ಸದ್ಯಕ್ಕಿಲ್ಲ ರಾಜ್ಯ ಕಾಂಗ್ರೆಸ್ ಸರ್ಕಾರದ ಸಂಪುಟದ ಪುನಾರಚನೆ

1 year ago

ದೆಹಲಿ: ಸದ್ಯದ ಪರಿಸ್ಥಿತಿಯಲ್ಲಿ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಬೇಡ ಎಂದು ಹೇಳಿದ ಹೈಕಮಾಂಡ್ ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನ ಮಂಡಲದ ಚಳಿಗಾಲದ ಅಧಿವೇಶನ ಮುಗಿದ ನಂತರ ಈ ಬಗ್ಗೆ ಚರ್ಚೆ ಮಾಡಬಹುದಾಗಿದೆ ಎಂದು ಹೇಳಿದೆ ಎಂದು ಪಕ್ಷದ ಉನ್ನತ ಮೂಲಗಳಿಂದ ತಿಳಿದುಬಂದಿದೆ. 

ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ ಸೇರಿದಂತೆ ಕೆಲವು ಮಂತ್ರಿಗಳ ಖಾತೆ ಬದಲಾವಣೆ ಕುರಿತು ಸಿಎಂ ಸಿದ್ದರಾಮಯ್ಯ ಮಾಡಿದ ಮನವಿಯನ್ನು ತಿರಸ್ಕರಿಸಿದ ನಾಯಕರು, ಒಂದುವೇಳೆ ಖಾತೆ ಬದಲಾವಣೆ ಮಾಡಿದರೆ ಮುಂಬರುವ ಅದಿವೇಶನದಲ್ಲಿ ಪ್ರತಿಪಕ್ಷಗಳ ಬಾಯಿಗೆ ಆಹಾರವಾಗುತ್ತೀರಿ. ತಪ್ಪು ಮಾಡಿದ ಕಾರಣಕ್ಕಾಗಿ ತಿಮ್ಮಾಪುರ ಅವರ ಖಾತೆ ಬದಲಾವಣೆ ಮಾಡಲಾಗಿದೆ ಎಂದು ಆರೋಪಿಸಿದರೆ ಯಾವ ಸ್ಪಷ್ಟನೆ ನೀಡುತ್ತೀರಿ ಎಂದು ಕೇಳಿದರು ಎನ್ನಲಾಗಿದೆ. 

ಇದಕ್ಕೆ ಉತ್ತರಿಸಿದ ಸಿದ್ದರಾಮಯ್ಯ, ಉಪ ಚುನಾವಣೆಗೂ ಮುನ್ನ ತಾವು ನಾಗೇಂದ್ರ ಅವರಿಗೆ ಮಂತ್ರಿಮಂಡಲ ಸೇರ್ಪಡೆ ಮಾಡಿಕೊಳ್ಳುವ ಭರವಸೆ ನೀಡಿದ್ದೇನೆ. ಹೀಗಾಗಿ ಅದಕ್ಕೆ ಅವಕಾಶ ನೀಡಬೇಕು ಎಂದು ಕೇಳಿದರು ಎನ್ನಲಾಗಿದೆ. ಇದಕ್ಕೆ ಹೈಕಮಾಂಡ್ ಒಪ್ಪಿಗೆ ಸೂಚಿಸಿದ್ದು, ಕೇವಲ ನಾಗೇಂದ್ರ ಅವರನ್ನು ಮಾತ್ರ ಮಂತ್ರಿ ಮಂಡಲಕ್ಕೆ ಸೇರ್ಪಡೆ ಮಾಡಿಕೊಂಡು ಈ ಹಿಂದೆ ಅವರು ನಿರ್ವಹಿಸುತ್ತಿದ್ದ ಖಾತೆಗಳನ್ನು ಅವರಿಗೆ ನೀಡಬೇಕು. ಉಳಿದಂತೆ ಯಾವುದೇ ಮಂತ್ರಿಯ ಖಾತೆ ಬದಲಾಯಿಸಬಾರದು ಎಂದು ಸಲಹೆ ಮಾಡಿದೆ ಎಂದು ಮೂಲಗಳು ತಿಳಿಸಿವೆ.

ಹೈಕಮಾಂಡ್ ಮಾಡಿದ ಸಲಹೆಗೆ ಸಮ್ಮತಿ ವ್ಯಕ್ತಪಡಿಸಿರುವ ಸಿದ್ದರಾಮಯ್ಯ, ಇದೀಗ ತಮ್ಮ ಸಂಪುಟಕ್ಕೆ ಮಾಜಿ ಸಚಿವ ನಾಗೇಂದ್ರ ಅವರನ್ನು ಮರು ಸೇರ್ಪಡೆ ಮಾಡಿಕೊಳ್ಳಲು ತೀರ್ಮಾನಿಸಿದ್ದು ಬಹುತೇಕ ಸೋಮವಾರ ಸಂಪುಟ ವಿಸ್ತರಣೆ ಕಾರ್ಯ ನಡೆಯಲಿದೆ ಎಂದು ತಿಳಿದುಬಂದಿದೆ.

Leave a Reply