ಕನ್ನಡ ಚಿತ್ರರಂಗಕ್ಕೆ ಅನಂತ್ ನಾಗ್ ಅಭಿನಯದ ಹೊಸ ಮಾದರಿ ನೀಡಿದರು: ಪ್ರಕಾಶ ಬೆಳವಾಡಿ

3 years ago

#Anantnag #rolemodel #Kannada #cinema #PrakashaBelavadi

ಬೆಂಗಳೂರು: ಅನಂತ್ ನಾಗ್ ಜಾಗತಿಕ ಮಟ್ಟದ ಕಲಾವಿದ. ಅವರು ಕನ್ನಡ ಚಿತ್ರರಂಗಕ್ಕೆ ಸಿಕ್ಕಿದ್ದೇ ನಮ್ಮೆಲ್ಲರ ಪುಣ್ಯ ಎಂದು ಸುಚಿತ್ರ ಸಿನಿ ಅಕಾಡಮಿಯ ಅಧ್ಯಕ್ಷ ಪ್ರಕಾಶ ಬೆಳವಾಡಿ ಹೇಳಿದರು.

ಭಾರತೀಯ ವಿದ್ಯಾ ಭವನ ಮತ್ತು ಸುಚಿತ್ರ ಸಿನಿ ಅಕಾಡಮಿ ಜಂಟಿಯಾಗಿ ಅಯೋಜಿಸಿರುವ  ಮೂರು ದಿನಗಳ ‘ಅನಂತ್ ನಾಗ್ ಉತ್ಸವ’ವನ್ನು ಉದ್ದೇಶಿಸಿ ಮಾತನಾಡಿದ ಅವರು, ಪಾತ್ರದ ಸ್ವರೂಪವನ್ನು ಅರಿತು ಅದನ್ನು ಸೂಕ್ತವಾಗಿ ವಿಸ್ತರಿಸಬಲ್ಲ ಅಸಾಮಾನ್ಯ ಕಲಾವಿದರಾಗಿದ್ದ ಅನಂತ್ ನಾಗ್ ಎಂದಿಗೂ ಸ್ಟಾರ್ ಗಿರಿಯ ಹಿಂದೆ ಬಿದ್ದವರಲ್ಲ, ಅಭಿಮಾನಿ ಸಂಘಗಳನ್ನು ಕಟ್ಟಲು ಅವಕಾಶ ಕೊಟ್ಟವರಲ್ಲ, ಪ್ರಚಾರಕ್ಕೆ ಅಪೇಕ್ಷಿಸಿದವರಲ್ಲ. ಹೀಗಿದ್ದರೂ ಇಂದಿಗೂ ಬಹು ಬೇಡಿಕೆಯ ನಟರಾಗಿರುವುದು, ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸುತ್ತಾ ಬಂದಿರುವುದು ಅಚ್ಚರಿಯೇ ಸರಿ! ಅನಂತ್ ನಾಗ್ ಸಿನಿಮಾದಂತೆ ರಂಗಭೂಮಿಯಲ್ಲಿಯೂ ಅದ್ಭುತವಾದ ಕಲಾವಿದ. ಅವರ ಕುರಿತ  ಉತ್ಸವ ನಡೆಯುತ್ತಿರುವುದು, ಇದರಲ್ಲಿ ಭಾಗಿಯಾಗುವ ಅವಕಾಶ ಸಿಕ್ಕಿದ್ದು ನಿಜಕ್ಕೂ ಸಂತೋಷದ ಸಂಗತಿ ಎಂದರು.

ಸ್ವಾಗತ ಭಾಷಣ ಮಾಡಿದ ಭಾರತೀಯ ವಿದ್ಯಾ ಭವನದ ನಿರ್ದೇಶಕ ಎಚ್.ಎನ್.ಸುರೇಶ್, ಭಾರತೀಯ ವಿದ್ಯಾ ಭವನದ ಹಳೆಯ ವಿದ್ಯಾರ್ಥಿಯಾದ ಅನಂತ್ ನಾಗ್ ಭವನದ ಮೇಲಿನ  ಪ್ರೀತಿಯಿಂದ ಈ ಉತ್ಸವ ನಡೆಸುವ ಅವಕಾಶವನ್ನು ನಮಗೆ ನೀಡಿದ್ದಾರೆ. ಕನ್ನಡ ಚಿತ್ರರಂಗದ ವಿಸ್ಮಯ ಎಂದೇ  ಕರೆಸಿಕೊಂಡಿರುವ ಅವರ ಕುರಿತು ಕಾರ್ಯಕ್ರಮವನ್ನು ರೂಪಿಸುವ ಅವಕಾಶ ನಮಗೆ ಸಿಕ್ಕಿದ್ದು ಸಂತೋಷದ ಸಂಗತಿ. 75 ತುಂಬಿರುವ ಅನಂತ್ ನಾಗ್ ಅವರ  ನೂರನೇ ವರ್ಷದ ಕಾರ್ಯಕ್ರಮವನ್ನು ಆಚರಿಸುವ ಅವಕಾಶ ನಮಗೆ ಸಿಗಲಿ ಎಂದರು.

ನಂತರ ‘ಅನಂತ್ ನಾಗ್’ ಕುರಿತು ವಿಚಾರ ಸಂಕಿರಣ ನಡೆಯಿತು. ಇದರಲ್ಲಿ ಮೊದಲು ಮಾತನಾಡಿದ ಮಾಧ್ಯಮ ಅಕಾಡಮಿಯ ಮಾಜಿ ಅಧ್ಯಕ್ಷ ಸದಾಶಿವ ಶೆಣೈ, ಲಂಕೇಶ್ ಪತ್ರಿಕೆಯಲ್ಲಿ ತಾವು ಕೆಲಸ ಮಾಡುತ್ತಿದ್ದಾಗ ಲಂಕೇಶ್ ಅವರ ಒತ್ತಾಯದಿಂದ ‘ನನ್ನ ತಮ್ಮ ಶಂಕರ’ ಅಂಕಣವನ್ನು ಅನಂತ್ ನಾಗ್ ಬರೆದರು. ಪತ್ರಕರ್ತನಿಗಿರುವ ನಿಷ್ಟೆಯಿಂದಲೇ ಬರೆದ ಅವರು ಚುನಾವಣಾ ಪ್ರಚಾರದ ಸಮಯದಲ್ಲಿ ಕೂಡ ಅದನ್ನು ತಪ್ಪಿಸಿದವರಲ್ಲ. ಯಾವುದೇ ವಿಷಯದಲ್ಲಿ ಪೂರ್ಣತೆಗೆ ತುಡಿವ ಅವರು ಅಸಾಮಾನ್ಯ ಓದಿನ ಹಸಿವಿರುವ ವ್ಯಕ್ತಿ ಎಂದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಾರ್ಯದರ್ಶಿ ಸುಂದರ ರಾಜ್ ಮಾತನಾಡಿ, ಅನಂತ್ ನಾಗ್ ನನ್ನ ಪಾಲಿಗೆ ಹಿರಿಯಣ್ಣನಂತೆ ಇರುವವರು, ಸದಾ ಮಾರ್ಗದರ್ಶನ ನೀಡುತ್ತಾ ಬಂದಿದ್ದಾರೆ. ನಿರ್ದೇಶಕರ ಪಾಲಿಗೆ ಅವರು ಟೆರರ್ ಎಂಬ ಮಾತಿದೆ. ಆದರೆ ಹೀಗೆ ಮಾಡುವ ಮೂಲಕವೇ ಅನಂತ್ ಅನೇಕ ನಿರ್ದೇಶಕರನ್ನು ಬೆಳೆಸಿದರು. ಕನ್ನಡದಲ್ಲಿ ಕಲಾತ್ಮಕ ಚಳವಳಿ ರೂಪುಗೊಳ್ಳುವಲ್ಲಿ ಅವರ ಕೊಡುಗೆ ಬಹಳಷ್ಟಿದೆ, ಅವರ ಮೂಲಕವೇ ಉತ್ತಮ ನಿರ್ದೇಶಕರು ಎನ್ನಿಸಿ ಕೊಂಡ ಪ್ರಶಸ್ತಿಗಳನ್ನು ಪಡೆದವರ ಸಂಖ್ಯೆ ಕೂಡ ದೊಡ್ಡದಾಗಿದೆ. ಆದರೆ ಅನಂತ್ ಎಲ್ಲಕ್ಕೂ ನಿರ್ಲಿಪ್ತರು, ಅವರಿಗೆ ಪದ್ಮ ಪ್ರಶಸ್ತಿ ಮಾತ್ರವಲ್ಲ ಫಾಲ್ಕೆ ಕೂಡ ಸಿಗಬೇಕು ಎಂದು ಅಭಿಪ್ರಾಯಪಟ್ಟರು.

ಅನಂತ್ ನಾಗ್ ಅವರ ನಿಕಟ ಒಡನಾಡಿ ಕಲಾವಿದ ರಮೇಶ್ ಭಟ್ ಮಾತನಾಡಿ, ಅನಂತ್ ಸದಾ ಹೊಸತನಕ್ಕೆ ತುಡಿಯುತ್ತಿರುವ ಕಲಾವಿದ, ಮಾಲ್ಗುಡಿ ಡೇಸ್ ರೂಪುಗೊಳ್ಳಲು ಕೂಡ ಅವರೇ ಕಾರಣ, ಅವರ ನಿರ್ಮಾಣದ ಚಿತ್ರಗಳಲ್ಲಿ ಭಾಗವಹಿಸಿ ನಿಕಟವಾಗಿ ಅವರ ಕಾರ್ಯ ವೈಖರಿಯನ್ನು ಗಮನಿಸಿದ್ದೇನೆ, ಸಮಯ ಎಂದರೆ ಹಣ ಎಂಬಂತಿರುವ ಮಾಧ್ಯಮದಲ್ಲಿ ಕೂಡ ತಮ್ಮ ಚಿತ್ರವಾದರೂ ಅವರು ಪರಿಪೂರ್ಣತೆ ತರಲು ಶ್ರಮಿಸುತ್ತಿದ್ದರು. ನೋಡಿ ಸ್ವಾಮಿ ನಾವಿರೋದು ಹೀಗೆ ಚಿತ್ರವನ್ನು ನಿರ್ಮಿಸುವಲ್ಲಿ ಅವರು ನೀಡಿದ ಪ್ರೋತ್ಸಾಹವನ್ನು ನೆನಪು ಮಾಡಿ ಕೊಂಡು ಮೇಲ್ನೋಟಕ್ಕೆ  ಒರಟಾಗಿ ಅವರ ವರ್ತನೆ ಕಂಡರೂ ಅದರ  ಉದ್ದೇಶ  ಒಳ್ಳೆಯದೇ ಆಗಿರುತ್ತಿತ್ತು ಎಂದು ಹೇಳಿದರು.

ಅನಂತ್ ನಾಗ್ ಯಾವುದೇ ಪಾತ್ರ  ನೀಡಿದರೂ ಅದಕ್ಕೆ  ಘನತೆ ತಂದು ಕೊಡುವ ಕಲಾವಿದರು ಎಂದು ವರ್ಣಿಸಿದರು.

ವಿಚಾರ ಸಂಕಿರಣದ ಅಧ್ಯಕ್ಷತೆಯನ್ನು ವಹಿಸಿದ್ದ ಸುಚಿತ್ರ  ಫಿಲಂ ಸೊಸೈಟಿಯ ಅಧ್ಯಕ್ಷ ಎಚ್.ಎನ್.ನರಹರಿ ರಾವ್ ಮಾತನಾಡಿ, ಅನಂತ್ ನಾಗ್ ಹಂಸ ಗೀತೆ, ಸ್ವಾತಿ ತಿರುನಾಳ್ ಅಂತಹ ಚಿತ್ರಗಳಲ್ಲಿ ಅದ್ಭುತವಾಗಿ ಪಾತ್ರ ನಿರ್ವಹಿಸಲು ಅವರಿಗಿದ್ದ ಸಂಗೀತ ಹಿನ್ನೆಲೆಯೇ ಕಾರಣ, ಯಾವುದೇ ಪಾತ್ರವನ್ನು ನೀಡಿದರು. ಅದನ್ನು ಆಳವಾಗಿ ಅಧ್ಯಯನ ಮಾಡಿ ಅಭಿನಯಿಸುವ ಅನಂತ್ ನಾಗ್ ಒಬ್ಬ ಸರ್ವ ಶ್ರೇಷ್ಟ ಕಲಾವಿದ ಎಂದು ವಿವರಿಸಿದರು.

ಭಾರತೀಯ ವಿದ್ಯಾ ಭವನದ ಮಾಧ್ಯಮ ಭಾರತಿ ನಿರ್ದೇಶಕ ಪ್ರೊ.ಎನ್.ಎಸ್.ಶ್ರೀಧರ ಮೂರ್ತಿ ಕಾರ್ಯಕ್ರಮವನ್ನು ನಿರೂಪಿಸಿದರು. ಭಾರತೀಯ ವಿದ್ಯಾಭವನದ ಜಂಟಿ ನಿರ್ದೇಶಕಿ ನಾಗಲಕ್ಷ್ಮಿ ರಾವ್ ಸೇರಿದಂತೆ ಭಾರತೀಯ ವಿದ್ಯಾ ಭವನ ಮತ್ತು ಸುಚಿತ್ರ ಸಿನಿ ಅಕಾಡಮಿ ಪದಾಧಿಕಾರಿಗಳು. ಅಪಾರ ಸಂಖ್ಯೆಯ ಅನಂತ್ ನಾಗ್ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಸೇರಿದ್ದರು.

ಉದ್ಘಾಟನೆಯ ಕಾರ್ಯಕ್ರಮದ ನಂತರ ಭಾರತೀಯ ವಿದ್ಯಾಭವನ ಮತ್ತು ಸುಚಿತ್ರ ಸಿನಿ ಅಕಾಡಮಿ ಎರಡೂ ಕಡೆ ಅನಂತ್ ಚಿತ್ರಗಳ  ಉತ್ಸವ ಆರಂಭವಾಯಿತು.

Leave a Reply