ಆರೋಗ್ಯಕರ ಆಹಾರ ಉತ್ಪಾದಿಸುವ ನೀರಿನಲ್ಲಿ ರಸಗೊಬ್ಬರ ಹಾಗೂ ಕೀಟನಾಶಕಗಳ ಬಳಕೆ ತಡೆಗಟ್ಟಿ ನೈಸರ್ಗಿಕ ಕೃಷಿ ವಿಧಾನವನ್ನು ಅನುಸರಿಸುವುದರಿಂದ ಕೃಷಿಗೆ ತಗಲುವ ವೆಚ್ಚ ಕಡಿಮೆಯಾಗುವುದಲ್ಲದೆ ಬೆಳೆಗೆ ಅವಶ್ಯವಿರುವ ನೀರಿನ ಪ್ರಮಾಣವನ್ನೂ ಸಹ ಕಡಿಮೆ ಮಾಡಬಹುದಾಗಿದೆ. ಈ ವಿಧಾನದಿಂದ ಕೃಷಿ ಭೂಮಿಯ ಪುನರ್ಜೀವನ, ಆರೋಗ್ಯವಾದ ಆಹಾರ ಉತ್ಪಾದನೆ ಮಾಡಬಹುದು. ಹವಾಮಾನ ವೈಪರೀತ್ಯದಿಂದಾಗುವ ಕೃಷಿಯಲ್ಲಿನ ಅಸ್ಥಿರತೆ ಕಡಿಮೆಯಾಗುತ್ತದೆ.
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
ನೈಸರ್ಗಿಕ ಕೃಷಿ ವಿಧಾನದಡಿ ಬೀಜಾಮೃತ, ಜೀವಾಮೃತ. ಘನಜೀವಾಮೃತ ಹಾಗೂ ಸಪ್ತಧಾನ್ಯ ಕಷಾಯ ಪದ್ದತಿ ಅನುಸರಿಸಬೇಕು. ಬೀಜಾಮೃತ, ಜೀವಾಮೃತ ಹಾಗೂ ಸಪ್ತಧಾನ್ಯ ಕಷಾಯ ತಯಾರಿಕೆಗೆ ಬೇಕಾದ ಸಾಮಗ್ರಿ ಹಾಗೂ ತಯಾರಿಸುವ ವಿಧಾನ ಇಂತಿದೆ.
ಬೀಜಾಮೃತ ತಯಾರಿಕಾ ವಿಧಾನ: ಮಸಲೀನ್ ಹತ್ತಿ ಬಟ್ಟೆಯ ಮೇಲೆ 5 ಕೆ.ಜಿ. ದೇಸಿ ಹಸುವಿನ ಸಗಣಿ ಒಣಗಿಸಬೇಕು. ಒಣಗಿದ ಸಗಣಿಯನ್ನು 20 ಲೀ. ನೀರು ಇರುವ ಬಕೆಟಿನಲ್ಲಿ ಹಾಕಿ ಮಾರನೆಯ ದಿನ ಬೆಳಿಗ್ಗೆ ಬಟ್ಟೆಯೊಂದಿಗಿನ ಸಗಣಿಯನ್ನು 3-4 ಬಾರಿ ನೆನೆಸಿ ಹಿಂಡಬೇಕು. ಈ ಸಗಣಿಯ ದ್ರಾವಣಕ್ಕೆ 5 ಲೀ. ಹಸುವಿನ ಗಂಜಲ ಮತ್ತು 50 ಲೀ. ಸುಣ್ಣ ಮಿಶ್ರಣ ಮಾಡಿ ಬೀಜಾಮೃತ ತಯಾರಿಸಬೇಕು. ಬಿತ್ತನೆ ಬೀಜವನ್ನು ಗೋಣಿ ಚೀಲದ ಮೇಲೆ ಹರಡಿ ತಯಾರಿಸಿದ ಬೀಜಾಮೃತವನ್ನು ಬಿತ್ತನೆ ಬೀಜದ ಮೇಲೆ ಸಿಂಪಡಿಸಿ ಎಲ್ಲಾ ಬೀಜಗಳಿಗೆ ಬೀಜಾಮೃತವು ಮಿಶ್ರಣವಾಗಿರುವುದನ್ನು ಖಾತ್ರಿಪಡಿಸಿಕೊಳ್ಳಬೇಕು.
ಜೀವಾಮೃತ ತಯಾರಿಕಾ ವಿಧಾನ: ಒಂದು ಬ್ಯಾರಲ್ನಲ್ಲಿ 200 ಲೀ. ನೀರನ್ನು ತೆಗೆದುಕೊಂಡು ಅದಕ್ಕೆ 10 ಕೆ.ಜಿ. ದೇಸಿ ಹಸುವಿನ ಸಗಣಿ ಹಾಗೂ 10 ಲೀ. ಹಸುವಿನ ಗಂಜಲವನ್ನು ಸೇರಿಸಬೇಕು. ನಂತರ 2 ಕೆ.ಜಿ. ಸಾವಯುವ ಬೆಲ್ಲ, 2 ಕೆ.ಜಿ. ದ್ವಿದಳಧಾನ್ಯ ಹಿಟ್ಟು ಹಾಗೂ ಒಂದು ಹಿಡಿ ಸ್ಥಳೀಯ ಮಣ್ಣನ್ನು ಸೇರಿಸಬೇಕು. ಈ ದ್ರಾವಣವನ್ನು 3 ದಿನಕ್ಕೊಂದು ಬಾರಿ ಕಲಕಿ ಬ್ಯಾರಲನ್ನು ಗೋಣಿಚೀಲದಿಂದ ಮುಚ್ಚಿ 5 ರಿಂದ 7 ದಿನ ಕಳೆಯಲು ಬಿಡುವುದರಿಂದ ಜೀವಾಮೃತ ದ್ರಾವಣ ತಯಾರಾಗುತ್ತದೆ. ನಂತರ ಈ ದ್ರಾವಣವನ್ನು ಕೃಷಿ ಚಟುವಟಿಕೆಗೆ ಉಪಯೋಗಿಸಬಹುದಾಗಿದೆ.
ಘನ ಜೀವಾಮೃತ ತಯಾರಿಕಾ ವಿಧಾನ: ಘನ ಜೀವಾಮೃತ ತಯಾರಿಕೆಗೆ 100 ಕೆ.ಜಿ ದೇಸಿ ಹಸುವಿನ ಸಗಣಿಯನ್ನು ಭೂಮಿಯ ಮೇಲೆ ಹರಡಿ (ಸಗಣಿಯು ನೆನೆಯುವವರೆಗೆ) 10 ಲೀ. ದೇಸಿ ಹಸುವಿನ ಗಂಜಲವನ್ನು ಸಗಣಿಯ ಮೇಲೆ ಸಿಂಪಡಿಸಬೇಕು. 2 ಕೆಜಿ ಸಾವಯುವ ಬೆಲ್ಲವನ್ನು ಸಗಣಿಯೊಂದಿಗೆ ಮಿಶ್ರಣ ಮಾಡಿ 2 ಕೆಜಿ ದ್ವಿದಳಧಾನ್ಯದ ಹಿಟ್ಟನ್ನು ಸಗಣಿಯ ಮೇಲೆ ಹರಡಿ ನಂತರ ಒಂದು ಹಿಡಿ ಸ್ಥಳೀಯ ಬದುವಿನ ಮಣ್ಣನ್ನು ಹದವಾಗಿ ಕಲಸಿ ತೇವವಾದ ಗೋಣಿಚೀಲದಲ್ಲಿ ಮುಚ್ಚಿ 24 ಗಂಟೆ ನೆರಳಿನಲ್ಲಿಡಬೇಕು. ನಂತರ ದೊಡ್ಡ ಉಂಡೆಗಳನ್ನಾಗಿ ಮಾಡಿ 21 ರಿಂದ 30 ದಿನಗಳ ಕಾಲ ನೆರಳಿನಲ್ಲಿ ಒಣಗಿಸಿ ಪುಡಿ ಮಾಡಿ ಉಪಯೋಗಿಸಬೇಕು.
ಸಪ್ತಧಾನ್ಯ ಕಷಾಯ ತಯಾರಿಕಾ ವಿಧಾನ: ಗೋಧಿ, ಸಾಮೆ, ಹೆಸರು, ಉದ್ದು, ಮಡಕೆ ಕಾಳು, ಅಲಸಂದೆ, ಕಡಲೆ ಧಾನ್ಯಗಳ ತಲಾ 100 ಗ್ರಾಂ. ಪ್ರಮಾಣದಲ್ಲಿ ಬೆರೆಸಿ ನೀರಿನಲ್ಲಿ ನೆನೆಸಿ ಬಟ್ಟೆಯಲ್ಲಿ ಒಂದು ಇಂಚು ಉದ್ದದ ಮೊಳಕೆ ಬರುವವರೆಗೆ ಕಟ್ಟಬೇಕು. ಮೊಳಕೆ ಬಂದ ಕಾಳುಗಳನ್ನು ರುಬ್ಬಿ, ರುಬ್ಬಿದ ಮಿಶ್ರಣವನ್ನು 200 ಲೀ. ನೀರನ್ನು ಸೇರಿಸಿ ಅದರೊಂದಿಗೆ 10 ಲೀ. ದೇಸಿ ಹಸುವಿನ ಗಂಜಲವನ್ನು ಸೇರಿಸಬೇಕು ಹಾಗೂ ಕೋಲಿನ ಸಹಾಯದಿಂದ ಬಲದಿಂದ ಗಂಟೆಗಳ ಕಾಲ ತಿಳಿಯಾಗಲು ಬಿಟ್ಟು ಬಟ್ಟೆಯ ಸಹಾಯದಿಂದ ಸೋಸಿ ಸಪ್ತಧಾನ್ಯ ಕಷಾಯವನ್ನು ತಯಾರಿಸಿ ಹಣ್ಣಿನ ಗಿಡ, ತರಕಾರಿ ಮತ್ತು ಇತರೆ ಬೆಳೆಗಳಿಗೆ ಬೆಳವಣಿಗೆ ವರ್ಧಕಗಳನ್ನಾಗಿ ಬಳಸಬಹುದು. ಇದರಿಂದ ಧಾನ್ಯ, ಹಣ್ಣು ಮತ್ತು ತರಕಾರಿ ಬೆಳೆಗಳ ಬೆಳವಣಿಗೆಗೆ ಉಪಯುಕ್ತವಾಗುವುದರೊಂದಿಗೆ ಹೊಳಪನ್ನು ನೀಡುತ್ತದೆ. ಕೃಷಿ ಭೂಮಿಯಲ್ಲಿ ಆಳವಾಗಿ ಉಳುಮೆ ಮಾಡದೆ ಮಣ್ಣನ್ನು ತಿರುವು ಹಾಕಿ ಮಣ್ಣಿನ ಹೊದಿಕೆ, ಬೆಳೆಗಳ ತ್ಯಾಜ್ಯದ ಹೊದಿಕೆ, ಅಂತರ ಬೆಳೆಗಳಾಗಿ ಮಣ್ಣಿನಲ್ಲಿ ಹರಡುವ ಗಿಡಗಳನ್ನು ಬೆಳೆಯುವ ಮೂಲಕ ಗಿಡಗಳ ನೈಸರ್ಗಿಕ ಕೃಷಿ ಅನುಸರಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ ಮತ್ತು ಸಹಾಯಕ ಕೃಷಿ ನಿರ್ದೇಶಕರ ಕಛೇರಿಯನ್ನು ಸಂಪರ್ಕಿಸಬಹುದು.




