ಕರ್ನಾಟಕ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯನವರು ಸ್ಪಧಿಸುವ ಕ್ಷೇತ್ರದಲ್ಲಿ ಅವರನ್ನು ಹೇಗಾದರೂ ಮಾಡಿ ಮಣಿಸಬೇಕೆಂದು ಹಲವಾರು ಶಕ್ತಿಗಳು ತಮ್ಮ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ.
ಅನೇಕರಿಗೆ ಸಿದ್ದರಾಮಯ್ಯನವರು ವಿಧಾನಸಭೆಯನ್ನು ಪ್ರವೇಶಿಸುವುದು ಬೇಕಾಗಿಲ್ಲ. ಅದಕ್ಕೆ ಕಾರಣಗಳು ಹಲವಾರು ಇರಬಹುದು. ಆದರೆ ಇಂದಿನ ಪರಿಸ್ಥಿತಿಯಲ್ಲಿ ಸಿದ್ದರಾಮಯ್ಯನವರು ಗೆಲ್ಲಲೇಬೇಕಾಗಿದೆ, ಏಕೆಂದರೆ ಒಂದು ಕ್ಷೇತ್ರದ ಶಾಸಕರಾಗುವ ಸಲುವಾಗಿ ಅಲ್ಲ. ಅಥವಾ ಮುಖ್ಯಮಂತ್ರಿಯಾಗಬೇಕೆಂದು ಅಲ್ಲ.
ಸಿದ್ದರಾಮಯ್ಯ ಅವರ ಗೆಲುವು ದೇಶದ ಪ್ರಜಾಪ್ರಭುತ್ವದ ಮೌಲ್ಯಗಳ ಮತ್ತು ಸಂವಿಧಾನದ ಆಶಯಗಳ ಉಳಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಪ್ರಬಲವಾದಂತಹ ಒಂದು ಶಕ್ತಿಯಾಗಿ ಉಳಿದುಕೊಳ್ಳಲು ಇವರ ಗೆಲುವು ಅನಿವಾರ್ಯವಾಗಿದೆ.
ದೇಶದಲ್ಲಿ ಮತೀಯ ಶಕ್ತಿಗಳು ಮತ್ತು ಕೋಮುವಾದಿ ಮನಸ್ಥಿತಿ ಅಬ್ಬರಿಸುತ್ತಿರುವ ಸಂದರ್ಭದಲ್ಲಿ ಇದರ ವಿರುದ್ಧ ನಿರ್ಭೀತಿಯಿಂದ, ನಿರ್ದಾಕ್ಷಿಣ್ಯವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಬಲ್ಲಂತಹ ದೇಶದ ಕೆಲವೇ ಕೆಲವು ವ್ಯಕ್ತಿಗಳಲ್ಲಿ ಸಿದ್ದರಾಮಯ್ಯನವರು ಒಬ್ಬರಾಗಿರುವುದರಿಂದ ಇವರು ಗೆಲ್ಲಲೇ ಬೇಕು.
ಕಳೆದ ಒಂಭತ್ತು ವರ್ಷದ ಅವಧಿಯಲ್ಲಿ ಕೇಂದ್ರ ಸರ್ಕಾರದ ಅನೇಕ ನೀತಿಗಳ ವಿರುದ್ಧ ವಿಶೇಷವಾಗಿ ಪ್ರಧಾನಮಂತ್ರಿ ಮತ್ತು ಗೃಹ ಸಚಿವರ ನಿಲುವುಗಳ ಬಗ್ಗೆ ಅಂಜಿಕೆ ಇಲ್ಲದೆ ಟೀಕಿಸುತ್ತಿರುವ ದೇಶದ ಬೆರಳಣಿಕೆಯ ನಾಯಕರಲ್ಲಿ ಸಿದ್ದರಾಮಯ್ಯನವರು ಒಬ್ಬರಾಗಿದ್ದಾರೆ.
ಬಡವರ ಪರವಾಗಿ ಮತ್ತು ಜನಸಾಮಾನ್ಯರ ಪರವಾಗಿ ಯೋಜನೆಗಳನ್ನು ರೂಪಿಸುವುದರ ಮೂಲಕ ಜನರ ಮನಸ್ಸನ್ನು ಗೆದ್ದಿರುವ ಸಿದ್ದರಾಮಯ್ಯನವರಂತಹ ವ್ಯಕ್ತಿತ್ವಗಳು ಸಾರ್ವಜನಿಕ ಕ್ಷೇತ್ರಕ್ಕೆ ಕೊಡುಗೆಗಳಾಗಿರುತ್ತದೆ. ಇಂತಹ ವ್ಯಕ್ತಿ ಮತ್ತು ಶಕ್ತಿ ಯಾವುದೇ ಕಾರಣಕ್ಕೂ ಕುಂದಬಾರದು.
ಸರ್ವಾಧಿಕಾರ ಅಟ್ಟಹಾಸದಿಂದ ವಿವಿಧ ಸ್ವರೂಪದಲ್ಲಿ ಮೆರೆಯುತ್ತಿರುವ ಸಂದರ್ಭದಲ್ಲಿ ಇದಕ್ಕೆ ಲಗಾಮು ಹಾಕುವ ವ್ಯಕ್ತಿಗಳು ಬೇಕಾಗಿದ್ದಾರೆ. ಇವರಲ್ಲಿ ಸಿದ್ದರಾಮಯ್ಯನವರು ಅತಿ ಪ್ರಮುಖರಾಗಿದ್ದಾರೆ.
ದೇಶದಲ್ಲಿ ಸಂವಿಧಾನದ ಆಶಯಗಳನ್ನು ಧಿಕ್ಕರಿಸುತ್ತಾ ಜಾತಿ, ಮತ, ಧರ್ಮದ ಹೆಸರಿನಲ್ಲಿ ಜನರ ನಡುವೆ ಸಂಘರ್ಷದ ವಾತಾವರಣವನ್ನು ಸೃಷ್ಟಿಸಿ ತಮ್ಮ ಸ್ವಾರ್ಥವನ್ನು ಸಾಧಿಸಿಕೊಳ್ಳುವ ಸಂಘಟನೆಗಳ ವಿರುದ್ಧ ಗಟ್ಟಿಯಾಗಿ ನಿಲ್ಲಬೇಕಾದ ವ್ಯಕ್ತಿ-ಶಕ್ತಿ ಸದ್ಯದ ಪರಿಸ್ಥಿತಿಯಲ್ಲಿ ಅತ್ಯಾವಶ್ಯಕವಾಗಿದ್ದಾರೆ.
ಸಿದ್ದರಾಮಯ್ಯನವರು ಒಂದು ಚುನಾವಣೆಯಲ್ಲಿ ಗೆಲ್ಲುವುದರಿಂದ ಅನೇಕ ಪ್ರಶ್ನೆಗಳಿಗೆ ಉತ್ತರವಾಗುತ್ತದೆ. ಪ್ರಗತಿಪರವಾದಂತಹ, ಜನಪರವಾದಂತಹ ಹೋರಾಟಗಳನ್ನು ಇಷ್ಟಪಡುವಂತಹ ನಾಗರಿಕ ಬಂಧುಗಳು ಇನ್ನು ಇದ್ದಾರೆ ಎನ್ನುವುದನ್ನು ತೋರಿಸಿಕೊಡುತ್ತದೆ.
ಸಿದ್ದರಾಮಯ್ಯನವರ ಗೆಲುವು ಅನೇಕರ ಕುತಂತ್ರದ ರಾಜಕಾರಣಗಳಿಗೆ ಉತ್ತರವಾಗುತ್ತದೆ. ಸಾರ್ವಜನಿಕ ಬದುಕಿನಲ್ಲಿ ಇನ್ನು ಇಂದಿಗೂ ಸಹ ಜನಸಾಮಾನ್ಯರಿಂದ ಗೌರವ, ಪ್ರೀತಿ, ವಿಶ್ವಾಸಕ್ಕೆ ಪಾತ್ರರಾಗಿರುವ ನಾಡಿನ ಪ್ರಮುಖ ನಾಯಕರಾಗಿದ್ದಾರೆ. ಆಡಳಿತ ಪಕ್ಷದವರು ಎಷ್ಟೇ ಪ್ರಯತ್ನಪಟ್ಟರು ಸಹ ಸಿದ್ದರಾಮಯ್ಯನವರ ಸಾರ್ವಜನಿಕ ಬದುಕಿನಲ್ಲಿ ಯಾವುದೇ ರೀತಿಯ ಲೋಪಗಳು ಸಿಗದ ರೀತಿಯಲ್ಲಿ ನೇರವಾದ ಜೀವನವನ್ನು ನಡೆಸಿರುವುದು ಸಹ ಇವರ ಸಾಧನೆಯಾಗಿರುತ್ತದೆ.
ನಲವತ್ತೈದು ವರ್ಷಗಳ ಸುದೀರ್ಘವಾದ ರಾಜಕೀಯ ರಂಗದಲ್ಲಿ ರಾಜಕೀಯ ಕಾರಣದ ಆರೋಪಗಳನ್ನು ಹೊರತುಪಡಿಸಿ ಯಾವುದೇ ತನಿಖಾ ಸಂಸ್ಥೆಗಳು ಅಥವಾ ನ್ಯಾಯಾಲಯಗಳಲ್ಲಿ ಗುರುತರವಾದಂತಹ ಆರೋಪಗಳಿಗೆ ಗುರಿಯಾಗದ ರೀತಿಯಲ್ಲಿ ಎಚ್ಚರಿಕೆಯ ಸಾರ್ವಜನಿಕ ಬದುಕನ್ನು ನಡೆಸಿಕೊಂಡು ಬಂದಿರುವ ಸಿದ್ದರಾಮಯ್ಯ ಸದ್ಯದ ಸಾರ್ವಜನಿಕ ಬದುಕಿಗೆ ಒಪ್ಪುವಂತಹ ವ್ಯಕ್ತಿತ್ವವಾಗಿದೆ.
ಅನೇಕ ಪಟ್ಟಭದ್ರ ಹಿತಾಸಕ್ತಿಗಳು ಇವರನ್ನು ರಾಜಕೀಯವಾಗಿ ಮಣಿಸುವುದರ ಮೂಲಕ ಸಂವಿಧಾನದ ಆಶಯಗಳು ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಹೋರಾಟ ನಡೆಸುವ ನಾಯಕರ ವ್ಯಕ್ತಿತ್ವಗಳು ಅಪ್ರಸ್ತುತ ಎನ್ನುವಂತಹ ಸಂದೇಶವನ್ನು ಸಾರಿ ಎಲ್ಲಾ ಹೋರಾಟಗಾರರಿಗೆ ಆತ್ಮ ವಿಶ್ವಾಸವನ್ನು ಕುಗ್ಗಿಸುವಂತಹ ದೊಡ್ಡ ಷಡ್ಯಂತ್ರವನ್ನು ನಡೆಸಿದ್ದಾರೆ. ಇಂತಹ ತಂತ್ರಗಳ ವಿರುದ್ಧ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಆಶಯ ಗೆಲ್ಲಲೇಬೇಕು ಎನ್ನುವುದಾದರೆ ಸಿದ್ದರಾಮಯ್ಯನವರ ಗೆಲುವು ಅನಿವಾರ್ಯ ಮತ್ತು ಅತ್ಯಾವಶ್ಯಕ ಎನ್ನುವುದನ್ನು ನಾಗರಿಕ ಬಂಧುಗಳು ಮನಗಾಣಬೇಕಾಗಿದೆ.
– ಕೆ.ಎಸ್.ನಾಗರಾಜ್, ಬೆಂಗಳೂರು



