140. ಸರ್ವೋಚ್ಚ ನ್ಯಾಯಾಲಯದ ಪೂರಕ ಅಧಿಕಾರಗಳು:- ಈ ಸಂವಿಧಾನದ ಮೂಲಕ ಅಥವಾ ಅದರ ಮೇರೆಗೆ ಸರ್ವೋಚ್ಚ ನ್ಯಾಯಾಲಯಕ್ಕೆ ಪ್ರದಾನ ಮಾಡಿರುವ ಅಧಿಕಾರ ವ್ಯಾಪ್ತಿಯನ್ನು ಹೆಚ್ಚು ಪರಿಣಾಮಕಾರಿಯಾಗಿ ಚಲಾಯಿಸಲು ಸಾಧ್ಯವಾಗುವಂತೆ ಮಾಡುವ ಉದ್ದೇಶಕ್ಕಾಗಿ ಅವಶ್ಯವೆಂದು ಅಥವಾ ಅಪೇಕ್ಷಣೀಯವೆಂದು ತೋರಬಹುದಾದಂಥ ಮತ್ತು ಈ ಸಂವಿಧಾನದ ಯಾವುದೇ ಉಪಬಂಧಗಳಿಗೆ ಅಸಂಗತವಾಗಿಲ್ಲದಂಥ ಪೂರಕ ಅಧಿಕಾರಗಳನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ಪ್ರದಾನ ಮಾಡಲು ಸಂಸತ್ತು ಕಾನೂನು ಮೂಲಕ ಉಪಬಂಧಿಸಬಹುದು.
141.ಸರ್ವೋಚ್ಚ ನ್ಯಾಯಾಲಯವು ಘೋಷಿಸಿದ ಕಾನೂನಿಗೆ ಎಲ್ಲ ನ್ಯಾಯಾಲಯಗಳು ಬದ್ಧವಾಗಿರುವುದು:- ಸರ್ವೋಚ್ಚ ನ್ಯಾಯಾಲಯವು ಘೋಷಿಸಿದ ಕಾನೂನಿಗೆ ಭಾರತದ ರಾಜ್ಯಕ್ಷೇತ್ರದಲ್ಲಿರುವ ಎಲ್ಲ ನ್ಯಾಯಾಲಯಗಳು ಬದ್ಧವಾಗಿರತಕ್ಕದ್ದು.
142. ಸರ್ವೋಚ್ಚ ನ್ಯಾಯಾಲಯದ ಡಿಗ್ರಿಗಳ ಮತ್ತು ಆದೇಶಗಳ ಜಾರಿ ಮತ್ತು ಬಹಿರಂಗಪಡಿಸುವಿಕೆ, ಇತ್ಯಾದಿಗಳ ಬಗ್ಗೆ ಆದೇಶಗಳು:- (1) ಸರ್ವೋಚ್ಚ ನ್ಯಾಯಾಲಯವು ತನ್ನ ಅಧಿಕಾರ ವ್ಯಾಪ್ತಿಯನ್ನು ಚಲಾಯಿಸಿ, ತನ್ನ ಮುಂದೆ ಇತ್ಯರ್ಥದಲ್ಲಿರುವ ಯಾವುದೇ ವ್ಯಾಜ್ಯದ ಬಗ್ಗೆ ಅಥವಾ ಇತರ ವಿಷಯದ ಬಗ್ಗೆ ಪೂರ್ಣ ನ್ಯಾಯವನ್ನು ದೊರಕಿಸುವುದಕ್ಕೆ ಅವಶ್ಯವಾದಂಥ ಡಿಕ್ರಿಯನ್ನು ಹೊರಡಿಸಬಹುದು ಅಥವಾ ಆದೇಶವನ್ನು ನೀಡಬಹುದು ಮತ್ತು ಹಾಗೆ ಹೊರಡಿಸಿದ ಡಿಕ್ಕಿ ಅಥವಾ ಹಾಗೆ ನೀಡಿದ ಆದೇಶವು, ಸಂಸತ್ತು ಮಾಡಿದ ಯಾವುದೇ ಕಾನೂನಿನ ಮೂಲಕ ಅಥವಾ ಅದರ ಮೇರೆಗೆ ನಿಯಮಿಸಬಹುದಾದಂಥ ರೀತಿಯಲ್ಲಿ ಮತ್ತು ಹಾಗೆ ಉಪಬಂಧವನ್ನು ಮಾಡುವವರೆಗೆ ರಾಷ್ಟ್ರಪತಿಯು [ಆದೇಶದ ಮೂಲಕ ನಿಯಮಿಸಬಹುದಾದಂಥ ರೀತಿಯಲ್ಲಿ ಭಾರತದ ರಾಜ್ಯಕ್ಷೇತ್ರದಾದ್ಯಂತ ಜಾರಿಗೊಳಿಸುವಂಥದ್ದಾಗಿರತಕ್ಕದ್ದು.] [1954ನೆಯ ಇಸವಿಯ ಉಚ್ಚ ನ್ಯಾಯಾಲಯದ (ಡಿಕ್ರಿಗಳ ಮತ್ತು ಆದೇಶಗಳ) ಜಾರಿ ಆದೇಶವನ್ನು (ಸಿ.ಒ. 47) ನೋಡಿ.]
(2) ಸಂಸತ್ತು ಈ ಬಗ್ಗೆ ಯಾವುದೇ ಕಾನೂನಿನ ಮೂಲಕ ಮಾಡಿದ ಉಪಬಂಧಗಳಿಗೊಳಪಟ್ಟು, ಭಾರತದ ಸಮಸ್ತ ರಾಜ್ಯಕ್ಷೇತ್ರಕ್ಕೆ ಸಂಬಂಧಿಸಿದಂತೆ ಯಾರೇ ವ್ಯಕ್ತಿಯ ಹಾಜರಾತಿಯನ್ನು ಮತ್ತು ಯಾವುದೇ ದಸ್ತಾವೇಜುಗಳನ್ನು ಬಹಿರಂಗಪಡಿಸುವುದನ್ನು ಅಥವಾ ಹಾಜರುಪಡಿಸುವುದನ್ನು ಸುನಿಶ್ಚಿತಗೊಳಿಸುವ ಉದ್ದೇಶಕ್ಕಾಗಿ ಅಥವಾ ತನ್ನ ಯಾವುದೇ ನಿಂದನೆಯ ತನಿಖೆಯ ಅಥವಾ ದಂಡನೆಯ ಉದ್ದೇಶಕ್ಕಾಗಿ ಯಾವುದೇ ಆದೇಶ ಮಾಡಲು ಸರ್ವೋಚ್ಚ ನ್ಯಾಯಾಲಯವು ಎಲ್ಲ ಮತ್ತು ಪ್ರತಿಯೊಂದು ಅಧಿಕಾರವನ್ನು ಹೊಂದಿರತಕ್ಕದ್ದು.
143. ಸರ್ವೋಚ್ಚ ನ್ಯಾಯಾಲಯದೊಡನೆ ಸಮಾಲೋಚಿಸಲು ರಾಷ್ಟ್ರಪತಿಯ ಅಧಿಕಾರ:- (1) ಸರ್ವೋಚ್ಚ ನ್ಯಾಯಾಲಯದ ಅಭಿಪ್ರಾಯವನ್ನು ಪಡೆದುಕೊಳ್ಳುವುದು ವಿಹಿತವೆನಿಸುವಂಥ ಸ್ವರೂಪದ ಮತ್ತು ಸಾರ್ವಜನಿಕ ಮಹತ್ವವುಳ್ಳಂಥ ಕಾನೂನಿನ ಅಥವಾ ಸಂಗತಿಯ ಪ್ರಶ್ನೆಯು ಉದ್ಭವಿಸಿದೆ ಎಂದು ಅಥವಾ ಉದ್ಭವಿಸುವ ಸಂಭವ ಇದೆಯೆಂದು ಯಾವುದೇ ಕಾಲದಲ್ಲಿ ರಾಷ್ಟ್ರಪತಿಗೆ ಕಂಡುಬಂದರೆ, ಅವನು ಅದನ್ನು ನ್ಯಾಯಾಲಯದ ಪರ್ಯಾಲೋಚನೆಗಾಗಿ ಕಳಿಸಬಹುದು ಮತ್ತು ಆ ನ್ಯಾಯಾಲಯವು ಸೂಕ್ತವೆಂದು ಭಾವಿಸುವಂಥ ಸುನಾವಣೆ ಮಾಡಿದ ನಂತರ ಅದರ ಮೇಲೆ ತನ್ನ ಅಭಿಪ್ರಾಯವನ್ನು ರಾಷ್ಟ್ರಪತಿಗೆ ವರದಿ ಮಾಡಬಹುದು.
(2) 131ನೆಯ ಅನುಚ್ಛೇದದ [ಪರಂತುಕದಲ್ಲಿ] [1956ನೆಯ ಇಸವಿಯ ಸಂವಿಧಾನ (ಏಳನೆಯ ತಿದ್ದುಪಡಿ) ಅಧಿನಿಯಮದ 29ನೆಯ ಪ್ರಕರಣದ ಹಾಗೂ ಅನುಸೂಚಿಯ ಮೂಲಕ “(1)ನೆಯ ಖಂಡದಲ್ಲಿ” ಎಂಬ ಪದಗಳು, ಆವರಣಗಳು ಮತ್ತು ಅಂಕಿಯನ್ನು ಬಿಟ್ಟು ಬಿಡಲಾಗಿದೆ.] ಏನೇ ಇದ್ದಾಗ್ಯೂ, [ಆ ಪರಂತುಕದಲ್ಲಿ] [29ನೆಯ ಪ್ರಕರಣದ ಹಾಗೂ ಅನುಸೂಚೆಯ ಮೂಲಕ “ಆ ಖಂಡದಲ್ಲಿ” ಎಂಬುದಕ್ಕೆ ಬದಲಾಗಿ ಪ್ರತ್ಯಾಯೋಜಿಸಲಾಗಿದೆ.] ನಮೂದಾಗಿರುವಂಥ ಬಗೆಯ ವಿವಾದವನ್ನು ಸರ್ವೋಚ್ಚ ನ್ಯಾಯಾಲಯದ ಅಭಿಪ್ರಾಯಕ್ಕಾಗಿ ರಾಷ್ಟ್ರಪತಿಯು ಕಳುಹಿಸಬಹುದು ಮತ್ತು ಸರ್ವೋಚ್ಚ ನ್ಯಾಯಾಲಯವು ಸೂಕ್ತವೆಂದು ಭಾವಿಸುವಂಥ ಸುನಾವಣೆ ಮಾಡಿದ ನಂತರ ಅದರ ಮೇಲೆ ತನ್ನ ಅಭಿಪ್ರಾಯವನ್ನು ರಾಷ್ಟ್ರಪತಿಗೆ ವರದಿ ಮಾಡತಕ್ಕದ್ದು.
144. ಸಿವಿಲ್ ಮತ್ತು ನ್ಯಾಯಿಕ ಪ್ರಾಧಿಕಾರಗಳು ಸರ್ವೋಚ್ಚ ನ್ಯಾಯಾಲಯಕ್ಕೆ ಸಹಾಯಕರಾಗಿ ಕೆಲಸ ಮಾಡುವುದು:- ಭಾರತದ ರಾಜ್ಯಕ್ಷೇತ್ರದ ಸಮಸ್ತ ಸಿವಿಲ್ ಮತ್ತು ನ್ಯಾಯಿಕ ಪ್ರಾಧಿಕಾರಗಳು ಸರ್ವೋಚ್ಚ ನ್ಯಾಯಾಲಯಕ್ಕೆ ಸಹಾಯಕರಾಗಿ ಕೆಲಸ ಮಾಡತಕ್ಕದ್ದು.
[144ಎ. [(ಕಾನೂನುಗಳ ಸಂವಿಧಾನಾತ್ಮಕ ಸಿಂಧುತ್ವಕ್ಕೆ ಸಂಬಂಧಪಟ್ಟ ಪ್ರಶ್ನೆಗಳ ವಿಲೆಗೆ ಸಂಬಂಧಿಸಿದ ವಿಶೇಷ ಉಪಬಂಧಗಳು.] [1976ನೆಯ ಇಸವಿಯ ಸಂವಿಧಾನ (ನಲವತ್ತೆರಡನೆಯ ತಿದ್ದುಪಡಿ) ಅಧಿನಿಯಮದ 25ನೇ ಪ್ರಕರಣದ ಮೂಲಕ (1-2-1977ರಿಂದ ಜಾರಿಗೆ ಬರುವಂತೆ) ಸೇರಿಸಲಾಗಿದೆ.] ಸಂವಿಧಾನ (ನಲವತ್ತೂರನೆಯ ತಿದ್ದುಪಡಿ) ಅಧಿನಿಯಮ, 1977ರ 5ನೆಯ ಪ್ರಕರಣದ ಮೂಲಕ (13-4-78ರಿಂದ ಜಾರಿಗೆ ಬರುವಂತೆ) ನಿರಸಿತವಾಗಿದೆ.
145. ನ್ಯಾಯಾಲಯದ ನಿಯಮಗಳು, ಇತ್ಯಾದಿ:- (1) ಸಂಸತ್ತು ಮಾಡಿದ ಯಾವುದೇ ಕಾನೂನಿನ ಉಪಬಂಧಗಳಿಗೆ ಒಳಪಟ್ಟು, ಸರ್ವೋಚ್ಚ ನ್ಯಾಯಾಲಯವು ಕಾಲಕಾಲಕ್ಕೆ ರಾಷ್ಟ್ರಪತಿಯ ಅನುಮೋದನೆ ಪಡೆದು ನ್ಯಾಯಾಲಯದ ಪದ್ಧತಿಯನ್ನು ಮತ್ತು ಪ್ರಕ್ರಿಯೆಯನ್ನು ಸಾಮಾನ್ಯವಾಗಿ ವಿನಿಯಮಗೊಳಿಸಲು ನಿಯಮಗಳನ್ನು ರಚಿಸಬಹುದು ಮತ್ತು ಆ ನಿಯಮಗಳಲ್ಲಿ ಈ ಕೆಳಕಂಡ ನಿಯಮಗಳೂ ಒಳಗೊಂಡಿರಬಹುದು,-
(ಎ) ಆ ನ್ಯಾಯಾಲಯದ ಮುಂದೆ ನ್ಯಾಯವಾದಿ ವೃತ್ತಿಯನ್ನು ನಡೆಸುವವರಿಗೆ ಸಂಬಂಧಿಸಿದ ನಿಯಮಗಳು;
(ಬಿ) ಅಪೀಲುಗಳ ಸುನಾವಣೆಯ ಪ್ರಕ್ರಿಯೆಗೆ ಸಂಬಂಧಿಸಿದ ಮತ್ತು ಆ ನ್ಯಾಯಾಲಯಕ್ಕೆ ಅಪೀಲುಗಳನ್ನು ಯಾವ ಕಾಲದೊಳಗಾಗಿ ದಾಖಲು ಮಾಡಬೇಕೆಂಬುದೂ ಸೇರಿದಂತೆ ಅಪೀಲುಗಳಿಗೆ ಸಂಬಂಧಿಸಿದ ಇತರ ವಿಷಯಗಳ ಬಗ್ಗೆ ನಿಯಮಗಳು;
(ಸಿ) 3ನೆಯ ಭಾಗದ ಮೂಲಕ ಪ್ರದಾನ ಮಾಡಲಾಗಿರುವ ಹಕ್ಕುಗಳಲ್ಲಿ ಯಾವುದೇ ಹಕ್ಕನ್ನು ಜಾರಿಗೊಳಿಸುವುದಕ್ಕಾಗಿ ಆ ನ್ಯಾಯಾಲಯದ ವ್ಯವಹರಣೆಗಳಿಗೆ ಸಂಬಂಧಿಸಿದ ನಿಯಮಗಳು;
[1976ನೆಯ ಇಸವಿಯ ಸಂವಿಧಾನ (ನಲವತ್ತೆರಡನೆಯ ತಿದ್ದುಪಡಿ) ಅಧಿನಿಯಮದ 26ನೇ ಪ್ರಕರಣದ ಮೂಲಕ (1-2-1977ರಿಂದ ಜಾರಿಗೆ ಬರುವಂತೆ) ಸೇರಿಸಲಾಗಿದೆ.] (ಸಿಸಿ) ‘[139ಎ ಅನುಚ್ಛೇದದ] ಮೇರೆಗೆ [1977ನೆಯ ಇಸವಿಯ ಸಂವಿಧಾನ (ನಲವತ್ತೂರನೆಯ ತಿದ್ದುಪಡಿ) ಅಧಿನಿಯಮದ 6ನೇ ಪ್ರಕರಣದ ಮೂಲಕ “131ಎ ಮತ್ತು 139ಎ ಅನುಚ್ಛೇದಗಳ” ಎಂಬ ಪದಗಳ, ಅಂಕಿಗಳ ಮತ್ತು ಅಕ್ಷರಗಳ ಬದಲಾಗಿ (13-4-78ರಿಂದ ಜಾರಿಗೆ ಬರುವಂತೆ) ಪ್ರತ್ಯಾಯೋಜಿಸಲಾಗಿದೆ.] ನ್ಯಾಯಾಲಯದ ವ್ಯವಹರಣೆಗಳಿಗೆ ಸಂಬಂಧಿಸಿದ ನಿಯಮಗಳು;
(ಡಿ) 134ನೆಯ ಅನುಚ್ಛೇದದ (1)ನೆಯ ಖಂಡದ (ಸಿ) ಉಪಖಂಡದ ಮೇರೆಗೆ ಅಪೀಲುಗಳನ್ನು ಸ್ವೀಕರಿಸುವುದಕ್ಕೆ ಸಂಬಂಧಪಟ್ಟ ನಿಯಮಗಳು;
(ಇ) ಯಾವ ಷರತ್ತುಗಳಿಗೆ ಒಳಪಟ್ಟು, ನ್ಯಾಯಾಲಯವು ನೀಡಿದ ಯಾವುದೇ ತೀರ್ಪು ಅಥವಾ ಮಾಡಿದ ಆದೇಶವನ್ನು ಪುನರವಲೋಕನ ಮಾಡಬಹುದೋ ಆ ಷರತ್ತುಗಳಿಗೆ ಸಂಬಂಧಿಸಿದ ನಿಯಮಗಳು ಮತ್ತು ಅಂಥ ಪುನರವಲೋಕನಕ್ಕಾಗಿ ಯಾವ ಕಾಲದೊಳಗಾಗಿ ಅರ್ಜಿಗಳನ್ನು ನ್ಯಾಯಾಲಯಕ್ಕೆ ದಾಖಲು ಮಾಡಬೇಕೆಂಬುದೂ ಒಳಗೊಂಡಂತೆ, ಅಂಥ ಪುನರವಲೋಕನದ ಪ್ರಕ್ರಿಯೆಗೆ ಸಂಬಂಧಿಸಿದ ನಿಯಮಗಳು;
(ಎಫ್) ನ್ಯಾಯಾಲಯದಲ್ಲಿ ನಡೆಯುವ ಯಾವುದೇ ವ್ಯವಹರಣೆಗಳಿಗೆ ಮತ್ತು ಅವುಗಳಿಗೆ ಪ್ರಾಸಂಗಿಕವಾದ ಖರ್ಚುಗಳಿಗೆ ಸಂಬಂಧಪಟ್ಟ ಮತ್ತು ಅಲ್ಲಿನ ವ್ಯವಹರಣೆಗಳಿಗೆ ಸಂಬಂಧಿಸಿದಂತೆ ವಿಧಿಸಬೇಕಾದ ಫೀಜುಗಳಿಗೆ ಸಂಬಂಧಪಟ್ಟ ನಿಯಮಗಳು;
(ಜಿ) ಜಾಮೀನಿನ ಮಂಜೂರಾತಿಗೆ ಸಂಬಂಧಿಸಿದ ನಿಯಮಗಳು;
(ಹೆಚ್) ವ್ಯವಹರಣೆಗಳ ತಡೆಗೆ ಸಂಬಂಧಿಸಿದ ನಿಯಮಗಳು;
(ಐ) ಯಾವ ಅಪೀಲು ಕ್ಷುಲ್ಲಕವಾದುದೆಂದು ಅಥವಾ ಕಿರುಕುಳ ಕೊಡುವಂಥದ್ದಾಗಿದೆಯೆಂದು ಅಥವಾ ವಿಳಂಬಗೊಳಿಸುವ ಉದ್ದೇಶದಿಂದ ಸಲ್ಲಿಸಲಾದದ್ದೆಂದು ಆ ನ್ಯಾಯಾಲಯಕ್ಕೆ ತೋರಿಬರುವುದೋ ಆ ಯಾವುದೇ ಅಪೀಲಿನ ಕ್ಷಿಪ್ರ ನಿರ್ಧರಣೆಗೆ ಅವಕಾಶ ಮಾಡಿಕೊಡುವ ನಿಯಮಗಳು;
(ಜೆ) 317ನೆಯ ಅನುಚ್ಛೇದದ (1)ನೆಯ ಖಂಡದಲ್ಲಿ ಉಲ್ಲೇಖಿಸಲಾಗಿರುವ ವಿಚಾರಣೆಗಳ ಪ್ರಕ್ರಿಯೆಗೆ ಸಂಬಂಧಿಸಿದ ನಿಯಮಗಳು.
2) [(3)ನೆಯ [1976ನೆಯ ಇಸವಿಯ ಸಂವಿಧಾನ (ನಲವತ್ತೆರಡನೆಯ ತಿದ್ದುಪಡಿ) ಅಧಿನಿಯಮದ 26ನೆ ಪ್ರಕರಣದ ಮೂಲಕ “3ನೇ ಖಂಡದ ಉಪಬಂಧಗಳಿಗೆ” ಎಂಬುದಕ್ಕೆ ಬದಲಾಗಿ (1-2-1977ರಿಂದ ಜಾರಿಗೆ ಬರುವಂತೆ) ಪ್ರತ್ಯಾಯೋಜಿಸಲಾಗಿದೆ.] * * * [1977ನೆಯ ಇಸವಿಯ ಸಂವಿಧಾನ (ನಲವತ್ತೂರನೆಯ ತಿದ್ದುಪಡಿ) ಅಧಿನಿಯಮದ 6ನೇ ಪ್ರಕರಣದ ಮೂಲಕ ಕೆಲವು ಪದಗಳನ್ನು (13-4-78ರಿಂದ ಜಾರಿಗೆ ಬರುವಂತೆ) ಬಿಟ್ಟುಬಿಡಲಾಗಿದೆ.] ಖಂಡದ ಉಪಬಂಧಗಳಿಗೆ) ಒಳಪಟ್ಟು, ಈ ಅನುಚ್ಛೇದದ ಮೇರೆಗೆ ರಚಿಸಿದ ನಿಯಮಗಳು, ಯಾವುದೇ ಉದ್ದೇಶಕ್ಕಾಗಿ ಉಪವೇಶನದಲ್ಲಿರಬೇಕಾದ ನ್ಯಾಯಾಧೀಶರ ಕನಿಷ್ಠ ಸಂಖ್ಯೆಯನ್ನು ಗೊತ್ತುಪಡಿಸಬಹುದು ಮತ್ತು ಏಕ ನ್ಯಾಯಾಧೀಶನ ಹಾಗೂ ವಿಭಾಗೀಯ ನ್ಯಾಯಾಲಯಗಳ ಅಧಿಕಾರಗಳ ಬಗ್ಗೆ ಉಪಬಂಧಿಸಬಹುದು.
(3) ಈ ಸಂವಿಧಾನದ ಅರ್ಥವಿವರಣೆಗೆ ಸಂಬಂಧಿಸಿದಂತೆ ಮುಖ್ಯವಾದ ಕಾನೂನು ಪ್ರಶ್ನೆಯನ್ನು ಒಳಗೊಂಡಿರುವ ಯಾವುದೇ ಪ್ರಕರಣವನ್ನು ತೀರ್ಮಾನಿಸುವ ಉದ್ದೇಶಕ್ಕಾಗಿ ಉಪವೇಶನದಲ್ಲಿರಬೇಕಾದ ಅಥವಾ ಈ ಸಂವಿಧಾನದ 143ನೆಯ ಅನುಚ್ಛೇದದ ಮೇರೆಗಿನ ಯಾವುದೇ ಅಭಿಪ್ರಾಯ ಕೋರಿಕೆಯ ಸುನಾವಣೆಯ ಉದ್ದೇಶಕ್ಕಾಗಿ ಉಪವೇಶನದಲ್ಲಿರಬೇಕಾದ ನ್ಯಾಯಾಧೀಶರ [1976ನೆಯ ಇಸವಿಯ ಸಂವಿಧಾನ (ನಲವತ್ತೆರಡನೆಯ ತಿದ್ದುಪಡಿ) ಅಧಿನಿಯಮದ 26ನೆಯ ಪ್ರಕರಣದ ಮೂಲಕ “ಕನಿಷ್ಠ ಸಂಖ್ಯೆಯು” ಎಂಬ ಪದಗಳಿಗೆ ಬದಲಾಗಿ (1-2-1977ರಿಂದ ಜಾರಿಗೆ ಬರುವಂತೆ) ಪ್ರತ್ಯಾಯೋಜಿಸಲಾಗಿದೆ.]* [1977ನೆಯ ಇಸವಿಯ ಸಂವಿಧಾನ (ನಲವತ್ತೂರನೆಯ ತಿದ್ದುಪಡಿ) ಅಧಿನಿಯಮದ 6ನೇ ಪ್ರಕರಣದ ಮೂಲಕ ಕೆಲವು ಪದಗಳನ್ನು (13-4-78ರಿಂದ ಜಾರಿಗೆ ಬರುವಂತೆ) ಬಿಟ್ಟುಬಿಡಲಾಗಿದೆ.] ಕನಿಷ್ಠ ಸಂಖ್ಯೆಯು] ಐದು ಆಗಿರತಕ್ಕದ್ದು;
ಪರಂತು. ಈ ಅಧ್ಯಾಯದ 132ನೆಯ ಅನುಚ್ಛೇದವನ್ನು ಹೊರತುಪಡಿಸಿ ಇತರ ಯಾವುದೇ ಉಪಬಂಧಗಳ ಮೇರೆಗೆ ಆಪೀಲನ್ನು ಸುನಾವಣೆ ಮಾಡುವ ಆ ನ್ಯಾಯಾಲಯದಲ್ಲಿ ಐದಕ್ಕಿಂತಲೂ ಕಡಿಮೆ ನ್ಯಾಯಾಧೀಶರಿದ್ದು ಅಪೀಲು ಸುನಾವಣೆ ಕಾಲದಲ್ಲಿ ಆ ಅಪೀಲು ಈ ಸಂವಿಧಾನದ ಅರ್ಥ ವಿವರಣೆಗೆ ಸಂಬಂಧಪಟ್ಟ ಮುಖ್ಯವಾದ ಕಾನೂನು ಪ್ರಶ್ನೆಯನ್ನು ಒಳಗೊಂಡಿದೆಯೆಂದು ಮತ್ತು ಆಪೀಲನ್ನು ವಿಲೆಮಾಡಲು ತನ್ನ ನಿರ್ಧರಣೆಯು ಅವಶ್ಯವೆಂದು ನ್ಯಾಯಾಲಯಕ್ಕೆ ಮನದಟ್ಟಾದರೆ, ಆ ನ್ಯಾಯಾಲಯವು ಅಂಥ ಪ್ರಶ್ನೆಯನ್ನು ಒಳಗೊಂಡಿರುವ ಯಾವುದೇ ಮೊಕದ್ದಮೆಯನ್ನು ತೀರ್ಮಾನ ಮಾಡುವ ಉದ್ದೇಶಕ್ಕಾಗಿ ಈ ಖಂಡವು ಅಗತ್ಯಪಡಿಸಿರುವಂತೆ ರಚಿತವಾಗಿರುವ ನ್ಯಾಯಾಲಯಕ್ಕೆ ಆ ಪ್ರಶ್ನೆಯನ್ನು ಅದರ ಅಭಿಪ್ರಾಯಕ್ಕಾಗಿ ಕಳಿಸಿಕೊಡತಕ್ಕದ್ದು ಮತ್ತು ಆ ಅಭಿಪ್ರಾಯವು ತಲುಪಿದ ಮೇಲೆ ಅಂಥ ಅಭಿಪ್ರಾಯಕ್ಕನುಸಾರವಾಗಿ ಅಪೀಲನ್ನು ವಿಲೆ ಮಾಡತಕ್ಕದ್ದು.
(4) ಸರ್ವೋಚ್ಚ ನ್ಯಾಯಾಲಯವು ಯಾವುದೇ ತೀರ್ಪನ್ನು ಬಹಿರಂಗ ನ್ಯಾಯಾಲಯದಲ್ಲಿ ಹೊರತು ಅನ್ಯಥಾ ಕೊಡತಕ್ಕದ್ದಲ್ಲ ಮತ್ತು ಬಹಿರಂಗ ನ್ಯಾಯಾಲಯದಲ್ಲಿ ಕೊಟ್ಟ ಅಭಿಪ್ರಾಯಕ್ಕೆ ಅನುಸಾರವಾಗಿಯಲ್ಲದೆ 143ನೆಯ ಅನುಚ್ಛೇದದ ಮೇರೆಗೆ ಯಾವುದೇ ವರದಿಯನ್ನು ಮಾಡತಕ್ಕದ್ದಲ್ಲ.
(5) ಸರ್ವೋಚ್ಚ ನ್ಯಾಯಾಲಯವು ಯಾವುದೇ ತೀರ್ಪನ್ನು ಮತ್ತು ಅಂಥ ಯಾವುದೇ ಅಭಿಪ್ರಾಯವನ್ನು, ಆ ಪ್ರಕರಣದ ಸುನಾವಣೆಯಲ್ಲಿ ಹಾಜರಿರುವ ನ್ಯಾಯಾಧೀಶರ ಬಹುಮತದ ಸಹಮತಿಯಿಂದ ಹೊರತು ಅನ್ಯಥಾ ಕೊಡತಕ್ಕುದಲ್ಲ; ಆದರೆ ಈ ಖಂಡದಲ್ಲಿ ಇರುವುದು ಯಾವುದೂ ಸಹಮತಿಸದಿರುವ ನ್ಯಾಯಾಧೀಶನನ್ನು ತನ್ನ ಭಿನ್ನಾಭಿಪ್ರಾಯದ ತೀರ್ಪನ್ನು ಅಥವಾ ತನ್ನ ಭಿನ್ನಾಭಿಪ್ರಾಯವನ್ನು ಕೊಡದಂತೆ ಪ್ರತಿಬಂಧಿಸುತ್ತದೆ ಎಂದು ಭಾವಿಸತಕ್ಕದ್ದಲ್ಲ.
Source: The Constitution Of India (AS ON 14th JANUARY 2019), Government Of India, Ministry of Law and Justice, Legislative Department, Karnataka Official Language (Legislative) Commission and Directorate of Translations, Government of Karnataka, Page No. 56-58




