ಬೆಂಗಳೂರು: ಡಾ. ರಾಜ್ಕುಮಾರ್ ಎಂದಾಕ್ಷಣ ಸ್ಪಷ್ಟ-ಸುಂದರವಾಗಿ ಕನ್ನಡ ಮಾತನಾಡುವ, ಈ ನಾಡು-ನುಡಿಯ ಬಗ್ಗೆ ಅಪಾರ ಕಾಳಜಿ ಹೊಂದಿರುವ ಮೂರ್ತ ರೂಪವೊಂದು ನಮ್ಮ ಕಣ್ಣಮುಂದೆ ಬರುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ಹೇಳಿದರು.
ಮಲ್ಲೇಶ್ವರದ ಗೋಕಾಕ್ ಚಳುವಳಿ ವೃತ್ತದ ಉದ್ಯಾನವನದಲ್ಲಿ ಡಾ.ರಾಜ್ ಕುಮಾರ್ ಜಯಂತ್ಯೋತ್ಸವದಲ್ಲಿ ಮಾತಾಡಿದ ಅವರು, ಅಣ್ಣಾವ್ರ ಸಾರಥ್ಯದಲ್ಲಿ 1982ರಲ್ಲಿ ನಡೆದ ಗೋಕಾಕ್ ಚಳವಳಿಯ ಸ್ಮರಣಾರ್ಥ ಈ ವೃತ್ತಕ್ಕೆ ‘ಗೋಕಾಕ್ ಚಳವಳಿ ವೃತ್ತ’ ಎಂದು ನಾಮಕರಣ ಮಾಡುವ ಜತೆ ಅವರ ಪುತ್ಥಳಿಯನ್ನೂ ಸ್ಥಾಪಿಸಲಾಗಿದೆ ಎಂದರು.
ಈ ಸ್ಥಳದಲ್ಲಿ ನಾಡಿನ ವೈಭವನ್ನು ಪ್ರತಿಬಿಂಬಿಸುವ ಗ್ಯಾಲರಿ ಸಹಿತ ಇನ್ನೂ ಹೆಚ್ಚಿನ ರೀತಿಯಲ್ಲಿ ಈ ಉದ್ಯಾನವನವನ್ನು ಅಭಿವೃದ್ದಿಪಡಿಸಲಾಗುವುದು. ಎಲ್ಲಾ ಸಂದರ್ಭದಲ್ಲೂ ನಾಡಿನ ಜನತೆಯ ಜತೆಗಿದ್ದು ಶಕ್ತಿ ತುಂಬುವ ಕೆಲಸ ಮಾಡಿದ ಈ ದೇವಮಾನವನನ್ನು ಗೌರವಿಸಿದಷ್ಟೂ ನಮ್ಮ ಗೌರವ ಹೆಚ್ಚುತ್ತದೆಂಬುದು ನನ್ನ ನಂಬಿಕೆ ಎಂದರು.
ವಿಶ್ವವೇ ಕನ್ನಡಿಗರತ್ತ ತಿರುಗಿ ನೋಡುವಂತೆ ಮಾಡುವುದೇ ನಾವು ಸಲ್ಲಿಸುವ ನಿಜವಾದ ಗೌರವ. ಈ ದಿಶೆಯಲ್ಲಿ ಶಿಕ್ಷಣ-ತಂತ್ರಜ್ಞಾನದಲ್ಲಿ ದೇಶಕ್ಕೇ ಮಾದರಿಯಾಗುವಂತೆ ಮಾಡಲಾಗುತ್ತಿದೆ. ಭಾಷಾ ಹಿಡಿತ ಇದ್ದವರು ಸಾಧನೆ ಮಾಡಲು ಸಾಧ್ಯ ಎನ್ನಲು ಅಣ್ಣಾವ್ರು ನಮಗೆ ಸದಾ ಪ್ರೇರಣೆಯಾಗುತ್ತಾರೆ ಎಂದರು.
ವಿಜ್ಞಾನ, ತಂತ್ರಜ್ಞಾನ, ಚಲನಚಿತ್ರ ರಂಗ ಸಹಿತ ಎಲ್ಲಾ ರಂಗದಲ್ಲೂ ಕನ್ನಡಿಗರಿಂದು ಸಾಧನೆ ಮಾಡುತ್ತಿದ್ದಾರೆ. ಶಿಕ್ಷಣದ ಜತೆ ಕಲಿಕೇತರ ಚಟುವಟಿಗಳಿಗೂ ಆದ್ಯತೆ ನೀಡಿ ನಮ್ಮ ಮಕ್ಕಳನ್ನು ಪರಿಪೂರ್ಣರಾಗಿಸೋಣ ಎಂದು ಕರೆ ನೀಡಿದರು.




