ಬರಗಾಲ ಪೀಡಿತ ಪ್ರದೇಶ ಘೋಷಣೆ ಕುರಿತು ಸಚಿವ ಸಂಪುಟ ಉಪಸಮಿತಿ ಸಭೆಯಲ್ಲಿ ತೀರ್ಮಾನ: ಚೆಲುವರಾಯಸ್ವಾಮಿ

3 years ago

#Cabinet #subcommittee #meeting #decision #declaration #drought #areas #Cheluvarayaswamy

ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ವಾಡಿಕೆಗಿಂತ ಮಳೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ಕೆಲ ಪ್ರದೇಶಗಳನ್ನು ಬರಗಾಲ ಪೀಡಿತ ಪ್ರದೇಶ ಘೋಷಣೆ ಮಾಡುವ ಕುರಿತು ಈ ವಾರದಲ್ಲಿ ನಡೆಯಲಿರುವ ಸಚಿವ ಸಂಪುಟ ಉಪಸಮಿತಿ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ತಿಳಿಸಿದ್ದಾರೆ. 

ವಿಧಾನಪರಿಷತ್‍ನಲ್ಲಿ ಸದಸ್ಯೆ ಹೇಮಾಲತಾ ನಾಯಕ್ ಅವರ ಗಮನ ಸೆಳೆಯುವ ಪ್ರಶ್ನೆಗೆ ಉತ್ತರಿಸಿದ ಅವರು, ಕಂದಾಯ ಸಚಿವರ ನೇತೃತ್ವದಲ್ಲಿ ಸಚಿವ ಸಂಪುಟ ಸಭೆಯ ಉಪಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿ ಮುಂದಿನ ವಾರ ಸಭೆ ಸೇರಲಿದೆ ಎಂದರು.

ಈ ಹಿಂದೆಯೇ ಬರಗಾಲ ಘೋಷಣೆ ಮಾಡ ಬೇಕೆಂಬ ಬೇಡಿಕೆಯಿತ್ತು. ಆದರೆ ಜುಲೈ ತಿಂಗಳ 2ನೇ ವಾರ ರಾಜ್ಯದ ಕೆಲವು ಕಡೆ ಉತ್ತಮ ಮಳೆಯಾಗಿದ್ದರಿಂದ ಕಾದು ನೋಡಲಾಗುತ್ತಿದೆ. ಕಲ್ಯಾಣ ಕರ್ನಾಟಕದ ಬಳ್ಳಾರಿ, ರಾಯಚೂರು, ಕೊಪ್ಪಳ, ಬೀದರ್, ಯಾದಗಿರಿ, ಕಲಬುರ್ಗಿ ಸೇರಿದಂತೆ ಮತ್ತಿತರ ಕಡೆ ನಿರೀಕ್ಷೆಯಂತೆ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಮುಂದಿನ ಸಭೆಯೊಳಗೆ ಮಳೆ ಬಾರದಿದ್ದರೆ ಸಚಿವ ಸಂಪುಟ ಸಭೆಯ ಉಪಸಮಿತಿ ನಿರ್ಧಾರ ಕೈಗೊಳ್ಳಲಿದೆ ಎಂದು ತಿಳಿಸಿದರು.

ಅನೇಕ ಕಡೆ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ. ಅಲ್ಲದೆ, ಕಳೆದ ವರ್ಷ ರಾಜ್ಯದ ಅನೇಕ ಕಡೆ ಶೇ.50ರಷ್ಟು ಬಿತ್ತನೆಯಾಗಿತ್ತು. ಈ ಬಾರಿ ಕೆಲವು ಕಡೆ ಮಾತ್ರ ಶೇ.25 ರಿಂದ ಶೇ. 23ರಷ್ಟು ಬಿತ್ತನೆ ಕಾರ್ಯ ಮುಗಿದಿದೆ ಎಂದು ಮಾಹಿತಿ ನೀಡಿದರು.

ರಾಜ್ಯದಲ್ಲಿ ಮುಂಗಾರು 10 ದಿನ ತಡವಾಗಿ ಆರಂಭವಾಗಿದೆ. ಶೇ. 36 ರಷ್ಟು ಮುಂಗಾರು ಕೊರತೆಯಾಗಿದೆ, ಕಳೆದ ಬಾರಿಗಿಂತ ಶೇ.10 ರಷ್ಟು ಕಡಿಮೆ ಬಿತ್ತನೆ ಕಾರ್ಯ ನಡೆದಿದ್ದು, ಕೃಷಿ ಚಟುವಟಿಕೆ ಉತ್ತೇಜನಕ್ಕೆ ಅಗತ್ಯ ಕ್ರಮ ವಹಿಸಲಾಗುತ್ತದೆ ಎಂದು ತಿಳಿಸಿದರು.

Leave a Reply