ಉಪೇಂದ್ರ, ಪ್ರಿಯಾಂಕಾ ದಂಪತಿ ಮೊಬೈಲ್ ಹ್ಯಾಕ್ ಪ್ರಕರಣದ ಆರೋಪಿ ಸೆರೆ

7 months ago

ಬೆಂಗಳೂರು: ಸ್ಯಾಂಡಲ್ ವುಡ್ ನಟರಾದ ಉಪೇಂದ್ರ, ಪ್ರಿಯಾಂಕಾ ದಂಪತಿಯ ಮೊಬೈಲ್ ಹ್ಯಾಕ್ ಪ್ರಕರಣ ಬೆನ್ನು ಹತ್ತಿದ ಬೆಂಗಳೂರು ಪೊಲೀಸರು ಆನ್ ಲೈನ್ ವಂಚಕರ ದೊಡ್ಡ ಜಾಲವನ್ನು ನೋಡಿ ಬೆಚ್ಚಿಬಿದ್ದಿದ್ದಾರೆ.

ಸಿನಿಮಾ ತಾರೆಯರ ಮೊಬೈಲ್ ಹ್ಯಾಕ್ ಪ್ರಕರಣ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಇದನ್ನು ಸವಾಲಾಗಿ ಸ್ವೀಕರಿಸಿದ ಬೆಂಗಳೂರಿನ ಸದಾಶಿವನಗರ ಠಾಣೆ ಪೊಲೀಸರು ಹ್ಯಾಕರ್ ಗಳ ಜಾಡು ಹಿಡಿದು ಬಿಹಾರ ತಲುಪಿದರು. ಅಲ್ಲಿ ಹ್ಯಾಕರ್ ಗಳು ಹೊಂದಿರುವ ದೊಡ್ಡ ನೆಟ್ ವರ್ಕ್ ಪಡೆಯನ್ನು ಕಂಡು ಬೆಚ್ಚಿಬಿದ್ದಿದ್ದಾರೆ.

ಉಪೇಂದ್ರ ಮತ್ತು ಪ್ರಿಯಾಂಕ ಉಪೇಂದ್ರ ಮೊಬೈಲ್ ಹ್ಯಾಕ್ ಮಾಡಿದ ಸಂಬಂಧ ಬಿಹಾರ ಮೂಲದ ವಿಕಾಸ್ ಕುಮಾರ್ ಎಂಬುವನನ್ನು ಬಂಧಿಸಿದ್ದಾರೆ. ಈತನ ಬಗ್ಗೆ ಖಚಿತ ಮಾಹಿತಿ ಪಡೆದು ಬಿಹಾರಕ್ಕೆ ಹೋದ ಪೊಲೀಸರು, ಇಲ್ಲಿನ 20ರಿಂದ 25 ವಯಸ್ಸಿನ ಯುವಕರು ಸೈಬರ ವಂಚನಾ ಜಾಲದಲ್ಲಿ ನಿರತರಾಗಿರುವುದನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ವಿಕಾಸ್ ಕುಮಾರ್ ನೆಲೆಸಿರುವ ಊರಿನ 150 ಮಂದಿ ಯುವಕರು ಸೈಬರ್ ಅಪರಾಧದಲ್ಲೇ ತೊಡಗಿಗೊಂಡಿರುವ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.

ಕಳೆದ ಸೆ.15ರಂದು ಉಪೇಂದ್ರ ದಂಪತಿ ಮೊಬೈಲ್ ಹ್ಯಾಕ್ ಆಗಿತ್ತು. ಆನ್​ಲೈನ್​ನಲ್ಲಿ ಕೆಲ ವಸ್ತುಗಳನ್ನು ಪ್ರಿಯಾಂಕಾ ಉಪೇಂದ್ರ ಬುಕ್​ ಮಾಡಿದ್ದರು. ಈ ವೇಳೆ ಮೊಬೈಲ್​​ಗೆ ಲಿಂಕ್​ ಬಂದಿದ್ದು, ಆ ಲಿಂಕ್​ ಅನ್ನು ಪ್ರಿಯಾಂಕ ಕ್ಲಿಕ್​ ಮಾಡಿದ್ದರು. ಬಳಿಕ ಪ್ರಿಯಾಂಕಾ ವಾಟ್ಸಾಪ್​ ಹ್ಯಾಕ್ ಮಾಡಿದ್ದ ಖದೀಮ, ಅವರ ಸಂಪರ್ಕದಲ್ಲಿದ್ದವರಿಗೆ 55 ಸಾವಿರ ಹಣ ಕಳುಹಿಸುವಂತೆ ಮೆಸೇಜ್​ ಮಾಡಿದ್ದ. ಈ ವೇಳೆ ಆರೋಪಿ ಯಾರೆಂದು ತಿಳಿಯಲು ಯತ್ನಿಸಿರುವ ಪ್ರಿಯಾಂಕಾ, ಪತಿ ಉಪೇಂದ್ರ ಹಾಗೂ ಮ್ಯಾನೇಜರ್ ನಂಬರ್​ನಿಂದ ಕರೆ ಮಾಡಿದ್ದರು. ಬಳಿಕ ಮ್ಯಾನೇಜರ್ ಹಾಗೂ ಉಪೇಂದ್ರ ಮೊಬೈಲ್ ಕೂಡ ಹ್ಯಾಕ್ ಆಗಿತ್ತು.

ಹಣ ಅಗತ್ಯವಿದೆ ಎಂದು ಪ್ರಿಯಾಂಕ ಅವರ ವಾಟ್ಸ್ಯಾಪ್​ನಿಂದ ಆರೋಪಿ ಹಲವರಿಗೆ ಮೆಸೇಜ್​ ಮಾಡಿದ್ದು, ಈ ವೇಳೆ ಪ್ರಿಯಾಂಕಾ ಅವರೇ ಸಂದೇಶ ಕಳುಹಿಸಿದ್ದು ಎಂದು ಕೆಲವರು ಹಣ ಹಾಕಿದ್ದಾರೆ. ಸ್ವತಃ ಉಪೇಂದ್ರ ಪುತ್ರ ಕೂಡ ತಾಯಿ ಅಕೌಂಟ್​ಗೆ ಐವತ್ತು ಸಾವಿರ ಹಣಹಾಕಿದ್ದರು.

ಇನ್ನು ಕೆಲವರು ಅನುಮಾನಗೊಂಡು ಪ್ರಿಯಾಂಕಾ ಅವರ ನಂಬರ್​​ಗೆ ಕರೆ ಮಾಡಿದರೆ ಕಾಲ್​ ಕಟ್​​ ಆಗುತ್ತಿತ್ತು. ವಿಷಯ ಗೊತ್ತಾಗುತ್ತಿದ್ದಂತೆ ಸದಾಶಿವನಗರ ಠಾಣೆಗೆ ಈ ಬಗ್ಗೆ ಪ್ರಿಯಾಂಕಾ ದೂರು ನೀಡಿದ್ದರು. ಆದರೆ, ಆಗಲೇ ಸೈಬರ್​ ವಂಚಕನ ಅಕೌಂಟ್​​ಗೆ ಒಂದೂವರೆ ಲಕ್ಷ ರೂಪಾಯಿ ಹಣ ವರ್ಗಾವಣೆ ಆಗಿತ್ತು. ದೂರು ದಾಖಲಾಗುತ್ತಿದ್ದಂತೆ ಅಲರ್ಟ್​ ಆದ ಪೊಲೀಸರು, ಆರೋಪಿ ಪತ್ತೆಗೆ ಬಲೆ ಬೀಸಿದ್ದರು. ತನಿಖೆ ವೇಳೆ ಆರೋಪಿ ಬಿಹಾರದ ದಶರಥಪುರದ ನಿವಾಸಿ ಎನ್ನುವುದು ಗೊತ್ತಾಗಿತ್ತು.

Leave a Reply