ನಿನ್ನೆ (೧೮,ಫೆಬ್ರವರಿ) ಗಾಂಧಿಭವನದಲ್ಲಿ ನಡೆದ ಕಾರ್ಯಕ್ರಮ ಯಶಸ್ವಿಯಾಯಿತು. ಪತ್ರಿಕಾ ವರದಿಗಳು ಎಲ್ಲ ವಿಷಯಗಳನ್ನು ವರದಿ ಮಾಡುವುದು ಅಸಾಧ್ಯ, ಕಾರಣ ಸ್ಥಳಾಭವ. ನಾನು ನಿನ್ನೆ ಆಡಿದ ಮಾತುಗಳು ತಮ್ಮ ಮುಂದಿವೆ.
ಸಂಸ್ಕೃತಿ ಎಂದರೇನು? ಧರ್ಮ, ಭಾಷೆ, ಕಲೆ, ಶಿಕ್ಷಣ, ಸಂಪ್ರದಾಯ, ನಾಟಕ, ಸಾಹಿತ್ಯ, ಸಂಗೀತ ಇವೆಲ್ಲವನ್ನು ಒಳಗೊಂಡಿದ್ದು ಸಂಸ್ಕೃತಿ ಆಗುತ್ತದೆ. ಮೇಲೆ ಹೇಳಿದ ಎಲ್ಲಕ್ರಿಯೆಗಳು ಕೂಡಿದಾಗ ಮಾತ್ರ ಅದು ರಾಷ್ಟ್ರದ ಸಂಸ್ಕೃತಿ ಯಾಗುತ್ತದೆಯೇ? ಉತ್ತರ ‘ಹೌದು’ ಅನ್ನಬಹುದು ಅಥವಾ ‘ನಕಾರಾತ್ಮಕ’ವಾಗಿಯೂ ಇರಬಹುದು.
ಮೇಲೆ ಹೇಳಿದ ಎಲ್ಲ ಕ್ರಿಯೆಗಳು ಒಂದಕ್ಕೊಂದು ಪೂರಕವಾಗಿವೆ. ಉದಾಹರಣೆಗೆ; ಶಿಕ್ಷಣದಲ್ಲಿ ಧರ್ಮವಿದೆ, ಸಾಹಿತ್ಯವಿದೆ, ಭಾಷೆಯಿದೆ, ಕಲೆಯಿದೆ, ನಾಟಕವೂ ಇವೆಲ್ಲವೂ ಇದ್ದಾಗ ಭಾವವು ‘ಸಂಗೀತ’ವಾಗುವುದರಲ್ಲಿ ಸಂಶಯವಿಲ್ಲ.
ಇಂದು ನಾವು ಇಲ್ಲಿ ಸೇರಿದ್ದು ಬಸವಣ್ಣನವರು ಒಬ್ಬ ಸಾಂಸ್ಕೃತಿಕ ನಾಯಕರು ಎಂದು ಕರ್ನಾಟಕ ಸರಕಾರದ ಘೋಷಸಿದ್ದನ್ನು ಸಂಭ್ರಮಿಸಲು. ಬಸವಣ್ಣನವರು ಭಾರತ ಕಂಡ ಮಹಾ ದಾರ್ಶನಿಕ, ಧರ್ಮಸ್ಥಾಪಕ, ಸಮಾಜವಾದಿ, ರಾಜಕೀಯ ಮುತ್ಸದ್ಧಿ, ಆರ್ಥಿಕ ತಜ್ಞ, ಕ್ರಾಂತಿಕಾರಿ ಹಾಗು ಒಬ್ಬ ಒಳ್ಳೆಯ ಹೃದಯವಂತ ಪತಿ. ಪ್ರಿತಿಸುವ ತಮ್ಮ. ಇದಕ್ಕಿಂತಲೂ ಹೆಚ್ಚಾಗಿ ಸಮಸ್ತ ಮನುಕುಲವನ್ನು ಪ್ರೀತಿಸಿದ ಮಹಾನ್ ನಾಯಕ. ಇವಲ್ಲವೆ ಸಾಂಸ್ಕೃತಿಕ ನಾಯಕನ ಪಟ್ಟಕ್ಕೇರಲು ಬೇಕಾಗಿರುವ ಅರ್ಹತೆಗಳು.
ಅವರ ಜೀವನ ಚರಿತ್ರೆಯನ್ನು ಅವಲೋಕಿಸಿದಾಗ ಅವರ ಅವರ ವಚನಗಳನ್ನು ಅಭ್ಯಸಿಸಿದಾಗ ನಮಗೆ ಕಾಣುವುದು ಅವರಲ್ಲಿದ್ದ ಮಹಾನ್ ಸಾಂಸ್ಕೃತಿಕ ನಾಯಕತ್ವದ ಗುಣಗಳನ್ನು. ಇದಕ್ಕೆಲ್ಲ ಮೂಲಕಾರಣ ಅವರಿಗೆ ಸಿಕ್ಕ ಶಿಕ್ಷಣ. ಅಂದಿನ ದಿನಗಳಲ್ಲಿ ಬ್ರಾಹ್ಮಣರಿಗೆ ಮಾತ್ರ ಶಿಕ್ಷಣ ಪಡೆಯುವ ಹಕ್ಕಿತ್ತು. ಅವರು ಬ್ರಾಹ್ಮಣ ಸಮಾಜದಲ್ಲಿ ಜನಿಸಿದ ಕಾರಣ ಬಸವಣ್ಣನವರಿಗೆ ಶಿಕ್ಷಣ ಜನ್ಮಸಿದ್ಧ ಹಕ್ಕಾಗಿತ್ತು. ಅವರು ಬಾಲ್ಯದಿಂದಲೇ ವೇದ, ವೈಶೇಷಿಕ, ಬ್ರಹ್ಮಸೂತ್ರ, ಪುರಾಣ ಆಗಮಗಳನ್ನು ಓದಿದರು. ರಾಮಾಯಣ, ಮಹಾಭಾರತದಂತಹ ಕಾವ್ಯಗಳನ್ನು ಅಭ್ಯಾಸ ಮಾಡಿದರು. ಸಂಸ್ಕೃತ ಅವರಿಗೆ ಶಿಕ್ಷಣದ ಮಾಧ್ಯಮವಾದರೂ ಆಡು ಭಾಷೆಯಾದ ಕನ್ನಡದಲ್ಲಿ ಅವರು ಪ್ರಾವೀಣ್ಯತೆ ಪಡೆದಿದ್ದರು.
ಬಸವಣ್ಣನವರ ಬಾಲ್ಯ, ಶಿಕ್ಷಣದ ಬಗ್ಗೆ ವಿದ್ವಾಂಸರಲ್ಲಿ ಗೊಂದಲವಿದೆ. ಬಸವಣ್ಣನವರು ಜನಿಸಿದ ದಿನಾಂಕದ ಬಗ್ಗೆ ಬಿನ್ನಾಭಿಪ್ರಾಯ ಇದ್ದರೂ ಡಾ.ಪಿ.ಬಿ.ದೇಸಾಯಿವರ ಅಭಿಪ್ರಾಯಕ್ಕೆ ಹೆಚ್ಚಿನ ತೂಕವಿದೆ. ಅವರು ಬಸವಣ್ಣನವರ ಜನನ ಕ್ರಿ.ಶ. ೧೧೦೫ರಲ್ಲಿ ಎಂದು ಬರೆಯುತ್ತಾರೆ. ಹದಿನಾರನೆಯ ವಯಸ್ಸಿನಲ್ಲಿ ಬಸವಣ್ಣ ಕೂಡಲಸಂಗಮಕ್ಕೆ ಹೊರಡುತ್ತಾರೆ ಎನ್ನುತ್ತಾರೆ. ಅಲ್ಲಿ ಹನ್ನೊಂದು ವರ್ಷಗಳ ಕಾಲ ಶಿಕ್ಷಣ ಪಡೆದರು ಎನ್ನುತ್ತಾರೆ ಡಾ. ದೇಸಾಯಿ.
ಬಿಜ್ಜಳನ ಆಸ್ಥಾನದಲ್ಲಿ ೧೧೨೭ ರಿಂದ ೧೧೬೭ರವರೆಗೆ ಇದ್ದರೆಂದು ಅವರು ಅಭಿಪ್ರಾಯಪಡುತ್ತಾರೆ. ಆದರೆ ಇದನ್ನು ಕೆಲ ವಿದ್ವಾಂಸರು ಒಪ್ಪುವುದಿಲ್ಲ. ಅವರು ಬಸವಣ್ಣನವರು ಬದುಕಿದ ಕಾಲ ಕೇವಲ ೩೬ ವರ್ಷ ಮಾತ್ರ ಎನ್ನುತ್ತಾರೆ. ಇರಲಿ. ನಮ್ಮ ಇಂದಿನ ಚರ್ಚೆ ಇದಲ್ಲ. ನಾವು ಹೇಳಹೊರಟಿರುವುದು ಬಸವಣ್ಣನವರ ಸಂಸ್ಕೃತಿಯ ಬಗ್ಗೆ.
ಬಸವಣ್ಣನವರ ಬಾಲ್ಯ ಶಿಕ್ಷಣ ಅಕ್ಕ ನಾಗಮ್ಮನ ಉಸ್ತುವಾರಿಯಲ್ಲಿ ನಡೆದಿರಲು ಸಾಕು. ಹದಿನಾರು ವರ್ಷಗಳ ಕಾಲ ಬಾಗೇವಾಡಿಯಲ್ಲಿ ಅವರು ವೈದಿಕ ಸಾಹಿತ್ಯವನ್ನು ಅಭ್ಯಾಸ ಮಾಡಿದರು. ಅದರಲ್ಲಿರುವ ಕರ್ಮಟತನಕ್ಕೆ ಬೇಸತ್ತು ವೈದಿಕ ಸಂಸ್ಕಾರಗಳಿಂದ ದೂರವಾಗಲು ನಿಶ್ಚಯಿಸಿದರು. ಕೇವಲ ಬಾಲ್ಯದಲ್ಲಿ ಮಾತ್ರ ಅವರು ಶಿಕ್ಷಣಾರ್ತಿಯಾಗಿರಲಿಲ್ಲ. ಅವರ ಕಲಿಯುವಿಕೆ ನಿರಂತರವಾಗಿತ್ತು. ಕೂಡಲ ಸಂಗಮದಲ್ಲಿ ಅವರು ಹೆಚ್ಚಿನ ಅಭ್ಯಾಸ ಮಾಡಿದರು. ಸತ್ಯಮಿಥ್ಯಗಳನ್ನು ಅರಿತು ತಜ್ಞರಾದರು.
ಕೂಡಲಸಂಗಮ ತೊರೆದು ಮಂಗಳವೇಡೆಗೆ ಬಂದಾಗ ಅವರ ಮೇಲೆ ಪ್ರಭಾವ ಬೀರಿದವರು ಪತ್ನಿಯರಾದ ಗಂಗಾಂಬಿಕೆ ನಿಲಾಂಬಿಕೆಯರು. ಬೊಕ್ಕಸದ ಅಧಿಕಾರಿಯಾಗಿ ಆರ್ಥಿಕ ತಜ್ಞರಾದರು. ಸತ್ಯ ಶುದ್ಧ ಕಾಯಕ ಬೇಕೆಂದರು. ನಂತರ ಅನುಭವ ಮಂಟಪದಲ್ಲಿ ಅಲ್ಲಮರ, ಅಕ್ಕಮಹಾದೇವಿಯ ಪ್ರಭಾವ ಅವರ ಮೇಲೆ ಆಗಿತ್ತು. ಅಷ್ಟೇಕೆ ತನ್ನ ಸೋದರಳಿಯನಾದ ಚನ್ನಬಸವಣ್ಣನವರು ಸಹ ಅವರ ಮೇಲೆ ಪ್ರಭಾವ ಬೀರುತ್ತಾರೆ.
ನಿರಂತರ ಕಲಿಕೆಯಿಂದ ಅವರು ‘ನನಗಿಂತ ಕಿರಿಯರಿಲ್ಲ’ ಎಂದು ಹೇಳುತ್ತಾರೆ. ಇದು ಅವರು ಸಂಸ್ಕಾರವನ್ನು ತೋರಿಸುತ್ತದೆ ಎಂದು ಭಾವಿಸಬಹುದಾದರೂ ಕಾಯಕ ಜೀವಿ ಶರಣರ ಬಾಹ್ಯ ಪ್ರಭಾವ ಅವರ ಮೇಲೆ ಅಪಾರವಾಗಿತ್ತು ಎನ್ನುತ್ತಾರೆ ವಿದ್ವಾಂಸರು.
ಶಿಕ್ಷಣದಿಂದ ಅವರಿಗೆ ಧರ್ಮದ ಬಗ್ಗೆ ಅರಿವಾಯಿತು. “ಅರಿವೆ ಅವರಿಗೆ ಗುರುವಾಯಿತು”. ಶ್ರೇಣೀಕೃತ ಸಮಾಜದ ಕೊಳಕು ಅವರಿಗೆ ಸಮಾಜವಾದದ ಪಾಠ ಕಲಿಸಿತು. ಪೂಜಾರಿಗಳ ಅಟ್ಟಹಾಸವನ್ನು ಮುರಿಯಲು ಅವರು ಧಾರ್ಮಿಕ ನಾಯಕರಾದರು. ದೇವರೇ ಶೋಷಣೆಯ ಮೂಲ, ಪೂಜಾರಿಯೇ ಇದರ ಕೀಲಿ ಕೈ ಎಂದರಿತ ಅವರು ದೇವರನ್ನೇ ದೇವರಗುಡಿಯಿಂದ ಹೊರತಂದು ಭಕ್ತನ ಅಂಗೈಯಲ್ಲಿಯಿಟ್ಟರು.
ಚಾತುರ್ವರ್ಣದ ಕೊಳಕು ಸಿದ್ಧಾಂತದ ಶಿಕ್ಷಣದಿಂದ ವಂಚಿತರಾದ ನಿಮ್ನ ವರ್ಗದವರಿಗೆ ನಿಜ ಶಿಕ್ಷಣ ನೀಡುವಂತೆ ಪ್ರೇರೆಪಿಸಿತು. ಸ್ವತಃ ತನ್ನಕ್ಕನನ್ನೇ ಎರಡನೆಯ ದರ್ಜೆಯ ಪ್ರಜೆಯನ್ನಾಗಿ ಕಂಡಿದ್ದು ಅವರ ಮೇಲೆ ಅಗಾಧ ಪರಿಣಾಮ ಬೀರಿತ್ತು. ಆಗ ಹೆಣ್ಣ- ಗಂಡು ಬೇರೆಯಲ್ಲ ಇವರಿಬ್ಬರ ಆತ್ಮ ಒಂದು ಬಾಹ್ಯ ಮಾತ್ರ ಬೇರೆ ಎಂದರು.
ಸಂಸ್ಕೃತಿಯ ಇನ್ನೊಂದು ಲಕ್ಷಣ ಸಾಂಪ್ರದಾಯ. ಸಾಂಪ್ರದಾಯಕವಾದದ್ದೆಲ್ಲವೂ ಸಂಸ್ಕೃತಿಯಲ್ಲ. ಮೌಢ್ಯದ ಸಂಪ್ರದಾಯವು ಸಂಸ್ಕೃತಿಯಾಗಲಾರದು. ಸಂಪ್ರದಾಯವನ್ನು ವೈಜ್ಞಾನಿಕವಾಗಿ ಪರೀಕ್ಷಿಸಿದರು. ಸತ್ಯಮಿಥ್ಯವನ್ನು ಬೇರ್ಪಡಿಸಿದರು. ಸತ್ಯ ಶುದ್ಧ ಸಂಪ್ರದಾಯ ಅವರಿಗೆ ಮಾದರಿಯಾಗಿತ್ತು. ಗೊಡ್ಡು ಸಂಪ್ರದಾಯಕ್ಕೆ ಅವರು ಸೆಡ್ಡು ಹೊಡೆದು, ವೇದಗಳಿಗೂ ಒರೆಯನ್ನಿಕ್ಕುವೆ ಅಂದರು. ಪ್ರೇಮಿಗಳ ಪೂರ್ವಾಪರ ಗಮನಿಸದೆ ಸತ್ಯಕ್ಕೆ ಪ್ರೇಮಕ್ಕೆ ಜಯವಾಗಲಿ ಎಂದರು.
ಇಂತಹ ಒಬ್ಬ ಸಂಸ್ಕಾರಿಯನ್ನು ಚಾರ್ವಾಕರ ನಂತರ ಭಾರತದ ಇತಿಹಾಸ ಕಂಡಿರಲಿಲ್ಲ. ಬುದ್ಧನಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಅವರು ”ಪರಿಷ್ಕೃತಬುದ್ಧ’ನೆನಿಸಿಕೊಂಡರು .
- ಜಿ.ಬಿ.ಪಾಟೀಲ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಜಾಗತಿಕ ಲಿಂಗಾಯತ ಮಹಾಸಭಾ



