ರಾಜರಾಜೇಶ್ವರಿ ನಗರ ಅನುದಾನಕ್ಕೆ ಕತ್ತರಿ ಆರೋಪ: ಪ್ರತಿಭಟನೆ

3 years ago

#Allegation #cutting #RajarajeshwariNagar #grant #muniratna #bsyadiyurappa #DKsivakumar

ಬೆಂಗಳೂರು: ರಾಜಧಾನಿ ಮಹಾನಗರ ಬೆಂಗಳೂರಿನಲ್ಲಿ ಇದೀಗ ಹೊಸ ರೀತಿಯ ರಾಜಕಾರಣ ಆರಂಭವಾಗಿದೆ. ತಮ್ಮ ಕ್ಷೇತ್ರದ ಅಭಿವೃದ್ಧಿಗೆ ನೀಡಲಾಗಿದ್ದ ಅನುದಾನ ಸ್ಥಗಿತಗೊಳಿಸಲಾಗಿದೆ ಎಂದು ಆರೋಪಿಸಿ ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ಮುನಿರತ್ನ ಏಕಾಂಗಿಯಾಗಿ ಧರಣಿ ನಡೆಸಿದರು. ಅವರಿಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿ ಹಲವರು ಬೆಂಬಲ ವ್ಯಕ್ತಪಡಿಸಿದರು.

ಆರ್‌.ಆರ್.ನಗರ ವಿಧಾನಸಭಾ ಕ್ಷೇತ್ರಕ್ಕೆ ಬಿಡುಗಡ ಮಾಡಲಾದ ಅನುದಾನ ಕೈಬಿಟ್ಟಿದ್ದು, ಅದನ್ನು ಮರು ಬಿಡುಗಡೆಗೆ ಆಗ್ರಹಿಸಿ ಮುನಿರತ್ನ ಅವರು ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ಆರಂಭಿಸಿದರು. ಇವರ ಜೊತೆಗೆ ಧರಣಿ ಮಾಡುತ್ತಿದ್ದ ಎಲ್ಲ ಪ್ರತಿಭಟನಾನಿರತ 25ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು. ಈ ಹಿನ್ನೆಲೆಯಲ್ಲಿ ಮುನಿರತ್ನ ಏಕಾಂಗಿಯಾಗಿ ಪ್ರತಿಭಟನೆ ಮುಂದುವರಿಸಿದರು.

ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರಕ್ಕೆ ನೀಡಿದ್ದ ಅನುದಾನವನ್ನು ರದ್ದುಗೊಳಿಸಿ ಬೇರೆ ಕ್ಷೇತ್ರಕ್ಕೆ ಕೊಟ್ಟಿರುವುದು ನ್ಯಾಯವೇ ಎಂದು ಪ್ರಶ್ನಿಸುವ ಫಲಕವನ್ನು ಹಿಡಿದು ಧರಣಿ ನಡೆಸಿದರು. ಆ ಫಲಕದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್ ಅವರ ಭಾವಚಿತ್ರವೂ ಇತ್ತು

ಪ್ರತಿಭಟನಾ ಸ್ಥಳಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಗಮಿಸಿ, ಶಾಸಕ ಮುನಿರತ್ನ ಅವರನ್ನು ಧರಣಿ ಹಿಂಪಡೆಯುವಂತೆ ಮನವೊಲಿಸಿದರು. ಬಿಎಸ್ವೈ ಮಾತಿಗೆ ಗೌರವ ಕೊಟ್ಟು ಪ್ರತಿಭಟನೆಯನ್ನು ಹಿಂಪಡೆದರು.

ಈ ವೇಳೆ ‌ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣಾ ಫಲಿತಾಂಶ ಬಂದ ದಿನದಿಂದ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಶಾಸಕನಾಗಿ ಕೆಲಸ ಮಾಡಲು ಕಷ್ಟ ಆಗುತ್ತಿದೆ. ಪೊಲೀಸ್ ದೌರ್ಜನ್ಯ, ಕಾಂಗ್ರೆಸ್ ಬೆಂಬಲಿಗರಿಂದ ಸಾರ್ವಜನಿಕರಿಗೆ ಕಿರುಕುಳ ಹೆಚ್ಚಾಗುತ್ತಿದೆ. ನಾನು ಒಂದು ವಾರ್ಡ್ ತನಿಖೆಗೆ ಪತ್ರ ಬರೆದರೆ ಇಡೀ ಕ್ಷೇತ್ರದ ಹಣ ತಡೆದಿದ್ದಾರೆ ಎಂದು ಆಪಾದಿಸಿದರು.

ಕ್ಷೇತ್ರದ ಪರಾಜಿತ ಅಭ್ಯರ್ಥಿ ಮತ್ತು ಅವರ ತಂದೆ ನೇರವಾಗಿ ಅಧಿಕಾರಿಗಳ ಸಭೆ, ದೂರವಾಣಿಯಲ್ಲಿ ಮಾಡುತ್ತಿದ್ದಾರೆ. ಡಿ.ಕೆ.ಸುರೇಶ್ ಅವರು ಸಂಸದರಾಗಿರುವ ಕ್ಷೇತ್ರಕ್ಕೆ ಹಣ ಕೊಡಿಸುವುದು ಅವರ ಕರ್ತವ್ಯ. ಅನುದಾನ ಬೇರೆಡೆ ವರ್ಗಾವಣೆ ಮಾಡಿದರೂ ಒಂದೇ ಒಂದು ಮಾತು ಮಾತಾಡಿಲ್ಲ. ಎಲ್ಲಾ ಶಾಸಕರನ್ನು ನೋಡುವ ರೀತಿಯಲ್ಲೇ ನನ್ನನ್ನೂ ನೋಡಿ ಎಂದು ಮನವಿ ಮಾಡುತ್ತಿರುವುದಾಗಿ ತಿಳಿಸಿದರು.

ನಂತರ ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಜವಾಬ್ದಾರಿ ಹೊತ್ತಿರುವ ಉಪ ಮುಖ್ಯಮಂತ್ರಿ ಶಿವಕುಮಾರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

Leave a Reply