಿಭಿನ್ನ ವ್ಯಕ್ತಿತ್ವ, ಕರ್ಮಠ ಆಚರಣೆಗಳ ವಿರುದ್ಧ ಸಿಡಿದೆದ್ದು ಕೇವಲ ಭಕ್ತಿ ಮಾರ್ಗದಿಂದ ಪರಮಾತ್ಮನನ್ನು ಸೇರಬಹುದು ಎಂದು ಸಾರಿದ ಚೌಡಯ್ಯನವರ ಜೀವನ ಆದರ್ಶಮಯವಾದದ್ದು ಎಂದರು.

ಇದೇ ವೇಳೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ರಂಗಪ್ಪ ನಿಜಶರಣರ ಭಾವಚಿತ್ರಕ್ಕೆ ಮಾಲಾರ್ಪಣೆ ಹಾಗೂ ಪುಷ್ಪ ನಮನ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಬಲವಂತಪ್ಪ ಪಾಟೀಲ್, ಕರ್ನಾಟಕ ರಾಜ್ಯ ಗಂಗಾಮತಸ್ಥರ ಸಂಘದ ಉಪಾಧ್ಯಕ್ಷ ಮಣ್ಣೂರು ನಾಗರಾಜ್, ಪದಾಧಿಕಾರಿಗಳಾದ ವೈ.ಎನ್.ನಾಗರಾಜ್, ಸೂರ್ಯಪ್ರಕಾಶ್ ಕೋಲಿ, ಕೃಷ್ಣಪ್ಪ ಸೇರಿದಂತೆ ಗಂಗಾಮತಸ್ಥ ಸಮುದಾಯದ ಮುಖಂಡರು, ಪಧಾಧಿಕಾರಿಗಳು ಹಾಜರಿರಿದ್ದರು.

Leave a Reply