ಕರ್ನಾಟಕದ ಮಟ್ಟಿಗೆ ಕಾಂಗ್ರೆಸ್ ಪರವಾಗಿ ನಿಲ್ಲುವುದು ಈ ಕಾಲದ ಕರೆ

3 years ago

#Karnataka #concerned #standing #Congress #call #time #dineshaminmattu

( ನನ್ನ ಈ ಬರಹವನ್ನು ಓದುವ ಮೊದಲು ಅಶೋಕ ಶೆಟ್ಟರ್ ಅವರ ಗೋಡೆ ಮೇಲಿನ ಬರಹವನ್ನು ಓದಿ. ಆ ಬರಹಕ್ಕೆ ಇದು ಪ್ರತಿಕ್ರಿಯೆ. ನೆನಪಿರಲಿ: ಅಶೋಕ್ ಶೆಟ್ಟರ್ ನನ್ನ ಹಿರಿಯ ಗೆಳೆಯರು)

‘ಒಂದು’ ಏಕತ್ರಿತ ಕಾರ್ಯಕ್ರಮ, ಸಿದ್ದಾಂತ, ಪಕ್ಷ, ಸಂಘಟನೆ ಎಂಬ ಆಶಯ ಇದೆಯಲ್ಲಾ, ಇದು‌ ‘ ಒಂದು ದೇಶ, ಒಂದು ಧರ್ಮ, ಒಂದು ಭಾಷೆ, ಒಂದು ಪಕ್ಷ” ದ ರೀತಿ ಕೇಳಿಸುತ್ತದೆ.

ಇನ್ನು ಗಾಂಧೀಜಿ, ಅಂಬೇಡ್ಕರ್, ಲೋಹಿಯಾ, ಮಾರ್ಕ್ಸ್ ಚಿಂತನೆಗಳಲ್ಲಿರುವ ಭಿನ್ನತೆಗಳು ವಿರೋಧಾಭಾಸಗಳಲ್ಲ, ಅದು ಒಂದೇ ಗುರಿಯೆಡೆಗೆ ಸಾಗುವ ಭಿನ್ನ ಭಿನ್ನ ದಾರಿಗಳು. ಈ ಎಲ್ಲ ಮಹನೀಯರ ದಾರಿಯಲ್ಲಿ ವಿರೋಧಾಭಾಸಗಳಿರಬಹುದು, ಗುರಿಗಳಲ್ಲಿ ವಿರೋಧಾಭಾಸಗಳಿವೆಯೇ?

ಇನ್ನು ಪ್ರಗತಿಪರತೆಯ ಮಾನದಂಡ ಏನು? ನಾವು ಪ್ರಗತಿಪರರೆಂದು ಕರೆಯುವವರಲ್ಲಿ ಬಹುಸಂಖ್ಯಾತರು ನಾಸ್ತಿಕರಲ್ಲ, ಹಾಗೆಂದು ಅವರ ಮೇಲೆ ಆರೋಪ ಮಾಡಲಾಗುತ್ತಿದೆ. ಬಿಜೆಪಿ-ಆರ್ ಎಸ್ ಎಸ್ ವಿರೋಧಿಸುವವರನ್ನು ಕಮ್ಯುನಿಸ್ಟ್ ಎಂದು ಹೇಳುತ್ತಾರಲ್ಲಾ ಹಾಗೆ.

ನಮ್ಮಲ್ಲಿನ ಪ್ರಗತಿಪರರು ಊರ ಚಿಂತೆಯಲ್ಲಿ‌ ಮುಲ್ಲಾ ಸೊರಗಿದ ಎಂಬಂತೆ ಕಾಂಗ್ರೆಸ್ ಮತ್ತಿತರ ಸೆಂಟ್ರಿಸ್ಟ್ ಪಕ್ಷಗಳ ಬಗ್ಗೆ ಬಹಳ ಚಿಂತಿಸಿ ನೊಂದು‌ ಬೆಂದಿಲ್ಲ.

ಕರ್ನಾಟಕದ ಮಟ್ಟಿಗೆ ಕಾಂಗ್ರೆಸ್ ಪರವಾಗಿ ನಿಲ್ಲುವುದು ಈ ಕಾಲದ ಕರೆ. ೧೯೭೫-೭೭ ರ ಕಾಲದಲ್ಲಿ ಕಾಂಗ್ರೆಸ್ ಪಕ್ಷವನ್ನು ವಿರೋಧಿಸುತ್ತಿದ್ದ ಜನಸಂಘವನ್ನೂ ಒಳಗೊಂಡ ಜನತಾ ಪಕ್ಷದ ಬೆಂಬಲಕ್ಕೆ ಪ್ರಗತಿಪರರು ನಿಂತದ್ದು ಹೇಗೆ ಆ ಕಾಲದ ಕರೆಯೋ ಹಾಗೆ ಈ ಕಾಲದಲ್ಲಿ ಕಾಂಗ್ರೆಸ್ ಪರವಾಗಿ ನಿಲ್ಲುವುದು ಕೂಡಾ ಈ ಕಾಲದ ಕರೆ‌.

ಇನ್ನು ಕಾಲೆಳೆಯುವುದು, ಗುಂಪುಗಾರಿಕೆ, ಕೂದಲು ಸೀಳುವುದರಲ್ಲಿ ಪ್ರಗತಿಪರರು ನಿಸ್ಸೀಮರು ಎನ್ನುವ ಅಭಿಪ್ರಾಯದಲ್ಲಿಯೇ ಈ ಗುಣಗಳಿವೆ.

ಒಂದು ಸಮಾನ ವೇದಿಕೆಯಡಿ ಸೇರುವುದು ಪ್ರಗತಿಪರರು ಸೇರುವುದು ಸಾಧ್ಯ ಇಲ್ಲ ಎನ್ನುವುದು ನಿಜ, ಹಾಗೆ ಸೇರುವ ಅಗತ್ಯ ಇಲ್ಲ ಎನ್ನುವುದೂ ಅಷ್ಟೇ ನಿಜ.

ಮುಂದಿನದ್ದು ಒಂದು ಇಲ್ಲವೇ ಎರಡು ಪಕ್ಷಗಳ ಕಾಲ ಅಲ್ಲ, ಮುಂದಿನದ್ದು ಮೈತ್ರಿ ಕಾಲ. ಈ ಏಕಪಕ್ಷ, ದ್ವಿಪಕ್ಷ ಎಲ್ಲವೂ ಸರ್ವಾಧಿಕಾರದ ಕಡೆಗಿನ ಹೆಜ್ಜೆಗಳು.

ಒಟ್ಟಿನಲ್ಲಿ ಒಂದೇ ಗುರಿ ಮತ್ತು ದಾರಿಯನ್ನು ಇಟ್ಟುಕೊಳ್ಳುವುದು ಕಷ್ಟ. ದಾರಿ ಭಿನ್ನವಾಗಿದ್ದರೂ ಗುರಿ ಸರಿಯಾಗಿರಬೇಕು ಎಂಬಷ್ಟರ ಮಟ್ಟಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕು.

ರವಿ ಬೆಳಗೆರೆ ಅಂತಹವರನ್ನು ಸ್ನೇಹಿತರು ಎಂದು ಸಹಿಸಿಕೊಳ್ಳಲು ಸಾಧ್ಯವಾದ ಹಾಗೆ ಪ್ರಗತಿಪರರಲ್ಲಿನ ಭಿನ್ನಮತೀಯರನ್ನೂ ನಾವು ಸಹಿಸಿಕೊಳ್ಳಲು ಸಾಧ್ಯವಾಗಬೇಕು.

– ದಿನೇಶ್ ಅಮೀನ್ ಮಟ್ಟು, ಹಿರಿಯ ಪತ್ರಕರ್ತರು

Leave a Reply