ಮನುವಾದಿ ಬಿಜೆಪಿಗರಲ್ಲದೆ ಮತ್ತಾರು ಇಂತಹ ಮಾತನಾಡಬಲ್ಲರು?

1 year ago

“ಈ ದೇಶದಲ್ಲಿ  “ಅಂಬೇಡ್ಕರ್.. ಅಂಬೇಡ್ಕರ್…. ಅಂಬೇಡ್ಕರ…. ಎನ್ನುವುದು ಒಂದು ಫ್ಯಾಷನ್ ಆಗಿದೆ.  ಅಂಬೇಡ್ಕರ್ ಅನ್ನುವ ಬದಲು ಅಷ್ಟೇ ಭಾರಿ ದೇವರನ್ನು ನೆನದರೆ ಸ್ವರ್ಗ ಸಿಗುತ್ತದೆ” ಎನ್ನುತ್ತಾರೆ ಈ ದೇಶದ ಘನವೆತ್ತ ಗ್ರಹಮಂತ್ರಿಗಳು. ಅದನ್ನು ಅವರು ಹೇಳಿದ್ದು ಪ್ರಜಾಪ್ರಭುತ್ವದ ದೇಗುಲವಾದ ಸಂಸತ್ತಿನಲ್ಲಿ !!!

ವ್ಹಾ.. ಗ್ರಹಮಂತ್ರಿಗಳೆ ಎಂಥಾ ಮಾತು ಸ್ವಾಮಿ….
ಮನುವಾದಿ ಬಿ. ಜೆ. ಪಿ. ಗರಲ್ಲದೆ ಮತ್ತಾರು ಇಂತಹ ಮಾತನಾಡಬಲ್ಲರು?

ಗ್ರಹಮಂತ್ರಿಗಳೆ ದೇವರು ಯಾರು ಹೇಳಬಲ್ಲಿರಾ? ನಾವು ನೀವು ಪೂಜಿಸುವ ಕಲ್ಲು ಮಣ್ಣು ಮರದ ದೇವರು ದೇವರುಗಳೆ?
ಇದೇ ದೇವರುಗಳು ನಿಮ್ಮನ್ನು ಗ್ರಹಮಂತ್ರಿ ಮಾಡಿವೆಯೇ?
ನನ್ನ ಭಾವನೆಯಲ್ಲಿ ತಾವು ಗ್ರಹಮಂತ್ರಿ ಯಾದದ್ದು ನಿಮ್ಮ ಕ್ಷೇತ್ರದ ಮತದಾರನಾದ ಬಹುಸಂಖ್ಯಾತ ಶೂದ್ರ ಮತ್ತು ವೈಶ್ಯರಿಂದ. ಇವರೊಂದಿಗೆ ನಿಮ್ಮ ಪರಿಶ್ರಮ, ನಿಮ್ಮಜಾಣ್ಮೇ, ನಿಮ್ಮಶ್ರದ್ಧೆ, ಮತ್ತು ಇವುಗಳಿಗಿಂತ  ಮೇಲಾಗಿ ನಿಮ್ಮಲ್ಲಿರುವ ಹಣ ಮತ್ತು  ಕುತಂತ್ರದ ರಾಜಕಾರಣದಿಂದ ನೀವಿಂದು ಈ ದೇಶದ ಸಂವಿಧಾನ ಬದ್ಧವಾದ ಗ್ರಹಮಂತ್ರಿ.

ಒಂದೆರಡು ಕ್ಷಣ ತಿರುಪತಿ ತಿಮ್ಮಪ್ಪನನ್ನು ದರ್ಶನ ಮಾಡಿದ ನಮಗೂ ನಿಮಗೂ ಇಷ್ಟೋಂದು ಐಶ್ವರ್ಯ ಸಿಕ್ಕಿದೆಯಂದು ಒಂದು ಕ್ಷಣ ಭಾವಿಸೋಣ. (ಕಾರಣ ನಮ್ಮಂತವರಿಗೆ ತಿರುಪತಿ ತಮ್ಮಪ್ಪ ದರ್ಶನ ಕೇವಲ ೫-೬ ಸೆಕೆಂಡುಗಳು ಮಾತ್ರ.) ಆದರೆ  ಇನ್ನೊಂದು ಬದಿಯಲ್ಲಿ ದಿನನಿತ್ಯ ವೆಂಕಟರಮಣ ಸ್ವಾಮಿಯನ್ನು ತೊಳೆದು, ಸ್ವಚ್ಛಗೊಳಿಸಿ, ಅಲಂಕಾರ ಮಾಡಿ, ಪೂಜಿಸಿ, ಸಾವಿರಾರು ಬಾರಿ ವೆಂಕಟರಮಣಾ ಗೋವಿಂಧಾ .. ಗೋವಿಂಧ… ಎಂದು ಭಜಿಸುತ್ತ ನಿತ್ಯ ಆರೇಳು ಘಂಟೆ ಪೂಜಿಸುವನು ತಿಮ್ಮಪ್ಪನ ಅರ್ಚಕನಿಂದು ಅದಾನಿಯೇ  ಅಥವಾ ಆಂಬಾನಿಯೇ? ಈ ದೇಶದ ಅತ್ಯುನ್ನತ ನಾಯಕನೆ? ಜಗತ್ಪ್ರಸಿದ್ಧ ವಿಜ್ಞಾನಿಯೇ? ಅಥವಾ ನೊಬಲ್ ಪ್ರಶಸ್ತಿ ವಿಜೇತ ಸಾಹಿತಿಯೆ?  ತಿರುಪತಿ ತಮ್ಮಪ್ಪನನ್ನೆ ಜೀವನ ಪರ್ಯಂತ ಪೂಜಿಸಿ, ಕಾಲವಾದ ಹಿಂದಿನ ಅರ್ಚಕರ ಹೆಸರನನ್ನೇನಾದರೂ ನೀವು ಹೇಳಬಲ್ಲಿರಾ ಗ್ರಹಮಂತ್ರಿಗಳೆ? ಇವರು ಅಂದು ಬದುಕಿ ಇಂದು ಸತ್ತಿರುವಲ್ಲವೆ?

ಸಂವಿಧಾನ ಬರೆದು, “ದೇವರೆಂಬುದು ಕೇವಲ ಭ್ರಮೆ” ಎಂದ್ಹೇಳಿ ಸತ್ತುಬದುಕಿದ ಅಂಬೇಡ್ಕರ ಹೇಸರು ಜಗತ್ತೇ ಹೇಳುತ್ತದೆ. ಯಾಕೆ?

ಸ್ವರ್ಗಸೇರಲು ಬಯಸಿ ದೇವರ ಜಪಮಾಡಿ ಮಣ್ಣಲ್ಲಿ ಮಣ್ಣಾಗಿಹೋದ ತಾತನ ಹೆಸರು ಅವನ  ಮೊಮ್ಮಗನಿಗೂ ಸಹ ಗೊತ್ತಿಲ್ಲದವರೆಷ್ಟು ಜನರಿದ್ದಾರೆ ಗ್ರಹಮಂತ್ರಿಗಳೆ?

ಸ್ವರ್ಗ ಎಲ್ಲಿದೆ ಗ್ರಹ ಮಂತ್ರಿಗಳೆ? ಯಾರಾದರೂ ಸ್ವರ್ಗವಾಸಿಗಳು ಮರಳಿ ಭೂಮಿಯಲ್ಲಿ ಅವತರಿಸಿ ತಾವು ಸ್ವರ್ಗವಾಸಿಗಳೆಂದು ತಮಗೆ ಅಫಿಡೆವಿಟ್ ಸಲ್ಲಿಸಿದ್ದಾರೆಯೆ?

ಮುಂಬೈ ದಾಳಿಯಲ್ಲಿ ಅಮಾಯಕರನ್ನು ಕೊಂದ ಪಾಕಿಸ್ಥಾನದ ಅಜ್ಮಲ್ ಕಸಬನು ಸಹ ಸ್ವರ್ಗ ಸೇರಲು ತಾನೆ ಮುಂಬೈಯಲ್ಲಿ ಅಮಾಯಕರನ್ನು ಮಾರಣಹೋಮ ಮಾಡಿದ್ದು. ಅವನೀಗ ಸ್ವರ್ಗ ವಾಸಿಯೇ? ಅವನೂ ಸ್ವರ್ಗವಾಸಿಯಾದರೆ ಅಲ್ಲಿಯ ಹಿಂದೂಗಳ ಗತಿ ಏನು ಗ್ರಹಮಂತ್ರಿಗಳೆ? ಅಥವಾ ಹಿಂದೂಗಳಿಗೊಂದು ಸ್ವರ್ಗ  ಮುಸ್ಲಿಂರಿಗೊಂದು ಸ್ವರ್ಗ ಮತ್ತು  ಕ್ರಿಶ್ಚಿಯನ್ನರಿಗೊಂದು ಸ್ವರ್ಗವೆಂದು ಧರ್ಮಾಧಾರಿತ ಸ್ವರ್ಗಗಳಿವಿಯೇ ಗ್ರಹಮಂತ್ರಿಗಳೆ?

ಕಾಣದ ಸ್ವರ್ಗ ನರಕಗಳನ್ನು ತೋರಿಸಿಯೇ ಅಲ್ಲವೇ ಮನುವಾದಿಗಳು ಭಾರತವನ್ನು ಅಧೋಗತಿಗೆ ತಳ್ಳಿದ್ದು. ಎರಡು ಸಾವಿರ ವರ್ಷಗಳ ಕಾಲ ಆಳಿ, ಸಮಾಜವನ್ನು ವಿಭಜಿಸಿ, ತಮ್ಮ ಸ್ವಾರ್ಥಕ್ಕಾಗಿ ತಾವು  ಜೀವಿಸುವ ಭೂಮಿಯನ್ನೇ ನರಕವಾಗಿಸಿದ್ದು.

“ಆಚಾರವೇ ಸ್ವರ್ಗ ಅನಾಚಾರವೆ ನರಕ” ಎಂಬ ಶರಣರ ಮಾತು ವೈದಿಕರಾದ ತಮಗೆಂತು ತೀಳಿದೀತು. ದೀನ ದಲಿತರ, ಬುದ್ಧಿವಂತರ ದೇವರು ಅಂಬೇಡ್ಕರ್. ನಮಗೆ ಮಹಾತ್ಮಬುದ್ಧ, ಬಸವ,ಗಾಂಧಿ, ಅಂಬೇಡ್ಕರ, ನಮ್ಮ ಅಪ್ಪ ಅವ್ವರುಗಳೆ ದೇವರು. ಅವರು ನಡೆದಾಡಿದ ಭೂಮಿಯೇ ಸ್ವರ್ಗ.

ಜಾತಿ ಮತ ಪಂತವೆಂದು ಜೀವ ಜೀವಗಳಲ್ಲಿ  ವಿಭಜಿಸುವ ಭೂಮಿಯೇ ನರಕ. ನಮ್ಮ ದೇವರನ್ನು ಪೂಜಿಸಲು ನಮ್ಮನ್ನು ಬಿಟ್ಟುಬಿಡಿ ಗ್ರಹಮಂತ್ರಿಗಳೆ. ಶರಣು.

– ಜಿ ಬಿ ಪಾಟೀಲ್, ಪ್ರಧಾನ ಕಾರ್ಯದರ್ಶಿ, ಜಾಗತಿಕ ಲಿಂಗಾಯತ ಮಹಾಸಭಾ

Leave a Reply