ಕಳೆದ ಒಂದು ದಶಕದಿಂದ ವಿಪಕ್ಷಗಳನ್ನು ಒಗ್ಗೂಡಿಸುವ ಹಲವು ಪ್ರಯತ್ನಗಳು ನಡೆದಿದ್ದವು. ಈ ಯತ್ನ ನಡೆಸಿದ ಕೆಲವರ ಪೈಕಿ ಕಪಿಲ್ ಸಿಬಲ್ ರಾಜ್ಯಸಭೆ ಸದಸ್ಯರನ್ನಾಗಿಸಲಿಲ್ಲ ಎಂಬ ಕಾರಣಕ್ಕೆ ಕಾಂಗ್ರೆಸ್ ತೊರೆದು ಸಮಾಜವಾದಿ ಪಕ್ಷದಿಂದ ರಾಜ್ಯಸಭೆ ಸದಸ್ಯರಾದರು. ಇದೇ ನಿಟ್ಟಿನಲ್ಲಿ ಮುಂಛೂಣಿ ನಾಯಕರೆನಿಸಿಕೊಂಡಿದ್ದ ಗುಲಾಂ ನಬಿ ಆಜಾದ್ ಕೂಡ ಇದೇ ಕಾರಣಕ್ಕೆ ಪಕ್ಷ ತೊರೆದು ಹೊಸ ಪಕ್ಷ ಸ್ಥಾಪಿಸಿದರು.
ಇನ್ನು ದೇಶಾದ್ಯಂತ ಇಡಿ, ಸಿಬಿಐ, ಐಟಿ ಇತ್ಯಾದಿಗಳ ದಾಳಿಯ ಭಯದಲ್ಲಿ ಒಂದೋ ವಿಪಕ್ಷಗಳನ್ನು ತೊರೆದು ಕೆಲವು ನಾಯಕರು ಆಡಳಿತಾರೂಢ ಪಕ್ಷ ಸೇರಿದ್ದಾರೆ ಅಥವಾ ದೇಶದಲ್ಲಿ ನಡೆಯುತ್ತಿರುವ ಯಾವುದೇ ನಕಾರಾತ್ಮಕ ಬೆಳವಣಿಗೆಗಳ ಕುರಿತು ಯಾವುದೇ ಪ್ರತಿಕ್ರಿಯೆ ನೀಡದೆ ಮುಗುಮ್ಮಾಗಿ ಜೀವಹಿಡಿದು ಜೀವಿಸುತ್ತಿದ್ದಾರೆ.
ಇವೆಲ್ಲ ಬೆಳವಣಿಗೆಗಳ ನಡುವೆ ನರೇಂದ್ರ ಮೋದಿಯವರನ್ನು ಕಟ್ಟಿಹಾಕುವ ಸಾಮರ್ಥ್ಯ ಭಾರತದ ಯಾವ ನಾಯಕನಿಗೂ ಇಲ್ಲ ಎಂಬ ಮಹಾಕಥನಗಳನ್ನು ಸಾಮಾಜಿಕ ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಬಿತ್ತಲಾಯಿತು. ಆ ಹೊತ್ತಿಗೆ ಸರಿಯಾಗಿ ಭಾರತ್ ಜೋಡೋ ಯಾತ್ರೆ ನಡೆಸಿದ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಭಾರತದಲ್ಲಿ ಅತಿಹೆಚ್ಚು ಕಿಲೋಮೀಟರ್ ಪಾದಯಾತ್ರೆ ನಡೆಸಿದ ದಾಖಲೆ ಬರೆದರು.
ಇದರ ಯಶಸ್ಸಿನಿಂದ ಕಂಗೆಟ್ಟ ಆಡಳಿತಾರೂಢ ಸರ್ಕಾರ ಅವರನ್ನು ಸಂಸತ್ ಸದಸ್ಯತ್ವದಿಂದಲೇ ಅಮಾನತು ಮಾಡಿ ವಿಕೃತ ಆನಂದ ಮೆರೆಯಿತು. ಜವಾಬ್ದಾರಿಯುತ ಸ್ಥಾನದಲ್ಲಿರುವ ಲೋಕಸಭೆ ಸ್ಪೀಕರ್ ಪಕ್ಷದ ಸಿದ್ಧಾಂತಕ್ಕಿಂತ ಸಂವಿಧಾನಕ್ಕೆ ಬೆಲೆಕೊಡಬೇಕು. ಆದರೆ ಇಂತಹವನ್ನೆಲ್ಲ ನಿರೀಕ್ಷಿಸುವುದೇ ಮೂರ್ಖತನ ಎಂಬಂತಹ ವಾತಾವರಣ ಕಳೆದ 10 ವರ್ಷಗಳಿಂದ ಸೃಷ್ಟಿಯಾಗುತ್ತಿದೆ. ಒಂದು ಎಚ್ಚರಿಕೆ ನೀಡಿ ಕ್ಷಮಿಸಬಹುದಾಗಿದ್ದ ತಪ್ಪಿಗೆ ಅಮಾನತಿನ ಶಿಕ್ಷೆಯನ್ನು ನೀಡಿದ ಲೋಕಸಭೆ ಸ್ಪೀಕರ್, ಇದನ್ನು ಮಾನ್ಯ ಮಾಡಿದ ಕೋರ್ಟ್ ದೇಶದ ಜನರ ಕಣ್ಣಲ್ಲಿ ಕುಬ್ಜವಾದವು. ಕಡೆಗೂ ರಾಹುಲ್ ಗಾಂಧಿ ಅಮಾನತು ರದ್ದಾಯಿತು.
ಈ ನಡುವೆ ಇಂಡಿಯಾ ಹೆಸರಿನಲ್ಲಿ ಮೈತ್ರಿಕೂಟ ರಚನೆಯ ವೇಳೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಬಿಹಾರ ಸಿಎಂ ನಿತೀಶ್ ಕುಮಾರ್, ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್, ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್, ಮಹಾರಾಷ್ಟ್ರ ಮಾಜಿ ಸಿಎಂ ಉದ್ಧವ್ ಠಾಕ್ರೆ, ಆರ್.ಜೆ.ಡಿ. ನಾಯಕ ತೇಜಸ್ವಿ ಯಾದವ್ ಮೊದಲಾದವರು ಒಟ್ಟಿಗೆ ಸೇರಿದ್ದರು. ಆದರೆ ಸೀಟು ಹಂಚಿಕೆ ವಿಷಯದಲ್ಲಿ ಮತ್ತು ನಾಯಕತ್ವ ಸಮಸ್ಯೆ ಹಿನ್ನೆಲೆಯಲ್ಲಿ ಮಮತಾ ಬ್ಯಾನರ್ಜಿ, ನಿತೀಶ್ ಕುಮಾರ್, ಅರವಿಂದ ಕೇಜ್ರಿವಾಲ್ ಹಂತಹಂತವಾಗಿ ಇಂಡಿಯಾ ಮೈತ್ರಿಕೂಟದಿಂದ ಅಂತರ ಕಾಯ್ದುಕೊಳ್ಳತೊಡಗಿದ್ದರು.
ಇವೆಲ್ಲ ಬೆಳವಣಿಗೆಗಳ ನಡುವೆ ಅಪೂರ್ಣ ರಾಮಮಂದಿರದಲ್ಲಿ ಬಾಲ ರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆಯನ್ನು ಬಿಜೆಪಿ ಬಳಸಿಕೊಂಡ ರೀತಿಯಿಂದ ವಿಪಕ್ಷಗಳಲ್ಲಿ ನಡುಕ ಶುರುವಾಗಿದೆ. ಕೇಂದ್ರ ಸರ್ಕಾರ, ನರೇಂದ್ರ ಮೋದಿ, ಬಿಜೆಪಿ ಮತ್ತು ಸಂಘ ಪರಿವಾರ ಅಪೂರ್ಣ ರಾಮಮಂದಿರದಲ್ಲಿ ಬಾಲರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆಯನ್ನು ದೇಶದ ಮನೆಮನೆಗಳಿಗೆ ತಲುಪಿಸುವ ಯೋಜನೆ ರೂಪಿಸಿದವು. ಮನೆಮನೆಗೆ ಅಕ್ಕಿ ಕಾಳುಗಳ ಜೊತೆಗೆ ರಾಮ ಮಂದಿರವನ್ನು ಬಿಜೆಪಿ ಅವಧಿಯಲ್ಲಿ ನಿರ್ಮಿಸಲಾಗಿದೆ ಎಂಬ ಸಂಗತಿಯನ್ನು ಅಪೂರ್ಣವಾಗಿದ್ದ ಸಮಯದಲ್ಲೇ ತಲುಪಿಸಿದರು.
ದೇಶದ ನಾಗರಿಕರು ದೇವರ ವಿಷಯದಲ್ಲಿ ಶ್ರದ್ಧಾ ಮನಃಸ್ಥಿತಿಯನ್ನು ಉಳ್ಳವರು. ವೈಚಾರಿಕತೆಯ ಪ್ರಮಾಣ ಶೇ.1ರಷ್ಟು ಮಾತ್ರ ಇರಬಹುದು. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಬಾಬ್ರಿ ಮಸೀದಿ – ಅಯೋಧ್ಯೆ ವಿವಾದ ಪ್ರಕರಣ ಕುರಿತ ವಿಚಾರಣೆ ವೇಳೆ ವಿವಾದಿತ ಸ್ಥಳದಲ್ಲಿ ರಾಮಮಂದಿರ ಇದ್ದದ್ದಕ್ಕೆ ಸಾಕ್ಷಿ ಸಿಕ್ಕಿಲ್ಲ ಎಂದ ಸಂಗತಿಯನ್ನು ಯಾರು ನೆನಪುಮಾಡಿಕೊಳ್ಳುತ್ತಾರೆ? ಜೊತೆಗೆ ವಿವಾದಿತ ಸ್ಥಳದಲ್ಲಿ ಮಂದಿರ ನಿರ್ಮಾಣಕ್ಕೆ ಅವಕಾಶವನ್ನೂ ಕೋರ್ಟ್ ನೀಡಿತ್ತು. ರಾಮ ಮಂದಿರ ಟ್ರಸ್ಟ್ ನಿರ್ವಹಿಸಬೇಕಿದ್ದ ಕೆಲಸವನ್ನು ಆರ್.ಎಸ್.ಎಸ್., ಬಿಜೆಪಿ, ನರೇಂದ್ರ ಮೋದಿಯವರು ಕೈಗೆತ್ತಿಕೊಂಡರು.
ಕಡೆಗೆ ಇದರ ಉದ್ಘಾಟನೆ ಕಾರ್ಯಕ್ರಮಕ್ಕೆ ಯಾರನ್ನು ಕರೆಯಬೇಕು, ಕರೆಯಬಾರದು ಎಂಬ ವಿಷಯ ಮುನ್ನೆಲೆಗೆ ಬಂತು. ದೇಶದ ಯಾವುದೇ ಮಹತ್ವದ ಯೋಜನೆಗಳಿಗೆ ಚಾಲನೆ ನೀಡುವುದು, ಉದ್ಘಾಟಿಸುವುದಕ್ಕೆ ರಾಷ್ಟ್ರಪತಿಗಳಿಗೆ ಅವಕಾಶ ನೀಡುವುದು ದೇಶದ ಸಂಪ್ರದಾಯವಾಗಿದೆ. ಆದರೆ ರಾಮಮಂದಿರ ಭೂಮಿ ಪೂಜೆಗೆ ಅಂದಿನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಮತ್ತು ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಉದ್ಘಾಟನೆಗೆ ಇಂದಿನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಕನಿಷ್ಠ ಆಹ್ವಾನವನ್ನೂ ಕೊಡಲಿಲ್ಲ. ಇನ್ನು ವಿಪಕ್ಷಗಳ ನಾಯಕರನ್ನು ಗೌರವದಿಂದ ನಡೆಸಿಕೊಳ್ಳುವುದು ಇರಲಿ, ಸ್ವತಃ ರಾಮಮಂದಿರ ನಿರ್ಮಾಣಕ್ಕೆ ಮೂಲ ಕಾರಣಕರ್ತರಾಗಿರುವ, ಇನ್ನೂ ಜೀವಂತವಾಗಿರುವ ಮಾಜಿ ಉಪ ಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ, ಕೇಂದ್ರದ ಮಾಜಿ ಸಚಿವ ಮುರಳಿ ಮನೋಹರ್ ಜೋಷಿಯವರನ್ನು ಈ ಕಾರ್ಯಕ್ರಮದಿಂದ ಹೊರಗಿಡಲಾಯಿತು. ಇದಕ್ಕೆ ಕೊಟ್ಟ ಕಾರಣವೆಂದರೆ ಇವರಿಬ್ಬರಿಗೆ ವಯಸ್ಸಾಗಿದೆ. ಆದರೆ ಇದೇ ವಯಸ್ಸಿನ ನಿಯಮ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರಿಗೆ ಅನ್ವಯವಾಗಲಿಲ್ಲ. ಆದರೆ ರಾಮನಾಥ್ ಕೋವಿಂದ್ ಮತ್ತು ದ್ರೌಪದಿ ಮುರ್ಮು ಅವರಿಗೆ ಆಹ್ವಾನ ನೀಡದೇ ಇರುವುದಕ್ಕೆ ಕಾರಣ ಕೊಡಲಿಲ್ಲ. ಅವರಿಗೆ ಆಹ್ವಾನ ನೀಡದೇ ಇರುವುದರ ವಾಸ್ತವ ಕಾರಣ ಸನಾತನ ಮನಃಸ್ಥಿತಿಯಾಗಿತ್ತು.
ಇನ್ನು ರಾಮನ ಕಾಲದಲ್ಲಿ ಯಾವುದೇ ಪೂಜಾ ಕಾರ್ಯಗಳನ್ನು ನೆರವೇರಿಸುವ ವೇಳೆ ಧರ್ಮಪತ್ನಿ ಇರಬೇಕಾದುದು ಅಗತ್ಯ. ನರೇಂದ್ರ ಮೋದಿಯವರಿಗೆ ಈ ನಿಯಮ ಅನ್ವಯವಾಗಲಿಲ್ಲ. ಇನ್ನು 11 ದಿನಗಳ ಕಾಲ ನರೇಂದ್ರ ಮೋದಿಯವರು ಕೇವಲ ಎಳನೀರು ಕುಡಿದು ಬದುಕಿದರು ಎಂದು ಮಾಧ್ಯಮಗಳು ವರದಿ ಮಾಡಿದವು. ಸತ್ಯಮೇವ ಜಯತೆ ಎಂಬ ಧ್ಯೇಯ ವಾಕ್ಯ ನಮ್ಮ ದೇಶದ್ದಲ್ಲವೇ? ಆದ್ದರಿಂದ ಇಂತಹ ಸುದ್ದಿಗಳ ಕುರಿತು ಯಾರೂ ಪ್ರಶ್ನೆ ಕೇಳಬಾರದು!
ಇಡೀ ಬಾಲರಾಮ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ ಕಾರ್ಯ ಸಂಪೂರ್ಣ ಅಭೂತಪೂರ್ವ ವಿರೋಧಾಭಾಸಗಳಿಂದ ಕೂಡಿತ್ತು. ಮೊದಲನೆಯದಾಗಿ ಅಪೂರ್ಣ ಮಂದಿರದಲ್ಲಿ ತರಾತುರಿಯಲ್ಲಿ ಪ್ರಾಣ ಪ್ರತಿಷ್ಠಾಪನೆ ಮಾಡಬೇಕಾದ ಅನಿವಾರ್ಯತೆ ಏನಿತ್ತು? ಎಂಬ ಪ್ರಶ್ನೆ ಸಾಮಾನ್ಯ ಜನರ ಮನದಲ್ಲಿ ಏಳುವ ಹೊತ್ತಿಗೆ ಮಾಧ್ಯಮಗಳಲ್ಲಿ ಮೋದಿ ಮತ್ತು ರಾಮ ಭಜನೆ ಆರಂಭವಾಗಿತ್ತು. ಈ ನಡುವೆ 4 ಶಂಕರಾಚಾರ್ಯ ಪೀಠಾಧಿಪತಿಗಳು ಅಪೂರ್ಣ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಮಾಡುವುದರ ವಿರುದ್ಧ ಬಂಡಾಯವೆದ್ದರು. ಇವರ ವಿರುದ್ಧ ಬಿಜೆಪಿ ಐಟಿ ಸೆಲ್ ಇಲ್ಲಸಲ್ಲದ ವಿಡಿಯೋ, ಫೋಟೋ, ಸುದ್ದಿಗಳನ್ನು ಪ್ರಚಾರ ಮಾಡಿ, ಅವರ ವಿರುದ್ಧ ಅಪಪ್ರಚಾರ ಮಾಡತೊಡಗಿತು. ಇದೇ ಶಂಕರಾಚಾರ್ಯರು ವಿಪಕ್ಷಗಳ ನಾಯಕರ ವಿರುದ್ಧ ಇಂತಹ ಹೇಳಿಕೆ ನೀಡಿದ್ದರೆ ಅವರನ್ನು ಸಾಕ್ಷಾತ್ ವಿಷ್ಣುವಿನ 11ನೇ ಅವತಾರ ಎಂದು ಬಿಂಬಿಸುತ್ತಿದ್ದ ಇದೇ ಐಟಿ ಪಟಾಲಂ, ತಮ್ಮ ಮೋದಿಯವರ ವಿರುದ್ಧ ಸ್ವಾಮೀಜಿಗಳು ಆಡಿದ ಮಾತಿನಿಂದ ಅವರ ತೇಜೋವಧೆಯನ್ನು ಮಾಡಿತು.
ಇಡೀ ಬಾಲರಾಮ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಇಡೀ ದೇಶದ ಮುದ್ರಣ, ವಿದ್ಯುನ್ಮಾನ ಮಾಧ್ಯಮಗಳು ಹಗಲು ರಾತ್ರಿ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಪ್ರಚಾರ, ಪ್ರಸಾರ ಮಾಡಿದವು. ದೇಶಕ್ಕೆ ಅನ್ನ ನೀಡುವ ರೈತರು ಕೇಂದ್ರ ಸರ್ಕಾರ ರೂಪಿಸಿದ 3 ವಿವಾದಾತ್ಮಕ ಕೃಷಿ ಮಸೂದೆಗಳನ್ನು ವಿರೋಧಿಸಿ 1 ವರ್ಷ ಕಾಲ ಪ್ರತಿಭಟನೆ ನಡೆಸಿ, ಸ್ಥಳದಲ್ಲೇ ಸುಮಾರು 1 ಸಾವಿರ ರೈತರು ಬಲಿಯಾದಾಗ, ಮಹಿಳಾ ಕುಸ್ತಿಪಟುಗಳು ಲೈಂಗಿಕ ದೌರ್ಜನ್ಯ ಆರೋಪ ಮಾಡಿದಾಗ, ಮಣಿಪುರ ದಹನವಾದಾಗ ಇಂತಹ ಸುದ್ದಿಗಳನ್ನು ಪ್ರಸಾರ ಮಾಡಲು ಈ ಮಾಧ್ಯಮಗಳಿಗೆ ಸಮಯವೇ ಇರಲಿಲ್ಲ. ಆದರೆ, ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಪ್ರಸಾರಕ್ಕೆ ಕೇವಲ 24 ಗಂಟೆ ಮಾತ್ರ ಸಮಯ ಸಿಕ್ಕಿತಲ್ಲ ಎಂದು ಬಹುತೇಕ ಮಾಧ್ಯಮಗಳು ಚಡಪಡಿಸಿಬಿಟ್ಟವು.
ಇಡೀ ಕಾರ್ಯಕ್ರಮವನ್ನು ಬಿಜೆಪಿ ಮತ್ತು ಸಂಘ ಪರಿವಾರ 2024ರ ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲೇ ನಡೆಸಿತು. ಮುಂಬರುವ ಚುನಾವಣೆಗಳಲ್ಲಿ ಟಿಕೆಟ್ ಆಕಾಂಕ್ಷಿಗಳು, ವಿವಿಧ ಹುದ್ದೆಗಳ ಆಕಾಂಕ್ಷಿತರೆಲ್ಲರೂ ಜನರ ಮನೆ ಬಾಗಿಲಿಗೆ ರಾಮಮಂದಿರದ ಫೋಟೋ, ಕಾರ್ಯಕ್ರಮದ ಪ್ರಚಾರ ಪತ್ರ ಮತ್ತು 10-12 ಕಾಳು ಅಕ್ಕಿಯನ್ನು ತಲುಪಿಸುವ ಕೆಲಸವನ್ನು ಇಂತಹ ಆಕಾಂಕ್ಷಿಗಳ ಹೆಗಲಿಗೇರಿಸಿತು. ಹುದ್ದೆ, ಟಿಕೆಟ್ ಆಕಾಂಕ್ಷಿಗಳು ಅನಿವಾರ್ಯವಾಗಿ ಈ ಟಾಸ್ಕ್ ಅನ್ನು ನಿರ್ವಹಿಸಲೇಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಿತು.
ಇಡೀ ದೇಶದಾದ್ಯಂತ ಬಾಲ ರಾಮ ಮೂರ್ತಿಗೆ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮ ಆಂದೋಲನದ ಮಾದರಿಯಲ್ಲಿ ನಡೆಯಿತು. ಇಂತಹ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಇಂಡಿಯಾ ಮೈತ್ರಿಕೂಟದ ಒಂದೊಂದೇ ವಿಕೆಟ್ ಗಳು ಇದೀಗ ಪತನವಾಗತೊಡಗಿವೆ. ಆರಂಭದಲ್ಲೇ ಇದರ ಸುಳಿವು ಪಡೆದ ದೆಹಲಿ ಸಿಎಂ ಕೇಜ್ರಿವಾಲ್, ಅನಂತರ ಬಂಗಾಳ ದೀದಿ ಮಮತಾ, ಇದೀಗ ಬಿಹಾರಿ ಬಾಬು ನಿತೀಶ್ ಇಂಡಿಯಾ ಮೈತ್ರಿಕೂಟ ತೊರೆದಿದ್ದಾರೆ.
ರಾಜಕೀಯ ಪಕ್ಷಗಳು ಜನರ ದನಿಯಾಗಬೇಕು. ಬಲಪಂಥೀಯ ಪಕ್ಷಗಳು ಮತ್ತು ಸಿದ್ಧಾಂತ ಜನರನ್ನು ಭಾವನಾತ್ಮಕವಾಗಿ ವಶೀಕರಣ ಮಾಡುತ್ತವೆ. ಆದರೆ ಎಡ ಮತ್ತು ಇತರ ಪಕ್ಷಗಳಿಗೆ ಇವುಗಳನ್ನು ಅಧಿಕಾರಕ್ಕಾಗಿ ದುರುಪಯೋಗಪಡಿಸಿಕೊಳ್ಳುವ ಅನುಭವ ಮತ್ತು ಅವಕಾಶವಾದಿತನಗಳಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಬಲಪಂಥೀಯರು ಸಲ್ಲದ ಕಥನಗಳನ್ನು ಮಹಾಕಥನಗಳಾಗಿ ಬೆಳೆಸುತ್ತಾರೆ. ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ಮುನ್ನ ನಡೆದ ಕೆಲವು ಉದಾಹರಣೆಗಳನ್ನು ನೋಡಿ. ಹಿಜಬ್ – ಕೇಸರಿ ಶಾಲು ವಿವಾದ, ಜಟ್ಕಾ ಕಟ್ ವರ್ಸಸ್ ಹಲಾಲ್ ಕಟ್, ಮಂಗಳೂರು ಗಲಭೆ ಪ್ರಕರಣ, ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ, ಮುಸ್ಲಿಂ ವ್ಯಾಪಾರಿಗಳಿಗೆ ದೇವಸ್ಥಾನದ ಆವರಣಗಳಲ್ಲಿ ಮಾರಾಟ ನಿಷೇಧ ಪ್ರಹಸನ, ಆಜಾನ್ ವಿವಾದ ಇತ್ಯಾದಿ. ಆದರೆ ರಾಜ್ಯದ ಜನ ಈ ಯಾವ ವಿಭಜನೆಯ ಕುತಂತ್ರಗಳಿಗೂ ಮಣಿಯದೆ ಬಿಜೆಪಿಯನ್ನು ವಿಪಕ್ಷದ ಸಾಲಿನಲ್ಲಿ ವಿರಾಜಮಾನರನ್ನಾಗಿಸಿದ್ದಾರೆ. ಆದರೂ ಇದೀಗ ಇದೇ ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ ಹಿನ್ನೆಯಲ್ಲಿ ಮಂಡ್ಯದಲ್ಲಿ ಹನುಮಧ್ವಜ ವಿವಾದವನ್ನು ಹುಟ್ಟುಹಾಕಲಾಗಿದೆ. ಇದು ಬಲಪಂಥೀಯ ರಾಜಕಾರಣದ ಒಂದು ಮಾದರಿಯಾಗಿದೆ.
ರಫೇಲ್ ಅವ್ಯವಹಾರ, ನೋಟು ನಿಷೇಧ ಅವಘಡಗಳು, ಅವೈಜ್ಞಾನಿಕ ಜಿ.ಎಸ್.ಟಿ ಜಾರಿ, ಪುಲ್ವಾಮಾ ದಾಳಿಯಲ್ಲಿ ಕೇಂದ್ರ ಸರ್ಕಾರದ ವೈಫಲ್ಯ, ವಿವಾದಾಸ್ಪದ ರೈತ ಮಸೂದೆಗಳು, ಎಲ್ಲ ಬಡವರ ವಿರೋಧಿಯಾಗಿರುವ ಹೊಸ ಶಿಕ್ಷಣ ನೀತಿ, ಒಬಿಸಿ ವಿರೋಧಿ EWS ಮೀಸಲಾತಿ, ನಿರುದ್ಯೋಗ ಏರಿಕೆ, ಪೆಟ್ರೋಲ್, ಡೀಸೆಲ್, ಎಲ್.ಪಿ.ಜಿ. ಸಿಲಿಂಡರ್, ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆ, ಕೊರೊನಾ ನಿರ್ವಹಣೆ ವೈಫಲ್ಯ, ಪಿಎಂ ಕೇರ್ಸ್ ಅವ್ಯವಹಾರ, ಮಣಿಪುರದಲ್ಲಿ ಜನಾಂಗೀಯ ಹಿಂಸೆ, ಮಹಿಳಾ ಕುಸ್ತಿಪಟುಗಳ ಮೇಲೆ ನಡೆದ ಲೈಂಗಿಕ ದೌರ್ಜನ್ಯ, ಹಸಿವಿನ ಸೂಚ್ಯಂಕದಲ್ಲಿ ಏರಿಕೆ, ಹಣದುಬ್ಬರ ಪ್ರಮಾಣದ ಏರಿಕೆ ಇತ್ಯಾದಿಗಳನ್ನು ಜನರೆದುರಿಗೆ ಸರಳವಾಗಿ ವಿವರಿಸಿ, ಆಡಳಿತ ಪಕ್ಷದ ವಿರುದ್ಧ ಮಹಾಕಥನಗಳನ್ನು ಕಟ್ಟುವಲ್ಲಿ ವಿಪಕ್ಷಗಳು ಸೋತಿದ್ದಾರೆ.
2014ಕ್ಕಿಂತ ಮುನ್ನ ಇಂಧನ, ಎಲ್.ಪಿ.ಜಿ. ಮತ್ತು ಜೀವನಾವಶ್ಯಕ ವಸ್ತುಗಳ ಬೆಲೆ ಪೈಸೆಗಳಲ್ಲಿ ಏರಿದ ಸಮಯದಲ್ಲಿ ಕೂಡ ಬಿಜೆಪಿ ದೊಡ್ಡಮಟ್ಟದ ಪ್ರತಿಭಟನೆಗಳನ್ನು ಆಯೋಜಿಸಿತ್ತು. ಹಾದಿಬೀದಿಯಲ್ಲಿ ಕಟ್ಟಿಗೆಯಲ್ಲಿ ಅಡುಗೆ ಮಾಡುವುದು, ಸೈಕಲ್ ಯಾತ್ರೆಗಳನ್ನು ನಡೆಸಿತ್ತು. ಅಧಿಕಾರಕ್ಕೆ ಬಂದರೆ, ವಿದೇಶದಲ್ಲಿರುವ ಕಪ್ಪು ಹಣವನ್ನು ನೂರು ದಿನಗಳಲ್ಲಿ ವಾಪಸ್ ಭಾರತಕ್ಕೆ ತರುವುದು, ಭ್ರಷ್ಟಾಚಾರ ನಿಯಂತ್ರಣ, ಬೆಲೆ ಇಳಿಕೆ, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ, ನ್ಯಾಯಾಂಗ ಸುಧಾರಣೆ, ಗಂಗಾನದಿ ಸ್ವಚ್ಛತೆ, ಕನಿಷ್ಠ ವೆಚ್ಚ ಗರಿಷ್ಠ ಆಡಳಿತ ಮೊದಲಾದ ಬಿಜೆಪಿಯಿಂದ ಮತ್ತು ನರೇಂದ್ರ ಮೋದಿಯವರಿಂದ ಎಂದಿಗೂ ಈಡೇರಿಸಲಾಗದ ಭರವಸೆಗಳನ್ನು ನೀಡಿತ್ತು.
ಇದೀಗ ನರೇಂದ್ರ ಮೋದಿಯವರು 2 ಅವಧಿಯನ್ನು ಪೂರೈಸಿದ್ದಾರೆ. ಇವುಗಳ ಕುರಿತು ವಿಪಕ್ಷಗಳು ಸಾರ್ವಜನಿಕವಾಗಿ ಮಹಾಕಥನಗಳನ್ನು ಕಟ್ಟಬೇಕಿತ್ತು. ಮೋದಿ ಮತ್ತು ಬಿಜೆಪಿಯವರು ಹೇಳಿದ್ದೇನು, ಆಗಿದ್ದೇನು ಎಂಬ ಸಂಗತಿಗಳ ಕುರಿತು ಸಾರ್ವಜನಿಕ ವಲಯದಲ್ಲಿ ಆರೋಗ್ಯಪೂರ್ಣ ಚರ್ಚೆ ನಡೆಯುವಂತಹ ವಾತಾವರಣವನ್ನು ನಿರ್ಮಿಸಬೇಕಿತ್ತು. ಆದರೆ ಇದರಲ್ಲಿ ಭಾರತದ ಯಾವುದೇ ವಿಪಕ್ಷಗಳು ಯಶಸ್ವಿಯಾಗಿಲ್ಲ.
2014ರಲ್ಲಿ ವಿಪಕ್ಷವಾಗಿದ್ದ ಬಿಜೆಪಿಯ ಸುದ್ದಿಗಳನ್ನು ಪ್ರಸಾರ ಮಾಡುತ್ತಿದ್ದ ಭಾರತೀಯ ಮಾಧ್ಯಮಗಳು 2024ರ ಹೊತ್ತಿಗೆ ಗೋದಿ ಮಾಧ್ಯಮಗಳಾಗಿ ರೂಪಾಂತರ ಹೊಂದಿವೆ. ಇವುಗಳು ಆಡಳಿತಾರೂಢ ಪಕ್ಷವನ್ನು ಪ್ರಶ್ನಿಸುವುದನ್ನು ಬಿಟ್ಟು ವಿಪಕ್ಷಗಳನ್ನು ಪ್ರಶ್ನಿಸುತ್ತಿವೆ. 10 ವರ್ಷಗಳಿಂದ ದೇಶದಲ್ಲಿ ಭ್ರಷ್ಟಾಚಾರ ನಿಯಂತ್ರಣವಾಯಿತೇ? ಉದ್ಯೋಗ ಸೃಷ್ಟಿಯಾಯಿತೇ? ರೈತರ ಆದಾಯ ದುಪ್ಪಟ್ಟಾಯಿತೇ? ಅಗತ್ಯವಸ್ತುಗಳ ಬೆಲೆ ಇಳಿಯಿತೇ? ಮಹಿಳೆಯರು, ದಲಿತರು. ಓಬಿಸಿಗಳ ಸ್ಥಿತಿಗತಿ ಏನಾಯಿತು? ವಸೂಲಾಗದ ಸಾಲದ ಪ್ರಮಾಣ ಮೋದಿ ಅವಧಿಯಲ್ಲಿ ಏರಿದ್ದೆಷ್ಟು? ಷೆಲ್ ಕಂಪನಿಗಳ ಪ್ರಮಾಣದಲ್ಲಿ ಏರಿಕೆಯ ಪ್ರಮಾಣ ಎಷ್ಟು? ಚೀನಾ ಭಾರತದ ಭೂಮಿಯನ್ನು ಆಕ್ರಮಿಸಿದ ಪ್ರಮಾಣ ಎಷ್ಟು? ಮಹಿಳಾ ಕುಸ್ತಿಪಟುಗಳ ಸಮಸ್ಯೆಯನ್ನು ಮೋದಿ ಆಲಿಸಿದರೇ? ಮಣಿಪುರಕ್ಕೆ ಮೋದಿಯವರು ಭೇಟಿಕೊಟ್ಟು ಧೈರ್ಯ ತುಂಬಿದರೇ? ರಫೇಲ್ ಅವ್ಯವಹಾರದಲ್ಲಿ ಸರ್ಕಾರದ ಪಾಲೆಷ್ಟು ಇತ್ಯಾದಿ ವಿಷಯಗಳ ಕುರಿತು ಪ್ರೈಮ್ ಟೈಮ್ ನಲ್ಲಿ ಚರ್ಚೆಯಾಗಲಿಲ್ಲ. ಇದರ ಬದಲಿಗೆ ಈ ಮಾಧ್ಯಮಗಳು ನಿರ್ಣಾಯಕವಾಗಿ ದೇಶದ ಮತದಾರರನ್ನು ವಿಭಜಿಸುವ ಕೆಲಸವನ್ನು ತಮ್ಮ ದಿನನಿತ್ಯದ ವ್ರತವನ್ನಾಗಿಸಿಕೊಂಡವು.
ಒಂದೆಡೆ ಜನರ ಪರ ದನಿಯಾಗಬೇಕಿದ್ದ ವಿಪಕ್ಷಗಳು ಇಡಿ, ಸಿಬಿಐ, ಐಟಿ ಭಯದಲ್ಲಿ ಬೆದರಿ ಕುಳಿತರೆ, ಪ್ರಜಾಪ್ರಭುತ್ವದ ಕಾವಲು ನಾಯಿಯಾಗಬೇಕಿದ್ದ ಮಾಧ್ಯಮಗಳು ಸರ್ಕಾರದ ಜಾಹೀರಾತಿನ ಹಾಲು ಕುಡಿಯುತ್ತ ಜನರನ್ನು ಜ್ವಲಂತ ಸಮಸ್ಯೆಗಳಿಂದ ದಿಕ್ಕುತಪ್ಪಿಸುವ ಕೆಲಸದಲ್ಲಿ ಯಶಸ್ವಿಯಾದವು. ಇದೀಗ ದೇಶಕ್ಕೆ ಮಂದಿರದ ಅಮಲನ್ನು ಏರಿಸಲಾಗಿದೆ. ಇದಕ್ಕೆ ಬಲಿತ ನಾಯಕರು ಬೆಚ್ಚಿಬಿದ್ದು ಬಾಲ ಮುದುರಿಕೊಳ್ಳತೊಡಗಿದ್ದಾರೆ. ಇದೀಗ ಆಡಳಿತ ಪಕ್ಷದ ವಿರುದ್ಧ ಸಂಘಟಿತ ಹೋರಾಟ ನಡೆಸಬೇಕಾದ ಸಮಯದಲ್ಲಿ ಕಾಂಗ್ರೆಸ್ ಏಕಾಂಗಿಯಾಗಿದೆ ಎನಿಸತೊಡಗಿದೆ.
ಲಾಸ್ಟ್ ಪಂಚ್: ಕೆಲವು ಕಡೆ ಮಡಿದವರ ಬಾಯಿಗೆ ಅಕ್ಕಿ ಕಾಳನ್ನು ಹಾಕುತ್ತಾರೆ. ಇದೀಗ ಬದುಕಿದ್ದವರ ಬಾಯಿಗೆ ಅಕ್ಕಿ ಹಾಕಲಾಗಿದೆ!
- ಡಾ.ಪ್ರದೀಪ್ ಮಾಲ್ಗುಡಿ, ಸಂಶೋಧಕ




