10 ಲಕ್ಷ ರೂಪಾಯಿ ಪರಿಹಾರ ನಿಗದಿ ಮಾಡಿ ಎಂದು ಮನವಿ
ಬೆಂಗಳೂರು: ಆಸಿಡ್ ದಾಳಿಗೆ ಒಳಗಾದ ಸಂತ್ರಸ್ತ ಯುವತಿಯ ಕಾಸ್ಮೆಟಿಕ್ ಸರ್ಜರಿ ಶಸ್ತ ಚಿಕಿತ್ಸೆಗೆ ತಗಲುವ ವೆಚ್ಚವನ್ನು ಸರ್ಕಾರ ಭರಿಸುವಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಅರಣ್ಯ ಅಭಿವೃದ್ದಿ ನಿಗಮದ ನಿರ್ದೇಶಕಿ ಭಾಗ್ಯವತಿ ಅಮರೇಶ್ ಕೋರಿದ್ದಾರೆ.
ಈ ಕುರಿತು ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಪತ್ರ ಬರೆದಿರುವ ಅವರು, ಆಸಿಡ್ ದಾಳಿ ಮಾಡಿದ ದುಷ್ಕರ್ಮಿ ವ್ಯಕ್ತಿಗೆ ಮತ್ತು ವ್ಯಕ್ತಿಯ ಕುಟುಂಬಕ್ಕೆ ಸಂಬಂಧಿಸಿದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ದಾಳಿಗೆ ಒಳಗಾದ ಯುವತಿಯ ಕುಟುಂಬಕ್ಕೆ ವರ್ಗಾವಣೆ ಮಾಡಬೇಕು ಎಂದಿದ್ದಾರೆ.
ಈ ಹಿಂದೆ ಇದೇ ರೀತಿ ದಾಳಿಗೆ ಒಳಗಾದವರು ಮತ್ತೆ ಅತ್ಯಾಚಾರಕ್ಕೆ ಒಳಗಾಗುವವರ ಪ್ರಕರಣಗಳಲ್ಲಿ ದಾಳಿ ನಡೆಸಿದ ವ್ಯಕ್ತಿಯ ಸಂಪೂರ್ಣ ಆಸ್ತಿಯನ್ನು ಸರ್ಕಾರ ಮುಟ್ಟಗೋಲು ಹಾಕಿಕೊಂಡು ಸಂತ್ರಸ್ತೆಗೆ ವರ್ಗಾವಣೆ ಮಾಡಬೇಕು. ಇದಲ್ಲದೆ ಮಹಿಳೆಯರ ಮೇಲೆ ದೌರ್ಜನ್ಯ ಮಾಡಿ ಮಹಿಳೆಯರ ಬದುಕನ್ನು ಮೂರಾಬಟ್ಟೆ ಮಾಡುವ ಎಲ್ಲಾ ಪ್ರಕರಣಕ್ಕೂ ಸಂಬಂಧಿಸಿದಂತೆ ಮಹಿಳೆಯ ಬದುಕು ಹಾಳು ಮಾಡಿದ ವ್ಯಕ್ತಿಯ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಮತ್ತು ಸಂತ್ರಸ್ತೆಯ ಹೆಸರಿಗೆ ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿದ್ದಾರೆ.
ಆಸಿಡ್ ದಾಳಿಗೆ ಒಳಗಾದ ನತದೃಷ್ಟ ಸಂತ್ರಸ್ತ ಮಹಿಳೆಯರಿಗೆ ಕೇಂದ್ರ ಸರ್ಕಾರದ PMNRF ಅಡಿಯಲ್ಲಿ ಒಂದು ಲಕ್ಷ ರೂಪಾಯಿ ಪರಿಹಾರ ಸಿಗುತ್ತದೆ. ಅದೇ ರೀತಿ ರಾಜ್ಯ ಸರ್ಕಾರದಿಂದ ನಿಗದಿ ಪಡಿಸಿರುವ ಶೇಕಡಾವಾರು ಸುಟ್ಟ ಗಾಯಗಳಿಗೆ ಇಂತಿಷ್ಟು ಪರಿಹಾರವನ್ನು ನಿಗದಿಪಡಿಸಿದ್ದಾರೆ. ಆದರೆ ಕನಿಷ್ಠ ಎಲ್ಲಾ ರೀತಿಯ ಆಸಿಡ್ ನಿಂದ ಸುಟ್ಟ ಗಾಯಾಳುಗಳಿಗೆ ಗರಿಷ್ಠ 10 ಲಕ್ಷ ರೂಪಾಯಿಗಳ ಪರಿಹಾರವನ್ನು ದಾಳಿಗೆ ಒಳಗಾದ ಮಹಿಳೆಗೆ ದೊರಕುವಂತೆ ರಾಜ್ಯ ಸರ್ಕಾರದ ನಿಧಿಯನ್ನು ತಕ್ಷಣವೇ ಪ್ರಾರಂಭಿಸಬೇಕು ಎಂದಿದ್ದಾರೆ.
ಅಲ್ಲದೆ ಇಂತಹ ಮಹಿಳೆಯರಿಗೆ ಸರ್ಕಾರಿ ನೌಕರಿ ಸಿಗುವಂತೆ ಮೀಸಲಿಡಬೇಕು. ಇದರಿಂದಾಗಿ ಅತ್ಯಾಚಾರಕ್ಕೆ ಮತ್ತು ಆಸಿಡ್ ದಾಳಿಗೆ ಒಳಗಾದ ಮಹಿಳೆಯರಿಗೆ ಸ್ವಲ್ಪ ಮಟ್ಟಗೆ ನ್ಯಾಯ ದೊರಕಿದಂತಾಗುತ್ತದೆ. ಈ ರೀತಿಯ ಕಠಿಣ ಕ್ರಮ ಕೈಗೊಳ್ಳದಿದ್ದಲ್ಲಿ ಪದೇಪದೇ ಇಂತಹ ಕ್ರೂರ ಘಟನೆಗಳು ನಡೆಯುತ್ತಲೇ ಇರುತ್ತವೆ. ಹತೋಟಿಗೆ ಬರುವುದಿಲ್ಲ. ತಪ್ಪು ಮಾಡಿದ ವ್ಯಕ್ತಿಗಳಿಗೆ ಕೋರ್ಟ್ ನಿಂದ ಜಾಮೀನು ಸಿಗುತ್ತದೆ. ಇದರಿಂದಾಗಿ ಇಂತಹ ತಪ್ಪು ಮಾಡುವ ವ್ಯಕ್ತಿಗಳಿಗೆ ಭಯ ಇಲ್ಲದಂತಾಗುತ್ತದೆ. ಆದುದರಿಂದ ಇಂತಹ ಘಟನೆಗಳನ್ನು ತಡೆಗಟ್ಟಲು ಮೇಲ್ಕಂಡ ರೀತಿ ಕಠಿಣ ಕಾನೂನು ಕ್ರಮ ಕೈಗೊಂಡರೆ ಇಂತಹ ಪ್ರಕರಣಗಳು ನಿಯಂತ್ರಣಕ್ಕೆ ಬರುತ್ತವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.




