ಚುನಾವಣೆಗಳು ಸಮೀಪಿಸುತ್ತಿದ್ದಂತೆ ಚಲನಚಿತ್ರ ನಟರು, ಕ್ರೀಡಾಪಟುಗಳು ಮತ್ತು ಸಾಹಿತಿಗಳು ಬರಹಗಾರರು ಹೀಗೆ ಅನೇಕರು ತಮ್ಮ ಮನಸ್ಸಿಗೆ ಒಪ್ಪುವ ರಾಜಕೀಯ ಪಕ್ಷಗಳ ಸೇರ್ಪಡೆಯಾಗುತ್ತಾ ಇಲ್ಲವೇ ಪಕ್ಷದ ಪ್ರಚಾರಕರಾಗಿ ಬೆಂಬಲವನ್ನು ಘೋಷಿಸುತ್ತಿರುವ ಸಂದರ್ಭದಲ್ಲಿ ಚಲನಚಿತ್ರ ನಟರುಗಳ ಪ್ರಭಾವ ರಾಜ್ಯದ ಜನರ ಮೇಲೆ ಯಾವ ಪ್ರಮಾಣದಲ್ಲಿ ಬೀರುತ್ತದೆ ಎನ್ನುವ ಚರ್ಚೆಯಾಗುತ್ತಿದೆ. ಕೆಲವು ವಾಹಿನಿಗಳ ಚರ್ಚೆಯ ಮಾತುಗಳು ಕೇವಲ ಅತಿರೇಕದಿಂದ ಕೂಡಿದೆ.
ರಾಜ್ಯದಲ್ಲಿ ಕಳೆದ ಎಪ್ಪತ್ತೈದು ವರ್ಷದಲ್ಲಿ ಅನೇಕ ಚಲನಚಿತ್ರ ರಂಗದ ನಟರು, ಸಾಹಿತಿಗಳು, ಕಲಾವಿದರು ಹೀಗೆ ಅನೇಕ ವರ್ಗಗಳಲ್ಲಿ ತಮ್ಮ ಸಾಧನೆಗಳ ಮೂಲಕ ಹೆಸರು ಗಳಿಸಿದವರು ರಾಜಕೀಯ ರಂಗಕ್ಕೆ ಬಂದಿದ್ದಾರೆ. ಕೇವಲ ಒಂದು ಪ್ರತಿನಿಧಿಯಾಗಿದ್ದಾರೆ. ಕೆಲವೇ ಕೆಲವು ಮಂದಿ ಮಂತ್ರಿಗಳಾಗಿದ್ದಾರೆ. ಇದನ್ನು ಹೊರತುಪಡಿಸಿದರೆ ಇವರುಗಳ ಪ್ರಭಾವ ಚುನಾವಣೆಗಳ ಮೇಲೂ ಬೀರಿಲ್ಲ ಅಥವಾ ಜನರ ಮನಸ್ಸನ್ನು ಗೆಲ್ಲುವಲ್ಲೂ ಸಾಧ್ಯವಾಗಿಲ್ಲ.
ಚಲನಚಿತ್ರ ರಂಗದಲ್ಲಿ ಮಹಿಳಾ ವರ್ಗದವರ ಅತ್ಯಂತ ಪ್ರೀತಿಪಾತ್ರರಾದ ಅನಂತ್ನಾಗ್ರವರು ರಾಮಕೃಷ್ಣ ಹೆಗಡೆರವರ ಮತ್ತು ಜೆ.ಹೆಚ್. ಪಟೇಲ್ರವರ ಜೊತೆಯಲ್ಲಿ ಗುರುತಿಸಿಕೊಂಡು ಒಂದು ಬಾರಿ ಶಾಸಕರಾದರು. ಒಂದು ಬಾರಿ ವಿಧಾನಪರಿಷತ್ತಿನ ಸದಸ್ಯರಾದರು. ಪಟೇಲರ ಸಂಪುಟದಲ್ಲಿ ರಾಜ್ಯದ ಸಚಿವರು ಆಗಿದ್ದರು. ಆದರೆ ಅನಂತ್ ನಾಗ್ ರವರು ಸಂಯುಕ್ತ ಜನತಾದಳದಿಂದ ಬಸವನಗುಡಿಯಲ್ಲಿ ಸ್ಪರ್ಧಿಸಿದ ಸಂದರ್ಭದಲ್ಲಿ ಗಂಭೀರವಾದ ಪರಿಣಾಮವನ್ನು ಚುನಾವಣೆಯ ಫಲಿತಾಂಶದ ಮೇಲೆ ಬೀರಲು ಸಾಧ್ಯವಾಗಲಿಲ್ಲ. ನಾಡಿನ ಹೆಸರಂತ ಖಳನಾಯಕರಾಗಿದ್ದ ವಜ್ರಮುನಿಯವರು ಶಾಸಕರಾಗುವ ಆಸೆಯಿಂದ ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಭವಗೊಂಡಿರುತ್ತಾರೆ.
ರಾಜೇಶ್ರವರು ಚಿಕ್ಕಪೇಟೆಯಲ್ಲಿ ಸ್ಪರ್ಧಿಸಿ ಪ್ರಭಾವವನ್ನು ಬೀರಲಿಲ್ಲ. ಸುಂದರ್ರಾಜ್ರವರು ಕೆ.ಸಿ.ಪಿ.ಯಿಂದ ನಿಂತು ಕೆಲವೇ ಕೆಲವು ಸಾವಿರ ಮತಗಳಿಗೆ ಸೀಮಿತರಾದರು. ನಟ ದ್ವಾರಕೀಶ್ ರವರು ಚುನಾವಣೆಯಲ್ಲಿ ನಿಂತು ಸೋಲ್ಲನ್ನುಂಡಿರುತ್ತಾರೆ, ನಟ ಜಗ್ಗೇಶ್ರವರು ಶಾಸಕರಾಗಿ ನಂತರ ರಾಜ್ಯಸಭಾ ಸದಸ್ಯರಾಗಿ ತಮ್ಮ ಸ್ಥಾನವನ್ನು ಗಟ್ಟಿ ಮಾಡಿಕೊಂಡಿದ್ದಾರೆ, ನಟ ಶಶಿಕುಮಾರ್ರವರು ಒಂದು ಬಾರಿ ಲೋಕಸಭಾ ಸದಸ್ಯರಾಗಿ ನಂತರ ಚುನಾವಣೆಗಳಲ್ಲಿ ಸೋಲ್ಲನ್ನೇ ಕಂಡಿದ್ದಾರೆ.
ನಟಿ ಉಮಾಶ್ರೀರವರು ಒಂದು ಬಾರಿ ಶಾಸಕರಾಗಿ, ಮಂತ್ರಿಯಾಗಿರುತ್ತಾರೆ. ಮತ್ತೊಬ್ಬ ನಟಿ ಜಯಮಾಲರವರು ವಿಧಾನಪರಿಷತ್ತಿನ ಸದಸ್ಯರಾಗಿ ಮತ್ತಿಯಾಗಿದ್ದರು. ಮುಖ್ಯಮಂತ್ರಿ ಚಂದ್ರುರವರು ಒಂದು ಬಾರಿ ಶಾಸಕರಾಗಿ, ಎರಡು ಬಾರಿ ಪರಿಷತ್ತಿನ ಸದಸ್ಯರಾಗಿ ಆಯ್ಕೆಯಾಗಿದ್ದರು. ಇನ್ನು ಶ್ರೀನಾಥ್ರವರು ವಿಧಾನಪರಿಷತ್ತಿಗೆ ನಾಮನಿರ್ದೇಶಕ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ನಟಿ ಶೃತಿರವರು ಬಿ.ಜೆ.ಪಿ.ಯ ಪರ ಪ್ರಚಾರವನ್ನು ಮಾಡುತ್ತಿದ್ದಾರೆ. ಆದರೆ ಚುನಾವಣೆಯಲ್ಲಿ ನಿಲ್ಲುವ ಅವಕಾಶ ದೊರತಿರುವುದಿಲ್ಲ. ನಟಿ ಆರತಿರವರು ಸಹ ವಿಧಾನಪರಿಷತ್ತಿನ ಸದಸ್ಯರಾಗಿದ್ದರು. ಹೆಸರಾಂತ ನಟಿ ಜಯಂತಿರವರು ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಿ ಸೋಲ್ಲನ್ನುಂಡಿದ್ದಾರೆ. ತಾರರವರು ಸಹ ಬಿ.ಜೆ.ಪಿ.ಯ ಪ್ರಚಾರಕರಾಗಿ ದುಡಿಯುತ್ತಿದ್ದಾರೆ. ವಿಧಾನಪರಿಷತ್ತಿನ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಇವರುಗಳು ಯಾರು ಸಹ ಕರ್ನಾಟಕ ಜನತೆಯ ಮನಸ್ಸಿನ ಮೇಲೆ ಗಂಭೀರವಾದ ಪರಿಣಾಮವನ್ನು ಬೀರಲು ಸಾಧ್ಯವಾಗಿಲ್ಲ. ಇವರುಗಳಿಂದ ಚುನಾವಣೆಯ ಫಲಿತಾಂಶಗಳೇನೂ ಏರುಪೇರು ಆಗಿಲ್ಲ. ಇವರು ಪ್ರಚಾರ ಮಾಡುವ ಪಕ್ಷಗಳು ಅಧಿಕಾರಕ್ಕೆ ಎಷ್ಟೋ ಬಾರಿ ಬಂದಿವೆ ಮತ್ತೆ ಅಧಿಕಾರವನ್ನು ಕಳೆದುಕೊಂಡಿದೆ. ಇವರುಗಳು
ಬಂದಾಗ ಜನ ಸೇರುತ್ತಾರೆ, ಆದರೆ ಇವರ ಮಾತುಗಳು ಮತಗಳಾಗಿ ಪರಿವರ್ತನೆಯಾಗುವುದು ಕಷ್ಟಕರವಾದ ವಿಚಾರ.
ನಟ ಅಂಬರೀಶ್ರವರು ರಾಮನಗರದಲ್ಲಿ ಒಂದು ಬಾರಿ ಚುನಾವಣೆಯಲ್ಲಿ ಸೋತಿರುತ್ತಾರೆ. ಮಂಡ್ಯದಲ್ಲಿ ಲೋಕಸಭಾ ಸದಸ್ಯರಾಗಿ, ಶಾಸಕರಾಗಿ, ಮಂತ್ರಿಯೂ ಆಗಿದ್ದರು. ಇವರು ರಾಜಕಾರಣದಲ್ಲಿ ಹೆಚ್ಚಿನ ಗಮನವನ್ನು ನೀಡಿ ಶ್ರಮವನ್ನು ಹಾಕಿದ್ದರೆ ತಮ್ಮದೇ ಆದ ನಾಯಕತ್ವವನ್ನು ರಾಜ್ಯಕ್ಕೆ ಕೊಡುವಂತಹ ಸಾಧ್ಯತೆ ಇತ್ತು. ಇವರ ಅನುಕಂಪದ ಅಲೆಯಲ್ಲಿ ಇವರ ಧರ್ಮಪತ್ನಿ ಸುಮಲತಾರವರು ಸಹ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲ್ಲು ಸಾಧ್ಯವಾಯಿತು.
ಕರ್ನಾಟಕದಲ್ಲಿ 1980-82ರ ಅವಧಿಯಲ್ಲಿ ರೈತ ಚಳುವಳಿ, ದಲಿತ ಚಳುವಳಿ ಮತ್ತು ಕನ್ನಡ ಭಾಷೆಯ ವಿಚಾರದ ಗೋಕಾಕ್ ಚಳುವಳಿ ನಡೆಯಿತು. ಗೋಕಾಕ್ ಚಳುವಳಿಯ ನೇತೃತ್ವ ಡಾ.ರಾಜ್ರವರು ವಹಿಸಿದ್ದರು. ಇವರು ನೇತೃತ್ವ ವಹಿಸಿದ ಕಾರಣದಿಂದ ಚಳುವಳಿ ಗಂಭೀರವಾದ ಪರಿಣಾಮವನ್ನು ಸರ್ಕಾರದ ಮೇಲೆ ಬೀರಲು ಸಾಧ್ಯವಾಯಿತು. ಲಕ್ಷಾಂತರ ಸಂಖ್ಯೆಯಲ್ಲಿ ಚಳುವಳಿಗೆ ಧುಮುಕಿದರು. ಡಾ.ರಾಜ್ ಕುಮಾರ್ರವರ ಹೆಸರು 1983ರ ಅವಧಿಯಲ್ಲಿ ರಾಜಕಾರಣದಲ್ಲಿ ಕೇಳಿ ಬಂದಿತು. ಡಾ.ರಾಜ್ ಕುಮಾರ್ರವರು ಅಂದು ರಾಜಕೀಯಕ್ಕೆ ಬಂದಿದ್ದರೆ ರಾಜಕೀಯದ ಚಿತ್ರವೇ ಬೇರೆಯಾಗುತ್ತಿತ್ತು. ಡಾ.ರಾಜ್ಕುಮಾರ್ರವರ ಮಾತನ್ನು ಜನ ಗಂಭೀರವಾಗಿ ಸ್ವೀಕರಿಸುತ್ತಿದ್ದರು ಮತ್ತು ಅವರ ಅಭಿಪ್ರಾಯಗಳು ಜನರ ಮನಸ್ಸಿಗೆ ಮುಟ್ಟುತ್ತಿತ್ತು. ಇದಕ್ಕೆ ಕಾರಣ ಡಾ.ರಾಜ್ಕುಮಾರ್ರವರಿಗಿದ್ದ ವ್ಯಕ್ತಿತ್ವ.
ರಾಜ್ಯದಲ್ಲಿ ಪ್ರವಾಹ ಬಂದಾಗ ಅಥವಾ ಬರಗಾಲ ಬಂದಾಗ ರಾಜ್ಕುಮಾರ್ರವರು ನಿಧಿಯನ್ನು ಸಂಗ್ರಹಿಸಿಕೊಟು ಸಂಕಷ್ಟಕ್ಕೆ ನೆರವಾಗಿದ್ದರು. ತಮ್ಮ ಗಾಯನದ ಮೂಲಕ ಹಲವಾರು ಸಂಸ್ಥೆಗಳಿಗೆ ನೆರವನ್ನು ಒದಗಿಸಿಕೊಟ್ಟಿದ್ದಾರೆ. ಅವರ ನಡವಳಿಕೆ ಮಾರ್ಗದರ್ಶಕವಾಗಿತ್ತು. ಅವರ ಮಾತು, ಅವರ ವಿಚಾರ ಜನರ ಮನಸ್ಸಿನ ಮೇಲೆ ಪ್ರಭಾವವನ್ನು ಬೀರಿತ್ತು. ಸಮಾಜದ ಎಲ್ಲಾ ವರ್ಗದ ಜನ, ಎಲ್ಲಾ ವಯೋಮಾನದ ಜನ ಅವರನ್ನು ಗೌರವ ಮತ್ತು ಪ್ರೀತಿಯಿಂದ ಕಾಣುತ್ತಿದ್ದರು. ಹೀಗಾಗಿ ಜನರ ಮನಸ್ಸಿನ ಮೇಲೆ ಪರಿಣಾಮವನ್ನು ಬೀರಿ ಚುನಾವಣೆಯ ಫಲಿತಾಂಶದ ದಿಕ್ಕನ್ನು ಬದಲಾಯಿಸಬಲ್ಲಂತಹ ಶಕ್ತಿ ಯಾರಿಗಾದರೂ ಇದ್ದಿದ್ದರೇ ಅದು ಡಾ.ರಾಜ್ಕುಮಾರ್ ಅವರಿಗೆ ಮಾತ್ರ. ಅವರನ್ನು ಹೊರತು ಪಡಿಸಿ ಬೇರೆ ಯಾವ ನಟರೂ ಸಹ ಸಮಸ್ತ ಕನ್ನಡಿಗರ ಎಲ್ಲಾ ವಯೋಮಾನದವರ ಹೃದಯಲ್ಲಿ ಸ್ಥಾನವನ್ನು ಪಡೆಯಲು ಸಾಧ್ಯವಾಗಿರುವುದಿಲ್ಲ. ಆದುದರಿಂದ ಇತ್ತೀಚಿನ ದಿನಗಳಲ್ಲಿ ಯಾವ ನಟ, ನಟಿಯರು, ಯಾವುದೇ ಪಕ್ಷವನ್ನು ಬೆಂಬಲಿಸಿದರು ಅದರ ಪರಿಣಾಮಗಳು ಸಿಮೀತವಾಗಿರುತ್ತದೆ.
- ಕೆ.ಎಸ್. ನಾಗರಾಜ್, ಬೆಂಗಳೂರು




