ಅಂಬೇಡ್ಕರ್ ವಿಷಯದಲ್ಲಿ ವಿಧಾನ ಪರಿಷತ್ತಿನಲ್ಲೂ ಗದ್ದಲ

1 year ago

ಬೆಳಗಾವಿ: ವಿಧಾನಪರಿಷತ್ತಿನಲ್ಲೂ ಈ ವಿಷಯ ಪ್ರತಿಧ್ವನಿಸಿತು. ಸದನ ಆರಂಭವಾಗುತ್ತಿದ್ದಂತೆ ಸಭಾಪತಿ ಹೊರಟ್ಟಿ ಅವರು ಪ್ರಶ್ನೋತ್ತರ ಕಲಾಪ ಕೈಗೆತ್ತಿಕೊಳ್ಳುವುದಾಗಿ ಪ್ರಕಟಿಸಿದರು.

ಈ ವೇಳೆ ಕಾಂಗ್ರೆಸ್ನ ಹಿರಿಯ ಸದಸ್ಯ ಬಿ.ಕೆ.ಹರಿಪ್ರಸಾದ್ ನೇತೃತ್ವದಲ್ಲಿ ಕಾಂಗ್ರೆಸ್ ಸದಸ್ಯರು ಕೈಯಲ್ಲಿ ಅಂಬೇಡ್ಕರ್ ಅವರ ಪೋಟೋ ಹಿಡಿದುಕೊಂಡು ಪ್ರತಿಭಟನೆ ನಡೆಸಲು ಮುಂದಾದರು. ಅಂಬೇಡ್ಕರ್ ಅವರಿಗೆ ಅಮಿತ್ ಷಾ ಅಪಮಾನ ಮಾಡಿದ್ದಾರೆ. ಇದರ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ವಿಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ, ಸಿ.ಟಿ.ರವಿ ಸೇರಿದಂತೆ ಹಲವಾರು ಸದಸ್ಯರು ಇದರ ಬಗ್ಗೆ ವಿಸ್ತೃತ ಚರ್ಚೆಯಾಗಲಿ. ನಾವು ಹೆದರಿಕೊಂಡು ಹೋಗುವುದಿಲ್ಲ ಎಂದರು.

ಹರಿಪ್ರಸಾದ್ ಬೆಂಬಲಕ್ಕೆ ನಿಂತ  ಸಚಿವರಾದ ಪರಮೇಶ್ವರ್, ಬೋಸರಾಜು ಸೇರಿದಂತೆ ಹಲವಾರು ಸದಸ್ಯರು ಚರ್ಚೆಯಾಗಲಿ. ಸಂವಿಧಾನದ ಶಿಲ್ಪಿ ಅಂಬೇಡ್ಕರ್ ಅವರಿಗೆ ಅಮಿತ್ ಷಾ ಅಪಮಾನ ಮಾಡಿದ್ದಾರೆ. ಕೂಡಲೇ ನೈತಿಕ ಹೊಣೆ ಹೊತ್ತು ತಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಡಾ. ಜಿ.ಪರಮೇಶ್ವರ್ ಮಾತನಾಡಿ, ಬಿಜೆಪಿಯ ಹಿಡನ್ ಅಜೆಂಡಾ ಕೊನೆಗೂ ಏನೆಂಬುದು ಇದರಿಂದಲೇ ಗೊತ್ತಾಗಿದೆ. ಸಂವಿಧಾನ ಎಂದರೆ ಇವರಿಗೆ ಒಂದು ರೀತಿಯಲ್ಲಿ ಅಲರ್ಜಿ. ಕೇಂದ್ರದ ಗೃಹ ಸಚಿವರೇ ಈ ರೀತಿಯಲ್ಲಿ ಹೇಳಿಕೆ ನೀಡಿದರೆ, ಸಂವಿಧಾನ ರಕ್ಷಣೆ ಮಾಡುವವರು ಯಾರು? ಮೊದಲು ಅವರು ದೇಶದ ಜನತೆಯ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.

ಇದನ್ನು ವಿರೋಧಿಸಿದ ಛಲವಾದಿ ನಾರಾಯಣ ಸ್ವಾಮಿ, ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದವರು ಕಾಂಗ್ರೆಸ್ ಪಕ್ಷದವರು. ಚುನಾವಣೆಯಲ್ಲಿ ಸೋಲಿಸಿದವರು ನಮಗೆ ನೀತಿ ಪಾಠ ಹೇಳುತ್ತಿದ್ದಾರೆ. ಕಾಂಗ್ರೆಸ್ ತಿರುಚಿದ ವಿಡಿಯೋವನ್ನು ಬಿತ್ತರಿಸಿದೆ. ಮೂಲ ವಿಡಿಯೋವನ್ನು ಸದನದಲ್ಲಿ ಹಾಕಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.

ಇವರ ನಾಟಕಕ್ಕೆ ಅಸ್ಕರ್ ಪ್ರಶಸ್ತಿ ಕೊಡಬೇಕು. ಚರ್ಚೆಯಲ್ಲಿ ಭಾಗವಹಿಸಲು ನಮಗೂ ಅವಕಾಶ ಕೊಡಿ ಎಂದು ಒತ್ತಾಯ ಮಾಡಿದರು. ಆಗ ಸಭಾಪತಿ ಅವರು ಪ್ರಶ್ನೋತ್ತರ ಅವಧಿ ಮುಗಿದ ನಂತರ ಚರ್ಚೆಗೆ ಅವಕಾಶ ನೀಡುವುದಾಗಿ ಹೇಳಿದರು.

Leave a Reply