ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ಅಂಬೇಡ್ಕರ್ ಕುರಿತ ಅಮಿತ್ ಶಾ ಹೇಳಿಕೆ

1 year ago

ಬೆಳಗಾವಿ: ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಕುರಿತಾಗಿ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ನೀಡಿರುವ ಹೇಳಿಕೆ ವಿಧಾನ ಮಂಡಲದ ಉಭಯ ಸದನಗಳಲ್ಲಿ ಪ್ರತಿಧ್ವನಿಸಿ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ವಾಕ್ ಸಮರ ಹಾಗೂ ಮಾತಿನ ಚಕಮಗೆ ಕಾರಣವಾಗಿ ಕೋಲಾಹಲದ ವಾತಾವರಣ ಸೃಷ್ಟಿಸಿತು.

ವಿಧಾನಮಂಡಲದ ಚಳಿಗಾಲ ಅಧಿವೇಶನದ ಕೊನೆಯ ದಿನ ಉಭಯ ಸದನಗಳಲ್ಲಿ ಕಾವೇರಿದ ಚರ್ಚೆ ಮಾತಿನ ಚಕಮಕಿಗೆ ಕಾರಣವಾಗಿ ಉಭಯ ಸದನಗಳ ಕಲಾಪವನ್ನು ಹಲವು ಬಾರಿ ಮುಂದೂಡಬೇಕಾಯಿತು.

ಉಭಯ ಸದನಗಳ ಕಲಾಪ ಆರಂಭವಾಗುತ್ತಿದ್ದಂತೆ ಆಡಳಿತ ಪಕ್ಷದ ಸದಸ್ಯರು ಕೇಂದ್ರ ಗೃಹ ಮಂತ್ರಿ ಹೇಳಿಕೆ ಖಂಡಿಸಿ ತಮ್ಮ ಆಸನಗಳ ಮುಂದೆ ಅಂಬೇಡ್ಕರ್ ಅವರ ಭಾವಚಿತ್ರವನ್ನು ಇರಿಸಿಕೊಂಡಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು ಕಾಂಗ್ರೆಸ್ ನಿರಂತರವಾಗಿ ಅಂಬೇಡ್ಕರ್ ಅವರನ್ನು ಅಪಮಾನ ಮಾಡಿದೆ ಎಂದು ಆರೋಪಿಸಿ ಸಭಾತ್ಯಾಗ ಮಾಡಿದರು.

ನಂತರ ಸದನಕ್ಕೆ ಆಗಮಿಸಿದ ಬಿಜೆಪಿ ಸದಸ್ಯರು ರಾಜ್ಯ ಸರ್ಕಾರದ ವಿರುದ್ಧ ಹಲವು ಆರೋಪಗಳನ್ನು ಮಾಡಿದ ಭಿತ್ತಿ ಪತ್ರಗಳನ್ನು ತಂದು ತಮ್ಮ ಆಸನದ ಮುಂದೆ ಅಳವಡಿಸಿಕೊಂಡರು. ಈ ಭಿತ್ತಿ ಪತ್ರಗಳಲ್ಲಿ ಅಂಬೇಡ್ಕರ್ ಅವರನ್ನು ಸೋಲಿಸಿದ್ದ ಕಾಂಗ್ರೆಸ್, ಅಪಮಾನಿಸಿದ್ದು ಕಾಂಗ್ರೆಸ್, ಕಳಪೆ ಔಷಧಿ ಉಪಯೋಗಿಸಿದ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ. ಸಿದ್ದರಾಮಯ್ಯ ಅವರ ಸರ್ಕಾರ ತೊಲಗಲಿ, ಬಡವರ ಜೀವ ಉಳಿಯಲಿ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತೊಲಗಲಿ, ಅಮಾಯಕರ ಜೀವ ಉಳಿಯಲಿ. ಅನ್ನದಾತರ ಜಮೀನು ಕಬಳಿಸಿದ ಜಮೀರ್ ಗೆ ಧಿಕ್ಕಾರ, ಭ್ರಷ್ಟ ಕಾಂಗ್ರೆಸ್ ಸರ್ಕಾರ ತೊಲಗಲಿ, ಜನರಿಗೆ ನ್ಯಾಯ ದೊರಕಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಿ, ತನಿಖೆ ಎದುರಿಸಲಿ ಎಂಬೆಲ್ಲಾ ಘೋಷಣೆಗಳನ್ನು ಬರೆಯಲಾಗಿತ್ತು.

ಇದನ್ನು ಕಂಡ ಕಾಂಗ್ರೆಸ್ ಶಾಸಕರು ಮತ್ತು ಸಚಿವರು ಅಂಬೇಡ್ಕರ್ ಹೆಸರು ಹೇಳುವುದು ಒಂದು ವ್ಯಸನ ಎಂದಿರುವ ಕೇಂದ್ರ ಗೃಹಸಚಿವರನ್ನು ವಜಾ ಮಾಡಬೇಕು ಎಂದು ಘೋಷಣೆ ಹಾಕತೊಡಗಿದರು. ಅಮಿತ್ ಶಾ ವಿರುದ್ಧ ಘೋಷಣೆ ಕೂಗಿದ್ದಲ್ಲದೆ, ಜೈಭೀಮ್ ಘೋಷಣೆಗಳು ಮೊಳಗಿದವು. ಶಾಸಕರ ಜೊತೆಗೆ ಸಚಿವರೂ ಕೂಡ ಪ್ರತಿಭಟನೆಯಲ್ಲಿ ಭಾಗವಹಿಸಿದರು.

ಇದಕ್ಕೆ ಪ್ರತಿಯಾಗಿ ಬಿಜೆಪಿ ಶಾಸಕರು ಅಂಬೇಡ್ಕರ್ ಅವರನ್ನು ಸೋಲಿಸಿದ್ದು ಕಾಂಗ್ರೆಸ್, ಅಪಮಾನಿಸಿದ್ದು ಕಾಂಗ್ರೆಸ್ ಎಂದು ಘೋಷಣೆ ಕೂಗಿದರು. ಆಡಳಿತ ಪಕ್ಷದ ಶಾಸಕರು, ಸಚಿವರು ಅಂಬೇಡ್ಕರ್ ಫೋಟೊ ಹಿಡಿದು ಸಭಾಧ್ಯಕ್ಷರ ಮುಂದಿನ ಬಾವಿಯ ಸಮೀಪಕ್ಕೆ ಆಗಮಿಸಿ ಪ್ರತಿಭಟನೆ ನಡೆಸಿದರೆ, ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಅದೇ ರೀತಿ ಬಾವಿಯ ಸುತ್ತ ಬಂದು ನಿಂತು ಘೋಷಣೆ ಕೂಗುವ ಜೊತೆಗೆ ಕಾಗದ ಪತ್ರಗಳನ್ನು ಹರಿದೆಸೆದು ಘೋಷಣೆ ಕೂಗಿದರು.

ಪರಿಸ್ಥಿತಿ ನಿಭಾಯಿಸಲು ಸಭಾಧ್ಯಕ್ಷ ಯು.ಟಿ.ಖಾದರ್ ಹರಸಾಹಸಪಟ್ಟರು. ಕೊನೆಯ ದಿನದ ಕಲಾಪ ಸುಗಮವಾಗಿ ನಡೆಯಲಿ, ಜನಪರ ಚರ್ಚೆಯಾಗಲಿ, ಸಹನೆಯಿಂದ ವರ್ತಿಸಿ ಎಂದು ಎಷ್ಟೇ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ. ಭಿತ್ತಿಪತ್ರಗಳನ್ನು ಪ್ರದರ್ಶಿಸುವಂತಿಲ್ಲ ಎಂದು ಹಲವು ಬಾರಿ ತಿಳಿ ಹೇಳಿದರೂ ಯಾರೂ ಕೇಳಿಸಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಖುದ್ದು ಸಚಿವರೇ ಘೋಷಣೆ ಕೂಗುತ್ತಿದ್ದುದು ಅಚ್ಚರಿ ಮೂಡಿಸುತ್ತಿತ್ತು. ಸಿಎಂ, ಡಿಸಿಎಂ ಮೂಕ ಪ್ರೇಕ್ಷಕರಾಗಿ ಕುಳಿತಿದ್ದರು. ಪರಿಸ್ಥಿತಿ ತಹಬದಿಗೆ ಬರದಿದ್ದಾಗ ಸಭಾಧ್ಯಕ್ಷರು  ಕಲಾಪವನ್ನು ಕೆಲ ನಿಮಿಷಗಳ ಕಾಲ ಮುಂದೂಡಿದರು.

ಮತ್ತೆ ಸದನ ಸಮಾವೇಶಗೊಂಡಾಗ ಇದೇ ಪರಿಸ್ಥಿತಿ ನಿರ್ಮಾಣವಾಯಿತು. ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರು ಪರಸ್ಪರ ಘೋಷಣೆಗಳನ್ನು ಮೊಳಗಿಸಿದ ಕಾರಣ ಗದ್ದಲದ ವಾತಾವರಣ ನಿರ್ಮಾಣವಾಗಿ ಕಲಾಪವನ್ನು ಮತ್ತೆ ಕೆಲಕಾಲ ಮುಂದೂಡಬೇಕಾಯಿತು.

Leave a Reply