ದಲಿತರ ಜಮೀನು ಹಕ್ಕು ಪರಭಾರೆ ನಿಷೇಧವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುವುದು: ಸಿದ್ದರಾಮಯ್ಯ

3 years ago

#Ban #Dalit #Land #Encroachment #Effectively #Implemented #Siddaramaiah

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ ಪಕ್ಷ ನೀಡಿದ ಭರವಸೆಯಂತೆ ಪಿ.ಟಿ.ಸಿ.ಎಲ್. ಕಾಯಿದೆಗೆ ತಿದ್ದುಪಡಿ ತರುವ ಮೂಲಕ ದಲಿತರ ಜಮೀನು ಹಕ್ಕು ಪರಭಾರೆ ನಿಷೇಧವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಪಿ.ಟಿ.ಸಿ.ಎಲ್. ಕಾಯ್ದೆ ತಿದ್ದುಪಡಿ ಸಂಬಂಧಿಸಿದಂತೆ ಮಠಾಧೀಶರು, ವಿವಿಧ ಸಂಘಟನೆಗಳ ಪ್ರತಿನಿಧಿಗಳು, ಸಚಿವರು, ಹಿರಿಯ ಅಧಿಕಾರಿಗಳು ಹಾಗೂ ಕಾನೂನು ತಜ್ಞರೊಂದಿಗೆ ಸಭೆ ನಡೆಸಿ ಚರ್ಚಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಲಿತರ ಭೂಮಿ ಹಕ್ಕಿನ ವಿಷಯದಲ್ಲಿ ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ. ಈ ವಿಚಾರದಲ್ಲಿ ನಮ್ಮ ಕಾಳಜಿಗಳ ಜತೆ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು. 

ದಲಿತರ ಜಮೀನು ಹಕ್ಕು ಕಾಪಾಡುವ ನಿಟ್ಟಿನಲ್ಲಿ ಪಿ ಟಿ ಸಿ ಎಲ್ ಕಾಯ್ದೆಗೆ ತಿದ್ದುಪಡಿ ಮಾಡುವ ಕುರಿತ ಸರ್ಕಾರದ ನಿಲುವನ್ನು ಆಯವ್ಯಯದಲ್ಲಿಯೂ ಸ್ಪಷ್ಟ ಪಡಿಸಲಾಗಿದೆ. ಪ್ರಸ್ತುತ ನಡೆಯುತ್ತಿರುವ ವಿಧಾನ ಮಂಡಲ ಅಧಿವೇಶನದಲ್ಲಿಯೇ ಕಾಯ್ದೆ ತಿದ್ದುಪಡಿ ಮಾಡುವ ಉದ್ದೇಶದಿಂದ ಸಮುದಾಯದ ಮುಖಂಡರ ಅಭಿಪ್ರಾಯ ಪಡೆಯಲು ಈ ಸಭೆ ಕರೆಯಲಾಗಿದೆ ಎಂದು ವಿವರಿಸಿದರು.  

ಮತ್ತೆ ಮತ್ತೆ ಯಾವುದೇ ವಿವಾದ ಇರಬಾರದು, ಪಿಟಿಸಿಎಲ್ ಕಾಯ್ದೆಯ ಉದ್ದೇಶ ಪರಿಣಾಮಕಾರಿಯಾಗಿ ಈಡೇರಬೇಕು, ಭೂ ಕಳೆದುಕೊಂಡವರಿಗೆ ನ್ಯಾಯಾಲಯದಲ್ಲಿ ಹಿನ್ನಡೆ ಆಗಬಾರದು ಎನ್ನುವ ಉದ್ದೇಶದಿಂದ ಈ ಬಗ್ಗೆ ದಲಿತ ಮುಖಂಡರ ಮತ್ತು ನ್ಯಾಯವಾದಿಗಳ ಅಭಿಪ್ರಾಯ ಕೇಳಿದ್ದೇನೆ. ಕಾನೂನು ತಜ್ಞರ ಅಭಿಪ್ರಾಯವನ್ನೂ ಪಡೆದುಕೊಳ್ಳುತ್ತೇವೆ ಎಂದರು. 

ನಾವು ಮೊದಲೇ ಕೊಟ್ಟಿದ್ದ ಭರವಸೆಯಂತೆ ಈ ಸರ್ಕಾರದ ಮೊದಲನೆ ಅಧಿವೇಶನದಲ್ಲೇ ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದ್ದೇವೆ ಎಂದು ತಿಳಿಸಿದರು. 

ಸಭೆಯಲ್ಲಿ ಸಚಿವರಾದ ಕೃಷ್ಣಬೈರೇಗೌಡ,  ಹೆಚ್.ಸಿ.ಮಹದೇವಪ್ಪ, ಹೆಚ್.ಕೆ.ಪಾಟೀಲ್, ಡಾ. ಜಿ. ಪರಮೇಶ್ವರ, ಕೆ. ಹೆಚ್. ಮುನಿಯಪ್ಪ, ಸತೀಶ್ ಜಾರಕಿಹೊಳಿ, ಪ್ರಿಯಾಂಕ್ ಖರ್ಗೆ, ಶಿವರಾಜ ತಂಗಡಗಿ, ನಾಗೇಂದ್ರ, ಕೆ.ಎನ್. ರಾಜಣ್ಣ, ಆರ್.ಬಿ.ತಿಮ್ಮಾಪುರ ಹಾಗೂ ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಪಿ. ಮಣಿವಣ್ಣನ್, ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಹಿರಿಯ ಐಪಿಎಸ್ ಅಧಿಕಾರಿ ಅರುಣ್ ಚಕ್ರವರ್ತಿ ಸೇರಿ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು. 

Leave a Reply