ಸದನದಲ್ಲಿ ನಾಡಗೀತೆ ವಿವಾದ: ಆಡಳಿತ – ವಿಪಕ್ಷಗಳ ನಡುವೆ ವಾಗ್ವಾದ

2 years ago

ಬೆಂಗಳೂರು: ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನ ರಹಿತ ಮತ್ತು ಖಾಸಗಿ ಶಾಲೆಗಳಲ್ಲಿ ನಾಡಗೀತೆಯನ್ನು ದೈನಂದಿನ ಚಟುವಟಿಕೆಗಳು ಆರಂಭವಾಗುವ ಮುನ್ನ ಹಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಈ ಸಂಬಂಧ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆದೇಶ ಹೊರಡಿಸಿದೆ.

ನಾಡಗೀತೆ ಹಾಡುವ ಕುರಿತಂತೆ ಕೆಲವು ನಿಯಮ ಮಾರ್ಪಾಡು ಮಾಡಿದ್ದು ಸರ್ಕಾರದ ಇಲಾಖೆಗಳು ಹಾಗೂ ನಿಗಮ, ಮಂಡಳಿ, ಪ್ರಾಧಿಕಾರ ಮುಂತಾದ ಅರೆ ಸರ್ಕಾರಿ ಸಂಸ್ಥೆಗಳು ಅಧಿಕೃತ ಕಾರ್ಯಕ್ರಮಗಳನ್ನು ಆಯೋಜಿಸುವ ಪ್ರಾರಂಭದಲ್ಲಿ ನಾಡಗೀತೆ ಹಾಡಬೇಕು ಎಂದು ಸರ್ಕಾರ ತಿದ್ದುಪಡಿ ಆದೇಶದಲ್ಲಿ ತಿಳಿಸಿದೆ.

ಇದಕ್ಕೂ ಮುನ್ನ 2024ರ ಜನವರಿ 7ರಂದು ಹೊರಡಿಸಿದ್ದ ಆದೇಶದಲ್ಲಿ ಎಲ್ಲಾ ಶಾಲೆಗಳಲ್ಲಿ ನಾಡಗೀತೆಯನ್ನು ದೈನಂದಿನ ಚಟುವಟಿಕೆಗಳು ಆರಂಭವಾಗುವ ಮುನ್ನ ಹಾಗೂ ಸರ್ಕಾರದ ಇಲಾಖೆಗಳು ಹಾಗೂ ನಿಗಮ, ಮಂಡಳಿ, ಪ್ರಾಧಿಕಾರ ಮುಂತಾದ ಅರೆ ಸರ್ಕಾರಿ ಸಂಸ್ಥೆಗಳ ಅಧಿಕೃತ ಕಾರ್ಯಕ್ರಮಗಳನ್ನು ಆಯೋಜಿಸುವ ಪ್ರಾರಂಭದಲ್ಲಿ ಹಾಡಬೇಕು ಎಂದು ಸೂಚಿಸಲಾಗಿತ್ತು. ಆದರೆ ಯಾವ ಶಾಲೆಗಳೆಂದು ನಿರ್ದಿಷ್ಟವಾಗಿ ಹೇಳಿರಲಿಲ್ಲ.

ಇನ್ನೂ ಈ ವಿಷಯ ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ ವಿಪಕ್ಷಗಳು ಆಡಳಿತ ಪಕ್ಷವನ್ನು ತರಾಟೆಗೆ ತೆಗೆದುಕೊಂಡವು. ಸರ್ಕಾರದ ಆದೇಶ ದೋಷಪೂರಿತವಾಗಿದೆ ಎಂದು ವಿಪಕ್ಷದ ಸದಸ್ಯರು ಕಿಡಿಕಾರಿದರು. ಇದಕ್ಕೆ ತಿರುಗೇಟು ನೀಡಿದ ಕಾಂಗ್ರೆಸ್ ನಾಯಕರು, ತಿದ್ದುಪಡಿ ಆದೇಶ ಸರಿಯಾಗಿದೆ ಎಂದು ಸಮರ್ಥಿಸಿಕೊಂಡರು.

ವಿಪಕ್ಷ ನಾಯಕ ಆರ್.ಅಶೋಕ್ ವಿಷಯ ಪ್ರಸ್ತಾಪಿಸಿ, ಈ ಸರ್ಕಾರ ಕುವೆಂಪು ಅವರಿಗೆ ಪದೇಪದೇ ಅಪಮಾನ ಮಾಡುತ್ತಿದೆ. ಮೊನ್ನೆ ವಸತಿ ಶಾಲೆಗಳಲ್ಲಿ ಕುವೆಂಪು ಅವರ ಬರಹವನ್ನು ಬದಲಾವಣೆ ಮಾಡಿತ್ತು. ಗಲಾಟೆಯಾದ ಬಳಿಕ ತಪ್ಪನ್ನು ಸರಿಪಡಿಸುವುದಾಗಿ ಹೇಳಿದೆ. ಈಗ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಾತ್ರ ನಾಡಗೀತೆ ಹಾಡಬೇಕು ಎಂದು ಆದೇಶ ಹೊರಡಿಸಿದೆ ಎಂದರು.

ಖಾಸಗಿ ಶಾಲೆಗಳಿಗೆ ವಿನಾಯಿತಿ ನೀಡಲಾಗಿದೆ. ಎಲ್ಲಾ ಶಾಲೆಗಳಿಗೆ ಶಿಕ್ಷಣ ಇಲಾಖೆಗಳಿಗೆ ನಿಯಂತ್ರಣ ಸಂಸ್ಥೆ, ಶಿಕ್ಷಣ ನೀತಿಯ ಪ್ರಕಾರವೇ ಎಲ್ಲಾ ಶಾಲೆಗಳು ಸರ್ಕಾರದಿಂದ ಬೇರೆ ಬೇರೆ ಅನುಕೂಲ ಪಡೆದುಕೊಳ್ಳುತ್ತವೆ. ಆದ್ದರಿಂದ ನಾಡಗೀತೆಯಿಂದ ಖಾಸಗಿ ಶಾಲೆಗಳಿಗೆ ವಿನಾಯಿತಿ ನೀಡುವ ಅಗತ್ಯವೇನಿದೆ? ಇದು ತುಘಲಕ್ ದರ್ಬಾರಾಗಿದೆ. ಅಧಿಕಾರಿಗಳು ಮತ್ತು ಸಚಿವರ ನಡುವೆ ಸಂಬಂಧ ಹದಗೆಟ್ಟಿದೆ ಎಂದು ಕಿಡಿಕಾರಿದರು.

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮಾತನಾಡಿ, ಸರ್ಕಾರಕ್ಕೆ ಅಧಿಕಾರಿಗಳ ಮೇಲೆ ಲಂಗೂ ಲಗಾಮು ಇಲ್ಲದಂತಾಗಿದೆ. ದೋಷಪೂರಿತ ಆದೇಶಕ್ಕಾಗಿ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು. ಇವರಿಗೆ ಜೊತೆ ನೀಡಿದ ಶಾಸಕರಾದ ಸುರೇಶ್ಕುಮಾರ್, ಅರಗ ಜ್ಞಾನೇಂದ್ರ, ಅರವಿಂದ್ ಬೆಲ್ಲದ್ ಮತ್ತಿತರರು ಸರ್ಕಾರದ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದರು.

ವಿಪಕ್ಷಗಳ ಆಕ್ಷೇಪಕ್ಕೆ ಉತ್ತರಿಸಿದ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ, ಹಿಂದಿನ ಸರ್ಕಾರ ಮೈಸೂರು ಅನಂತಸ್ವಾಮಿ ಅವರ ಧಾಟಿಯಲ್ಲಿ ನಾಡಗೀತೆ ಹಾಡಬೇಕು ಎಂದು ಸರ್ಕಾರಿ ಆದೇಶ ಹೊರಡಿಸಿತ್ತು. ಅದನ್ನು ಪ್ರಶ್ನಿಸಿ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ನ್ಯಾಯಾಲಯದ ಮೆಟ್ಟಿಲೇರಿದ್ದು, ಸಿ.ಅಶ್ವತ್ಥ್ ಅವರ ಧಾಟಿಯಲ್ಲಿ ನಾಡಗೀತೆ ಹಾಡಲು ಆದೇಶಿಸಬೇಕು ಎಂದು ಮನವಿ ಮಾಡಿಕೊಂಡಿದ್ದರು ಎಂದರು.

ಈ ಪ್ರಕರಣದ ವಿಚಾರಣೆ ವೇಳೆ ಈ ಹಿಂದಿನ ಆದೇಶದಲ್ಲಿದ್ದಂತೆ ಎಲ್ಲಾ ಶಾಲೆಗಳು ಎಂದರೆ ಯಾವುವು ಎಂದು ವಕೀಲರು ಪ್ರಶ್ನೆಯೆತ್ತಿದರು. ಅದನ್ನು ಸರಿಪಡಿಸಲು ಇದೇ ವರ್ಷದ ಫೆ.16 ರಂದು ಹೊರಡಿಸಲಾಗಿದ್ದ ಆದೇಶದಲ್ಲಿರಾಷ್ಟ್ರಕವಿ ಜ್ಞಾನಪೀಠ ಪುರಸ್ಕೃತರಾದ ಡಾ.ಕುವೆಂಪು ಅವರ ಜಯ ಭಾರತ ಜನನಿಯ ತನುಜಾತೆ ಕವನವನ್ನು ನಾಡಗೀತೆಯಾಗಿ ಘೋಷಿಸುವ ಕುರಿತು ಹೊರಡಿಸಲಾದ 2024 ರ ಫೆ.1 ರ ಆದೇಶವನ್ನು ತಿದ್ದುಪಡಿ ಮಾಡಲಾಗಿದೆ ಎಂದು ಹೇಳಿದರು.

ಎಲ್ಲಾ ಶಾಲೆಗಳಲ್ಲಿ ನಾಡಗೀತೆಯನ್ನು ದೈನಂದಿನ ಚಟುವಟಿಕೆಗಳು ಆರಂಭವಾಗುವ ಮುನ್ನ ಹಾಗೂ ಸರ್ಕಾರದ ಇಲಾಖೆಗಳು ನಿಗಮ, ಮಂಡಳಿ, ಪ್ರಾಧಿಕಾರ, ಮುಂತಾದ ಅರೆ ಸರ್ಕಾರಿ ಸಂಸ್ಥೆಗಳ ಅಧಿಕೃತ ಕಾರ್ಯಕ್ರಮಗಳಲ್ಲಿ ಹಾಡುವುದು ಎಂಬುದರ ಬದಲಾಗಿ ಸರ್ಕಾರಿ ಶಾಲೆಗಳು, ಅನುದಾನಿತ ಶಾಲೆಗಳು ನಾಡಗೀತೆಯನ್ನು ದೈನಂದಿನ ಚಟುವಟಿಕೆಗಳು ಆರಂಭವಾಗುವ ಮುನ್ನ ಹಾಗೂ ಸರ್ಕಾರದ ಇಲಾಖೆಗಳು ನಿಗಮ, ಮಂಡಳಿ, ಪ್ರಾಧಿಕಾರ, ಅರೆ ಸರ್ಕಾರಿ ಸಂಸ್ಥೆಗಳ ಅಧಿಕೃತ ಕಾರ್ಯಕ್ರಮದ ಪ್ರಾರಂಭದಲ್ಲಿ ಹಾಡಬೇಕೆಂಬುದನ್ನು ಬದಲಾಯಿಸಲಾಗಿತ್ತು ಎಂದು ಸ್ಪಷ್ಟೀಕರಣ ನೀಡಿದರು.

Leave a Reply