ಅಂತೂ ಅನಂತ್ ನಾಗ್ ಉತ್ಸವ ಯಶಸ್ವಿಯಾಗಿ ಮುಗಿಯಿತು.
ಆರು ತಿಂಗಳ ಹಿಂದೆ ಇಂತಹದೊಂದು ಕನಸನ್ನು ಕಂಡಾಗ.. ಎಷ್ಟರ ಮಟ್ಟಿಗೆ ಇದು ನನಸಾಗ ಬಲ್ಲದು ಎನ್ನುವ ಆತಂಕ ಇದ್ದೇ ಇತ್ತು. ಏಕೆಂದರೆ ಅನಂತ್ ನಾಗ್ ಅವರನ್ನು ಹತ್ತಿರದಿಂದ ಕಂಡವರಿಗೆ ಇಂತಹ ಉತ್ಸವಗಳಿಂದ ಅವರು ಎಷ್ಟು ದೂರ ಉಳಿಯುತ್ತಾರೆ ಎನ್ನುವುದು ಚೆನ್ನಾಗಿ ಗೊತ್ತಿರುತ್ತದೆ.
ಮೂರು ದಿನಗಳ ಉತ್ಸವ ಅದರಲ್ಲಿ ಏನೇನು ಇರ ಬೇಕು. ಈ ಚರ್ಚೆಯೇ ಸಾಕಷ್ಟು ಚಿಂತನೆಗೆ ಹಚ್ಚುವಂತಿತ್ತು. ನಿಜ ಹೇಳ ಬೇಕೆಂದರೆ ನಾನು ಅಂದು ಕೊಂಡಿದ್ದರಲ್ಲಿ ಶೇಕಡ ಹತ್ತರಷ್ಟನ್ನು ಕೂಡ ಮಾಡಲು ಆಗಲಿಲ್ಲ. ಅದರೆ ಒಪ್ಪಿ ಅನಂತ್ ಸರ್ ಗಾಯತ್ರಿ ಮೇಡಂ ಜೊತೆ ಬಂದರು. ಬಹಳ ಸೊಗಸಾಗಿ ಮಾತನಾಡಿದರು ಇವೆಲ್ಲವೂ ಮನದಂಚಿನಲ್ಲಿ ಉಳಿದ ಕಹಿಯನ್ನು ದೂರ ಮಾಡಿದವು.
ವಿಚಾರ ಸಂಕಿರಣದಲ್ಲಿ ಯಾರ್ಯಾರು ಇರ ಬೇಕು ಎರಡು ಪುಟಗಳ ಪಟ್ಟಿ ಮಾಡಿದ್ದೇ ಮಾಡಿದ್ದು ಕೊನೆಗೆ ಸದಾಶಿವ ಶೆಣ್ಯೆ ಅನಂತ್ ಅವರನ್ನು ತೀರಾ ಹತ್ತಿರದಿಂದ ಬಲ್ಲವರು, ಸುಂದರ ರಾಜ್ ಮತ್ತು ರಮೇಶ್ ಭಟ್ ಅವರೊಡನೆ ಬಹಳ ಕಾಲ ಅಭಿನಯಿಸಿದವರು ಎಂದು ಆಯ್ಕೆ ಮಾಡಿ ಕೊಂಡೆ, ಒಬ್ಬರು ಕಲಾವಿದೆ ಎನ್ನುವುದು ಕೈಗೂಡಲಿಲ್ಲ, ವಿನಯಾ ಪ್ರಸಾದ್ ಅವತ್ತು ಬೆಂಗಳೂರಿನಲ್ಲಿ ಇರಲಿಲ್ಲ, ಜಯಮಾಲಾ ಅವರ ಆರೋಗ್ಯ ಚೆನ್ನಾಗಿರಲಿಲ್ಲ. ರೂಪಾದೇವಿ ಕೂಡ ಸಿಕ್ಕಲಿಲ್ಲ ಹೀಗೆ ಅದೊಂದು ಸಾಧ್ಯವಾಗದೆ ಹೋಯಿತು. ಆದರೂ ವಿಚಾರ ಸಂಕಿರಣ ಚೆನ್ನಾಗಿ ನಡೆಯಿತು ಎಲ್ಲರೂ ಬೇರೆ ಬೇರೆ ಒಳನೋಟಗಳನ್ನು ಕೊಟ್ಟರು, ಬೋನಸ್ ಎಂದರೆ ಉದ್ಘಾಟನೆ ಮಾಡಿದ ಪ್ರಕಾಶ್ ಬೆಳವಾಡಿ ಕೂಡ ಚೆನ್ನಾಗಿ ಮಾತನಾಡಿದರು.
ಉತ್ಸವದ ಸಂದರ್ಭದಲ್ಲಿ ನನಗೆ ಸಿಕ್ಕ ಇನ್ನೊಂದು ಅದ್ಭುತ
ಅನುಭವ ಎಚ್.ಎನ್.ನರಹರಿ ರಾಯರ ಜೊತೆ ಕುಳಿತು ಅನಂತ್ ನಾಗ್ ಅವರ ಚಿತ್ರಗಳನ್ನು ಆಯ್ಕೆ ಮಾಡಿದ್ದು ಇದರಿಂದ ಅನಂತ್ ನಾಗ್ ಅವರ ಚಿತ್ರಗಳ ವಿಸ್ತಾರ ಅನುಭವಕ್ಕೆ ಬಂದಿತು, ಕಲಾತ್ಮಕ, ಮೆಲೋಡ್ರಾಮ, ಬ್ರಿಜ್, ಹಾಸ್ಯ ಹೀಗೆ ಬೇರೆ ಬೇರೆ ಮಾದರಿಗಳಲ್ಲಿ ಅವರು ಅಭಿನಯಿಸಿದ ಕ್ರಮದ ಕುರಿತು ಚಿಂತಿಸಲು ನನಗೆ ಇದು ಪ್ರೇರೇಪಿಸಿತು, ನಿಜಕ್ಕೂ ಯಾರಾದರೂ ಮನಸ್ಸು ಮಾಡಿದರೆ ಅನಂತ್ ನಾಗ್ ಅಭಿನಯಿಸಿದ ಪಾತ್ರಗಳ ಕುರಿತೇ ಪಿ.ಎಚ್.ಡಿ ಮಾಡ ಬಹುದು, ಅಷ್ಟೊಂದು ವೈವಿಧ್ಯ, ಸಾಧ್ಯತೆಗಳು, ಇದೇ ನೆಲೆಯಲ್ಲಿಯೇ ನಾನು ಅಭಿನಂದನಾ ಭಾಷಣ ಮಾಡಿದೆ, ಇದೇ ನೆಲೆಯನ್ನು ಇಟ್ಟು ಕೊಂಡು ಪುಸ್ತಕ ಬರೆಯುವ ಕನಸೊಂದು ಈಗ ಶುರುವಾಗಿದೆ. ಚಿತ್ರೋತ್ಸವದಲ್ಲಿ ನಾವು ತೋರಿಸಿದ ಚಿತ್ರಗಳು ಸಾಧ್ಯವಾದ ಮಟ್ಟಿಗೆ ಅನಂತ್ ನಾಗ್ ಅವರ ಅಭಿನಯದ ರೇಂಜ್ ತೋರಿಸಿದವು ಎನ್ನುವುದು ನನ್ನ ನಂಬಿಕೆ.
ಅನಂತ್ ನಾಗ್ ಮೂಡ್ನಲ್ಲಿ ಇದ್ದರೆ ಅಮೃತವೇ ಸಿಕ್ಕುತ್ತದೆ. ಈ ಮಟ್ಟಿಗೆ ಅವರು ನನಗೆ ಪೂರ್ಣಚಂದ್ರ ತೇಜಸ್ವಿಯವರನ್ನು ನೆನಪಿಸುತ್ತಾರೆ. ಸಮಾರೋಪದಲ್ಲಿ ಬಹಳ ಅದ್ಭುತವಾಗಿ ಮಾತನಾಡಿದರು. ಆಸ್ಕರ್ ವೈಲ್ಡ್ನ ‘ಪಿಕ್ಚರ್ ಆಫ್ ಡೋರಿಯನ್ ಗ್ರೇ’ ಕಾದಂಬರಿಯನ್ನು ಆಧಾರವಾಗಿಟ್ಟು ಕೊಂಡು ಕಲಾವಿದನ ಅಂತರಿಕ ಬೆಳವಣಿಗೆಯ ಕುರಿತು ಅವರು ಮಾತನಾಡಿದ ಕ್ರಮ ನಮಗೆಲ್ಲರಿಗೂ ಪಾಠದಂತಿತ್ತು.
ಮುನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ ಅವರು ನಾನು ನಿಮಿತ್ತ ಮಾತ್ರ ಎಂದು ಹೇಳಿದ್ದು ಅವರ ಹಿರಿಮೆಗೆ ನಿದರ್ಶನವಾಗಿತ್ತು. ರಾಜಕೀಯ ಎನ್ನುವುದು ಸುಳಿ ಅದರಲ್ಲಿ ಈಜುವ ತಾಕತ್ತು ಇದ್ದವರು ಮಾತ್ರ ಧುಮಕಬೇಕು ಎಂದು ಹೇಳಿ ಎಡಪಂಥೀಯ ಚಿಂತನೆಗಳಿಂದ ಅದರಲ್ಲಿಯೂ ತುರ್ತು ಪರಿಸ್ಥಿತಿ ಅನುಭವದಿಂದ ತಾವು ರಾಜಕೀಯಕ್ಕೆ ಬಂದಿದ್ದು ಅದರಿಂದ ಭ್ರಮ ನಿರಸನಗೊಂಡು ಹೊರ ಬಂದಿದ್ದು ಎಲ್ಲವನ್ನೂ ಎಳೆ ಎಳೆಯಾಗಿ ಬಿಡಿಸಿಟ್ಟರು.
ಲಂಕೇಶ್ ನಿಟಕವರ್ತಿಯಾಗಿದ್ದ ಅನಂತ್ ವೈ.ಎನ್.ಕೆಯವರ ಜೊತೆಗೂ ಕೂಡ ಆತ್ಮೀಯ ಒಡನಾಟ ಇಟ್ಟುಕೊಂಡವರು. ಸಾಹಿತ್ಯ ಲೋಕದ ಏರಿಳಿತಗಳನ್ನು ಹತ್ತಿರದಿಂದ ಕಂಡವರು, ಬಹಳ ಮುಖ್ಯವಾಗಿ ಅವರು ಬಹಳ ಒಳ್ಳೆಯ ಓದುಗರು ಅವರ ಓದು ಜಾಗತಿಕ ಮಟ್ಟದ್ದು, ಹೀಗಾಗಿ ಅವರ ಮಾತು ಯಾವತ್ತೂ ಗಟ್ಟಿತನದಿಂದ ಕೂಡಿರುತ್ತದೆ. ಆಗಲೇ ಹೇಳಿದಂತೆ ಒಳ್ಳೆಯ ಮೂಡ್ನಲ್ಲಿ ಇದ್ದ ಅನಂತ್ ನಮ್ಮ ಕೋರಿಕೆಯನ್ನು ಮನ್ನಿಸಿ ತಮಗೆ ಅತ್ಯಂತ ಪ್ರಿಯವಾದ ಗುರುಸ್ತುತಿಯನ್ನು ಹಾಡಿದರು, ಭಾಗ್ಯದ ಲಕ್ಷ್ಮಿ ಬಾರಮ್ಮವನ್ನೂ ಹಾಡಿದರು.
ಡಾ.ಚಿರಂಜೀವಿ ಸಿಂಘ್ ಹೇಳಿದಂತೆ ಅನಂತ್ ಯಾವುದೇ ವಿಶ್ವೆವಿದ್ಯಾಲಯದ ಪ್ರೊಫೆಸರ್ ಗಳು ವಿಶ್ಲೇಷಿಸುವದಕ್ಕಿಂತ ಅದ್ಭುತವಾಗಿ ಷೇಕ್ಸಪಿಯರ್ ಕುರಿತು ಮಾತನಾಡ ಬಲ್ಲರು..
ಅನಂತ್ ಎಂದರೆ ಆಕಾಶ, ಮೂರು ದಿನಗಳ ಉತ್ಸವದಲ್ಲಿ ಅವರು ಸಿಕ್ಕಿ ಬಿಟ್ಟರು ಎಂದು ಯಾರಾದರೂ ಅಂದು ಕೊಂಡಿದ್ದರೆ ಅದಕ್ಕಿಂತ ಮೂರ್ಖತನ ಇನ್ನೊಂದಿಲ್ಲ. ಇದು ಕೇವಲ ಬೊಗಸೆಗೆ ಸಿಕ್ಕ ಬೆಳಕು.. ಆದರೆ ಒಳ್ಳೆಯ ಆರಂಭ.. ಹೌದು ಆರಂಭ ಮಾತ್ರ.. ಏಕೆಂದರೆ ಅನಂತ್ ನಾಗ್ ಕುರಿತು ನಾವು ಯೋಜಿಸಿರುವ ಯೋಜನೆಗಳು ಇನ್ನಷ್ಟಿವೆ.. ಎಲ್ಲವನ್ನೂ ಒಂದೊಂದಾಗಿ ಅನಾವರಣ ಮಾಡುತ್ತೇನೆ..
ಕಾಯುತ್ತಿರಿ.. !
– ಎನ್.ಎಸ್.ಶ್ರೀಧರ ಮೂರ್ತಿ




