ಮೇ  1ರಂದು ಮಂಗಳೂರಿನಲ್ಲಿ ವಿಶ್ವ ಕಾರ್ಮಿಕರ ದಿನಾಚರಣೆ

4 years ago

ಮಂಗಳೂರು: ವಿಶ್ವ ಕಾರ್ಮಿಕರ ದಿನವಾದ ಮೇ 1ರಂದು ಜಗತ್ತಿನಾದ್ಯಂತ ಹಲವಾರು ಕಾರ್ಯಕ್ರಮಗಳು ನಡೆಯಲಿದ್ದು, ಅದರ ಭಾಗವಾಗಿ ಮಂಗಳೂರಿನ ಹೃದಯ ಭಾಗದಲ್ಲೂ ವ್ಯವಸ್ಥಿತ ರೀತಿಯಲ್ಲಿ ಆಕರ್ಷಕ ಕಾರ್ಯಕ್ರಮವನ್ನು ನಡೆಸಲು ಇತ್ತೀಚಿಗೆ ರಚನೆಗೊಂಡ ಮೇ ದಿನ ಆಚರಣಾ ಸಮಿತಿಯು ತೀರ್ಮಾನಿಸಿದೆ.

ಆಚರಣಾ ಸಮಿತಿಯ ಗೌರವಾಧ್ಯಕ್ಷರಾಗಿ ಜೆ.ಬಾಲಕೃಷ್ಣ ಶೆಟ್ಟಿ, ಕಾರ್ಯಾಧ್ಯಕ್ಷರಾಗಿ ಡಾ.ಕೃಷ್ಣಪ್ಪ ಕೊಂಚಾಡಿ, ಪ್ರಧಾನ ಕಾರ್ಯದರ್ಶಿಯಾಗಿ ಸುನಿಲ್ ಕುಮಾರ್ ಬಜಾಲ್, ಸಂಘಟನಾ ಕಾರ್ಯದರ್ಶಿಯಾಗಿ ರವಿಚಂದ್ರ ಕೊಂಚಾಡಿ, ಖಜಾಂಚಿಯಾಗಿ ಯೋಗೀಶ್ ಜಪ್ಪಿನಮೊಗರು ಆಯ್ಕೆಯಾಗಿದ್ದು ಈಗಾಗಲೇ 2 ಬಾರಿ ಸಭೆ ಸೇರಿ ಮೇ ದಿನಾಚರಣೆಯ ಸಂಭ್ರಮದಲ್ಲಿ ನಗರದ ಎಲ್ಲಾ ವಿಭಾಗದ ಕಾರ್ಮಿಕರನ್ನು, ನೌಕರರನ್ನು ಹಾಗೂ ಇತರ ಜನವಿಭಾಗದವರನ್ನು ಸೇರಿಸುವ ಮೂಲಕ ಯಶಸ್ವಿಯಾಗಿ ನಡೆಸಬೇಕೆಂದು ನಿರ್ಧರಿಸಲಾಗಿದೆ.

ಮೇ 1ರಂದು 3.30ಕ್ಕೆ ನಗರದ RTO ಕಚೇರಿ ಬಳಿಯಿಂದ ಕಾರ್ಮಿಕರ ಆಕರ್ಷಕ ಮೆರವಣಿಗೆ ಹೊರಡಲಿದ್ದು, ಬಳಿಕ ಕ್ಲಾಕ್ ಟವರ್ ಬಳಿಯಲ್ಲಿ ಬಹಿರಂಗ ಸಭೆಯು ಜರುಗಲಿದೆ. ಪ್ರಧಾನ ಭಾಷಣಕಾರರಾಗಿ CITU ದ.ಕ. ಜಿಲ್ಲಾಧ್ಯಕ್ಷ ಜೆ.ಬಾಲಕೃಷ್ಣ ಶೆಟ್ಟಿ, ಹಿರಿಯ ಕಾರ್ಮಿಕ ಮುಖಂಡ ಸುಕುಮಾರ್ ತೊಕ್ಕೊಟ್ಟು ಭಾಗವಹಿಸಲಿದ್ದು, ಪ್ರಾಸ್ತಾವಿಕ ಮಾತುಗಳನ್ನು CITU ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಆಡಲಿದ್ದಾರೆ. ಸಭೆಯ ಅಧ್ಯಕ್ಷತೆಯನ್ನು ಆಚರಣಾ ಸಮಿತಿಯ ಕಾರ್ಯಾಧ್ಯಕ್ಷ ಡಾ.ಕೃಷ್ಣಪ್ಪ ಕೊಂಚಾಡಿ ವಹಿಸಲಿದ್ದಾರೆ.

ಕಾರ್ಮಿಕ ಬಂಧುಗಳು ಹಾಗೂ ಸಾರ್ವಜನಿಕ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮೇ ದಿನ ಆಚರಣಾ ಸಮಿತಿ ಮನವಿ ಮಾಡಿದೆ.

Leave a Reply