ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸೌಹಾರ್ದತೆಗಾಗಿ ಮತ್ತೊಂದು ಆಯೋಗ ರಚಿಸಿ

2 years ago

1983ರಲ್ಲಿ ಅಂದು ಪ್ರಧಾನಮಂತ್ರಿಯಾಗಿದ್ದ ಶ್ರೀಮತಿ ಇಂದಿರಾಗಾಂಧಿರವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಬಾಂಧವ್ಯಕ್ಕೆ ಮತ್ತಷ್ಟು ಪುಷ್ಟಿಯನ್ನು ನೀಡಲು ಶಿಫಾರಸ್ಸುಗಳನ್ನು ಮಾಡುವ ಸಲುವಾಗಿ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಾಧೀಶರಾಗಿದ್ದ ಜಸ್ಟಿಸ್ ರಾಜೇಂದ್ರ ಪ್ರಸಾದ್ ಸರ್ಕಾರಿಯಾ ಇವರ ನೇತೃತ್ವದಲ್ಲಿ ಆಯೋಗವನ್ನು ರಚಿಸಿದರು.

ರಾಜೇಂದ್ರ ಪ್ರಸಾದ್ ಸರ್ಕಾರಿಯಾ ಆವರು 1600 ಪುಟಗಳುಳ್ಳ ವರದಿಯನ್ನು ನೀಡಿದರು. ಇದರಲ್ಲಿ ಬಹಳಷ್ಟು ಹಂತಗಳು ಇಂದಿಗೂ ಜಾರಿಯಾಗಿಲ್ಲ. ಇಂತಹ ಒಂದು ಆಯೋಗದ ರಚನೆಗೆ ಅಂದು ಸಹ ಪ್ರಮುಖವಾದ ಪಾತ್ರವನ್ನು ವಹಿಸಿದ್ದು, ಅಂದು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಶ್ರೀ ರಾಮಕೃಷ್ಣಹೆಗಡೆರವರು ಕಾರಣಕರ್ತರಲ್ಲಿ ಒಬ್ಬರಾಗಿರುತ್ತಾರೆ.

ಕಳೆದ 40 ವರ್ಷದ ಅವಧಿಯಲ್ಲಿ ಸಂವಿಧಾನಕ್ಕೆ ಅನೇಕ ತಿದ್ದುಪಡಿಗಳು ಆಗಿರುತ್ತದೆ. ಆರ್ಥಿಕವಾಗಿಯೂ ಜಿ.ಎಸ್.ಟಿ. ವ್ಯವಸ್ಥೆ ಬಂದ ಮೇಲೆ ಕೇಂದ್ರ ಮತ್ತು ರಾಜ್ಯಗಳ ನಡುವೆ ಹಂಚಿಕೆಯ ವಿಚಾರದಲ್ಲಿ ಸಂಘರ್ಷಕ್ಕೂ ದಾರಿಯಾಗುತ್ತಿದೆ.

ನೀಟ್ ಪರೀಕ್ಷೆಗಳು ಆರಂಭವಾಗಿರುವುದರಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ರಾಜ್ಯಗಳ ಅಧಿಕಾರವೂ ಮೊಟಕಾಗಿರುತ್ತದೆ. ರಾಜ್ಯಪಾಲರು ಸಹ ಅನೇಕ ಸರ್ಕಾರಗಳ ಮೇಲೆ ಅನಗತ್ಯವಾದಂತಹ ಒತ್ತಡವನ್ನು ಹೇರುವುದು ಮತ್ತು ಆಡಳಿತದಲ್ಲಿ ಹಸ್ತಕ್ಷೇಪ ಮಾಡುವುದು ದಿನದಿಂದ ದಿನಕ್ಕೆ ಹೆಚ್ಚಾಗಿದೆ. ರಾಜ್ಯ ಮತ್ತು ಕೇಂದ್ರಗಳ ಅಧಿಕಾರದ ವಿಷಯಗಳ ವಿಚಾರದಲ್ಲೂ ಸಹ ಗೊಂದಲಗಳಿದೆ.

ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮತ್ತೊಂದು ಆಯೋಗವನ್ನು ರಚಿಸಿ ಇದರಲ್ಲಿ ಕೆಲವು ರಾಜ್ಯಗಳ ಮುಖ್ಯಮಂತ್ರಿಗಳನ್ನು ಸದಸ್ಯರನ್ನಾಗಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಸಂಘರ್ಷಗಳಿಗೆ ದಾರಿಯಿಲ್ಲದೆ ಸೌಹಾರ್ದಯುತವಾದ ವಾತಾವರಣದ ಸೃಷ್ಟಿಗಾಗಿ ಆಯೋಗವನ್ನು ರಚಿಸಬೇಕಾದದ್ದು ಇಂದಿನ ಪರಿಸ್ಥಿತಿಯಲ್ಲಿ ಅವಶ್ಯವೆನಿಸುತ್ತದೆ.

ವಿಶೇಷವಾಗಿ ಜಿ.ಎಸ್.ಟಿ. ಮತ್ತು ಅನುದಾದನ ವಿಚಾರದಲ್ಲಿ ಈಗ ಇರುವ ಮಾನದಂಡಗಳ ಸ್ವರೂಪವೂ ಸಹ ಮರುಚಿಂತನೆಗೆ ಒಳಪಡಬೇಕಾದ ಅಗತ್ಯವಿದೆ.

– ಕೆ.ಎಸ್. ನಾಗರಾಜ್, ಬೆಂಗಳೂರು

Leave a Reply